ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರವಾಗಿ ನೀಡುವ ಸೀರೆಯ ಅಂಚಿನ ಮೇಲೆ ಕೇಂದ್ರ ಸರ್ಕಾರದ ಪೋಷಣ್ ಅಭಿಯಾನದ ಜಾಹೀರಾತು ಮುದ್ರಿಸಿರುವುದಕ್ಕೆ ಕಾರ್ಯಕರ್ತೆಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ಕಡೆಗಳಲ್ಲಿ ಸೀರೆಯನ್ನು ವಾಪಸ್ಸ ಪಡೆಯುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದ ಅನೇಕ ಕಡೆಗಳಲ್ಲಿ ಈ ಸೀರೆಯನ್ನು ವಿತರಿಸಬಾರದು ಎಂದು ಹಾಗೂ ವಿತರಿಸಿದ ಸೀರೆಗಳನ್ನು ವಾಪಸ್ಸು ಪಡೆಯಬೇಕು ಎಂದು ಅಂಗನವಾಡಿ ನೌಕರರು ಆಗ್ರಹಿಸುತ್ತಿದ್ದಾರೆ. ಸಮವಸ್ತ್ರ ಕೊಡುವುದಕ್ಕೆ ನಮ್ಮ ವಿರೋಧವಿಲ್ಲ, ಆದರೆ, ಸಮವಸ್ತ್ರದ ಹೆಸರಿನಲ್ಲಿ ಅಂಗನವಾಡಿ ನೌಕರರ ದೇಹವನ್ನೇ ಜಾಹೀರಾತು ಫಲಕಗಳಾಗಿ ಉಪಯೋಗಿಸುವುದು ಅಮಾನವೀಯ ಮತ್ತು ಮಹಿಳೆಯರ ಹಕ್ಕು ಸಂರಕ್ಷಣೆಯ ವಿರುದ್ಧವಾಗಿದೆ.
ಸೀರೆಯ ಮೇಲೆ ಪೋಷಣ್ ಅಭಿಯಾನ ಬರೆಸಿ ಗ್ರಾಮಗಳಲ್ಲಿ, ವಾರ್ಡ್‌ಗಳಲ್ಲಿ ಅಂಗನವಾಡಿ ಕೇಂದ್ರದಲ್ಲಿ ಓಡಾಡಿದರೆ ಇದರಿಂದ ಮಹಿಳೆಯರ ಗೌರವಕ್ಕೆ ಧಕ್ಕೆಯಾಗುತ್ತದೆ ಮಾತ್ರವಲ್ಲ, ಮುಂಬರುವ ದಿನಗಳಲ್ಲಿ ಇತರೆ ಇಲಾಖೆಯವರು ಇದೇ ರೀತಿಯಲ್ಲಿ ಇಲಾಖೆಗಳ ಕಾರ್ಯಕ್ರಮಗಳನ್ನು ರೂಪಿಸಿ, ಪ್ರಚಾರಕ್ಕೆ ಇದೇ ಮಾದರಿ ಬಳಸಿದರೇ, ಅಂಗನವಾಡಿ ಕಾರ್ಯಕರ್ತರು ಎಲ್ಲಿ ಹೋಗಬೇಕು. ಅಂಗನವಾಡಿ ನೌಕರಿಗೆ ಸಂಬಳ ಕಡಿಮೆ ಇರಬಹುದು. ಆದರೆ, ಸಮಾಜದಲ್ಲಿ ಗೌರವವಿದೆ. ಆದ್ದರಿಂದ ಪೋಷಣ್ ಅಭಿಯಾನಕ್ಕೆ ಕೊಟ್ಟಿರುವ ಸಮವಸ್ತ್ರಗಳನ್ನು ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೆ ವಿತರಣೆ ಮಾಡಬಾರದು, ಒಂದು ವೇಳೆ ಬಲವಂತವಾಗಿ ಸಮವಸ್ತ್ರ ಬಳಸಲು ಏರಿಕೆ ಮಾಡಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಹೇಳುತ್ತಾರೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಮುಖಂಡರಾದ ಎಚ್.ಪದ್ಮಾ.
