ಉಪಚುನಾವಣೆ ಗೆಲುವಿಗಾಗಿ  ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಸರತ್ತು

ರಾಜ್ಯದ ಎರಡು  ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಆಡಳಿತ ಮತ್ತು ವಿರೋಧಪಕ್ಷದ ಪ್ರಚಾರ ಜೋರಾಗಿ ಶುರುವಾಗಿದೆ. ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆದಿದೆ. ಆರ್. ಆರ್. ನಗರದಲ್ಲಿನ ಮುನಿರತ್ನ ಗೆಲುವಿನ ಓಟಕ್ಕೆ ಕುಸುಮಾರವರು ಬ್ರೇಕ್ ಹಾಕ್ತಾರೆ? ಶಿರಾದಲ್ಲಿ ಗೆಲುವಿನ ಕನಸು ಕಾಣುತ್ತಿರುವ ಟಿಬಿ ಜಯಚಂದ್ರರವರಿಗೆ ಜೆಡಿಎಸ್ ಶಾಕ್ ಕೊಡಬಹುದಾ?  ಈ ಉಪಚುನಾವಣೆ ಬಗ್ಗೆ ಜನಪರ ಸಂಘಟನೆಗಳ ಏನು ಹೇಳುತ್ತಿವೆ ಎಂಬುದು ಕೂತುಹಲ ಮೂಡಿಸಿವೆ.

ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಮುನಿರತ್ನ ರವರ ರಾಜಿನಾಮೆಯಿಂದಾಗಿ ತೆರುವಾಗಿರುವ ಆರ್.ಆರ್. ನಗರ ಉಪಚುನಾವಣೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಗೆಲುವಿಗಾಗಿ ಕಸರತ್ತು ನಡೆಸಿದ್ದಾರೆ.  ಕಾದು ನೋಡುವ ತಂತ್ರ ಅನುಸರಿಸಿದ್ದ ಜೆಡಿಎಸ್  ತನ್ನ ಅಭ್ಯರ್ಥಿಯನ್ನು ಹಾಕುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡಲು ಸಿದ್ದವಾಗಿದೆ. ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಮುನಿರತ್ನರವರು ಬಿಜೆಪಿ ಗೆ ಬಂದ ನಂತರದಲ್ಲಿ ಬಿಜೆಪಿಯೊಳಗೆ ಅಸಮಾಧಾನ ಎದ್ದಿತ್ತು.  ಅವರಿಗೆ ಟಿಕೇಟ್ ನೀಡುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಿರ್ಧರಿಸಿದ್ದರು. ಆದರೆ ಯಡಿಯೂರಪ್ಪ ರಾಜಿ ಸಂಧಾನದ ಮೂಲಕ ಈಗ ಸಮಸ್ಯೆ ಬಗೆಹರಿದಿದ್ದು ಅವರು ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಚಾರವನ್ನು ಆರಂಭಿಸಿದ್ದಾರೆ.

ಕಳೆದ ಚುನಾವಣಿಯಲ್ಲಿ ಮುನಿರತ್ನ ವಿರುದ್ಧ ಸೋಲುಂಡಿದ್ದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡರನ್ನು ಬಿಜೆಪಿ ಯಾವ ರೀತಿ ಸಮಾಧಾನ ಪಡೆಸಬಹುದು ಎಂಬ ಕುತೂಹಲ ಈಗ ಮೂಡಿದೆ.  ಮುನಿರತ್ನರವರು ಅಕ್ರಮ ಮಾಡಿ ನಕಲಿ ಮತದಾನದ ಮೂಲಕ ಗೆಲುವು ಸಾಧಿಸಿದ್ದಾರೆ ಎಂದು ತುಳಸಿಯವರು ಕಾನೂನು ಹೋರಾಟ ನಡೆಸಿದ್ದರು. ಆಗ ತುಳಸಿಯವರಿಗೆ ಸಾಥ್ ನೀಡಿದ್ದ ನಾಯಕರೇ ಈಗ ಮುನಿರತ್ನ ರವರ ಬೆನ್ನಿಗೆ ನಿಂತಿದ್ದಾರೆ. ಮೇಲ್ನೋಟಕ್ಕೆ ಸುಮ್ಮನಿರುವ ತುಳಸಿಯವರ ಅತೃಪ್ತಿಯ ಕಟ್ಟೆ ಯಾವಾಗ ಬೇಕಾದರೂ ಒಡೆಯಬಹುದು ಎಂದು ಆರ್.ಆರ್. ನಗರದ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.

