ಉತ್ತರ ಪ್ರದೇಶ | ಕಾಂಗ್ರೆಸ್‌ಗೆ 17 ಸ್ಥಾನಗಳ ಅಂತಿಮ ಆಫರ್‌ ನೀಡಿದ ಸಮಾಜವಾದಿ ಪಕ್ಷ

ಲಖನೌ: ಉತ್ತರ ಪ್ರದೇಶದಲ್ಲಿ ವಿಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿಯ ಕುರಿತು ಇನ್ನೂ ಗೊಂದಲ ಹೆಚ್ಚಾಗಿದ್ದು, ಲೋಕಸಭೆ ಚುನಾವಣೆ ವೇಳೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಒಪ್ಪಂದವು ಇನ್ನೂ ಕೈಗೂಡಿಲ್ಲ. ಈ ನಡುವೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಜೊತೆ ಸೇರುತ್ತಿಲ್ಲ ಎಂದು ವರದಿಗಳು ಉಲ್ಲೇಖಿಸಿದೆ. ಎರಡು ಪಕ್ಷಗಳ ನಡುವಿನ ಸೀಟು ಹಂಚಿಕೆ ಒಪ್ಪಂದ ನಡೆದ ನಂತರವಷ್ಟೆ ತಾನು ಯಾತ್ರೆಯಲ್ಲಿ ಭಾಗವಹಿಸುವುದಾಗಿ ಅಖಿಲೇಶ್ ಹೇಳಿದ್ದಾರೆ ಎಂದು ವರದಿಗಳು ಹೇಳಿವೆ.

ಮಂಗಳವಾರ ರಾಯ್ ಬರೇಲಿಯಲ್ಲಿ ನಡೆಯುವ ಯಾತ್ರೆಯಲ್ಲಿ ಅಖಿಲೇಶ್ ಯಾದವ್ ಅವರು ಪಾಲ್ಗೊಳ್ಳಬೇಕಿತ್ತು. ಈ ನಡುವೆ ಸೋಮವಾರದಂದು ಕಾಂಗ್ರೆಸ್‌ಗೆ 17 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಹೇಳಿದೆ. ಅಷ್ಟೆ ಅಲ್ಲದೆ, ಇದು ಅಂತಿಮ ಕೊಡುಗೆ ಎಂದು ಎಸ್‌ಪಿ ಹೇಳಿದೆ. ಎರಡು ಪಕ್ಷಗಳ ನಡುವಿನ ಮಾತುಕತೆಗಳು ಆರಂಭವಾದಾಗ ಕಾಂಗ್ರೆಸ್‌ 25 ಸ್ಥಾನಗಳಿಗೆ ಬೇಡಿಕೆಯಿಟ್ಟಿತ್ತು. ಆದರೆ ನಂತರ ಅದನ್ನು 21 ಕ್ಕೆ ಇಳಿಸಲಾಯಿತು. ಆದಾಗ್ಯೂ, ಎಸ್‌ಪಿ ತನ್ನ ಮಿತ್ರ ಪಕ್ಷ ಕಾಂಗ್ರೆಸ್‌ಗೆ 17 ಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿದ ದೇವೇಗೌಡ – ಸಿದ್ದರಾಮಯ್ಯ ಆರೋಪ

ಅದಕ್ಕೂ ಮೊದಲೆ, ಕಳೆದ ತಿಂಗಳು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಅವರು ಯುಪಿಯಲ್ಲಿ ಕಾಂಗ್ರೆಸ್‌ಗೆ 11 ಲೋಕಸಭಾ ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಏಕಪಕ್ಷೀಯವಾಗಿ ಘೋಷಿಸಿದ್ದರು. ಈ ವೇಳೆ ಗೊಂದಲಕ್ಕೊಳಗಾದ ಯುಪಿ ಕಾಂಗ್ರೆಸ್‌ನ ನಾಯಕತ್ವವು ಎಸ್‌ಪಿಯೊಂದಿಗೆ ಸೀಟು ಹಂಚಿಕೆಯ ಮಾತುಕತೆ ಇನ್ನೂ ಮುಂದುವರೆದಿದ್ದು, ಕೇಂದ್ರ ನಾಯಕತ್ವವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿತ್ತು.

ಅದರ ನಂತರ, ಎಸ್‌ಪಿ ತನ್ನ 16 ಸ್ಥಾನಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಸ್ಥಾನದಲ್ಲಿ ಕಾಂಗ್ರೆಸ್‌ನ ಬೇಡಿಕೆಯಾದ ಲಖಿಮ್‌ಪುರ ಖೇರಿ ಮತ್ತು ಫರೂಕಾಬಾದ್‌ನಂತಹ ಹಲವು ಸ್ಥಾನಗಳು ಸೇರಿವೆ. ಈ ಮಧ್ಯೆ, ಸೋಮವಾರ ಕಾಂಗ್ರೆಸ್‌ಗೆ 17 ಸ್ಥಾನಗಳನ್ನು ಘೋಷಿಸಿದ ತಕ್ಷಣವೇ ತನ್ನ ಪಕ್ಷದ 11 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೂಡಾ ಕಾಂಗ್ರೆಸ್‌ನ ಕೇಳುತ್ತಿರುವ ಕನಿಷ್ಠ ಮೂರು ಕ್ಷೇತ್ರಗಳು ಇವೆ.

ಈ ನಡುವೆ, ಆರ್‌ಎಲ್‌ಡಿ ಅಧ್ಯಕ್ಷ ಜಯಂತ್ ಚೌಧರಿ ಅವರು ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಹೊಡೆತ ನೀಡಿದ್ದಾರೆ. ಇಂಡಿಯಾ ಮೈತ್ರಿ ತೊರೆದು ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್‌ಡಿಎಗೆ ಸೇರಲು ಅವರು ನಿರ್ಧರಿಸಿದ್ದಾರೆ.

ಆದಾಗ್ಯೂ, ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ಗೆ ಎಸ್‌ಪಿಯ ಬೆಂಬಲ ಮಹತ್ವದ್ದಾಗಿದೆ. ಯಾಕೆಂದರೆ, ಕಾಂಗ್ರೆಸ್ ಕಳೆದ ಕೆಲವು ದಶಕಗಳಲ್ಲಿ ಬೆಂಬಲ ಪಡೆದು ಎರಡೂ ಸ್ಥಾನಗಳನ್ನು ಗೆಲ್ಲುತ್ತಿದೆ. ಕಳೆದ ಕೆಲವು ಚುನಾವಣೆಗಳಿಂದ ಮತ ವಿಭಜನೆಯನ್ನು ತಡೆಯಲು ಎಸ್‌ಪಿ ಮತ್ತು ಬಿಎಸ್‌ಪಿ ಕಾಂಗ್ರೆಸ್‌ಗೆ ಬೆಂಬಲವಾಗಿ ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ.

ವಿಡಿಯೊ ನೋಡಿ: ಸಾವರ್ಕರ್ ಕುರಿತು ಏಳು ಸುಳ್ಳುಗಳು – ಡಾ. ಮೀನಾಕ್ಷಿ ಬಾಳಿ ಮಾತುಗಳು

Donate Janashakthi Media

Leave a Reply

Your email address will not be published. Required fields are marked *