ಕಾಡುತ್ತಿದೆ ನಿರುದ್ಯೋಗದ ಪಿಡುಗು!

ಪ್ರೊ. ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್

ಎಲ್ಲಾ ಬಂಡವಾಳಶಾಹಿ ದೇಶಗಳೂ ಬೃಹತ್ ಪ್ರಮಾಣದ ನಿರುದ್ಯೋಗದಿಂದ ಬಳಲುತ್ತಿವೆ. ನವ-ಉದಾರವಾದವು ಅನಿಯಂತ್ರಿತ ಬಂಡವಾಳಶಾಹಿಯನ್ನು ಪರಿಚಯಿಸುವ ಮೂಲಕ, ಕೊರೊನಾ ಕಾಣಿಸಿಕೊಳ್ಳುವ ಮುನ್ನವೇ ಭಾರತವನ್ನೂ ಸಹ ಅದೇ ಹಾದಿಗೆ ಎಳೆದು ತಂದಿದೆ. ವ್ಯಕ್ತಿಗಳನ್ನು ಬಾಧಿಸುವ ನಿರುದ್ಯೋಗದ (ಮತ್ತು ಅದರ ಪರಿಣಾಮವಾಗಿ ಬಡತನದ) ಜವಾಬ್ದಾರಿಯನ್ನು ಸಮಾಜವು ತೆಗೆದುಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಭಾರತದ ಬೂರ್ಜ್ವಾ ರಾಜಕೀಯ ಪಕ್ಷಗಳು ಈಗಾಗಲೇ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿವೆ. ಈಗ ಉದ್ಭವಿಸುವ ಪ್ರಶ್ನೆ: ಉದ್ಯೋಗ ಕೋರಿ ಪ್ರಜಾಸತ್ತಾತ್ಮಕವಾಗಿ ಮಂಡಿಸಬಹುದಾದ ಹಕ್ಕೊತ್ತಾಯವೇನು? ಮಾನವ ಘನತೆಗೆ ತಕ್ಕ ಉದ್ಯೋಗ ಪಡೆಯುವುದು, ಉದ್ಯೋಗ ಒದಗದಿದ್ದರೆ, ಬಿಡಿಗಾಸಿನ ನಿರುದ್ಯೋಗ ಭತ್ಯೆಯನ್ನಲ್ಲ, ಪೂರ್ಣ ವೇತನ ಪಡೆಯುವುದು ನಾಗರಿಕರ ಹಕ್ಕು. ಮತ್ತು ಮೇಲ್ತುದಿಯ ಶೇ. 1ರಷ್ಟು ಶ್ರೀಮಂತರ ಸಂಪತ್ತಿನ ಮೇಲೆ ಶೇ. 0.8ರಷ್ಟು ಸಂಪತ್ತು ತೆರಿಗೆಯನ್ನು ವಿಧಿಸುವ ಮೂಲಕ ಇದನ್ನು ಖಂಡಿತಾ ಒದಗಿಸಬಹುದು, ಹಾಗೆ ಒದಗಿಸದಿರುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಒಂದು ಮಹಾ ಪಾತಕವಾಗುತ್ತದೆ. ನಿರುದ್ಯೋಗ

ನಿರುದ್ಯೋಗವು ಸ್ವಾತಂತ್ರ‍್ಯಾನಂತರದ ಭಾರತದಲ್ಲಿ ಹಿಂದೆಂದಿಗಿಂತಲೂ ಇಂದು ಹೆಚ್ಚು ಕಳವಳಕಾರಿಯಾಗಿದೆ. ಈ ಪರಿಸ್ಥಿತಿಗೆ ಎರಡು ಅಂಶಗಳು ಕಾರಣವಾಗಿವೆ. ಮೊದಲನೆಯದು, ಕೊವಿಡ್-ಲಾಕ್‌ಡೌನ್ ಸಂದರ್ಭದಲ್ಲಿ ನಿಂತು ಹೋದ ಉತ್ಪಾದನೆಯು ಆನಂತರದಲ್ಲಿ ಚೇತರಿಸಿಕೊಂಡಾಗ, ಉದ್ಯೋಗಗಳು ಲಾಕ್‌ಡೌನ್‌ಗಿಂತ ಮೊದಲಿದ್ದ ಪ್ರಮಾಣದಲ್ಲಿ ಉಳಿಯಲಿಲ್ಲ ಎಂಬುದು. ಸಿಎಂಐಇ ಸಂಸ್ಥೆಯ ಅಂದಾಜಿನ ಪ್ರಕಾರ, 2023-24ರ ಒಟ್ಟು ಜಿಡಿಪಿಯು ವಾಸ್ತವವಾಗಿ 2019-20ರಲ್ಲಿ ಇದ್ದುದಕ್ಕಿಂತ ಸುಮಾರು ಶೇ. 18ರಷ್ಟು ವೃದ್ಧಿಯಾಗಿದೆಯಾದರೂ, ಉದ್ಯೋಗಗಳ ಬೆಳವಣಿಗೆ ಮಾತ್ರ ಶೂನ್ಯವೇ. ಜಿಡಿಪಿಯ ಉದ್ಯೋಗ-ತೀವ್ರತೆಯ ಈ ಕುಸಿತಕ್ಕೆ ಕಾರಣವೆಂದರೆ, ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ದೊಡ್ಡ ದೊಡ್ಡ ಉದ್ದಿಮೆಗಳಲ್ಲಿ ಉತ್ಪಾದನೆಯ ಚೇತರಿಕೆಯು ಉತ್ತಮವಾಗಿತ್ತು ಹಾಗೂ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಲ್ಲಿ ಈ ಚೇತರಿಕೆಯು ಕಳಪೆಯಾಗಿತ್ತು. ನಿರುದ್ಯೋಗ

