ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನರ‍್ರಚನೆ ಹಿನ್ನೆಲೆಯಲ್ಲಿ ಕೆಲವು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಡಿ.ವಿ.ಸದಾನಂದ ಗೌಡ, ರಮೇಶ್ ಪೋಖ್ರಿಯಾಲ್ ನಿಶಾಂಕ್ ರಾಜೀನಾಮೆ ನೀಡಿದ್ದಾರೆ. ಕರ್ನಾಟಕದಿಂದ ಸಂಸದರಾಗಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೇ ಸಂದರ್ಭದಲ್ಲಿ ರಾಜ್ಯದಿಂದ ಮೂವರನ್ನು ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.
ಅನಾರೋಗ್ಯ ಸಮಸ್ಯೆ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರನ್ನು ಕೈಬಿಡಲು ಯೋಚಿಸಲಾಗಿತ್ತು. ಅದಕ್ಕೆ ಪೂರಕವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರೊಂದಿಗೆ ಆರೋಗ್ಯ ಸಚಿವರಾಗಿದ್ದ ಡಾ. ಹರ್ಷವರ್ಧನ್, ದೆಬೋಶ್ರೀ ಚೌಧರಿ, ಸಂತೋಷ್ ಗಂಗ್ವಾರ್ ಹಾಗೂ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡ ತಾವರ್ ಚಂದ್ ಗೆಹ್ಲೋಟೆ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನು ಓದಿ: ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ‍್ರಚನೆಗೆ ದಿನಾಂಕ ನಿಗದಿ
ಕರ್ನಾಟಕದಿಂದ ಮೂವರಿಗೆ ಸ್ಥಾನ ಸಿಗುವುದು ಖಚಿತವಾಗಿದ್ದು, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಚಿತ್ರದುರ್ಗ ಸಂಸದರಾದ ಆನೇಕಲ್ ನಾರಾಯಣ ಸ್ವಾಮಿ, ರಾಜ್ಯ ಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವುದು ಸಾಧ್ಯತೆಗಳಿವೆ.
68 ವರ್ಷದ ಸದಾನಂದ ಗೌಡ ಅವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಗಮನಾರ್ಹ ಅಂಶವಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿರುವ ಸದಾನಂದಗೌಡ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಸಂತೋಷ್ ಗಂಗ್ವಾರ್, ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವರಾದ ದೇಬಶ್ರೀ ಚೌಧುರಿ ಸಹ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು 43 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹೊಸಬರು ಸಂಪುಟಕ್ಕೆ ಬಡ್ತಿ ಪಡೆಯುವವರ ಹೆಚ್ಚಿದ್ದಾರೆ. ಇಂದು ಸಂಜೆ ಪ್ರಮಾಣ ನೂತನ ಸಚಿವರಿಗೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕದಿಂದ ಸಂಸದೆ ಶೋಭಾ ಕರಂದ್ಲಾಜೆ, ಆನೇಕಲ್ ನಾರಾಯಣಸ್ವಾಮಿ ಹಾಗೂ ರಾಜೀವ್ ಚಂದ್ರಶೇಖರ್ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದ್ದು, ಉಳಿದ ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ: ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೋವಾಲ್, ಪಶುಪತಿನಾಥ್ ಪಾರಸ್, ನಾರಾಯಣ ರಾಣೆ, ಭೂಪೇಂದ್ರ ಯಾದವ್, ಅನುಪ್ರಿಯಾ ಪಟೇಲ್, ಕಪಿಲ್ ಪಾಟೀಲ್, ಮೀನಾಕ್ಷಿ ಲೇಖಿ, ರಾಹುಲ್ ಕಸಾವಾ, ಅಶ್ವಿನಿ ವೈಷ್ಣವ್, ಶಾಂತನು ಠಾಕೂರ್, ವಿನೋದ್ ಸೋನ್‌ಕರ್, ಪಂಕಜ್ ಚೌಧರಿ, ಆರ್‌ಸಿಪಿ ಸಿಂಗ್, ದಿಲೇಶ್ವರ್ ಕಾಮತ್, ಚಂದ್ರೇಶ್ವರ್ ಪ್ರಸಾದ್ ಚಂದ್ರವಂಶಿ, ರಾಮನಾಥ್ ಠಾಕೂರ್, ರಾಜ್‌ಕುಮಾರ್ ರಂಜನ್, ಬಿ.ಎಲ್.ವರ್ಮಾ, ಅಜಯ್ ಮಿಶ್ರಾ, ಹೀನಾ ಗಾವಿತ್, ಅಜಯ್ ಭಟ್ಟ, ಪ್ರೀತಂ ಮುಂಡೆ ಹೆಸರುಗಳು ಕೇಳಿ ಬರುತ್ತಿವೆ.