ಬೆಂಗಳೂರು: ಸಮಾಜದ ಪಟ್ಟಭದ್ರ ಹಿತಾಸಕ್ತಿಗಳ. ಹಾಗೂ ಸ್ವಪಕ್ಷದ ಬಲಿಷ್ಠ ಜಾತಿಗಳ ತೀವ್ರ ವಿರೋಧ ಹಾಗೂ ಇಡೀ ಸಮೀಕ್ಷಾ ಪ್ರಕ್ರಿಯೆಯನ್ನೇ ಸ್ಥಗಿಸಿಗೊಳಿಸುವ ಹುನ್ನಾರದ ಒತ್ತಡದ ನಡುವೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವ ದಿಟ್ಟ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೈಗೊಂಡಿದ್ದಾರೆ.
ಇದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ ಮತ್ತು ನಾಗರೀಕ ಸಮಾಜದ ಪರವಾಗಿ ಅವರ ಜೊತೆಗೆ ನಿಲ್ಲುತ್ತೇವೆ. ಮೇಲ್ಜಾತಿಯ ರಾಜಕೀಯ ಹುನ್ನಾರದ ಇಂಥ ಸವಾಲನ್ನು ಬೇರಾವ ಮುಖ್ಯಮಂತ್ರಿಯೂ ಎದುರಿಸಲಾಗುತ್ತಿರಲಿಲ್ಲ ಎಂಬುದು ನಮ್ಮ ಅಭಿಪ್ರಾಯ.
ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ತೀವ್ರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಜಾತಿವಾರು ಸಮೀಕ್ಷೆಯನ್ನು ಕೈ ಬಿಡಲಾಗುವದು ಇಲ್ಲವೇ ಮುಂದೂಡಲಾಗುವದು ಎಂಬ ದಟ್ಟ ವದಂತಿಗಳು ಹರಡಿದ್ದವು ಇದರ ನಡುವೆ ಮುಖ್ಯಮಂತ್ರಿ ಗಳ ಈ ದಿಟ್ಟ ನಿಲುವಿನಿಂದ ಈ ಬಗೆಗಿನ ಗೊಂದಲ ನಿವಾರಣೆಯಾದಂತಾಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಿಕ ಗೌರವಧನ ಪಾವತಿಸದ 29 ಆಯುಕ್ತರ ವಿರುದ್ಧ ಪ್ರಕರಣ
ಆದರೂ ಈ ಸಾಮಾಜಿಕ, ಆರ್ಥಿಕ ,ಶೈಕ್ಷಣಿಕ ಸಮೀಕ್ಷೆಗೆ ಅಡ್ಡಗಾಲು ಹಾಕುವ ಮಸಲತ್ತುಗಳು ನಡೆಯುತ್ತಲೇ ಇವೆ ಮತ್ತು ಸಮೀಕ್ಷೆಯ ನಂತರವೂ ಮುಂದುವರಿಯುತ್ತವೆ .
ಸದಾ ಕಾಲ ತಮ್ಮ ಜಾತಿ ಬಲದಿಂದಲೇ ಯಜಮಾನಿಕೆ ಆಳ್ವಿಕೆ ಮಾಡಿದ ಈ ಜನರಿಗೆ ಜಾತಿಗಣತಿ ಕುರಿತಂತೆ ಮೊದಲಿನಿಂದಲೂ ಆತಂಕವಿದೆ. ಆದರೂ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ದಸರಾ ಸಂದರ್ಭದಲ್ಲೇ ಈ ಸಮೀಕ್ಷೆಯನ್ನು ಪ್ರಾರಂಭಿಸಿದ್ದು ನಾಡಿನ ಒಳತಿನ ದೃಷ್ಟಿಯಿಂದ ಸೂಕ್ತ.
ಜಾತಿ ಜನಗಣತಿ ಪ್ರಕ್ರಿಯೆಗೆ ತೀವ್ರ ವಿರೋಧ ಎದುರಾಗುತ್ತಿರುವ ಈ ಸನ್ನಿವೇಶದಲ್ಲಿ ಪ್ರಜ್ಞಾವಂತ ನಾಗರೀಕರು ಕೆಲವು ಅಂಶಗಳನ್ನು ಅವಲೋಕಿಸಬೇಕಿದೆ .
ಶತಮಾನಗಳಿಂದ ಅನ್ಯಾಯಕ್ಕೊಳಗಾಗಿರುವ ಸಮಾಜದ ನೊಂದ ಜನ ವರ್ಗಗಳ ಆರ್ಥಿಕ , ಸಾಮಾಜಿಕ ಏಳಿಗೆಗೆ ಮೊದಲಿನಿಂದಲೂ ವಿರೋಧ ಬರುತ್ತಲೇ ಇದೆ.ವಿರೋಧದ ಸ್ವರೂಪ ಸ್ವಲ್ಪ ಬದಲಾಗಿದ್ದರೂ, ವಿರೋಧದ ಉದ್ದೇಶ ಬದಲಾಗಿಲ್ಲ.ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ಸಕಲರಿಗೂ ಸಮಾನಾವಕಾಶ ಕಲ್ಪಿಸುವ ಯಾವುದೇ ಪ್ರಕ್ರಿಯೆಯನ್ನು ಸುಲಭಕ್ಕೆ ಒಪ್ಪಿಕೊಳ್ಳುವದಿಲ್ಲ.ತಮ್ಮ ಜಾತಿಯ ಜನಸಾಮಾನ್ಯರ ಸಂಖ್ಯಾಬಲವನ್ನು ತೋರಿಸಿ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು ,ರಾಜಕೀಯ ಕೋಟೆಯನ್ನು ಕಟ್ಟಿಕೊಂಡವರಿಗೆ ಈ ಸಮೀಕ್ಷೆ ಬೇಡವಾಗಿದೆ.
ಇವರೇನು ರಾಜಕೀಯ ನಾಯಕರೋ ತಮ್ಮ ಜಾತಿಗಳ ನಾಯಕರೋ ಎಂಬ ಸಂದೇಹ ಬರುತ್ತದೆ. ತಮ್ಮ ಜಾತಿಯ ಮತಗಳಿಂದ ಮಾತ್ರ ಸದನಕ್ಕೆ ಆರಿಸಿ ಬಂದಿಲ್ಲ. ಎಲ್ಲ ಸಮುದಾಯಗಳ ಜನರು ಸೇರಿ ಇವರನ್ನು ಚುನಾಯಿಸಿದ್ದಾರೆ ಎಂಬ ಅರಿವು ಇವರಿಗೆ ಇರಬೇಕು. ತಾವು ತಮ್ಮ ಜಾತಿಯ ನಾಯಕರು ಮಾತ್ರವಲ್ಲ ಎಲ್ಲ ಸಮುದಾಯಗಳ ನಾಯಕರು ಎಂಬ ವಿಶಾಲ ಮನಸ್ಸು ನಮ್ಮ ನಾಯಕರಿಗಿರಬೇಕು.
ಈ ಬಾರಿ ಈ ವಿರೋಧಕ್ಕೆ ರಾಜಕಾರಣಿಗಳು ಮಾತ್ರವಲ್ಲ ಕಾವಿಧಾರಿ ಮಠಾಧೀಶರೂ ಬೀದಿಗೆ ಬಂದಿದ್ದಾರೆ. ಮಾನವ ಧರ್ಮ ಸ್ಥಾಪಿಸಬೇಕಾದ ಈ ಮಹಾಪುರುಷರು, ಜಾತಿ ಹಿಂದೆ ಬಿದ್ದು ಮಾನವೀಯತೆಯನ್ನು ಅಪಮೌಲ್ಯಗೊಳಿಸಿದ್ದಾರೆ.
ಸದಾ ಬಸವಣ್ಣನವರ ಹಾಗೂ ಕುವೆಂಪುರವರ ಹೆಸರನ್ನು ಬಂಡವಾಳ ಮಾಡಿಕೊಂಡಿರುವ ಇವರು , ಬಾಯಿಯಲ್ಲಿ ಇವನಾರವ , ಇವನಾರವ ಎನಬೇಡ ,ಇವ ನಮ್ಮವ,ಇವ ನಮ್ಮವ ಎಂದೆನಿಸಯ್ಯ ಎಂದು ಹೇಳುತ್ತಾ, ಕೃತಿಯಲ್ಲಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಮೇಲ್ಜಾತಿ ಹಾಗೂ ಧರ್ಮದ ರಾಜಕೀಯವನ್ನೇ ತನ್ನ ತಂತ್ರವನ್ನಾಗಿರಿಸಿಕೊಂಡಿರುವ ಬಿಜೆಪಿ ಈ ಸಮೀಕ್ಷೆಯಿಂದ ಹೆದರಿ ಕಂಗಾಲಾಗಿದೆ.
