ಉತ್ತರ ಪ್ರದೇಶ | ಸಿಎಂ ಯೋಗಿ ಆದಿತ್ಯನಾಥ್‌ ಅಮಾನವೀಯ, ಅಕ್ರಮ ಕೃತ್ಯ ಎಸಗುತ್ತಿದೆ – ಸುಪ್ರೀಂ ಕೋರ್ಟ್‌

ಉತ್ತರ ಪ್ರದೇಶ: ರಾಜ್ಯದಲ್ಲಿ ಪುಟ್ಟ ಹುಡುಗಿಯೊಬ್ಬಳು ಗುಡಿಸಲನ್ನು ಬುಲ್ಡೋಜರ್ ನೆಲಸಮಗೊಳಿಸುತ್ತಿದ್ದಂತೆ ತನ್ನ ಪುಸ್ತಕವನ್ನು ಎದೆಗವುಚಿಕೊಂಡು ಓಡುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ತೀವ್ರ ಚರ್ಚೆ ಹುಟ್ಟುಹಾಕಿರುವ ಈ ವಿಡಿಯೊ ಇದೀಗ ಸುಪ್ರೀಂ ಕೋರ್ಟ್‌ ಅಂಗಳಕ್ಕೂ ಕಾಲಿಟ್ಟಿದೆ. ಉತ್ತರ ಪ್ರದೇಶ 

ಈ ಬಗ್ಗೆ ಪ್ರಸ್ತಾವಿಸಿದ ನ್ಯಾಯಪೀಠ ಉತ್ತರ ಪ್ರದೇಶ ಸರ್ಕಾರ ಮತ್ತು ಪ್ರಯಾಗ್‌ ರಾಜ್‌ ಆಡಳಿತವನ್ನು ಏಪ್ರಿಲ್. 1‌ ಮಂಗಳವಾರದಂದು ತರಾಟೆಗೆ ತೆಗೆದುಕೊಂಡಿದ್ದೂ, ಉತ್ತರ ಪ್ರದೇಶದ ಅಂಬೇಡ್ಕರ್‌ ನಗರದಲ್ಲಿ ಸರ್ಕಾರ ಬುಲ್ಡೋಜರ್‌ ಮೂಲಕ ಕಟ್ಟಡ ತೆರೆವುಗೊಳಿಸುತ್ತಿರುವ ಕಾರ್ಯಾಚರಣೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಧ್ವನಿ ಎತ್ತಿದೆ.

“ಚಿಕ್ಕ ಹುಡುಗಿಯೊಬ್ಬಳು ನೆಲೆಸಮವಾಗುತ್ತಿರುವ ಗುಡಿಸಲಿನಿಂದ ಪುಸ್ತಕ ಹಿಡಿದುಕೊಂಡು ಓಡಿ ಬರುತ್ತಿರುವ ವಿಡಿಯೊ ವೈರಲ್‌ ಆಗಿದೆ. ಈ ದೃಶ್ಯ ಮನಸ್ಸಿಗೆ ನಾಟುವಂತಿದೆ” ಎಂದು ನ್ಯಾಯಮೂರ್ತಿ ಉಜ್ಜಲ್‌ ಭುಯಾನ್‌ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಖಾಸಗಿ ಬಸ್ ಗೆ ಬೆಂಕಿ – ಸಂಪೂರ್ಣ ಸುಟ್ಟು ಭಸ್ಮ, ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

ಜತೆಗೆ ನ್ಯಾಯಾಲಯವು ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳ ವಿರುದ್ಧ ಕಿಡಿಕಾರಿದೆ. ಬುಲ್ಡೋಜರ್ ಕ್ರಮವನ್ನು ಅಮಾನವೀಯ ಎಂದು ಕರೆದಿದ್ದು, ನ್ಯಾಯಾಲಯವನ್ನು ಸಂಪರ್ಕಿಸಿದ ಪ್ರತಿ ಮನೆ ಮಾಲೀಕರಿಗೆ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠವು, ಸರಿಯಾದ ಕಾರ್ಯವಿಧಾನವನ್ನು ಅನುಸರಿಸದೆ ವಕೀಲ, ಪ್ರಾಧ್ಯಾಪಕ ಮತ್ತು ಇತರರ ಮನೆಗಳನ್ನು ನೆಲಸಮಗೊಳಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಬುಲ್ಡೋಜರ್ ಕಾರ್ಯಾಚರಣೆಯ ಕೇವಲ ಒಂದು ದಿನದ ಮೊದಲು ತಮಗೆ ನೋಟಿಸ್ ನೀಡಲಾಗಿದೆ ಎಂದು ವಕೀಲ ಜುಲ್ಫಿಕರ್ ಹೈದರ್, ಪ್ರೊಫೆಸರ್ ಅಲಿ ಅಹ್ಮದ್ ಮತ್ತು ಇತರ ಮೂವರು ನ್ಯಾಯಾಲಯದ ಮೊರೆ ಹೋಗಿದ್ದರು.

ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು, ಸಂತ್ರಸ್ತರಿಗೆ ಸೇರಿದ ಮನೆಗಳನ್ನು 2023ರಲ್ಲಿ ಕೊಲೆಯಾದ ದರೋಡೆಕೋರ ಅತೀಕ್ ಅಹ್ಮದ್‌ಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ತಪ್ಪಾಗಿ ಅಧಿಕಾರಿಗಳು ಗುರುತಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಇನ್ನು ನೆಲಸಮ ಕಾರ್ಯಾಚರಣೆಯ ನೋಟಿಸ್ ನೀಡಿದ ರೀತಿಗೂ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಕಟ್ಟಡದಲ್ಲಿ ನೋಟಿಸ್‌ ಅಂಟಿಸಲಾಗಿದೆ ಎಂದು ರಾಜ್ಯ ಪರ ವಕೀಲರು ತಿಳಿಸಿದ್ದು, ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್‌, ನೋಟಿಸ್‌ಗಳನ್ನು ನೋಂದಾಯಿತ ಅಂಚೆ ಮೂಲಕ ಏಕೆ ಕಳುಹಿಸಿಲ್ಲ? ಎಂದು ಪ್ರಶ್ನಿಸಿತು.

ಜಲಾಲ್ಪುರದ ಅಂಬೇಡ್ಕರ್‌ ನಗರದಲ್ಲಿ ನೆಲಸಮವಾಗುತ್ತಿರುವ ಮನೆಯಿಂದ ಬಾಲಕಿ ಪುಸ್ತಕ ಹಿಡಿದು ಓಡಿ ಬರುತ್ತಿರುವ ವಿಡಿಯೊ ಎಲ್ಲಡೆ ಹರಿದಾಡುತ್ತಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಬುಲ್ಡೋಜರ್‌ ನೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ವಿಪಕ್ಷ ನಾಯಕರು ಸರ್ಕಾರದ ವಿರುದ್ದ ಮುಗಿಬಿದ್ದಿವೆ. ಜತೆಗೆ ಇದೀಗ ಸುಪ್ರೀಂ ಕೋರ್ಟ್‌ ಕೂಡ ತರಾಟೆಗೆ ತೆಗೆದುಕೊಂಡಿದೆ.

ಸಂಸದ ಮತ್ತು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ವಿಡಿಯೊವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಅಂಬೇಡ್ಕರ್ ನಗರದಲ್ಲಿ ಸರ್ಕಾರಿ ಅಧಿಕಾರಿಗಳು ಮನೆಗಳನ್ನು ನೆಲಸಮ ಮಾಡುತ್ತಿದ್ದರೆ, ಬಾಲಕಿಯೊಬ್ಬಳು ತನ್ನ ಪುಸ್ತಕಗಳನ್ನು ಉಳಿಸಲು ಓಡುತ್ತಿದ್ದಾಳೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳುವ ಅದೇ ಬಿಜೆಪಿ ನಾಯಕರು ಈ ಕೆಲಸವನ್ನೂ ಮಾಡಿದ್ದಾರೆ” ಎಂದು ಅವರು ಬರೆದುಕೊಂಡಿದ್ದಾರೆ. ಕಾಂಗ್ರೆಸ್‌ ಕೂಡ ಈ ವಿಡಿಯೊ ಹಂಚಿಕೊಂಡು ಬುಲ್ಡೋಜರ್‌ ಕಾರ್ಯಾಚರಣೆಯನ್ನು ಟೀಕಿಸಿದೆ.

ಪೊಲೀಸರು ಹೇಳಿದ್ದೇನು?

ಅಂಬೇಡ್ಕರ್‌ ನಗರ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಹಲವು ಬಾರಿ ಕಾರ್ಯಾಚರಣೆಯ ನೋಟಿಸ್‌ ನೀಡಿದ್ದಾಗಿ ತಿಳಿಸಿದ್ದಾರೆ. “ಜಲಾಲ್ಪುರ ತಹಶೀಲ್ದಾರ್ ನ್ಯಾಯಾಲಯವು ಹೊರಡಿಸಿದ ತೆರವು ಆದೇಶವನ್ನು (ಪ್ರಕರಣ ಸಂಖ್ಯೆ T202404040205504) ಅನುಸರಿಸಿ ಅತಿಕ್ರಮಣ ಕಟ್ಟಡಗಳನ್ನು ತೊಡೆದುಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ವಸತಿಯೇತರ ಕಟ್ಟಡಗಳನ್ನು ತೆರವುಗೊಳಿಸುವ ಮೊದಲು ಅನೇಕ ನೋಟಿಸ್‌ಗಳನ್ನು ನೀಡಲಾಗಿದೆ. ಸರ್ಕಾರಿ ಭೂಮಿಯನ್ನು ಮರಳಿ ಪಡೆಯುವ ನ್ಯಾಯಾಲಯದ ಆದೇಶಕ್ಕೆ ಅನುಸಾರವಾಗಿ ನೆಲಸಮ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಇಂಗ್ಲೀಷ್‌ ಕಲಿಯೋಣ | ಸರ್ವನಾಮಗಳು – Pronouns | ತೇಜಸ್ವಿನಿ Janashakthi Media

Donate Janashakthi Media

Leave a Reply

Your email address will not be published. Required fields are marked *