ಬೆಂಗಳೂರು : ಪರಿಶಿಷ್ಟ ಸಮುದಾಯದ ಕುರಿತು ನಟ ಉಪೇಂದ್ರ ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಅವರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಲಾಗಿದೆ.
ಇತ್ತೀಚೆಗೆ ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ವೇಳೆ “ಊರು ಎಂದ ಮೇಲೆ ಹೊಲಗೇರಿ ಇರುತ್ತೆ” ಎಂದಿದ್ದರು. ಈ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.
ಪ್ರಜಾಕೀಯ 6 ವರ್ಷ ಪೂರೈಸಿದ ಸಂದರ್ಭದಲ್ಲಿ ಉಪೇಂದ್ರ ಫೇಸ್‌ಬುಕ್, ಇನ್‌ಸ್ಟಾ ಲೈವ್ ಬಂದಿದ್ದರು. ಮುಂದೆ ಪಕ್ಷವನ್ನು ಮುನ್ನಡೆಸುವ ಬಗ್ಗೆ ಜನರಲ್ಲಿ ಅಭಿಪ್ರಾಯ ಕೇಳಿದ್ದರು. ಈ ವೇಳೆ ಮಾತನಾಡುತ್ತಾ “ಊರು ಎಂದ ಮೇಲೆ ಹೊಲಗೇರಿ ಇರುತ್ತೆ” ಎನ್ನುವ ಗಾದೆ ಮಾತನ್ನು ಹೇಳಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಂಬಂಧ ನಟ ಉಪೇಂದ್ರ ವಿರುದ್ಧ ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್ ಎಂಬುವವರು ಚೆನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.
ಉಪೇಂದ್ರ ಅವರ ಹೇಳಿಕೆ ಜಾತಿ ಮನಸ್ಥಿತಿಯನ್ನು ತೋರ್ಪಡಿಸುತ್ತದೆ ಎಂದು ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ನಟ ಉಪೇಂದ್ರ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರುದಾರರು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ. ಅತ್ತ ರಾಮನಗರದಲ್ಲಿ ಇಂದು (ಆಗಸ್ಟ್ 13) ಉಪೇಂದ್ರ ಪ್ರತಿಕೃತಿ ದಹಿಸಿ ಸಮತಾ ಸೈನಿಕ ದಳ ಹಾಗೂ ದಲಿತ ಪರ ಒಕ್ಕೂಟ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಉಪೇಂದ್ರ ತಮ್ಮ ಹೇಳಿಕೆಗೆ ಕೂಡಲೇ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ಅವರ ಸಿನಿಮಾಗಳನ್ನು ಬಹಿಷ್ಕರಿಸಿ ಘೇರಾವ್ ಹಾಕಲಾಗುತ್ತದೆ. ಪೋಸ್ಟರ್‌ಗಳಿಗೆ ಮಸಿ ಬಳಿಯಲಾಗುತ್ತದೆ” ಸಮತಾ ಸೈನಿಕ ದಳದ ರಾಜ್ಯ ಯುವ ಘಟಕದ ಅಧ್ಯಕ್ಷ ಡಾ. ಗೋವಿಂದಯ್ಯ ಎಚ್ಚರಿಸಿದ್ದಾರೆ.
ಮತ್ತೊಂದು ಕಡೆ ವಕೀಲರಾದ ಜೆ. ವಿ ಶ್ರೀನಿವಾಸ್ ಎಂಬುವವರು ಇದೇ ವಿಚಾರಕ್ಕೆ ಸಂಬಂಧಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ನಟ ಉಪೇಂದ್ರ ವಿರುದ್ಧ ದೂರು ದಾಖಲಿಸಿದ್ದಾರೆ. ಒಂದು ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಉಪೇಂದ್ರ ಬಂಧನಕ್ಕೆ ಆಗ್ರಹಿಸಿದ್ದಾರೆ. ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ದೀಪು ಗೌಡ ಎಂಬುವವರು ಉಪೇಂದ್ರ ಮಾತನಾಡಿದ್ದ ವೀಡಿಯೋ ತುಣುಕನ್ನು ಶೇರ್ ಮಾಡಿ “ಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾ ಹಾಗೆ ಉಪೇಂದ್ರ (ಪ್ರಜಾಕೀಯ). “ಅಲ್ಲ ಈತನ ಯಾವುದೋ ಒಂದು ಪಕ್ಷದ ಸಿದ್ದಾಂತದ ವಿರುದ್ಧ ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರೆ, ಆ ಜನರನ್ನು “ಹೊಲ್ಗೇರಿ”ಗೆ ಹೊಲಿಸೋದು ಎಷ್ಟರ ಮಟ್ಟಕ್ಕೆ ಸರಿ..?? ಹಾಗಾದರೆ ಈ ಮನುಷ್ಯನ ಪ್ರಕಾರ ಹೊಲ್ಗೇರಿಯಲ್ಲಿ ಬದುಕುವ ಜನರೆಲ್ಲರು ಕೆಟ್ಟವರಾ..??” ಎಂದು ಬರೆದುಕೊಂಡಿದ್ದರು.
ಕರ್ನಾಟಕ ರಾಜ್ಯ ಭೀಮ್ ಆರ್ಮಿ ಅಧ್ಯಕ್ಷರಾದ ರಾಜಗೋಪಾಲ್. ಡಿ ಪ್ರತಿಕ್ರಿಯಿಸಿ ನಟ ಉಪೇಂದ್ರ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.
ಸಂವಿಧಾನಕ್ಕೆ ಮಾಡಿದ ಅಪಚಾರ – ಸಚಿವ ಎಚ್.ಸಿ. ಮಹದೇವಪ್ಪ : ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಟ ನಿರ್ಮಾಪಕ ಉಪೇಂದ್ರ ಜಾತಿ ಹೆಸೆರನ್ನು ಕರೆದಿರುವುದು ಸಂವಿದಾನಕ್ಕೆ ಮಾಡಿದ ಅಪಚಾರ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ, ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪೇಂದ್ರ ಒಬ್ಬ ಖ್ಯಾತ ನಟ, ನಿರ್ಮಾಪಕ ಅವರಿಗೆ ಭಾರತದ ಇತಿಹಾಸ, ಚರಿತ್ರೆ ಸಾಂಸ್ಕೃತಿಕ ಬದುಕಿನ ಅರಿವು ಬಹಳ ಇದೆ ಅಂದುಕೊಂಡಿದ್ದೆ. ಆದರೆ ಅದ್ಯಾವುದು ಅವರಿಗೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.