2019ರ ವೇಳೆಗಾಗಲೇ ನಿರುದ್ಯೋಗ ಪರಿಸ್ಥಿತಿ ಗಂಭೀರವಾಗಿಯೇ ಇತ್ತು. 2019ರಲ್ಲಿದ್ದ ನಿರುದ್ಯೋಗ ದರವು, 1973ರಲ್ಲಿ ಮೊದಲ ತೈಲ-ಬೆಲೆ ಏರಿಕೆಯ ಸನ್ನಿವೇಶದಲ್ಲಿ ಉಂಟಾದ ಹಣದುಬ್ಬರದಿಂದ ಕೂಡಿದ ಆರ್ಥಿಕ ಹಿಂಜರಿತದ ನಂತರ ಯಾವುದೇ ಸಮಯದಲ್ಲಿ ಇದ್ದುದಕ್ಕಿಂತಲೂ ಹೆಚ್ಚಾಗಿತ್ತು. ಎರಡನೇ ಅಂಶಕ್ಕೂ ಮತ್ತು ಕೊವಿಡ್-ಲಾಕ್‌ಡೌನ್ ನಂತರ ಬೇರೆ ಬೇರೆ ಔದ್ಯೋಗಿಕ ವಲಯಗಳ ಅಸಮ ಚೇತರಿಕೆಗೂ ಯಾವ ಸಂಬಂಧವೂ ಇಲ್ಲ. ಈ ಅಂಶವು ನವ ಉದಾರವಾದಿ ಆಳ್ವಿಕೆಯ ಅಂತರ್ಗತ ಪ್ರವೃತ್ತಿಗಳೊಂದಿಗೆ ಸಂಬಂಧ ಹೊಂದಿದೆ. ಸಾಂದರ್ಭಿಕವಾಗಿ ಒಂದು ಗಮನಾರ್ಹವಾದ ಸಂಗತಿಯನ್ನು ಹೇಳುವುದಾದರೆ, ಹಿಂದಿನ ನಿಯಂತ್ರಣ ನೀತಿಗಳ (dirigiste) ಆಳ್ವಿಕೆ ಮತ್ತು ನವ-ಉದಾರವಾದಿ ಆಳ್ವಿಕೆಯ ನಡುವಿನ ಅವಧಿಯಲ್ಲಿ ಜಿಡಿಪಿಯ ಸರಾಸರಿ ಬೆಳವಣಿಗೆಯ ದರವು ದ್ವಿಗುಣಗೊಂಡಿದೆ ಎಂಬುದಾಗಿ ಅಧಿಕೃತ ಅಂಕಿಅಂಶಗಳು ತೋರಿಸುತ್ತವೆಯಾದರೂ, ಉದ್ಯೋಗಗಳ ಬೆಳವಣಿಗೆಯ ದರವು ಈ ಎರಡು ಆಳ್ವಿಕೆಗಳ ನಡುವೆ ಅರ್ಧದಷ್ಟು ಕಡಿಮೆಯಾಗಿದೆ. ನಿರುದ್ಯೋಗ

ಉದ್ಯೋಗ ಬೆಳವಣಿಗೆಯ ದರದ ಈ ಪರಿಯ ಕುಸಿತಕ್ಕೆ ಕಾರಣವೆಂದರೆ, ವೇಗವಾಗಿ ಬೆಳೆದ ಶ್ರಮಿಕ ಉತ್ಪಾದಕತೆಯೇ. ನವ ಉದಾರವಾದಿ ಅವಧಿಯಲ್ಲಿ ಅರ್ಥವ್ಯವಸ್ಥೆಯನ್ನು ವಿದೇಶಿಯರಿಗೆ ಪೂರ್ಣವಾಗಿ ತೆರೆದಿಟ್ಟ ಪರಿಣಾಮವಾಗಿ ಸಂಭವಿಸಿದ ಶ್ರಮಿಕ ಉತ್ಪಾದಕತೆಯ ಬೆಳವಣಿಗೆಯು ಉದ್ಯೋಗಗಳ ಬೆಳವಣಿಯ ದರವನ್ನು ಕುಬ್ಜಗೊಳಿಸಿತು. ನವ ಉದಾರವಾದಿ ಅವಧಿಯಲ್ಲಿ ಉದ್ಯೋಗಗಳ ಬೆಳವಣಿಯ ದರವು ಕಾರ್ಮಿಕ ಬಲದ ಸರಾಸರಿ ಬೆಳವಣಿಗೆಯ ದರಕ್ಕಿಂತಲೂ ಕಡಿಮೆ ಇದೆ. ಅರ್ಥವ್ಯವಸ್ಥೆಯನ್ನು ಪೂರ್ಣವಾಗಿ ಮುಕ್ತಗೊಳಿಸಿದ ವಾತಾವರಣವು ಭಾರತದ ಮಾರುಕಟ್ಟೆಯ ಪಾಲಿಗಾಗಿ ಹವಣಿಸುತ್ತಿದ್ದ ದೇಶ ದೇಶಗಳ ಉತ್ಪಾದಕರ ನಡುವೆ ಪೈಪೋಟಿಯನ್ನು ಹೆಚ್ಚಿಸಿತು. ಇದು ತಾಂತ್ರಿಕ ಅನ್ವೇಷಣೆಗಳನ್ನು ವೇಗವಾಗಿ ಪರಿಚಯಿಸಲು ಕಾರಣವಾಯಿತು. ಈ ಪ್ರಕ್ರಿಯೆಯು ಶ್ರಮ ಉತ್ಪಾದಕತೆಯ ಇನ್ನೂ ಹೆಚ್ಚಿನ ವೇಗದ ಏರಿಕೆಗೆ ಕಾರಣವಾಯಿತು. ರೈತ ಕೃಷಿಗೆ ಒದಗಿಸುತ್ತಿದ್ದ ಬೆಂಬಲವನ್ನು ಸರ್ಕಾರವು ಹಿಂಪಡೆದ ಕಾರಣದಿಂದಾಗಿ ಉಲ್ಬಣಗೊಂಡ ಕೃಷಿ ಬಿಕ್ಕಟ್ಟು ಮತ್ತು ವೇಗವಾಗಿ ಏರುತ್ತಿದ್ದ ಶ್ರಮ ಉತ್ಪಾದಕತೆ, ಇವು ಹೆಚ್ಚಿನ ಸಂಖ್ಯೆಯ ರೈತರನ್ನು ಅವರ ಸಾಂಪ್ರದಾಯಿಕ ಕಸುಬಿನಿಂದ ಹೊರದಬ್ಬಿದವು. ರೈತರು ನಗರಗಳಿಗೆ ವಲಸೆ ಹೋಗುವ ಒತ್ತಾಯ ಸೃಷ್ಟಿಯಾಯಿತು. ಪರಿಣಾಮವಾಗಿ, ಅದಾಗಲೇ ನಿರಾಶೆಗೊಳಗಾಗಿದ್ದ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಬೃಹದಾಕಾರವಾಗಿ ಬೆಳೆಯಿತು.ನಿರುದ್ಯೋಗ