ಐಎಎಸ್ ಅಧಿಕಾರಿ ದಿ. ಡಿ.ಕೆ ರವಿಯವರ ಪತ್ನಿ ಕುಸುಮಾ ಹನುಮಂತರಾಯಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಕುಸುಮಾರವರಿಗೆ ಸಾಥ್ ನೀಡಿದ್ದು, ಕುಸುಮಾ ಗೆಲುವಿಗಾಗಿ ಡಿಕೆಶಿ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ.  ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ಆರ್.ಆರ್. ನಗರದಲ್ಲಿ ಈಗ ಪಕ್ಷದ ವರ್ಚಸ್ಸು ಕುಂದಿದ್ದು ಬಿಜೆಪಿ ಅಭ್ಯರ್ಥಿ ಮುನಿರತ್ನ ರವರಿಗೆ ಕುಸಮಾ ಪ್ರಭಲ ಪೈಪೋಟಿ ನೀಡುತ್ತಾರಾ? ಎಂಬ ಪ್ರಶ್ನೆ ಆರ್.ಆರ್. ನಗರದಲ್ಲಿ ಕೇಳಿಬರುತ್ತಿದೆ. ಇನ್ನೂ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಇವರಿಬ್ಬರಲ್ಲಿ ಒಬ್ಬರ ಸೋಲಿಗೆ ಕಾರಣವಾಗಬಹುದೆ ಹೊರತು ಗೆಲ್ಲುವ ಕುದುರೆ ಅಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿವೆ.

ಇನ್ನೂ ಶಿರಾ ಕ್ಷೇತ್ರದದ ಬಗ್ಗೆ ನೋಡುವುದಾದರೆ, ಸತ್ಯನಾರಾಯಣರವರ ನಿಧನದಿಂದಾಗಿ ತೆರುವಾಗಿರುವ ಶಿರಾ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕ್ರಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಐ ಪಕ್ಷದಿಂದ ನಾಮಪತ್ರ ಸಲ್ಲಿಸಲಾಗಿದೆ.

ಕ್ರಾಂಗ್ರೆಸ್ ಅಭ್ಯರ್ಥಿಯಾದ ಟಿ.ಬಿ.ಜಯಚಂದ್ರ ಚುನಾವಣಾ ಘೊಷಣೆಗೂ ಮುಂಚೆಯಿಂದ ಪ್ರಚಾರ ಆರಂಭಿಸಿದ್ದಾರೆ. ಕಳೆದ ಬಾರಿ ಸತ್ಯನಾರಾಯಣರವರ ವಿರುದ್ದ 10 ಸಾವಿರ ಮತಗಳಿಂದ ಸೋಲುಂಡಿರುವ ಜಯಚಂದ್ರರವರು ಗೆಲವಿಗಾಗಿ ಕಸರತ್ತು ನಡೆಸಿದ್ದಾರೆ. ಕೆಪಿಸಿಸಿ ನಾಯಕರ ದಂಡೆ ಶಿರಾದಲ್ಲಿ ಬೀಡು ಬಿಟ್ಟಿದೆ. ಇನ್ನೂ ಆಡಳಿತ ಪಕ್ಷ ಬಿಜೆಪಿಗೆ ಈ ಭಾಗದಲ್ಲಿ ಅಷ್ಟೇನು ಪ್ರಭಾವ ಅಲ್ಲ. ಆದರೆ ಮುಖಮಂತ್ರಿ ಯಡಿಯೂರಪ್ಪ ಪುತ್ರ  ಬಿ.ವೈ  ವಿಜಯೇಂದ್ರ ಗೆಲುವಿಗಾಗಿ ರಣತಂತ್ರಗಳನ್ನು ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅನುಕಂಪಕ್ಕೆ ಮೊರೆ ಹೋಗಿರುವ ಜೆಡಿಎಸ್ ತನ್ನ ಅಭ್ಯರ್ಥಿ   ಅಮ್ಮಾಜಮ್ಮರ ಗೆಲುವಿಗೆ ಪಣತೊಟ್ಟು ನಿಂತಿದೆ.

ಎರಡು ಕ್ಷೇತ್ರದಲ್ಲೂ ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.  ರಾಜರಾಜೇಶ್ವರಿ ನಗರದ ಚುನಾವಣೆಯಲ್ಲಿ ಕನಕಪುರದ ಬಂಡೆ ಏನೆ ಪ್ರಯತ್ನ ಮಾಡಿದರು ಗೆಲುವು ನಮ್ಮದೆ,  ಕಾಂಗ್ರೆಸ್ ನಿಂದ ಬಂದ ಡೈನಮೈಟ್ಗಳು ಬಂಡೆಯನ್ನು ಪುಡಿ ಪುಡಿ ಮಾಡಿಹಾಕುತ್ತವೆ.  ಗೂಂಡಾಗಿರಿ ನಡೆಯುವುದಿಲ್ಲ, ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಎರಡು ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳು ಏನು ಮಾಡುತ್ತಿವೆ ಎಂಬುದು ನಮಗೆ ಬೇಡವಾದ ವಿಚಾರ, ನಾವು ನಮ್ಮ ಪಕ್ಷದ ಸಿದ್ದಾಂತ ಮತ್ತು ಅಭ್ಯರ್ಥಿಯಾಧಾರಿತ  ಮತಯಾಚನೆ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ದ ರವರು ತಿಳಿಸಿದ್ದಾರೆ. ಬಿಜೆಪಿ ಹೀನ ಕೃತ್ಯಕ್ಕೆ ಇಳಿದಿದೆ. ನಮ್ಮ ಕುಸುಮಾರವರ ಮೇಲೆ ಎಫ್.ಐ ಆರ್ ಧಾಖಲಿಸಿ ಹೀನಾಯವಾಗಿ ನಡೆದುಕೊಳ್ಳುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ. ಎರಡು ಕ್ಷೇತ್ರಗಳಲ್ಲೂ ಗೆಲವು ನಮ್ಮದೆ ಎಂದು ಸಲಿಂ ರವರು ತಿಳಿಸಿದ್ದಾರೆ.

ಕೊರೊನಾದಿಂದಾಗಿ ಎಲ್ಲಾ ವಲಯಗಳು ಮುಚ್ಚಿಹೋಗುತ್ತಿವೆ. ಇತಂಹ ಪರಿಸ್ಥಿತಿಯಲ್ಲಿಯೂ ದೇಶಕ್ಕೆ ನಿರಂತರ ಸೇವೆ ಸಲ್ಲಿಸುತ್ತಿರುವ ರೈತನಿಗೆ ಇವತ್ತು ಆದಾಯದ ಭದ್ರತೆ ಇಲ್ಲದಂತಾಗಿದೆ. ಇವರಿಗೆ ಕೃತಜ್ಞಗಳನ್ನು ಸಲ್ಲಿಸಿ, ಕಷ್ಟಗಳಿಗೆ ಸ್ಪಂದಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವತ್ತು ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ. ಇವುಗಳನ್ನು ಹಿಂಪಡೆಯಲು ರೈತರು, ದಲಿತರು, ಕಾರ್ಮಿಕರು ಐಕ್ಯ ಹೋರಾಟದ ಮೂಲಕ ಬೃಹತ್ ಸಮಾವೇಶ ಮಾಡಿದ್ದಾರೆ. ರಾಜ್ಯವನ್ನೇ ಬಂದ್ ಕೂಡ ಮಾಡಿದ್ದಾರೆ. ರಾಜ್ಯ ಜನವಿರೊಧಿ ನೀತಿಗಳನ್ನು ತರುತ್ತಿರುವ ಪಕ್ಷಗಳನ್ನು ಈ ಬಾರಿಯ ಉಪಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸುತ್ತಾರೆ ಎಂದು ಐಕ್ಯ ಹೋರಾಟ ಸಮಿತಿಯ ಮುಖಂಡರಾದ ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.

