ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸತ್ಯ ನಿಕೇತನ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದು ಕುಸಿದು ಬಿದ್ದಿದ್ದು, ಅವಶೇಷಗಳಡಿ ಐದು ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದು, ಅವರಲ್ಲಿ ನಾಲ್ವರನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ದೆಹಲಿ ಅಗ್ನಿ ಶಾಮಕದಳದ ಅಧಿಕಾರಿಗಳ ಪ್ರಕಾರ, ಅಂದಾಜು ಐದಾರು ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದರು. ಘಟನಾ ಸ್ಥಳಕ್ಕೆ ಆರು ಅಗ್ನಿಶಾಮಕ ದಳದವರು ತೆರಳಿದ್ದು, ಅವಶೇಷಗಳಡಿ ಸಿಲುಕಿಕೊಂಡವರನ್ನು ರಕ್ಷಿಸುವ ಮುಂದಾಗಿದ್ದರು. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ಈವರೆಗೆ ವರದಿಯಾಗಿಲ್ಲ.
ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗಾರ್ಗ್ ಸುದ್ದಿ ಸಂಸ್ಥೆ ಪಿಟಿಐಯೊಂದಿಗೆ ಮಾತನಾಡಿ, “ಇಲ್ಲಿನ ಸತ್ಯ ನಿಕೇತನ ಕಟ್ಟಡದ ಸಂಖ್ಯೆ 173ರ ಮನೆ ಕುಸಿದಿರುವ ಬಗ್ಗೆ ನಮಗೆ ಮಧ್ಯಾಹ್ನ 1:24 ರ ಸುಮಾರಿಗೆ ಕರೆ ಬಂದಿತು. ಕೂಡಲೇ ಆರು ಅಗ್ನಿಶಾಮಕ ದಳದವರನ್ನು ಕಳುಹಿಸಿಕೊಡಲಾಯಿತುʼʼ ಎಂದರು.
ಕಾರ್ಮಿಕರು ಯಾರದೋ ಮನೆಯನ್ನು ರಿಪೇರಿ ಮಾಡಲು ಮುಂದಾಗಿದ್ದರು. ಕಟ್ಟಡ ಅಪಾಯದಂಚಿನಲ್ಲಿದೆ ಎಂದು ಮಾರ್ಚ್ 31ರಂದೇ ನಾವು ನೋಟಿಸ್ ಅಂಟಿಸಿದ್ದೆವು. ಏಪ್ರಿಲ್ 14 ರಂದು ಪೊಲೀಸ್, ಎಸ್‌ಡಿಎಂಗೆ ತಿಳಿಸಿದ್ದೇವೆ. ಎಂದು ಎಸ್‌ಡಿಎಂಸಿ ಮೇಯರ್ ಮುಖೇಶ್ ಸೂರ್ಯನ್ ತಿಳಿಸಿದ್ದಾರೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನಿರ್ಮಾಣ ಹಂತದಲ್ಲಿದ್ದ ಕಟ್ಟಡ ದಿಢೀರ್ ಕುಸಿದು ಬಿದ್ದ ಪರಿಣಾಮ ಕೆಲಸಗಾರರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುವುದೆಂದು ವರದಿಯಾಗಿದೆ.