ಏಕನಾಥ ಶಿಂದೆ ಬಣಕ್ಕೆ ಹಿನ್ನಡೆ: ಶಿವಸೇನಾ ಚಿಹ್ನೆ ನೀಡುವ ನಿರ್ಧಾರ ಬೇಡವೆಂದ ಸುಪ್ರೀಂ ಕೋರ್ಟ್‌

ನವದೆಹಲಿ: ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣ ಮತ್ತು ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಗಳ ನಡುವಿನ ಶಿವಸೇನೆ ಪಕ್ಷದ ಮೇಲಿನ ಹಿಡಿತಕ್ಕೆ ಸಂಬಂಧಿಸಿದಂತೆ ಶಿಂದೆ ಬಣ ತಮ್ಮದೇ ನಿಜವಾದ ಶಿವಸೇನಾ ಎಂದು ಪರಿಗಣಿಸಿ ಪಕ್ಷದ ಚುನಾವಣಾ ಚಿಹ್ನೆಯನ್ನು ನೀಡುವಂತೆ ಸಲ್ಲಿಸಿದ್ದ ಮನವಿ ಕುರಿತು ʻಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು’ ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳ ನಡುವಿನ ಪಕ್ಷದ ಮೇಲಿನ ಹಿಡಿತಕ್ಕಾಗಿ ಪೈಪೋಟಿ ನಡೆಯುತ್ತಿದೆ. ಶಿವಸೇನೆ ಪಕ್ಷದ ಬಿಲ್ಲು ಬಾಣದ ಚಿಹ್ನೆ ಬಳಸಲು ಎರಡು ಬಣಗಳು ಚುನಾವಣಾ ಆಯೋಗದ ಮೆಟ್ಟಿಲು ಹತ್ತಿವೆ.  ಉದ್ಧವ್ ಠಾಕ್ರೆ ನೇತೃತ್ವದ ಬಣ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೋರಿದರೆ, ಪ್ರಕರಣವನ್ನು ಮುಂದೂಡಲು ಅವರ ಮನವಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಹೇಳಿದೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನಲ್ಲಿ ಒಳಗೊಂಡಿರುವ ಕೆಲವು ಸಮಸ್ಯೆಗಳನ್ನು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆ ಎಂದು ಆಗಸ್ಟ್ 8ರಂದು ನಿರ್ಧರಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ ತಿಳಿಸಿತು.

ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಹೂಡಿದ್ದ ಶಾಸಕರನ್ನು ಅನರ್ಹಗೊಳಿಸುವ ನಿರ್ಧಾರ ಬಾಕಿ ಇರುವುದರಿಂದ ಚುನಾವಣಾ ಆಯೋಗದ ನಿರ್ಧಾರಗಳನ್ನು ತಡೆಯಬೇಕು ಎಂದು ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣವು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು.

ಶಿಂಧೆ ಬಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಉದ್ಧವ್ ಠಾಕ್ರೆ  ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾಗೆ ನೀಡಿದ್ದ ಸಂದರ್ಶನದಲ್ಲಿ “ಶಿವಸೇನೆಯ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಚಿತ್ರಗಳನ್ನು ಬಳಸಿಕೊಂಡು “ಮತಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ”. ಅವರು ನನಗೆ ದ್ರೋಹ ಮಾಡಿದ್ದಾರೆ, ಪಕ್ಷವನ್ನು ಒಡೆದಿದ್ದಾರೆ. ಅವರ ತಂದೆಯ ಚಿತ್ರಗಳನ್ನು ಬಳಸಿ ಮತ ಕೇಳಬೇಕು. ಶಿವಸೇನೆಯ ತಂದೆಯ ಚಿತ್ರಗಳನ್ನು ಬಳಸಿಕೊಂಡು ಮತ ಭಿಕ್ಷೆ ಬೇಡುವುದನ್ನು ನಿಲ್ಲಿಸಲಿ” ಎಂದು ಹೇಳಿದ್ದರು.

Donate Janashakthi Media

Leave a Reply

Your email address will not be published. Required fields are marked *