ಯುಪಿ | ವರನಿಲ್ಲದೆ, ತಮಗೆ ತಾವೇ ಹಾರ ಹಾಕಿ ವಿವಾಹವಾದ ವಧುಗಳು!; ಸರ್ಕಾರದ ಅನುದಾನಕ್ಕಾಗಿ ಹೀಗೊಂದು ವಂಚನೆ

ಲಖ್ನೋ: ಸುಮಾರು 545 ಜೋಡಿಗಳ ಸಾಮೂಹಿಕ ಮದುವೆ ಸಮಾರಂಭದಲ್ಲಿ ಹೆಚ್ಚಿನ ವಧುಗಳು ತಮ್ಮ ವರನೇ ಇಲ್ಲದೆ ವಧುಗಳು ತಮಗೆ ತಾವೇ ಹಾರ ಹಾಕಿ ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಮಣಿಯಾರ್‌ನಲ್ಲಿ ಜನವರಿ 25ರಂದು ನಡೆದಿದೆ. ರಾಜ್ಯ ಸರ್ಕಾರ ನೀಡುವ ಧನಸಹಾಯಕ್ಕಾಗಿ ಅಧಿಕಾರಿಗಳ ಅರಿವಿನೊಂದಿಗೆ ಇಂತಹದ್ದೊಂದು ಹಗರಣ ನಡೆದಿದೆ.

ಉತ್ತರ ಪ್ರದೇಶದ ಸರ್ಕಾರದ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಮದುವೆಗೆಂದು ಭಾಗವಹಿಸಿದ್ದವರಲ್ಲಿ, ಹೆಚ್ಚಿನ ಸಂಖ್ಯೆಯ ವಧುಗಳಿಗೆ ವರನೇ ಇರಲಿಲ್ಲ. ಅವರೆಲ್ಲರೂ ಅವರಿಗವರೆ ಮಾಲೆ ಹಾಕಿಕೊಂಡಿದ್ದಾರೆ. ಇನ್ನೂ ಹಲವರು ಹಲವು ವರ್ಷಗಳ ಹಿಂದೆಯೆ ಮದುವೆ ಆದವರಾಗಿದ್ದರು. ಗುಂಪಿನಲ್ಲಿ ಅನೇಕರು ಸಹೋದರ ಸಹೋದರಿಯರ ಜೋಡಿ ಕೂಡಾ ಇದ್ದರು, ಅಲ್ಲದೆ ಅಪ್ರಾಪ್ತ ವಧುಗಳು ಕೂಡಾ ಇದ್ದರು ಎಂದು ವರದಿಗಳು ಉಲ್ಲೇಖಿಸಿವೆ.

ಇದನ್ನೂ ಓದಿ: ರಾಜ್ಯಪಾಲರಿಗೆ ಸಿಆರ್‌ಪಿಎಫ್ Z+ ಭದ್ರತೆ | ಆರಿಫ್‌ ಖಾನ್ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ

ಇದೆಲ್ಲವೂ ನಡೆದಿರುವುದು ಕೇವಲ ದಂಪತಿಗಳಂತೆ ಪೋಸ್ ಕೊಡಲು ಮತ್ತು ಛಾಯಾಚಿತ್ರ ತೆಗೆಯಲು ಮತ್ತು ಸರ್ಕಾರದ ಹಣವನ್ನು ಹಂಚಿಕೊಳ್ಳಲು ಮಾತ್ರವಾಗಿದೆ. ಯುವತಿಯರು ತಮಗೆ ತಾವೇ ಹಾರ ಹಾಕಿಕೊಳ್ಳುತ್ತಿರುವ ಘಟನೆಯ ವಿಡಿಯೊ ವೈರಲ್ ಆದ ನಂತರ ಸರ್ಕಾರ ಎಚ್ಚೆತ್ತಿದ್ದು, ಎಡಿಒ ಸೇರಿದಂತೆ 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖಾ ಸಮಿತಿ ರಚಿಸಲಾಗಿದೆ. ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಬಡ ಹುಡುಗಿಯ ಮದುವೆಗೆ 51 ಸಾವಿರ ರೂಪಾಯಿ ನೀಡುತ್ತದೆ.