ಇದು ಹಿಂದುಗಳನ್ನು ವಿಭಜಿಸುವ ತಂತ್ರ ಎಂದು ಹತಾಶೆಯಿಂದ ಟೀಕಿಸುತ್ತಿದೆ. ಬಿಜೆಪಿ ನಿಲುವಿಗೆ ಬೆಂಬಲವಾಗಿ ನಿಂತಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಮಠಾಧೀಶರು ” ಸಮೀಕ್ಷೆಯ ಧರ್ಮದ ಕಾಲಂ ನಲ್ಲಿ ಹಿಂದೂ ಎಂದು ಮತ್ತು ಜಾತಿ, ಉಪಜಾತಿ ಕಾಲಂ ನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕೆಂದು ಸಮಾಜದ ಸಭೆಯನ್ನು ಕರೆದು ಪಟ್ವಾ ಹೊರಡಿಸಿದ್ದಾರೆ. ಈ ವಿಷಯದಲ್ಲಿ ಒಕ್ಕಲಿಗ ಸ್ವಾಮಿಗಳು ಮತ್ತು ಪಂಚ ಮಠಾದೀಶರ ನಿಲುವು ಸಹ ಇದೇ ಆಗಿದ್ದು ದುರಂಥದ ಸಂಗತಿಯಾಗಿದೆ. ಇದ್ದುದರಲ್ಲಿ ಲಿಂಗಾಯತ ಸ್ವಾಮಿಗಳ ನಿಲುವು ಸ್ವಾಗತಾರ್ಹವಾಗಿದೆ
ಅರಸು ನಂತರ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯಾವುದನ್ನೂ ಲೆಕ್ಕಿಸದೆ ಮುಂದುವರಿಯುತ್ತಿರುವುದು ಅವರ ಸಾಮಾಜಿಕ ನ್ಯಾಯ ಮತ್ತು ಎಲ್ಲರ ಒಳಿತನ್ನು ಕಾಪಾಡುವ ಬದ್ಧತೆಯಾಗಿದೆ.
ಸಿದ್ಧರಾಮಯ್ಯನವರು ಅಹಿಂದ ಸಮುದಾಯದಗಳು ಮಾತ್ರವಲ್ಲ ಎಲ್ಲ ಸಮುದಾಯಗಳ ಶ್ರಮಜೀವಿಗಳ ಒಲವನ್ನು ಗಳಿಸಿಕೊಂಡಿದ್ದಾರೆ. ಇದು ಜಾತಿ ಅಥವ ಮತದ ಜನಗಣತಿ ಅಲ್ಲ. ಆದರೆ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಯ ಗಣತಿಯಾಗಿದೆ. ಇದರಿಂದ ಯಾವುದೇ ತೊಂದರೆ ಇಲ್ಲ.
ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅತ್ಯಂತ ಸಂಘಟಿತವಾಗಿರುವ ಕೋಮುವಾದಿ, ಮನುವಾದಿ ಶಕ್ತಿಗಳನ್ನು ಎದುರು ಹಾಕಿಕೊಂಡು ಈ ಸಮೀಕ್ಷೆಯನ್ನು ನಡೆಸಿ ಜಾರಿಗೆ ತರಬೇಕಾಗಿದೆ.ಈ ನಿಟ್ಟಿನಲ್ಲಿ ಅವರು ಯಶಸ್ವಿಯಾಗುವರೆಂದು ಅವರ ಪಕ್ಷದ ವಿರೋಧಿಗಳೇ ದಿಗಿಲು ಗೊಂಡಿದ್ದಾರೆ.
ಏನೇ ಆಗಲಿ ಸ್ವಪಕ್ಷದವರೂ ಸೇರಿದಂತೆ ಕೋಮುವಾದಿಗಳನ್ನು ಹಿಮ್ಮೆಟ್ಟಿಸಿ ಗೆಲ್ಲುವ ಮತ್ತು ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯವಿರುವುದು ಸಿದ್ದರಾಮಯ್ಯನವರಿಗೆ ಮಾತ್ರ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ಈ ವಿಷಯದಲ್ಲಿ ಯಾವುದೇ ರಾಜಿಗೆ ಒಳಗಾಗದೆ ಮುಖ್ಯಮಂತ್ರಿಗಳು ಮುಂದುವರಿಯಬೇಕೆಂದು ನಾವು ಒತ್ತಾಯಿಸುತ್ತೇವೆ. ಈ ವಿಷಯದಲ್ಲಿ ನಾವು ಅವರ ಪರವಾಗಿ ನಿಲ್ಲುತ್ತೇವೆ.
