ನವದೆಹಲಿ: ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದ ಮೊದಲ ಹಂತದ ವಿಧಾನಸಭೆ ಚುನಾವಣೆಗೆ 30 ಮಂದಿ ತಾರಾ ಪ್ರಚಾರಕರ ಹೆಸರನ್ನು ಅಂತಿಮಗೊಳಿಸಿದೆ.
ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ತಯಾರಿ ನಡೆಸಿದೆ. 30 ಮಂದಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕನ್ಹಯ್ಯಾ ಕುಮಾರ್, ಗುಲಾಂ ನಬಿ ಆಜಾದ್ ಸೇರಿದಂತೆ ಪ್ರಮುಖ ನಾಯಕರ ಹೆಸರುಗಳನ್ನು ಬಿಡುಗಡೆಗೊಳಿಸಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಸಚಿನ್ ಪೈಲಟ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಮಾಜಿ ರಾಜ್ಯಸಭಾ ಸದಸ್ಯ ರಾಜ್ ಬಬ್ಬರ್ ಸಹ ಸ್ಟಾರ್ ಪ್ರಚಾರಕರಾಗಿ ನೇಮಕಗೊಂಡಿದ್ದಾರೆ.
ಈ ಪಟ್ಟಿಯಲ್ಲಿ ರಾಜ್ಯ ಪಕ್ಷದ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು, ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರಾ ‘ಮೋನಾ’, ಮಾಜಿ ಕೇಂದ್ರ ಸಚಿವರುಗಳಾದ ಸಲ್ಮಾನ್ ಖುರ್ಷಿದ್ ಮತ್ತು ಆರ್ ಪಿ ಎನ್ ಸಿಂಗ್ ಮತ್ತು ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಮೋದ್ ತಿವಾರಿ, ಪಿ ಎಲ್ ಪುನಿಯಾ ಇದ್ದಾರೆ. ಕಾಂಗ್ರೆಸ್‌ನ 30 ಸ್ಟಾರ್ ಪ್ರಚಾರಕರಲ್ಲಿ ಪಕ್ಷದ ನಾಯಕರಾದ ದೀಪಿಂದರ್ ಸಿಂಗ್ ಹೂಡಾ, ಸುಪ್ರಿಯಾ ಶ್ರಿನಾಟೆ, ಇಮ್ರಾನ್ ಪ್ರತಾಪ್‌ಗರ್ಹಿ ಕೂಡ ಸೇರಿದ್ದಾರೆ.
ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ, ಫೆಬ್ರವರಿ 10 ರಂದು 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 7 ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.