ಅನಿಯಂತ್ರಿತ ಬಂಡವಾಳಶಾಹಿ ಮತ್ತು ನಿರುದ್ಯೋಗ

ವಿಷಯವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನವ ಉದಾರವಾದಿ ಆಳ್ವಿಕೆಯು ಭಾರತದ ಅರ್ಥವ್ಯವಸ್ಥೆಯನ್ನು ಅನಿಯಂತ್ರಿತ ಬಂಡವಾಳಶಾಹಿಗೆ ಸಮರ್ಪಿಸಿತು. ಈ ಅನಿಯಂತ್ರಿತ ಬಂಡವಾಳಶಾಹಿಯು ಅದರ ಅಗತ್ಯವಾಗಿ ದೊಡ್ಡ ಪ್ರಮಾಣದ ನಿರುದ್ಯೋಗವನ್ನು ಸೃಷ್ಟಿಸುತ್ತದೆ. ಇದು ಸಂಭವಿಸುವ ಕಾರ್ಯವಿಧಾನವನ್ನು ನೋಡೋಣ. ಒಂದು ನಿರ್ದಿಷ್ಟ ಅವಧಿಯಲ್ಲಿ, ಒಂದು ನಿರ್ದಿಷ್ಟ ಮೊತ್ತದ ಬಂಡವಾಳವು 100 ಮಂದಿ ಕೆಲಸಗಾರರನ್ನು ಬಳಸಿಕೊಂಡು 100 ಯೂನಿಟ್ ಉತ್ಪತ್ತಿಯನ್ನು ಉತ್ಪಾದಿಸುತ್ತದೆ ಎಂದು ಭಾವಿಸೋಣ. ಈ ಸನ್ನಿವೇಶದಲ್ಲಿ ಕೆಲಸಗಾರರ ಉತ್ಪಾದಕತೆಯನ್ನು ದ್ವಿಗುಣಗೊಳಿಸುವ ಹೊಸ ತಂತ್ರಜ್ಞಾನ ಲಭಿಸುತ್ತದೆ. ಆನಂತರ, ಕೇವಲ 50 ಮಂದಿ ಕೆಲಸಗಾರರನ್ನು ಬಳಸಿಕೊಂಡೇ ಅದೇ 100 ಯೂನಿಟ್‌ಗಳನ್ನು ಉತ್ಪಾದಿಸಲಾಗುತ್ತದೆ ಮತ್ತು ಉಳಿದ 50 ಮಂದಿ ಕೆಲಸಗಾರರು ನಿರುದ್ಯೋಗಿಗಳಾಗುತ್ತಾರೆ. ನಿರುದ್ಯೋಗದ ಈ ರೀತಿಯ ಏರಿಕೆಯ ಕಾರಣದಿಂದಾಗಿಯೇ ಉದ್ಯೋಗದಲ್ಲಿರುವವರ ಕೂಲಿ ದರವು ಮೊದಲಿಗಿಂತ ಜಾಸ್ತಿಯಾಗುವುದಿಲ್ಲ. ಅಂದರೆ, ಕೆಲಸಗಾರರ ಉತ್ಪಾದಕತೆಯ ಏರಿಕೆಯ ಕಾರಣದಿಂದಾಗಿ ಒಟ್ಟು ವೇತನ-ಬಿಲ್ ಅರ್ಧದಷ್ಟು ಕಡಿಮೆಯಾಗುತ್ತದೆ. ಇದರಿಂದಾಗಿ ಲಾಭದ ಪಾಲು ಹೆಚ್ಚುತ್ತದೆ. ಪರಿಣಾಮವಾಗಿ ವರಮಾನಗಳ ಅಸಮತೆ ಹೆಚ್ಚುತ್ತದೆ. ವರಮಾನಗಳ ಅಸಮತೆಯ ಈ ರೀತಿಯ ಹೆಚ್ಚಳ, ಅಥವಾ, ಮಿಗುತಾಯದ ಹೆಚ್ಚಿನ ಭಾಗವು ಕೂಲಿಯಿಂದ ಲಾಭಕ್ಕೆ ಹೊರಳಿದಾಗ ಒಟ್ಟು ಬಳಕೆಯು ಇಳಿಕೆಯಾಗುತ್ತದೆ (ಶೇಕಡಾವಾರು ಲೆಕ್ಕದಲ್ಲಿ ಕೂಲಿಯ ಹೆಚ್ಚಿನ ಭಾಗವು ಬಳಕೆಯ ಖರ್ಚುಗಳಿಗೆ ವಿನಿಯೋಗವಾಗುತ್ತದೆ; ಆದರೆ, ಲಾಭದ ಹೆಚ್ಚಿನ ಭಾಗವು ಬಳಕೆಗಾಗಿ ಖರ್ಚಾಗುವುದಿಲ್ಲ). ಹಾಗಾಗಿ ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆ ಬೇಡಿಕೆಯು ವೃದ್ಧಿಯಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಅತಿ-ಉತ್ಪಾದನೆಯ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಇದು ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸುತ್ತದೆ.ನಿರುದ್ಯೋಗ