ಇದನ್ನೂ ಓದಿ : ಹೆಣ್ಣಿನ ದೇಹ ಪ್ರಚಾರದ ಸರಕಲ್ಲ: ಪೋಷಣ್ ಅಭಿಯಾನ್ ಜಾಹೀರಾತು ಸೀರೆಗಳಿಗೆ ಅಂಗನವಾಡಿ ಅಕ್ಕಂದಿರ ತೀವ್ರ ವಿರೋಧ
ಅಂಗನವಾಡಿ ನೌಕರರು ಪೋಷಣ ಅಭಿಯಾನವನ್ನು 2019ರಿಂದ ಯಶಸ್ವಿ ಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಆದರೆ ಇಲಾಖೆಯಿಂದ ಕಳೆದ ವಾರ ಅಭಿಯಾನಕ್ಕೆ ಸಮವಸ್ತ್ರವಾಗಿ ಸೀರೆ ವಿತರಿಸಿದ್ದಾರೆ. ಆದರೆ ಈ ಸೀರೆ ಬ್ಯಾನರ್ ನಂತೆ ಇದ್ದು, ಸೀರೆಯ ತುಂಬೆಲ್ಲಾ ಪೋಷಣ ಅಭಿಯಾನ ಎಂದು ಮುದ್ರಿಸಿ ಅಂಗನವಾಡಿ ನೌಕರರನ್ನು ಜಾಹೀರಾತು ಗೊಂಬೆಗಳಂತೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ನಾವು ಜಾಹಿರಾತು ಗೊಂಬೆಗಳಲ್ಲ ಶಿಶುಗಳಿಗೆ ಅಕ್ಷರ ಹೇಳಿಕೊಡುವ ಶಿಕ್ಷಕರು ಎಂದೆನ್ನುತ್ತಾರೆ ಅಂಗನವಾಡಿ ಶಿಕ್ಷಕಿ ಆಶಾ ಸಾಲಿನ್.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೈಕೆ ಜತೆಗೆ ವಿವಿಧ ಇಲಾಖೆಗಳು ನೀಡುವ ಕೆಲಸಗಳನ್ನು ತಲೆಮೇಲೆ ಹೊತ್ತು ಮಾಡುತ್ತೇವೆ. ನಮ್ಮ ಶ್ರಮಕ್ಕೆ ತಕ್ಕಂತೆ ವೇತನವಿಲ್ಲ. ಇಲಾಖೆಯಿಂದ ನಿವೃತ್ತರಾಗಿರುವ ನೌಕರರಿಗೆ ನೀಡಬೇಕಾದ ಗೌರವಧನ ನೀಡದೆ ಅಲೆಸುತ್ತಿದ್ದಾರೆ. ನರ್ಸ್, ವೈದ್ಯರು, ಪೊಲೀಸ್, ವಿದ್ಯುತ್ ಹೀಗೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ಗೌರವಯುತವಾದ ಸಮವಸ್ತ್ರವಿದೆ. ಅಂತೆಯೇ ನಮಗೂ ಗೌರವಯುತವಾದ ಸಮವಸ್ತ್ರವನ್ನು ನೀಡಿದರೆ ಸ್ವೀಕರಿಸುತ್ತೇವೆ ಎಂದೆನ್ನುತ್ತಾರೆ ಕಾಗವಾಡ ತಾಲ್ಲೂಕಿನ ಅಂಗನವಾಡಿ ನೌಕರರ ಮುಖಂಡರಾದ ಸುವರ್ಣ ಕಾಗವಾಡ .
ಸರ್ಕಾರಕ್ಕೆ ಜನರ ಆರೋಗ್ಯದ ಬಗ್ಗೆ ಅಷ್ಟು ಕಾಳಜಿ ಇದ್ದರೇ ಕಳೆದ ಒಂದು ವರ್ಷದಿಂದ ಬಿಡುಗಡೆಯಾಗದ ಪೋಷಣ್ ಅಭಿಯಾನ್ ಅನುದಾನವನ್ನು ಬಿಡುಗಡೆ ಮಾಡಬೇಕಿದೆ. ಗುಣಮಟ್ಟದ ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳನ್ನು ವಿತರಿಸಬೇಕೆ ಹೊರತು ಕಾರ್ಯಕರ್ತೆಯರು ಜಾಹೀರಾತು ಸೀರೆ ಉಟ್ಟರೆ ಪೋಷಣೆ ಬರಲ್ಲ ಎಂಬುದನ್ನು ಸರಕಾರ ಅರ್ಥಮಾಡಿಕೊಳ್ಳಬೇಕಿದೆ. ಇಷ್ಟೆಲ್ಲ ವಿರೋಧ ವ್ಯಕ್ತವಾದ ಮೇಲೂ ಇಲಾಖೆ ಮತ್ತು ಸರಕಾರ ಎಚ್ಚೆತ್ತುಕೊಳ್ಳದೆ ಹೋದರೆ ಅಂಗನವಾಡಿ ನೌಕರರು ಬೀದಿಗಿಳಿಯುವ ಸಾಧ್ಯತೆಗಳು ಕಾಣುತ್ತಿವೆ.