ಆದಿತ್ಯನಾಥ್ ಅಧಿಕಾರಕ್ಕೇರಿದ ನಂತರ ಯುಪಿ ಭಯೋತ್ಪಾದನಾ ರಾಜ್ಯವಾಗಿದೆ: ಸಿ.ಎಸ್. ದ್ವಾರಕನಾಥ್ ಆಕ್ರೋಶ

ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ನಡೆದ ಮರ್ಯಾದಾಗೇಡು ಹತ್ಯೆ ಮತ್ತು ಚಂದ್ರಶೇಖರ ಆಜಾದ್ ಮೇಲಿನ ದಾಳಿ ವಿರೋಧಿಸಿ ಪ್ರತಿಭಟನೆ

ಬೆಂಗಳೂರು: ಯೋಗಿ ಆದಿತ್ಯನಾಥ್ ಅಧಿಕಾರಕ್ಕೇರಿದ ನಂತರ ಯುಪಿ ಭಯೋತ್ಪಾದನಾ ರಾಜ್ಯವಾಗಿದೆ. ಮುಸ್ಲಿಂ, ದಲಿತ, ತಳಸಮುದಾಯಗಳ ಮೇಲೆ ದಾಳಿ ಆಗುತ್ತಲೆ ಇವೆ.‌ ಇದಕ್ಕೆ ಪ್ರಭುತ್ವ ಬೆಂಬಲ ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್. ದ್ವಾರಕನಾಥ್ ಅವರು ಹೇಳಿದರು. ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ನಡೆದ ಮರ್ಯಾದಾಗೇಡು ಹತ್ಯೆ ಮತ್ತು ಚಂದ್ರಶೇಖರ ಆಜಾದ್ ಮೇಲಿನ ದಾಳಿ ವಿರೋಧಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ ದ್ವಾರಕನಾಥ್ ಅವರು,”ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಮೇಲಿನ ದಾಳಿ ಹಲ್ಲೆ ಅನಿರೀಕ್ಷಿತವಲ್ಲ, ನಿರೀಕ್ಷಿತ. ಈ ದಾಳಿ ರಾಜ್ಯ ಪೋಷಿತ ಭಯೋತ್ಪಾದನೆಯಾಗಿದೆ. ಇದೊಂದು ವ್ಯವಸ್ಥಿತ ಸಂಚಾಗಿದ್ದು, ಈ ದಾಳಿಯ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಯೋಗಿ ಆದಿತ್ಯನಾಥ್ ಆಡಳಿತಕ್ಕೆ ಬಂದ ನಂತರ ಉತ್ತರ ಪ್ರದೇಶ ಭಯೋತ್ಪಾದನಾ ರಾಜ್ಯವಾಗಿದೆ. ಮುಸ್ಲಿಂ, ದಲಿತ, ತಳಸಮುದಾಯಗಳ ಮೇಲೆ ದಾಳಿ ಆಗುತ್ತಲೆ ಇವೆ.‌ ಇದಕ್ಕೆ ಪ್ರಭುತ್ವ ಬೆಂಬಲ ನೀಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಯುಪಿ: ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ರಾವಣ್ ಮೇಲೆ ಗುಂಡಿನ ದಾಳಿ

“ಚಂದ್ರಶೇಖರ್ ಆಜಾದ್ ಅವರ ಮೇಲಿನ ದಾಳಿಯಲ್ಲಿ ಸಂಘ ಪರಿವಾರದ ಕೈ 100% ಇವೆ. ಅವರ ಮೇಲಿನ ಹಲ್ಲೆ ಸಾಂಕೇತಿಕವಾಗಿದ್ದು, ನಾವು ಎಚ್ಚರಿಕೆಯಿಂದ ಇರಬೇಕಿದೆ. ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆಗಿದೆ. ಬಿಜೆಪಿ ಆಡಳಿತದಲ್ಲಿ ಇಲ್ಲದ ಸಮಯದಲ್ಲಿ ಇಂತಹ ದಾಳಿಗಳು ರಾಜ್ಯದಲ್ಲಿ ಹೆಚ್ಚಾಗಿ ನಡೆದಿದೆ. ಇಂತಹ ದಾಳಿಗಳು ವ್ಯವಸ್ಥಿತವಾಗಿ ನಡೆಯುತ್ತದೆ. ರಾಜ್ಯದಲ್ಲೂ ಇವು ಮುಂದುವರೆಯುತ್ತದೆ. ಈ ದುಷ್ಕರ್ಮಿಗಳಿಗೆ ಪೊಲೀಸ್ ಮತ್ತು ನ್ಯಾಯಾಂಗ ಭಯವಿಲ್ಲ” ಎಂದು ಹೇಳಿದರು.

ದಲಿತ ಹಕ್ಕುಗಳ ಹೋರಾಟಗಾರ ಹಾ.ರಾ. ಮಹೇಶ್ ಅವರು ಮಾತನಾಡಿ, “ಕೊಲ್ಲಲು ಪ್ರಯತ್ನ ಮಾಡುವುದು ಮನುವಾದಿಗಳಿಗೆ ಹೊಸತಲ್ಲ. ಬುದ್ಧನ ಕಾಲದಿಂದಲೂ ಇದು ನಡೆದುಕೊಂಡು ಬರುತ್ತಿದೆ.‌ ಬುದ್ಧನನ್ನೂ ಕೊಲೆ ಮಾಡಲಾಗಿದೆ. ಅಂಬೇಡ್ಕರ್ ಮೇಲೆ ಕೂಡಾ 13 ಬಾರಿ ಕೊಲೆ ಪ್ರಯತ್ನ ನಡೆದಿತ್ತು. ಯಾವ ಸರ್ಕಾರ ಬಂದರೂ ನಾವು ಸಾಯಿಸಿಯೆ ಸಾಯಿಸುತ್ತೇವೆ ಎಂದು ಅವರವರವರೇ ಮಾತಾಡುತ್ತಿದ್ದಾರೆ ಎಂದು ಸಂಘಪರಿವಾರದಿಂದ ಹೊರಬಂದ ಹಲವಾರು ಜನರು ಹೇಳುತ್ತಲೆ ಇದ್ದಾರೆ” ಎಂದು ಹೇಳಿದರು.