ಈ ಪರಿಸ್ಥಿತಿಯ ಬಗ್ಗೆಯೇ ಪ್ರಸಿದ್ಧ ಇಂಗ್ಲಿಷ್ ಅರ್ಥಶಾಸ್ತ್ರಜ್ಞ ಡೇವಿಡ್ ರಿಕಾರ್ಡೊ ಎಡವಿದ್ದು. ನವ ನವೀನ ಯಂತ್ರಗಳ ಬಳಕೆಯು ನಿರುದ್ಯೋಗವನ್ನು ಉಂಟುಮಾಡುತ್ತದೆ ಎಂಬ ಅಂಶವನ್ನು ಒಪ್ಪಿಕೊಳ್ಳುವಾಗ, ಅವುಗಳ ಬಳಕೆಯಿಂದ ಉಂಟಾಗುವ ಹೆಚ್ಚಿನ ಲಾಭವು ಹೂಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಉತ್ಪಾದನೆಯನ್ನು ಮತ್ತು ಉದ್ಯೋಗಗಳನ್ನೂ ಹೆಚ್ಚಿಸುತ್ತದೆ. ಹೊಸ ಯಂತ್ರಗಳ ಬಳಕೆಯು ಆರಂಭದಲ್ಲಿ ಉದ್ಯೋಗಗಳನ್ನು ತಾತ್ಕಾಲಿಕವಾಗಿ ಇಳಿಕೆ ಮಾಡುತ್ತದೆಯಾದರೂ, ದೀರ್ಘಾವಧಿಯಲ್ಲಿ ಅದು ಉದ್ಯೋಗಗಳನ್ನು ಹೆಚ್ಚಿಸುತ್ತದೆ ಎಂದು ಅವರು ಭಾವಿಸಿದ್ದರು. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಯಂತ್ರೋಪಕರಣಗಳು ತಾತ್ಕಾಲಿಕವಾಗಿ ನಿರುದ್ಯೋಗವನ್ನು ಉಂಟುಮಾಡಿದರೂ ಸಹ, ದೀರ್ಘಾವಧಿಯಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತವೆ. ಆದರೆ, ಜೀನ್ ಬ್ಯಾಪ್ಟಿಸ್ಟ್ ಸೇ ಅವರು ಮಾರುಕಟ್ಟೆಯ ಸಂಬಂಧವಾಗಿ ಪ್ರತಿಪಾದಿಸಿದ ನಿಯಮದಲ್ಲಿ ನಂಬಿಕೆಯುಳ್ಳವರಾಗಿದ್ದ ರಿಕಾರ್ಡೊ, ಬೇಡಿಕೆಯ ಸಮಸ್ಯೆಯ ಬಗ್ಗೆ ಗಮನಹರಿಸಲೇ ಇಲ್ಲ. ಹಾಗಾಗಿಯೇ, ಹಿಂದಿನ ಲಾಭಗಳು ಹೂಡಿಕೆಯಾಗದೇ ಉಳಿಯಬಹುದು ಎಂದು ಅವರು ಊಹಿಸಲಿಲ್ಲ. ಮತ್ತು, ಮಿಗುತಾಯದಲ್ಲಿ ವೇತನದ ಪಾಲನ್ನು ಇಳಿಕೆ ಮಾಡಿ ಲಾಭದ ಪಾಲನ್ನು ಹೆಚ್ಚಿಸುವ ಕ್ರಮವು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವುದಿಲ್ಲ. ಹಾಗಾಗಿ ಹೂಡಿಕೆಯೂ ಹೆಚ್ಚುವುದಿಲ್ಲ. ಅಂದರೆ, ತಂತ್ರಜ್ಞಾನದ ಬದಲಾವಣೆಯಿಂದ ಉಂಟಾದ ಆರಂಭಿಕ ನಿರುದ್ಯೋಗವು ಅನಿಯಂತ್ರಿತ ಬಂಡವಾಳಶಾಹಿಯ ಅಡಿಯಲ್ಲಿ ಮತ್ತಷ್ಟು ದೊಡ್ಡ ಪ್ರಮಾಣದ ನಿರುದ್ಯೋಗಕ್ಕೆ ಕಾರಣವಾಗುತ್ತದೆ.ನಿರುದ್ಯೋಗ

ಇದನ್ನು ಓದಿ : 1000 ಕೋಟಿ ರೂ, ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ದಾಖಲೆ ಬಿಡುಗಡೆ ಮಾಡಿದ ಎಎಪಿ!

