ಯುಪಿಎಸ್‍ಸಿ, ನೀಟ್‍ ಆಯ್ತು, ಈಗ ಬ್ಯಾಂಕಿಂಗ್ ಪರೀಕ್ಷೆಗೂ ಕನ್ನಡವಿಲ್ಲ

  • ಕೇಂದ್ರ ಸೇವೆಗಳ ಪರೀಕ್ಷೆಗಳಿಗೆ ನಿರಂತರವಾಗಿ ಕನ್ನಡ ನಿರ್ಲಕ್ಷ್ಯ
  • ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗಾಭರಣ ಅಸಮಾಧಾನ

 

ಬೆಂಗಳೂರು: ಕೇಂದ್ರ ಆಡಳಿತ ಸೇವಾ ಪರೀಕ್ಷೆ(ಯುಪಿಎಸ್ಸಿ  ಪೂರ್ವಸಿದ್ಧತೆ ಪರೀಕ್ಷೆ), ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ(ನೀಟ್‍)ಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ ನಡೆ ವಿರುದ್ಧ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಾಗ ಮುಂದೆ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಈಗ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದೆ ವಂಚಿಸಿದೆ.

ಬ್ಯಾಂಕಿಂಗ್‍ ಸೇವೆಗಳಿಗೆ ಐಬಿಪಿಎಸ್‍ ಪರೀಕ್ಷೆ ನಡೆಸುತ್ತಿದ್ದು, ಅದರಲ್ಲಿ ಇಂಗ್ಲೀಷ್‍ ಮತ್ತು ಹಿಂದಿಯಲ್ಲಿ ಬರೆಯಲು ಅವಕಾಶ ನೀಡಿದೆ. ಆದರೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಇದು ಕನ್ನಡವನ್ನು ಕೇಂದ್ರ ಸೇವೆಯಲ್ಲಿ ನಿರ್ಲಕ್ಷಿಸಿರುವ ಕ್ರಮವಾಗಿದೆ ಎಂದು ನೆಟ್ಟಿಗರು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ರಾಜ್ಯ ಭಾಷೆಗಳಲ್ಲಿ ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ಒತ್ತಾಯಿಸುತ್ತಿದೆ. ಆದರೂ ಸಹ ಹಳೆಯ ಮಾರ್ಗಸೂಚಿಗಳನ್ವಯ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಐಬಿಪಿಎಸ್ ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸಬೇಕು ಎಂದು ಹಲವು ಭಾರಿ ಕೇಂದ್ರ ವಿತ್ತ ಸಚಿವರನ್ನು ಖುದ್ದು ಭೇಟಿಯಾಗಿ ಮನವಿ ಪತ್ರಗಳನ್ನು ಸಲ್ಲಿಸಲಾಗಿದ್ದರೂ ಹಳೆಯ ಮಾರ್ಗಸೂಚಿಗಳನ್ವಯ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಐಬಿಪಿಎಸ್ ಕ್ರಮ ಖಂಡನೀಯ ಎಂದಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯಲು ಅನುವು ಮಾಡಿಕೊಡುವಂತೆ ಮನವಿ ಮಾಡಿತ್ತು. ಮನವಿ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಪರೀಕ್ಷೆಗಳನ್ನು ನಡೆಸುವುದಾಗಿ ಕೇಂದ್ರ ಸಚಿವರು ಭರವಸೆಗಳನ್ನು ನೀಡಿದ್ದರು. ಆದರೆ ಕೇಂದ್ರ ಸಚಿವರ ಭರವಸೆಗಳು ಹುಸಿಯಾಗಿದ್ದು, ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಗಳು ಕನ್ನಡಿಗರ ಕೈ ತಪ್ಪುತ್ತಿರುವುದು ಅತ್ಯಂತ ನೋವಿನ ವಿಷಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ ಪರಿಚ್ಛೇದ-8 ರಲ್ಲಿ ಎಲ್ಲ ರಾಜ್ಯಭಾಷೆಗಳಿಗೂ ಮಾನ್ಯತೆ ನೀಡುವಂತೆ ವಿವರಿಸಲಾಗಿದೆ. ಹಾಗಾಗಿ ಬ್ಯಾಂಕಿಂಗ್ ನೇಮಕಾತಿಗೆ ಐಬಿಪಿಎಸ್ ನಡೆಸುವ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಬೇಕೆಂದು ಕೇಂದ್ರ ಸಚಿವರಿಗೆ ಬರೆಯಲಾಗಿರುವ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಹೀಗಿದ್ದರೂ ಮುಂದಿನ ಜನವರಿಯಲ್ಲಿ ನಡೆಯಲಿರುವ ಬ್ಯಾಂಕಿಂಗ್ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಡೆಸಲು ಐಬಿಪಿಎಸ್ ಸಿದ್ಧತೆ ನಡೆಸುತ್ತಿರುವುದರಿಂದ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದ್ದು, ಕನ್ನಡದಲ್ಲಿ ಪರೀಕ್ಷೆಗಳನ್ನು ನಡೆಸುವಂತೆ ಐಬಿಪಿಎಸ್‌ಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದಾರೆ.

ಗ್ರಾಮಮಟ್ಟದಲ್ಲೂ ಬ್ಯಾಂಕು ಸೌಲಭ್ಯವಿರುವುದರಿಂದ ಗ್ರಾಮೀಣರಿಗೆ ಸ್ಥಳೀಯ ಭಾಷೆಯಲ್ಲಿ ಮಾತ್ರ ಸಂವಹನ ನಡೆಸಲು ಸಾಧ್ಯವಿರುತ್ತದೆ. ಹಾಗಾಗಿ ರಾಜ್ಯಭಾಷೆಗಳ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ ಹೊಸ ಮಾನದಂಡಗಳನ್ನು ರೂಪಿಸಿ ಕನ್ನಡವೂ ಸೇರಿದಂತೆ ಎಲ್ಲ ರಾಜ್ಯಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸುವಂತೆ ಆಗ್ರಹಿಸಿದ್ದಾರೆ.

ಈ ಹಿಂದೆ ಕೂಡ ಟಿ.ಎಸ್.ನಾಗಾಭರಣ, ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳನ್ನು(NET) ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಕೇಂದ್ರದ ಸಚಿವರು, ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಪ್ರಶ್ನೆ ಪತ್ರಿಕೆಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇರುವುದರಿಂದ ದಕ್ಷಿಣ ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸಾಕಷ್ಟು ತೊಂದರೆಯಾಗುತ್ತಿದ್ದು ಈ ಬಗ್ಗೆ ಕೂಡಲೇ ಗಮನಹರಿಸಿ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ರಮೇಶ್ ಪೊಕ್ರಿಯಲ್ ನಿಶಾಂಕ್‌ಗೆ ಪತ್ರ ಬರೆದಿದ್ದರು.

 

Donate Janashakthi Media

Leave a Reply

Your email address will not be published. Required fields are marked *