“ಹಿಂಸೆಗೆ ಹಿಂಸೆ ನಮ್ಮ ದಾರಿಯಲ್ಲ. ಅಕಸ್ಮಾತ್ ಅದನ್ನು ನಾವು ಕೈಗೆತ್ತಿಕೊಂಡಿದ್ದರೆ ಭಾರತ ದೇಶ ಉಳಿಯುತ್ತಲೆ ಇರುತ್ತಿರಲಿಲ್ಲ. ಇಡೀ ದೇಶ ಕೆಂಪಾಗಿ ಬಿಡುತ್ತಿದ್ದವು. ಕೊಲ್ಲುವವರಿಗೆ ಪೊಲೀಸ್, ಕಾನೂನಿನ ಭಯವಿಲ್ಲ.‌ ಅವರಿಗೆ ಭಯ ಹುಟ್ಟಿಸುವ ಸಾಂವಿಧಾನಿಕ ಮತ್ತು ಕಾನೂನಿನ ದಾರಿಗಳನ್ನು ನಾವು ಹುಡುಕಬೇಕಿದೆ” ಎಂದು ಹೇಳಿದರು.

ಇದನ್ನೂ ಓದಿ: ವಿಪಕ್ಷ ನಾಯಕನಿಲ್ಲದ ಅಧಿವೇಶನ – ಕಗ್ಗಂಟು ಬಿಚ್ಚಲಾಗದ ಬಿಜೆಪಿ

ಹಿರಿಯ ಕವಿ ಸುಬ್ಬ ಹೊಲೆಯರ್ ಮಾತನಾಡಿ, “ಹೊಸ ಸರ್ಕಾರ ಹೊಸ ಕನಸುಗಳೊಂದಿಗೆ ಬರುತ್ತೆ. ಆದರೆ ನಮ್ಮನ್ನು ಹೊಡೆಯುವವರು, ಕೊಲ್ಲುವವರು ಇದ್ದೇ ಇರುತ್ತಾರೆ. ನಾವು ಈ ಕತ್ತಲೆ ವಿರುದ್ಧ ಬೆಳಕು ಹಿಡಿಯುತ್ತಲೆ ಇದ್ದೇವೆ. ಆದರೆ ನಮ್ಮ ಮೇಲೆ ಬೆಂಕಿ ಹಾಕುತ್ತಲೇ ಇದ್ದಾರೆ. ಜಗತ್ತಿನಲ್ಲಿ ಇಷ್ಟೊಂದು ಸಹನೆಯ ಕುಲ ಇದ್ದರೆ ಅದು ನಾವು ಮಾತ್ರ. ಯಾವ ಜೀವವೂ ಆರದಿರಲಿ ಎಂದು ನಾವು ಇವತ್ತು ಬೆಳಕು ಹಿಡಿದಿದ್ದೇವೆ. ಇದನ್ನು ಬೆಳಕು ಆರಿಸುವವರಿಗೂ ತಿಳಿಯಲಿ.” ಎಂದು ಹೇಳಿದರು.

ವಕೀಲರಾದ ಮೈತ್ರೇಯಿ ಮಾತನಾಡಿ, “ಜಾತಿ ಪದ್ಧತಿ ಹಾಗೂ ಜಾತಿ ದೌರ್ಜನ್ಯ ನಿಲ್ಲಬೇಕಿದೆ. ಈ ಬಜೆಟ್ ಅಧಿವೇಶನದಲ್ಲಿ ಜಾತಿ ನಿರ್ಮೂಲನೆ ಹೇಗೆ ಮಾಡಲು ಸಾಧ್ಯ ಎಂಬ ಬಗ್ಗೆ ಚರ್ಚಿಸಲು ಸರ್ಕಾರ ಒಂದು ದಿನ ನೀಡಬೇಕಿದೆ. ಜಾತಿ ಪದ್ಧತಿ ತೊಲಗಿಸಲು ನಾವೆಲ್ಲರೂ ಸೇರಿ ಹೋರಾಟ ಮಾಡಬೇಕಿದೆ” ಎಂದರು.

ಬಹುತ್ವ ಕರ್ನಾಟಕ, ತಮಟೆ ಕರ್ನಾಟಕ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಎಲ್‌.ಎನ್. ಮುಕುಂದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಹುಲಿಕುಂಟೆ ಮೂರ್ತಿ ಅವರು ನಿರ್ವಹನೆ ಮಾಡಿದರು.

ಇದನ್ನೂ ಓದಿ: ಸ್ವಾಮೀಜಿಗಳು ವ್ಯಾಪಾರಿಗಳಾಗಿದ್ದು, ಮಠಗಳು ವಾಣಿಜ್ಯ ಕೇಂದ್ರಗಳಾಗಿವೆ: ಖ್ಯಾತ ಸಾಹಿತಿ ಅರವಿಂದ ಮಾಲಗತ್ತಿ

Donate Janashakthi Media

Leave a Reply

Your email address will not be published. Required fields are marked *