ಲಖನೌ: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಿಂದ 300 ಕಿ.ಮೀ. ದೂರವಿರುವ ಶಾಲೆಯ ಕಟ್ಟಡದ ಮಹಡಿಯಲ್ಲಿ ಪ್ರಾಂಶುಪಾಲರೊಬ್ಬರು ಎರಡನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ತಲೆಕೆಳಗಾಗಿ ನೇತುಹಾಕಿದ ಆಘಾತಕಾರಿ ಘಟನೆಯೊಂದು ಬುಧವಾರ ನಡೆದಿದೆ.
ಮಕ್ಕಳೆಂದರೆ ಆಟ-ತುಂಟಾಟ ಸಹಜವಲ್ಲವೆ. ಚೇಷ್ಟೇ ಮಾಡೋದು ಕೂಡ ಮಕ್ಕಳ ಗುಣ. ಆದ್ರೆ ಇದಕ್ಕೆ ಕೋಪಗೊಂಡ ಪ್ರಾಂಶುಪಾಲರು ಮಗುವನ್ನು ಉಲ್ಟಾ ಹಿಡಿದುಕೊಂಡು ಹೆದರಿಸಿರುವ ಘಟನೆ ಅಮಾನವೀಯವಾದದ್ದು.
ಇದನ್ನು ಓದಿ: ಗೋಡೆಗಳ ಒಡೆಯೋಣ… ಕಲಿಕೆಯ ಹಾದಿ ವಿಶಾಲ-ಅನಂತ ಕಾಣ….
ಘಟನೆಯು ಬುಧವಾರ ನಡೆದಿದೆ. ಅಹ್ರೌರಾದಲ್ಲಿರುವ ಸದ್ಭಾವನಾ ಶಿಕ್ಷಣ ಸಂಸ್ಥಾನದ ಜ್ಯೂನಿಯರ್ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 2ನೇ ತರಗತಿ ವಿದ್ಯಾರ್ಥಿ ಸೋನು ಯಾದವ್ ಏನೋ ಚೇಷ್ಟೇ ಮಾಡಿದ ಎಂಬ ಕಾರಣಕ್ಕೆ ಆ ಬಾಲಕನ ಕಾಲನ್ನು ಹಿಡಿದು ಎರಡನೇ ಮಹಡಿಯಲ್ಲಿ ನಿಂತು ಉಲ್ಟಾ ಹಿಡಿಯಲಾಗಿತ್ತು.
ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ವರದಿಗಳ ಪ್ರಕಾರ, ಪ್ರಿನ್ಸಿಪಾಲ್ ಮನೋಜ್ ವಿಶ್ವಕರ್ಮ ಊಟ ಮಾಡುವಾಗ ಕಿಡಿಗೇಡಿತನ ಪ್ರದರ್ಶಿಸಿದ ಹುಡುಗನ ಮೇಲೆ ಕುಪಿತಗೊಂಡು ಈ ಕೃತ್ಯ ಎಸಗಿದ್ದಾರೆ. ಇದನ್ನು ಕಂಡ ಶಾಲೆಯ ಇತರ ಮಕ್ಕಳಲ್ಲಿ ಒಬ್ಬರು ಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.
ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಿದ ಪೊಲೀಸರು ಇಂದು ಮನೋಜ್ ವಿಶ್ವಕರ್ಮಾನನ್ನು ಬಂಧಿಸಿದ್ದಾರೆ. ‘ಇದೊಂದು ಅಮಾನವೀಯ ಕೃತ್ಯವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಮಿರ್ಜಾಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಘಟನೆಯ ನಂತರ ವಿದ್ಯಾರ್ಥಿಯು ಮನೆಗೆ ಬಂದು ತನ್ನ ತಂದೆಗೆ ವಿಷಯವನ್ನು ಹೇಳಿದ್ದಾನೆ. ನಂತರ ಅವರು ಈ ಬಗ್ಗೆ ಶಿಕ್ಷಣ ಅಧಿಕಾರಿಗಳು ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ‘ಘಟನೆಯಿಂದ ಮಗು ತುಂಬಾ ಹೆದರಿತ್ತು. ಮರುದಿನ ಶಾಲೆಗೆ ಹೋಗಲು ನಿರಾಕರಿಸಿತ್ತು’ ಎಂದು ಕುಟುಂಬ ಸದಸ್ಯರು ಹೇಳಿದರು.
‘ಈ ಕುರಿತು ತನಿಖೆ ಆರಂಭಿಸಲಾಗಿದೆ. ಘಟನೆಯು ನಿಜವಾಗಿದ್ದರೆ ಶಾಲೆಯ ನೋಂದಣಿಯನ್ನು ರದ್ದುಗೊಳಿಸುತ್ತೇವೆ’ ಎಂದು ಹೆಚ್ಚುವರಿ ಮೂಲ ಶಿಕ್ಷಾ ಅಧಿಕಾರಿ (ಎಬಿಎಸ್ಎ) ಅರುಣ್ ಸಿಂಗ್ ಹೇಳಿದರು.