ಘಟನೆಯಲ್ಲಿ ರಾಂಪುರ, ಘಟಂಪುರ, ಛಿತೌನಿ ಮೊದಲಾದ ಹಲವು ಗ್ರಾಮಗಳಿಂದ ಒಂದೆರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಹೆಣ್ಣುಮಕ್ಕಳನ್ನು ಕರೆಸಲಾಗಿತ್ತು ಎಂದು ವರದಿಗಳಿವೆ. ಅದಾಗ್ಯೂ, ಯೋಜನೆಗೆ ಸಂಬಂಧಿಸಿದ ಹಣ ಇನ್ನೂ ಯುವತಿಯರ ಖಾತೆಗೆ ವರ್ಗಾವಣೆಯಾಗಿಲ್ಲ ಎನ್ನಲಾಗಿದೆ. ಸಿಡಿಒ ಓಜಸ್ವಿ ರಾಜ್ ಅವರು ಪ್ರಕರಣದ ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದು, ಈ ಸಮಿತಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ನಕಲಿ ಫಲಾನುಭವಿಗಳ ವಿರುದ್ಧ ಮಣಿಯಾರ್ ಪೊಲೀಸ್ ಠಾಣೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಜನವರಿ 17 ರಂದು ಬೆಳ್ತರೋಡ್‌ನಲ್ಲಿ ನಡೆದ ಸಾಮೂಹಿಕ ವಿವಾಹದ ವೇಳೆ ಉಡುಗೊರೆಗಳು ಕಲಪೆ ಮಟ್ಟದಾಗಿತ್ತು ಎಂದು ವರದಿಯಾಗಿತ್ತು. ಇದೀಗ ಮಣಿಯಾರ್‌ನಲ್ಲಿ ನಕಲಿ ಜೋಡಿಗಳು ಮದುವೆ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇಂತಹ ದಂಧೆ ಸಕ್ರಿಯವಾಗಿದ್ದು, ವರ್ಷಗಳಿಂದ ಇದು ನಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ‘ನಮಗೆ ಅವರು ಅಗತ್ಯವಿಲ್ಲ’ | ನಿತೀಶ್ ಕುಮಾರ್ ಬಗ್ಗೆ ರಾಹುಲ್‌ ಗಾಂಧಿ ಮೊದಲ ಪ್ರತಿಕ್ರಿಯೆ

ಈ ಬಗ್ಗೆ ಮಾತನಾಡಿರುವ ಸಿಡಿಒ ಓಜಸ್ವಿ ರಾಜ್ ಅವರು, “ಬ್ಲಾಕ್ ಮಟ್ಟದಲ್ಲಿ ದಂಪತಿಗಳ ವಿವಾಹದ ಪರಿಶೀಲನೆ ಕಾರ್ಯ ನಡೆದಿದೆ. ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಮಿತಿಯನ್ನು ರಚಿಸಲಾಗಿದೆ. 23 ತಂಡಗಳು ಬ್ಲಾಕ್‌ವಾರು ಪ್ರಕರಣದ ತನಿಖೆ ನಡೆಸುತ್ತಿವೆ. ಅಕ್ರಮಗಳು ಅಥವಾ ಅದರಲ್ಲಿ ಶಾಮೀಲಾಗಿರುವುದು ಕಂಡು ಬಂದಲ್ಲಿ ಫಲಾನುಭವಿಗಳೊಂದಿಗೆ ಪರಿಶೀಲನೆ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

“ಮುಖ್ಯಮಂತ್ರಿಗಳ ಸಾಮೂಹಿಕ ಯೋಜನೆಯಲ್ಲಿ ಅಕ್ರಮ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಹಾಯಕ ಅಭಿವೃದ್ಧಿ ಅಧಿಕಾರಿ, ಸಮಾಜ ಕಲ್ಯಾಣಾಧಿಕಾರಿ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ವಂಚನೆ ಮಾಡುವವರನ್ನು ಬಿಡುವುದಿಲ್ಲ.” ಎಂದು ಬಲ್ಲಿಯಾ ಜಿಲ್ಲಾಧಿಕಾರಿ ರವೀಂದ್ರಕುಮಾರ್ ಹೇಳಿದ್ದಾರೆ.

ನಕಲಿ ಫಲಾನುಭವಿಗಳ ವಿರುದ್ಧ ಮಣಿಯಾರ್ ಪೊಲೀಸ್ ಠಾಣೆಯಲ್ಲಿ ಸಮಾಜ ಕಲ್ಯಾಣಾಧಿಕಾರಿಯಿಂದ ದೂರು ಕೂಡ ದಾಖಲಾಗಿದೆ ಎಂದು ವರದಿಯಾಗಿದೆ. ಈ ಯೋಜನೆಯು ದಂಪತಿಗೆ ಉಡುಗೊರೆಗಳಿಗಾಗಿ 10,000 ರೂ., ಸಂದರ್ಶಕರಿಗೆ ಆಹಾರ ಮತ್ತು ಪಾನೀಯಗಳಿಗೆ 6,000 ರೂ. ಮತ್ತು 35,000 ರೂ.ಗಳನ್ನು ಹುಡುಗಿಯ ಖಾತೆಗೆ ವರ್ಗಾಯಿಸಲಾಗುತ್ತದೆ.

ವಿಡಿಯೊ ನೋಡಿ: ಸೌಹಾರ್ದತೆಗಾಗಿ ಮಾನವ ಸರಪಳಿ : ರಾಜ್ಯವ್ಯಾಪಿ ಕೈ ಕೈ ಬೆಸೆದ ಶಾಂತಿಪ್ರಿಯ ಮನಸ್ಸುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *