ಲಕ್ನೋ : ಉತ್ತರ ಪ್ರದೇಶದಲ್ಲಿ ಸರ್ಕಾರದಿಂದ ಬಡವರಿಗೆ ವಿತರಿಸಲಾಗುವ ಉಪ್ಪು, ಎಣ್ಣೆ ಮತ್ತು ಬೇಳೆಯ ಪ್ಯಾಕೆಟ್‌ಗಳ ಮೇಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚಿತ್ರಗಳು ಕಂಡು ಬಂದಿದ್ದು, ಚರ್ಚೆಗೆ ಗ್ರಾಸವಾಗಿವೆ.
ರಾಜ್ಯ ಸರ್ಕಾರದ ಉಚಿತ ಪಡಿತರ ವಿತರಣೆ ಯೋಜನೆಯಡಿ ವಿತರಿಸಲಾಗುವ ಈ ಪ್ಯಾಕೆಟ್‌ಗಳ ಮೇಲೆ ಇವರಿಬ್ಬರ ಚಿತ್ರಗಳೊಂದಿಗೆ, “ಪ್ರಾಮಾಣಿಕ ಆಲೋಚನೆ, ಕೆಲಸ,” ಎಂದು ಘೋಷವಾಕ್ಯ ಬರೆಯಲಾಗಿದ್ದು, ಚುನಾವಣಾ ಪ್ರಚಾರಕ್ಕೆ ಬಿಜೆಪಿ ಇದನ್ನು ಬಳಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಈ ಪ್ಯಾಕೆಟ್ ಗಳನ್ನು ರಾಜ್ಯದ 80,000ಕ್ಕೂ ಹೆಚ್ಚು ರೇಷನ್ ಅಂಗಡಿಗಳಲ್ಲಿ ವಿತರಿಸಲಾಗುತ್ತಿದೆ. 15 ಕೋಟಿಯಷ್ಟು ಫಲಾನುಭವಿಗಳು ಈ ಪ್ಯಾಕೆಟ್‌ಗಳನ್ನು ಪಡೆಯುತ್ತಿದ್ದಾರೆ ಎಂದು ಖುದ್ದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತಿವೆ.
ಕೇಂದ್ರ ಹಾಗೂ ರಾಜ್ಯಗಳೆರಡರಲ್ಲೂ ಒಂದೇ ಪಕ್ಷ ಅಧಿಕಾರದಲ್ಲಿರುವುದನ್ನು ‘ಡಬಲ್ ಇಂಜಿನ್ ಸರ್ಕಾರ’ ಎಂದು ಕರೆಯುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕಾರ್ಯಾಲಯ, ಈ ಯೋಜನೆಗೆ ‘ಡಬಲ್ ರೇಷನ್ ಯೋಜನೆ’ ಎಂದು ಕರೆಯುತ್ತಿದೆ.
ಇದು ಚುನಾವಣಾ ಗಿಮಿಕ್ ಆಗಿದ್ದು ಸರಕಾರ, ಯೋಜನೆಗಳ ಹೆಸರಲ್ಲಿ ಪ್ರಚಾರ ಪಡೆಯುತ್ತಿದೆ. ಜನರನ್ನು ದಿಕ್ಕು ತಪ್ಪಿಸುತ್ತದೆ. ಕೋಡಲೇ ಫೋಟೊಗಳನ್ನು ತೆಗೆಯಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ.