ಯುಪಿ: ಉಪಕುಲಪತಿ & ಪೊಲೀಸರ ಮೇಲೆ ತೀವ್ರ ಹಲ್ಲೆ ನಡೆಸಿದ ABVP ದುಷ್ಕರ್ಮಿಗಳು

ವಿಶ್ವವಿದ್ಯಾಲಯದ ಆಸ್ತಿಪಾಸ್ತಿಗಳಿಗೆ ಕೂಡಾ ಎಬಿವಿಪಿ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ ABVP

ಉತ್ತರ ಪ್ರದೇಶ: ಬಿಜೆಪಿ (BJP) ಸಹಸಂಘಟನೆಯಾದ ಎಬಿವಿಪಿಯ (ABVP) ದುಷ್ಕರ್ಮಿಗಳು ಉಪ ಕುಲಪತಿ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳ ಮೇಲೆ ತೀವ್ರ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ರಾಜ್ಯದ ಗೋರಖ್‌ಪುರದ (Gorakhpur) ದೀನ್ ದಯಾಳ್ ಉಪಾಧ್ಯಾಯ ವಿಶ್ವವಿದ್ಯಾನಿಲಯ (DDU) ದಲ್ಲಿ ನಡೆದಿದೆ.

ಪರಿಸ್ಥಿತಿ ನಿಭಾಯಿಸಲು ಬಂದ ಪೊಲೀಸ್ ಅಧಿಕಾರಿಗಳ ಮೇಲೆ ಕೂಡಾ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಶುಲ್ಕ ಹೆಚ್ಚಳ ಮತ್ತು ಇತರ ವಿಷಯಗಳ ಕುರಿತ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಭುಗಿಲೆದ್ದ ಸಂಘರ್ಷದಲ್ಲಿ ವಿಶ್ವವಿದ್ಯಾಲಯದ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ. ಗಾಯಗೊಂಡವರಲ್ಲಿ ಉಪಕುಲಪತಿ ರಾಜೇಶ್ ಸಿಂಗ್ ಮತ್ತು ಅಧೀನ ರಿಜಿಸ್ಟ್ರಾರ್ ಅಜಯ್ ಸಿಂಗ್ ಎಂದು ಗುರುತಿಸಲಾಗಿದೆ. ಅವರ ಮೇಲೆ ಗಟ್ಟಿಯಾದ ವಸ್ತುವಿನಿಂದ ದಾಳಿ ಮಾಡಲಾಗಿದ್ದು ತಲೆಗೆ ಗಾಯಗಳಾಗಿದೆ.

ಇದನ್ನೂ ಓದಿ: `ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಪ್ರಾಂಶುಪಾಲರ ಮೇಲೆ ಒತ್ತಡ ಹಾಕಿದ ಎಬಿವಿಪಿ ದುಷ್ಕರ್ಮಿಗಳು

ಹಲ್ಲೆ ನಡೆಸಿರುವವರಲ್ಲಿ ABVP ಸದಸ್ಯರು ಮಾತ್ರವಲ್ಲದೆ ಕ್ಯಾಂಪಸ್ ಹೊರಗಿನ ಜನರ ಗುಂಪು ಕೂಡಾ ಇತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಜುಲೈ ಮೊದಲ ವಾರದಿಂದ ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ, ಪ್ರತಿಭಟನಾಕಾರರನ್ನು ಭೇಟಿ ಮಾಡಲು ವಿಶ್ವವಿದ್ಯಾಲಯದ ಅಧಿಕಾರಿಗಳು ನಿರಾಕರಿಸಿರುವುದು ಈ ಹಿಂಸಾಚಾರಕ್ಕೆ ಕಾರಣ ಎಂದು ವರದಿಯಾಗಿದೆ.

“ಪೊಲೀಸರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಮತ್ತು ಹೊರಗಿನವರು ಕ್ಯಾಂಪಸ್‌ನಲ್ಲಿ ಗಲಾಟೆಯನ್ನು ಸೃಷ್ಟಿಸಿದರು. ಪೊಲೀಸರು ವಿದ್ಯಾರ್ಥಿಗಳನ್ನು ನಿಲ್ಲಿಸಲು ಮನವೊಲಿಸಲು ಪ್ರಯತ್ನಿಸಿದರಾದರೂ, ವಿಫಲರಾದರು. ನಂತರ ಪೊಲೀಸರು ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಸುರಕ್ಷಿತವಾಗಿ ಕ್ಯಾಂಪಸ್‌ನಿಂದ ಹೊರಗೆ ಕರೆದೊಯ್ಯಲು ನಿರ್ಧರಿಸಿದರು. ವಿಸಿಯನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಿದ್ದಾಗ, ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಎಬಿವಿಪಿ ದುಷ್ಕರ್ಮಿಯಿಂದ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ

“ದುಷ್ಕರ್ಮಿಗಳು ರಿಜಿಸ್ಟ್ರಾರ್ ಪ್ರೊಫೆಸರ್ ಅಜಯ್ ಸಿಂಗ್ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಾರೆ. ಅವರು ನೆಲದ ಮೇಲೆ ಬಿದ್ದಾಗ, ದುಷ್ಕರ್ಮಿಗಳು ಅವರಿಗೆ ಹೊಡೆದಿದ್ದಾರೆ. ಅವರ ತಲೆಗೆ ಗಟ್ಟಿಯಾದ ವಸ್ತುವಿನಿಂದ ಹೊಡೆದಿದ್ದಾರೆ. ಇದರ ನಂತರ ಪೊಲೀಸರು ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು” ಎಂದು ಅಧಿಕಾರಿ ಹೇಳಿದ್ದಾರೆ.

ಈ ಹಿಂದೆ ವಿಶ್ವವಿದ್ಯಾಲಯದ ಆಡಳಿತದಿಂದ ಕಪ್ಪು ಪಟ್ಟಿಗೆ ಸೇರಿಸಲಾದ ಕೆಲವು ಗುತ್ತಿಗೆದಾರರು ಕೂಡಾ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಹರಿಬಿಟ್ಟ ಪ್ರಕರಣ : ಎಬಿವಿಪಿ ಅಧ್ಯಕ್ಷ ಪ್ರತೀಕ್‌ ಗೌಡ ಬಂಧನ

“ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಿಂಸಾಚಾರದಲ್ಲಿ ಹೊರಗಿನವರೂ ಇದ್ದಾರೆ. ವಿದ್ಯಾರ್ಥಿಗಳು, ಗುತ್ತಿಗೆದಾರರು ಹಾಗೂ ಹೊರಗಿನ ಗುಂಪಿನ ಜನರನ್ನು ಸೇರಿಸಿ ನಾವು ಪೊಲೀಸರಿಗೆ ದೂರು ನೀಡಿದ್ದೇವೆ” ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳನ್ನು ಹೊರಹಾಕಲಾಗಿದ್ದು, ಶನಿವಾರ ಅವರ ಹೆಸರನ್ನು ಬಹಿರಂಗಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

“ಘಟನೆಯ ಬಗ್ಗೆ ವಿಶ್ವವಿದ್ಯಾನಿಲಯವು ದೂರು ಸಲ್ಲಿಸಿದ್ದು, ಪ್ರಕರಣವನ್ನು ದಾಖಲಿಸಲಾಗುತ್ತಿದೆ. ಕೆಲವರನ್ನು ವಿಚಾರಣೆ ನಡೆಸುತ್ತಿದ್ದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ” ಎಂದು ಗೋರಖ್‌ಪುರದ ಹಿರಿಯ ಪೊಲೀಸ್ ಅಧೀಕ್ಷಕ ಗೌರವ್ ಗ್ರೋವರ್ ಹೇಳಿದ್ದಾರೆ.

ಬಿಜೆಪಿಯ ಗೋರಖ್‌ಪುರ ಜಿಲ್ಲಾಧ್ಯಕ್ಷ ಯುಧಿಸ್ಟಾರ್ ಸಿಂಗ್, “ಇಂದಿನ ವಿಷಯದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಎಬಿವಿಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನಾನು ಕೇಳಲ್ಪಟ್ಟೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಮಣಿಪುರ ಹಿಂಸಾಚಾರ | ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿಫಲಗೊಂಡಿದೆಯೆ? Manipur violence | Has the BJP government led by Modi failed?
×

ವಿಡಿಯೊ ನೋಡಿ: ಒಂಟಿಯಾಗಿ ಕಾಲೇಜಿಗೆ ಬರುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿದ ಎಬಿವಿಪಿ ದುಷ್ಕರ್ಮಿಗಳು 

Donate Janashakthi Media

Leave a Reply

Your email address will not be published. Required fields are marked *