ನಿರುದ್ಯೋಗ ಭತ್ಯೆಯಲ್ಲ, ಪೂರ್ಣ ವೇತನ ಪಡೆಯುವ ಹಕ್ಕು

ಅನಿಯಂತ್ರಿತ ಬಂಡವಾಳಶಾಹಿಯ ಒಂದು ವೈಶಿಷ್ಟ್ಯವೆಂದರೆ ಅದು ಸದಾ ಕಾಲವೂ ಬೃಹತ್ ಪ್ರಮಾಣದ ನಿರುದ್ಯೋಗದಿಂದ ಬಳಲುತ್ತದೆ. ಈ ಪರಿಸ್ಥಿತಿಗೆ ತಂತ್ರಜ್ಞಾನದ ಬದಲಾವಣೆಗಳೂ ಕೊಡುಗೆ ನೀಡಿವೆ. ತಂತ್ರಜ್ಞಾನವು ಬೃಹತ್ ಪ್ರಮಾಣದ ನಿರುದ್ಯೋಗವನ್ನು ಸೃಷ್ಟಿಸುತ್ತದೆ. ಹಾಗಾಗಿ, ಶ್ರಮಿಕ ಮೀಸಲು ಪಡೆಯ ಪ್ರಮಾಣವು (ಅಂದರೆ, ನಿರುದ್ಯೋಗಿಗಳ ಸಂಖ್ಯೆಯು) ವ್ಯವಸ್ಥೆಯು ಬಯಸುವ ಕನಿಷ್ಠ ಮಟ್ಟಕ್ಕಿಂತಲೂ ಅನೇಕ ಪಟ್ಟು ದೊಡ್ಡದಾಗಿರುತ್ತದೆ. ಆದರೆ, ಸಮಾಜವಾದದ ಅಡಿಯಲ್ಲಿ, ಈ ಪರಿಸ್ಥಿತಿಗೆ ತದ್ವಿರುದ್ಧವಾಗಿ, ತಂತ್ರಜ್ಞಾನದ ಬದಲಾವಣೆಗಳು ಕೆಲಸದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಕೂಲಿಯಲ್ಲಿ ಯಾವುದೇ ಕಡಿತವಿಲ್ಲದೆ ಕಾರ್ಮಿಕರ ವಿರಾಮದ ಸಮಯವನ್ನು ಹೆಚ್ಚಿಸುತ್ತವೆ. ತಂತ್ರಜ್ಞಾನದ ಬದಲಾವಣೆಗಳು ಶ್ರಮಿಕ ಉತ್ಪಾದಕತೆಯನ್ನು ದ್ವಿಗುಣಗೊಳಿಸುತ್ತವೆ ಎಂಬುದನ್ನು ಈ ಮೊದಲು ಪ್ರಸ್ತಾಪಿಸಲಾಗಿದೆ. ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ ತಂತ್ರಜ್ಞಾನದ ಅಳವಡಿಕೆಯು ನಿರುದ್ಯೋಗವನ್ನು ಉಂಟುಮಾಡುವುದಿಲ್ಲ. ಬದಲಿಗೆ, ಕೆಲಸದ ಸಮಯವನ್ನು ಅರ್ಧದಷ್ಟು ಕಡಿತಗೊಳಿಸುತ್ತದೆ. ಅದೇ ಉದ್ಯೋಗವೂ ಇರುತ್ತದೆ ಮತ್ತು ಕೆಲಸಗಾರರು ಹಿಂದಿನ ಅದೇ ವೇತನವನ್ನು ಪಡೆಯುತ್ತಾರೆ. ಆಧುನಿಕ ಕಾಲದಲ್ಲಿ ಪೂರ್ಣ ಉದ್ಯೋಗದ ಸ್ಥಿತಿಯನ್ನು (ಕೆಲಸಗಾರರ ಕೊರತೆ ಬೀಳುವ ಮಟ್ಟಿಗೆ) ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಹಿಂದಿನ-ಸಮಾಜವಾದಿ ದೇಶಗಳು ತಲುಪಿದ್ದವು ಎಂಬುದು ಒಂದು ಆಶ್ಚರ್ಯದ ವಿಷಯವೇ ಅಲ್ಲ. ಈ ಪರಿಸ್ಥಿತಿಗೆ ವ್ಯತಿರಿಕ್ತವಾಗಿ ಎಲ್ಲಾ ಬಂಡವಾಳಶಾಹಿ ದೇಶಗಳೂ ಬೃಹತ್ ಪ್ರಮಾಣದ ನಿರುದ್ಯೋಗದಿಂದ ಬಳಲುತ್ತಿವೆ. ನವ-ಉದಾರವಾದವು ಅನಿಯಂತ್ರಿತ ಬಂಡವಾಳಶಾಹಿಯನ್ನು ಪರಿಚಯಿಸುವ ಮೂಲಕ, ದಿಗಂತದಲ್ಲಿ ಕೊರೊನಾ ಕಾಣಿಸಿಕೊಳ್ಳುವ ಮುನ್ನವೇ ಭಾರತವನ್ನೂ ಸಹ ಅದೇ ಹಾದಿಗೆ ಎಳೆದು ತಂದಿದೆ. ಪಿಡುಗು