ಈ ಬಾರಿಯ ಶಿರಾ ಉಪಚುನಾವಣೆಯಲ್ಲಿ ಸಿಪಿಐ ಕೂಡ ಸ್ಪರ್ಧಿಸುತ್ತಿದೆ. ಇಂದಿನ ಕೆಟ್ಟ ಪರಿಸ್ಥಿತಿ, ದುಸ್ಥಿತಿಗೆ ಕಾರಣವಾದ ಉದಾರೀಕರಣ, ಖಾಸಗೀಕರಣ, ಜಾಗತಿಕರಣಗಳು ರಾಜ್ಯದ ಜನತೆಯ ಮೇಲೆ ಸರ್ವಾಧಿಕಾರವನ್ನು ಏರುತ್ತಿದೆ. ಸಂವಿಧಾನಾತ್ಮಕ ನೀತಿ, ನಿಯಮಗಳನ್ನು ಗಾಳಿಗೆ ತೂರಿ ಪ್ರಜಾಪ್ರಭುತ್ವ ವಿರೋಧಿ ದುರ್ನಡತೆಯ ಆಡಳಿತವನ್ನು ಈ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಬೇಕು. ಆಡಳಿತ ಪಕ್ಷವಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕಾರ್ಪೂರೇಟ್ ಕಂಪನಿಗಳ ಲಾಭಿಗಾಗಿ ನೀತಿ ನಿಯಮಗಳನ್ನು ಗಾಳಿಗೆ ತೂರುತ್ತಿವೆ. ದೊಡ್ಡ ಬಂಡವಾಳಗಾರರ ಪರವಾದ ನೀತಿಗಳನ್ನು ತರುತ್ತಿದ್ದಾರೆ. ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ, ದೇಶದಲ್ಲಿ ರೈತರು ಸಾಲದಿಂದಾಗಿ ಪ್ರತಿ 24 ನಿಮಿಷಗಳಿಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಕಾಂಗ್ರೆಸ್ ಮತ್ತು ಬಿಜೆಪಿ ನೀತಿಗಳು ಒಂದೇ ಆಗಿದ್ದು ಮತದಾರರು ಆ ಪಕ್ಷಗಳನ್ನು ತಿರಸ್ಕರಿಸಬೇಕು, ನಿರ್ಣಾಯಕವಾಗಿ ಸೋಲಿಸಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಉಪ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ  ಆಡಳಿತ ಮತ್ತು ವಿರೋಧ ಪಕ್ಷಗಳು ತಂತ್ರ  ಪ್ರತಿತಂತ್ರ ಹೆಣೆಯುತ್ತಿವೆ. ಹಲವೆಡೆ ಸೀರೆ, ಹಣ, ಒಡವೆ ನೀಡುತ್ತಿರುವುದು ಕಂಡು ಬರುತ್ತಿದೆ. ಮತದಾರರು ಈ ಆಮೀಷೆಗಳಿಗೆ ಒಳಗಾಗುತ್ತಾರಾ? ಅಥವಾ ಓಟು ಮಹತ್ವದ್ದಾಗಿದ್ದು ನನ್ನ ಭವಿಷ್ಯವನ್ನು ರೂಪಿಸುವ ಹಕ್ಕು ಎಂದು ನಿಷ್ಟಾವಂತರಿಗೆ ಚಲಾಯಿಸುತ್ತಾನಾ?  ನವೆಂಬರ್ 10 ರವರೆಗೆ ಕಾದು ನೋಡಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *