ಕಪೋಲ ಕಲ್ಪಿತ ಪಾತ್ರಗಳಾದ ‘ಉರಿಗೌಡ-ನಂಜೇಗೌಡ’ ಮಹಾದ್ವಾರ ತೆರವು

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ರೋಡ್‌ ಶೋ ನಡೆಸುವ ಮಾರ್ಗದಲ್ಲಿ ಮಹಾದ್ವಾರಕ್ಕೆ ಇಟ್ಟಿದ್ದ ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಹೆಸರನ್ನು ತೆರವು ಮಾಡಲಾಗಿದೆ. ಮಾತ್ರವಲ್ಲದೇ ಆ ಮಹಾದ್ವಾರಕ್ಕೆ ಬಾಲಗಂಗಾಧರ ನಾಥ ಸ್ವಾಮೀಜಿ ಮಹಾದ್ವಾರ ಎಂದು ಹೆಸರಿಡಲಾಗಿದೆ.

ಉರಿಗೌಡ ಮತ್ತು ದೊಡ್ಡನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ನಿಜ ಎಂದು ಬಣ್ಣಿಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ಟಿಪ್ಪು ಕೊಂದ ದೋಷವನ್ನು ಒಕ್ಕಲಿಗ ಸಮುದಾಯದ ತಲೆಗೆ ಕಟ್ಟಲು ಮುಂದಾಗಿದ್ದಾರೆ ಎಂದು ಮಹಾದ್ವಾರವು ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು. ಈ ಮಹಾದ್ವಾರದ ಚಿತ್ರ, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನೆಲ್ಲೆ ಮಂಡ್ಯ ಜಿಲ್ಲಾಡಳಿತ ಮಹಾದ್ವಾರದ ಹೆಸರು ಬದಲಾವಣೆ ಮಾಡಿದೆ.

ಪ್ರಧಾನಿ ಮೋದಿ ರೋಡ್‌ ಶೋ ಮಾರ್ಗದ ಫ್ಯಾಕ್ಟರಿ ಸರ್ಕಲ್‌ನಲ್ಲಿ ಹಾಕಲಾಗಿದ್ದ ಉರಿಗೌಡ ಮತ್ತು ದೊಡ್ಡನಂಜೇಗೌಡ ಮಹಾದ್ವಾರ ತೆರವು ಮಾಡದಿದ್ದರೆ ಅಥವಾ ಹೆಸರು ಬದಲಾಯಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಗತಿಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಜತೆಗೆ ಸಿಪಿಐಎಂ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಕೂಡಾ ವಿರೋಧ ವ್ಯಕ್ತಪಡಿಸಿದ್ದರು.

ಈ ಕುರಿತು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೃಷ್ಣೆಗೌಡ ಪ್ರತಿಕ್ರಿಯಿಸಿದ್ದು, ಸಂಘ ಪರಿವಾರದ ಅಕ್ರಮ ಸಂತಾನ “ಉರೀಗೌಡ – ನಂಜೇಗೌಡ” ಎಂಬ ಕೂಸುಗಳು ಅಕಾಲ ಮರಣ ಹೊಂದಿದವು… ಸ್ವಾಭಿಮಾನಿ ಮಂಡ್ಯದ ಜನರಿಗೆ, ಅವರ ಹೋರಾಟಕ್ಕೆ ಸಿಕ್ಕ ಗೆಲುವು ಎಂದು ತಿಳಿಸಿದ್ದಾರೆ.

ಸುಳ್ಳು ಸೃಷ್ಟಿ : ಉರಿಗೌಡ ಮತ್ತು ದೊಡ್ಡ ನಂಜೇಗೌಡರು ಟಿಪ್ಪು ಸುಲ್ತಾನ್‌ನನ್ನು ಕೊಂದರು ಎಂದು ಬಿಜೆಪಿ ನಾಯಕರು ಸಭೆ ಸಮಾರಂಭಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಆದರೆ, ಈ ಇಬ್ಬರು ವ್ಯಕ್ತಿಗಳು ಬದುಕಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಇತಿಹಾಸ ತಜ್ಞರು ತಿಳಿಸಿದ್ದರು. ಆದರೂ, ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ನನ್ನು ರಾಜಕೀಯ ದಾಳ ಮಾಡಿಕೊಂಡಿದ್ದಾರೆ. ಗೌಡ ಸಮುದಾಯದ ಮಹಾನಾಯಕರಾದ ಉರಿಗೌಡ ಮತ್ತು ದೊಡ್ಡ ನಂಜೇಗೌಡರೇ ಟಿಪ್ಪುಅನ್ನು ಕೊಂದಿದ್ದಾಗಿ ವಾದ ಮಂಡಿಸುತ್ತಿದ್ದರು. ಬಿಜೆಪಿ ಈ ಕಲ್ಪಿತ ಪಾತ್ರಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಬಿಜೆಪಿಯ ನಡೆಯನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಆದರೂ ಬಿಜೆಪಿ ತನ್ನ ಚಾಳಿಯನ್ನು ಮುಂದುವರಿಸಿದೆ.

Donate Janashakthi Media

Leave a Reply

Your email address will not be published. Required fields are marked *