ಹೋರಾಟಗಾರರು ಹಾಗು ಚಿಂತಕರಾದ ಸನತ್ ಕುಮಾರ ಬೆಳಗಲಿ, ನಿರಂಜನಾರಾಧ್ಯ ವಿ ಪಿ, ಬಸವರಾಜ ಸೂಳೆಭಾವಿ, ಚಂದ್ರಕಾಂತ ವಡ್ಡು, ಜಿ.ಪಿ ಬಸವರಾಜು, ಬಿ. ಶ್ರೀನಿವಾಸ, ಸುನಂದಾ ಕಡಮೆ, ಎಚ್ ಎಸ್ ಬಸವಪ್ರಭು, ವೈ. ಬಿ. ಹಿಮ್ಮಡಿ, ನಾ ದಿವಾಕರ, ಕ. ಮ. ರವಿಶಂಕರ, ಕೆ ಪಿ ಸುರೇಶ, ಮುತ್ತು ಬಿಳೆಯಲಿ, ಚಂದ್ರಶೇಖರ ಗೋರೆಬಾಳ, ಪ್ರಾ. ಎಸ್ ಜಿ ಚಿಕ್ಕನರಗುಂದ, ಸಿ ಎಸ್ ಭೀಮರಾಯ, ಕೆ. ಬಿ. ವೀರಲಿಂಗನಗೌಡ, ಶಾಂತಕುಮಾರ ಹರ್ಲಾಪುರ, ಮಹೇಶ್ ಹರವೆ, ಸೋಮಶೇಖರ ವಾಲಿ, ಪ್ರೊ. ಚನ್ನಬಸಪ್ಪ ಐನಳ್ಳಿ, ಎನ್ ರವಿಕುಮಾರ ಟೆಲೆಕ್ಸ್, ನೊಯೆಲ್ ಚುಂಗಿಗುಡ್ಡೆ, ವಿಜಯಕಾಂತ ಪಾಟೀಲ, ನಾಗರಾಜ ಹರಪನಹಳ್ಳಿ, ಕೆ ಮಲ್ಲೇಶಪ್ಪ, ಶರಣಪ್ಪ ಬಾಚಲಾಪುರ, ಟಿ.ಕೆ.ಗಂಗಾಧರ ಪತ್ತಾರ, ಡಾ.ವೆಂಕಟಯ್ಯ ಅಪ್ಪಗೆರೆ, ಸರಿತ ಮಾರುತೇಶ, ಬಿ.ಸಿದ್ದಪ್ಪ, ನಾಗರಾಜು, ಎನ್ ಬಷಿರುದ್ದಿನ್, ಡಾ. ಕೆ ನಾರಾಯಣ ಸ್ವಾಮಿ, ಗುರುಪ್ರಸಾದ್ಎಂ. ಸಿ, ತ್ರೀಭುವನೇಶ್ವರಿ, ಪ್ರಿಯಾಂಕ ಮಾವಿನಕರ, ಎ. ಸಯೀದ್ ಅಹ್ಮದ್ ಖಾನ್, ಭೀಮನಗೌಡ ಪರಗೊಂಡ, ಕರಿಯಪ್ಪ ಸಂಶಿ, ಡಾ. ಶಶಿಕಾಂತ ಕೆ, ಖಾಸಿಂ ಅಲಿ ಜಿ ಹುಜರತಿ, ಬೈರೇಶ್ವರ ವಕೀಲರು, ಡಾ.ದಾದಾ ಹಯಾತ್ ಬಾವಾಜಿ, ಹನುಮಂತಪ್ಪ ಗಿಡ್ಡಿ, ಕುಮಾರ ಆರ್, ಬಸನಗೌಡ ಸುಳೇಕಲ್ ಜಂಟಿ ಹೇಳಿಕೆ ನೀಡಿದ್ದಾರೆ.
ಇದನ್ನೂ ನೋಡಿ: ಸಾಮಾಜಿಕ, ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ಜಾರಿ: ಮು.ಮಂ. ಸಿದ್ದರಾಮಯ್ಯ ಕೊಟ್ಟ ಕುದುರೆ ಏರುವರೇ? Janashakthi Media
