ಲಖೀಂಪುರ: ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಅಕ್ಟೋಬರ್ 03ರಂದು ಪ್ರತಿಭಟನಾ ನಿರತ ರೈತರ ಮೇಲೆ ಬೇಕೆಂದೇ ಕಾರು ನುಗ್ಗಿಸಿರುವ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ದೃಶ್ಯದಲ್ಲಿ ಕಂಡಂತೆ ರೈತರನ್ನು ಸಾಯಿಸಲೆಂದೇ ಕಾರು ನುಗ್ಗಿಸಿರುವುದು ಸ್ಪಷ್ಟವಾಗಿದೆ.
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ರೈತರ ಮೇಲೆ ಜೀಪ್ ಹತ್ತಿಸಲಾಗಿದೆ. ಬಳಿಕ ಕಾರ್ ಹರಿದು ಹೋಗಿದೆ. ಮೊದಲಿಗೆ ಜೀಪ್ ರೈತರ ಮೇಲೆ ಹರಿದಾಗಲೇ ರೈತರು ರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಬಳಿಕ ತಕ್ಷಣವೇ ಕಾರ್ ಕೂಡ ಹೋಗಿದೆ. ಕೆಲವರು ರಸ್ತೆ ಪಕ್ಕಕ್ಕೆ ಜಂಪ್ ಮಾಡಿ ಜೀವ ಉಳಿಸಿಕೊಂಡಿದ್ದಾರೆ. ರೈತರ ಹಿಂಭಾಗದಿಂದ ಜೀಪ್, ಕಾರು ಬಂದಿರುವುದರಿಂದ ರೈತರಿಗೆ ಇದು ಗೊತ್ತಾಗಲಿಲ್ಲ. ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದು ಹೋಗಿದೆ.
ಇದನ್ನು ಓದಿ: ಕೇಂದ್ರ ಸಚಿವರ ಪುತ್ರನಿಂದ ರೈತರ ಮೇಲೆ ಕಾರ್ ಹತ್ತಿಸಿದ ಪ್ರಕರಣ : 8ಕ್ಕೇರಿದ ರೈತರ ಸಾವಿನ ಸಂಖ್ಯೆ
ಅಂದು ಬೆಳಿಗ್ಗೆಯಿಂದಲೇ ರೈತರು ಉಪಮುಖ್ಯಮಂತ್ರಿ ಕೇಶವ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿಗಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹರಿದು ಸಾವಿಗೀಡಾಗಿದ್ದರು.
ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರು ಪ್ರತಿಭಟನಾಕಾರರ ಮೇಲೆ ಕಾರು ಚಲಾಯಿಸಿದ್ದು, ನಾಲ್ವರು ರೈತರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ರೈತರು ಆರೋಪಿಸಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರ ಕಾರಿನ ಮೇಲೆ ರೈತರು ಕಲ್ಲುತೂರಾಟ ನಡೆಸಿದ್ದರಿಂದ, ಕಾರು ಪಲ್ಟಿಯಾಯಿತು. ಈ ವೇಳೆ ಇಬ್ಬರು ಸಾವಿಗೀಡಾದರು. ನಂತರ ರೈತರು ಕಾರಿನಲ್ಲಿದ್ದ ನಮ್ಮ ಪಕ್ಷದ ಮೂವರು ಕಾರ್ಯಕರ್ತರು ಹಾಗೂ ಚಾಲಕನಿಗೆ ಥಳಿಸಿ ಕೊಂದುಹಾಕಿದ್ದಾರೆ’ ಎಂದು ಬಿಜೆಪಿಯ ಆರೋಪವಾಗಿದೆ.
ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಿದ್ದಲ್ಲಿ ಬಿಜೆಪಿಯ ಆರೋಪ ಸುಳ್ಳಾಗಿದ್ದು, ರೈತರ ಮೇಲೆ ಧಾಳಿ ನಡೆಸುವ ಉದ್ದೇಶದಿಂದಲೇ ಕಾರು ಚಲಾಯಿಸಿರುವುದು ಸ್ಪಷ್ಟವಾಗಿದೆ.
Wait for ANI and Godi media to come up with more statements by 'Govt sources' to justify this barbaric killing. pic.twitter.com/eJ0xrZ5BC0
— Mohammed Zubair (@zoo_bear) October 4, 2021
ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರತ್ತ ಒಂದು ಜೀಪು ಮತ್ತು ಒಂದು ಕಾರು ವೇಗವಾಗಿ ನುಗ್ಗಿ ಬಂದಿದ್ದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋವು ಸುಮಾರು 25 ಸೆಂಕೆಡ್‌ನದ್ದು ಆಗಿದೆ. ವಾಹನವು ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ಹೋಗುತ್ತಿದ್ದ ರೈತರ ಮೇಲೆ ಹರಿದು ಹೋಗಿದ್ದು, ಈ ಸಂದರ್ಭದಲ್ಲಿ ರೈತರು ನೆಲದ ಮೇಲೆ ಬಿದ್ದಿರುವ ದೃಶ್ಯ ಈ ವಿಡಿಯೋದಲ್ಲಿ ಇದೆ. ಇನ್ನು ಈ ಸಂದರ್ಭದಲ್ಲಿ ಉಳಿದ ರೈತರು ಈ ವಾಹನ ಚಲಿಸುವ ಹಾದಿಯಿಂದ ತಪ್ಪಿಸಿಕೊಳ್ಳಲು ತಡಕಾಡಿದ್ದಾರೆ. ಇನ್ನೊಂದು ವಾಹನ ಸೈರನ್ ಒಂದನ್ನು ಹಾಕುತ್ತಾ ಸಾಗಿದೆ.
ಇದು ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶೀಶ್ ಮಿಶ್ರಾ ಕಾರು ಎಂದೂ ಹೇಳಲಾಗಿದ್ದು, ಈಗಾಗಲೇ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ವಾಹನಗಳು ರೈತರತ್ತ ಹರಿದ ಬೆನ್ನಲ್ಲೇ ಆಶೀಶ್ ಮಿಶ್ರಾ ಬೆಂಗಾವಲು ಪಡೆಯ ಮೇಲೆ ರೈತರು ಮುಗಿಬಿದ್ದಿದ್ದರು.
ಕೆಲವು ದಿನಗಳ ಹಿಂದೆ ಭಾಷಣವೊಂದರಲ್ಲಿ ಕೇಂದ್ರ ಸಚಿವ ಮಿಶ್ರಾ ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಕುರಿತು ಪ್ರಸ್ತಾಪಿಸಿ, ‘ಇದು 10-15 ಜನರು ನಡೆಸುತ್ತಿರುವ ಪ್ರತಿಭಟನೆಯಾಗಿದ್ದು, ಅವರನ್ನು ಸರಿದಾರಿಗೆ ತರಲು ನಮಗೆ ಕೇವಲ 2 ನಿಮಿಷ ಸಾಕು’ ಎಂದು ಹೇಳಿದ್ದರು. ಸಚಿವರ ಹೇಳಿಕೆಯನ್ನು ಖಂಡಿಸಿ ಅಕ್ಟೋಬರ್ 3ರಂದು ರೈತರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಇದೇ ವೇಳೆ ಈ ಘರ್ಷಣೆ ನಡೆದಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ.
ಘಟನೆಯ ನಂತರ ಲಖಿಂಪುರ ಖೇರಿಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಹೊರಗಿನವರ ಪ್ರವೇಶಿಸಲು ಅವಕಾಶವಿಲ್ಲ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
[email protected]