ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆದು, ಫಲಿತಾಂಶವೂ ಹೊರಬಿದ್ದಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ 399 ಅಭ್ಯರ್ಥಿಗಳ ಪೈಕಿ 387 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಶೇಕಡ 97ರಷ್ಟು ಅಭ್ಯರ್ಥಿಗಳು ಠೇವಣಿ ನಷ್ಟವಾಗಿದೆ.
ಬಹುತೇಕ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷ ಕೇವಲ ಶೇಕಡ 2.4ರಷ್ಟು ಮತಗಳನ್ನು ಮಾತ್ರ ಗಳಿಸಿದೆ. ಇದು ಕೇವಲ 33 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆರ್‌ಎಲ್‍ಡಿ ಗಳಿಸಿದ್ದ ಮತ (2.9%)ಕ್ಕಿಂತ ಕಡಿಮೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರಾಜ್ಯದ ಪ್ರಮುಖ ಪಕ್ಷಗಳ ಪೈಕಿ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ದ 290 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಪಕ್ಷವು ಎಲ್ಲ 403 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರವನ್ನು ಪಡೆದುಕೊಂಡಿರುವ ಬಿಜೆಪಿಯ ಮೂವರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಬಿಜೆಪಿ 376 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. 347 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಸಮಾಜವಾದಿ ಪಕ್ಷದ ಆರು ಅಭ್ಯರ್ಥಿಗಳಿಗೆ ಠೇವಣಿ ನಷ್ಟವಾಗಿದೆ.
ಕುತೂಹಲದ ಅಂಶವೆಂದರೆ, ಬಿಜೆಪಿ ಮೈತ್ರಿಕೂಟದ ಸಣ್ಣ ಪಕ್ಷವಾದ ಅಪ್ನಾ ದಳ (ಸೋನೆವಾಲ್) ಮತ್ತು ನಿಷದ್ 27 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಈ ಪೈಕಿ ಯಾರೂ ಠೇವಣಿ ಕಳೆದುಕೊಂಡಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಎಸ್‌ಪಿ ಕೂಟದ ಮಿತ್ರಪಕ್ಷವಾದ ಎಸ್‍ಬಿಎಸ್‌ಪಿ ಮತ್ತು ಅಪ್ನಾದಳ (ಕಮೇರವಾಡಿ) ಪಕ್ಷಗಳ 25 ಅಭ್ಯರ್ಥಿಗಳ ಪೈಕಿ 8 ಮಂದಿಗೆ ಠೇವಣಿ ನಷ್ಟವಾಗಿದೆ. 33 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆರ್‌ಎಲ್‍ಡಿಗೆ ಮೂರು ಕ್ಷೇತ್ರಗಳಲ್ಲಿ ಠೇವಣಿ ನಷ್ಟವಾಗಿದೆ.
ಚಲಾವಣೆಯಾದ ಸಿಂಧು ಮತಗಳಲ್ಲಿ ಕನಿಷ್ಠ ಆರನೇ ಒಂದು ಮತಗಳನ್ನು ಪಡೆಯದ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ. ಉತ್ತರ ಪ್ರದೇಶ ವಿಧಾನಸಭೆಗೆ ಸ್ಪರ್ಧಿಸಿದ್ದ 4442 ಅಭ್ಯರ್ಥಿಗಳ ಪೈಕಿ 3522 ಮಂದಿ ಅಥವಾ ಶೇಕಡ 80ರಷ್ಟು ಮಂದಿ ಠೇವಣಿ ಕಳೆದುಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಅತಿ ಹೆಚ್ಚು ಶೇಕಡಾ 41.3 ರಷ್ಟು ಮತಗಳನ್ನು ಪಡೆದಿದೆ. ಸಮಾಜವಾದಿ ಪಕ್ಷವು 32.1 ಶೇಕಡಾ ಮತಗಳನ್ನು ಗಳಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.