ವ್ಯಕ್ತಿಯೊಬ್ಬನು/ಳು ನಿರುದ್ಯೋಗಿಯಾಗಿದ್ದರೆ ಅದು ವ್ಯಕ್ತಿಯ ತಪ್ಪಲ್ಲ. ಅದು ಆ ವ್ಯಕ್ತಿಯು ಬದುಕುತ್ತಿರುವ ಸಾಮಾಜಿಕ ಏರ್ಪಾಟಿನ ದೋಷವಾಗುತ್ತದೆ: ಆ ಸಾಮಾಜಿಕ ಏರ್ಪಾಟು, ಆ ವ್ಯಕ್ತಿಗೆ ಉದ್ಯೋಗ ಒದಗಿಸುವಲ್ಲಿ ಅಸಮರ್ಥವಾಗಿದೆ ಎಂಬುದು ಸಾಬೀತಾಗಿದೆ. ನಂತರ ಉದ್ಭವಿಸುವ ಪ್ರಶ್ನೆ: ಉದ್ಯೋಗ ಕೋರಿ ಪ್ರಜಾಸತ್ತಾತ್ಮಕವಾಗಿ ಮಂಡಿಸಬಹುದಾದ ಹಕ್ಕೊತ್ತಾಯವೇನು? ಪ್ರಜಾಸತ್ತಾತ್ಮಕ ಹಕ್ಕೊತ್ತಾಯ ಎಂದರೆ ಸಮಾಜವಾದವನ್ನು ಕೇಳುವುದು ಮಾತ್ರವಲ್ಲ (ಏಕೆಂದರೆ ಸಮಾಜವಾದವನ್ನು ಕೇಳುವುದು ಎಂದರೆ ನಿರುದ್ಯೋಗಿಗಳಿಗೆ ಯಾವುದೇ ಪರಿಹಾರವನ್ನು ಮುಂದೂಡುವುದು ಎಂದಾಗುತ್ತದೆ); ಅದು ನಿರುದ್ಯೋಗಿಗಳ ತಕ್ಷಣದ ಅಗತ್ಯಗಳನ್ನು ಆಧರಿಸಿದ ಹಕ್ಕೊತ್ತಾಯವೂ ಹೌದು, ಆದರೆ ಅದು ಅನಿಯಂತ್ರಿತ ಬಂಡವಾಳಶಾಹಿಯ ಅನುಮತಿಗೆ ಸೀಮಿತವಾಗಿರುವುದಿಲ್ಲ.
ವ್ಯಕ್ತಿಗಳನ್ನು ಬಾಧಿಸುವ ನಿರುದ್ಯೋಗದ (ಮತ್ತು ಅದರ ಪರಿಣಾಮವಾಗಿ ಅವರು ಅನುಭವಿಸುವ ಬಡತನದ) ಜವಾಬ್ದಾರಿಯನ್ನು ಸಮಾಜವು ತೆಗೆದುಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಭಾರತದ ಬೂರ್ಜ್ವಾ ರಾಜಕೀಯ ಪಕ್ಷಗಳು ಈಗಾಗಲೇ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿವೆ ಮತ್ತು ಎಲ್ಲರಿಗೂ “ಕನಿಷ್ಠ ಮಟ್ಟದ ವರಮಾನ” ಒದಗಿಸುವ ಬಗ್ಗೆಯೂ ಮಾತನಾಡಿವೆ. ಆದರೆ, ಈ ಪ್ರಸ್ತಾಪಿತ ಕನಿಷ್ಠ ವರಮಾನದ ಮೊತ್ತವು ನಿಕೃಷ್ಟವಾಗಿರುವುದಷ್ಟೇ ಅಲ್ಲ, ಯಾವುದೇ ಸಮಯದಲ್ಲಿ ಅದು ಮಂಗ ಮಾಯವಾಗಲೂಬಹುದು. ಅದಕ್ಕಿಂತಲೂ ಮಿಗಿಲಾಗಿ, ಈ ಕನಿಷ್ಠ ಮಟ್ಟದ ವರಮಾನದ ಪರಿಕಲ್ಪನೆಯುಲ್ಲಿ ಅದು ಅಧಿಕಾರಾರೂಢ ಸರ್ಕಾರದ ಕಡೆಯಿಂದ ದೊರೆತ ಒಂದು ಬಕ್ಷೀಸು ಎನಿಸಿಕೊಳ್ಳುತ್ತದೆ ಅಥವಾ ಸರ್ಕಾರವು ಜನರಿಗೆ ಮಾಡಿದ ಉಪಕಾರವೆಂಬ ಒಂದು ಸ್ವರೂಪವನ್ನು ಪಡೆಯುತ್ತದೆ. ಆದರೆ, ಜನರು ಭಿಕ್ಷುಕರಲ್ಲ. ದೇಶದ ನಾಗರಿಕರಾಗಿ ಮತ್ತು ಒಂದು ಹಕ್ಕಿನ ವಿಷಯವಾಗಿ, ಅವರ ಘನತೆಗೆ ತಕ್ಕ ಉದ್ಯೋಗ ಪಡೆಯುವುದು ಅವರ ಹಕ್ಕು (ಅಥವಾ, ಉದ್ಯೋಗ ಒದಗದಿದ್ದರೆ, ಬಿಡಿಗಾಸಿನ ನಿರುದ್ಯೋಗ ಭತ್ಯೆಯನ್ನಲ್ಲ, ಪೂರ್ಣ ವೇತನ ಪಡೆಯುವುದು ಅವರ ಹಕ್ಕು).
ಖಾತರಿಪಡಿಸುವುದು ಸಾಧ್ಯವಿದೆ. ಪಿಡುಗು

ಉದ್ಯೋಗದ ಹಕ್ಕನ್ನು, ಸಂವಿಧಾನವು ಈಗಾಗಲೇ ಖಾತರಿಪಡಿಸಿರುವ ರಾಜಕೀಯ ಮತ್ತು ನಾಗರಿಕ ಹಕ್ಕುಗಳಿಗೆ ಸಮನಾಗಿ, ಸಾರ್ವತ್ರಿಕವಾಗಿ, ಸಾಂವಿಧಾನಿಕ-ಖಾತರಿ ಮತ್ತು ನ್ಯಾಯ ನಿರ್ಣಯಕ್ಕೆ ಒಳಪಡುವ ರೀತಿಯಲ್ಲಿ ಮಾನ್ಯ ಮಾಡಿ ಅದನ್ನು ಕಾರ್ಯರೂಪದಲ್ಲಿ ತರಲು, ಹೆಚ್ಚೆಂದರೆ, ದೇಶದ ಜಿಡಿಪಿಯ ಶೇ. 3ಕ್ಕಿಂತ ಹೆಚ್ಚು ವೆಚ್ಚ ತಗಲುವುದಿಲ್ಲ. ಇದನ್ನು ಒಂದು ಸರಳ ಲೆಕ್ಕಾಚಾರದ ಮೂಲಕವೂ ವಿವರಿಸಬಹುದು. ನಿರುದ್ಯೋಗಿ ವ್ಯಕ್ತಿಗಳಿಗೆ ನೀಡಬಹುದಾದ ವೇತನವನ್ನು ತಿಂಗಳಿಗೆ ಸರಾಸರಿ 20,000 ರೂಗಳು ಎಂದು ತೆಗೆದುಕೊಂಡರೆ, ನಿರುದ್ಯೋಗ ದರವನ್ನು ಶೇ. 10 ಎಂದು ಊಹಿಸಿದರೆ ಅಥವಾ ಸರಿಸುಮಾರು 4 ಕೋಟಿ ನಿರುದ್ಯೋಗಿಗಳಿಗೆ – ಎಲ್ಲಾ ನಿರುದ್ಯೋಗಿಗಳಿಗೂ ಈ ವೇತನವನ್ನು ಪಾವತಿಸಿದರೆ – ಈ ಮೊತ್ತವನ್ನು ಪಾವತಿಸಲು ಸುಮಾರು 9.6 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಇದು, ಪ್ರಸ್ತುತ 2023-24ರ ಬೆಲೆಗಳಲ್ಲಿ ಅಧಿಕೃತವಾಗಿ ಅಂದಾಜು ಮಾಡಿದ ಜಿಡಿಪಿಯ ಶೇ. 3.2ರಷ್ಟಾಗುತ್ತದೆ. ಪಿಡುಗು

ಅಷ್ಟು ಸಂಖ್ಯೆಯ ನಿರುದ್ಯೋಗಿಗಳಿಗೆ ಕೊಳ್ಳುವ ಶಕ್ತಿಯನ್ನು ತುಂಬುವ ಕ್ರಮವೇ ಸರಕು-ಸಾಮಗ್ರಿಗಳಿಗೆ ಒಂದು ಬೇಡಿಕೆಯನ್ನು ಸೃಷ್ಟಿಸುತ್ತದೆ. ಅರ್ಥವ್ಯವಸ್ಥೆಯು ಬೇಡಿಕೆ-ನಿರ್ಬಂಧಿತವಾಗಿರುವ ಇಂದಿನ ಸನ್ನಿವೇಶದಲ್ಲಿ ಈ ಬೇಡಿಕೆಯು ದೊಡ್ಡ ಪ್ರಮಾಣದ ಉತ್ಪಾದನೆಗೆ ಕಾರಣವಾಗುತ್ತದೆ. ಈ ಉತ್ಪಾದನೆಯು ಉದ್ಯೋಗವನ್ನು ಸೃಷ್ಟಿಸುತ್ತದೆ. ಹಾಗಾಗಿ, ನಿರುದ್ಯೋಗಿ ಪಡೆಯ ಒಂದು ಸಣ್ಣ ಸಂಖ್ಯೆಗಷ್ಟೇ ಈ ವೇತನವನ್ನು ಪಾವತಿಸಬೇಕಾಗುತ್ತದೆ. ಈ ವೇತನದ ಫಲಾನುಭವಿಗಳು ಮಾಡುವ ಖರ್ಚುಗಳ ಮೂಲಕ ಉಳಿದವರಿಗೆ ಉದ್ಯೋಗ ದೊರಕುತ್ತದೆ. ಹಾಗಾಗಿ, ಬೊಕ್ಕಸದ ಮೇಲೆ ಬೀಳುವ ಹೊರೆಯು ಜಿಡಿಪಿಯ ಶೇ. 3.2ಕ್ಕಿಂತಲೂ ಕಡಿಮೆ ಇರುತ್ತದೆ.
ಒಬ್ಬ ನಿರುದ್ಯೋಗಿ ವ್ಯಕ್ತಿಗೆ ಪಾವತಿಸುವ ವೇತನವು ಸೃಷ್ಟಿಸುವ ಸರಕು-ಸಾಮಗ್ರಿಗಳ ಮೇಲಿನ ಬೇಡಿಕೆಯು ಮತ್ತೊಬ್ಬ ಹೆಚ್ಚುವರಿ ವ್ಯಕ್ತಿಗೆ ಉದ್ಯೋಗವನ್ನು ಒದಗಿಸುತ್ತದೆ ಎಂದು ಊಹಿಸಿಕೊಂಡರೆ, ಆಗ ಸರ್ಕಾರವು ಖರ್ಚು ಮಾಡಬೇಕಾದ ಮೊತ್ತವು, ಒಟ್ಟು ಸಂಖ್ಯೆಯ ನಿರುದ್ಯೋಗಿಗಳಿಗೆ ಪಾವತಿಸಲು ಬೇಕಾಗುವುದೆಂದು ಅಂದಾಜು ಮಾಡಿದ್ದ 9.6 ಲಕ್ಷ ಕೋಟಿ ರೂಪಾಯಿಗಳ ಅರ್ಧದಷ್ಟಾದರೆ ಸಾಕಾಗುತ್ತದೆ. ಅಂದರೆ, ಸರ್ಕಾರವು ಈ ಬಾಬ್ತು ಮಾಡಬೇಕಾದ ಖರ್ಚು 4.8 ಲಕ್ಷ ಕೋಟಿ ರೂಪಾಯಿಗಳಾಗುತ್ತದೆ. ಈ ಮೊತ್ತವು ಜಿಡಿಪಿಯ ಶೇ. 1.6ರಷ್ಟಾಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ, 4.8 ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ ಅಧಿಕ ಉತ್ಪಾದನೆಯು ಸರ್ಕಾರಕ್ಕೆ ಒಂದಿಷ್ಟು ತೆರಿಗೆ ಆದಾಯವನ್ನೂ ತರುತ್ತದೆ. ಇದೇ ಅವಧಿಯಲ್ಲಿ ಒಳಹರಿಯುವ ತೆರಿಗೆಯನ್ನೂ ಸಹ ಸರ್ಕಾರ ಖರ್ಚು ಮಾಡುತ್ತದೆ ಎಂದು ಭಾವಿಸಿದರೆ, ತೆರಿಗೆಯ ಮೂಲಕ ಅಧಿಕವಾಗಿ ಸಂಗ್ರಹಿಸಬೇಕಾದ ಮೊತ್ತವನ್ನು ಪೂರ್ಣವಾಗಿ ಜಿಡಿಪಿಯ ಶೇ. 1.6ರವರೆಗೆ ಹೆಚ್ಚಿಸಬೇಕಾಗಿಲ್ಲ. ಅಗತ್ಯವಿರುವ ಅಧಿಕ ತೆರಿಗೆ ಸಂಗ್ರಹದ ಮೊತ್ತವು ಇನ್ನೂ ಚಿಕ್ಕದಿರುತ್ತದೆ. ಅದು ಜಿಡಿಪಿಯ ಶೇ. 1.5ಕ್ಕಿಂತಲೂ ಕಡಿಮೆ ಇರುತ್ತದೆ. ಈ ಹಣವನ್ನು, ಭಾರತದ ಜನಸಂಖ್ಯೆಯ ಮೇಲ್ತುದಿಯ ಶೇ. 1ರಷ್ಟು ಮಂದಿ ಶ್ರೀಮಂತರ ಸಂಪತ್ತಿನ ಮೇಲೆ ಶೇ. 0.8ರಷ್ಟು ಸಂಪತ್ತು ತೆರಿಗೆಯನ್ನು ವಿಧಿಸುವ ಮೂಲಕ ಸಂಗ್ರಹಿಸಬಹುದು! ಈ ಹೊರೆಯು ಅದೆಷ್ಟು ಚಿಕ್ಕದು ಎಂದರೆ, ಈ ಉದ್ಯೋಗದ ಹಕ್ಕನ್ನು ಒದಗಿಸದಿರುವುದು (ಈ ಉದ್ದೇಶಕ್ಕಾಗಿ ಸಂವಿಧಾನದ ತಿದ್ದುಪಡಿಯು ಕಷ್ಟಕರವೆಂದು ಕಂಡುಬಂದರೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ರೀತಿಯಲ್ಲಿ ಒಂದು ಸಂಸದೀಯ ಶಾಸನದ ಮೂಲಕವೂ ಜಾರಿಗೊಳಿಸಬಹುದು) ಜವಾಬ್ದಾರಿಯಿಂದ ನುಣುಚಿಕೊಳ್ಳುವ ಒಂದು ಮಹಾ ಪಾತಕವಾಗಿ ತೋರುತ್ತದೆ.. ಪಿಡುಗು

ಇದನ್ನು ನೋಡಿ : ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಮತ ತಿರುಚಿದ ಚುನಾವಣಾ ಅಧಿಕಾರಿ – ವಿಡಿಯೋ ಬಹಿರಂಗ! Janashakthi Media

Donate Janashakthi Media

Leave a Reply

Your email address will not be published. Required fields are marked *