ಬೆಂಗಳೂರು : ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಉಮನ್ ಚಾಂಡಿ ಇಂದು (ಜುಲೈ 18) ಮುಂಜಾನೆ ನಿಧನರಾಗಿದ್ದಾರೆ.
ಉಮನ್ ಚಾಂಡಿ ಅವರಿಗೆ 79 ವರ್ಷ ವಯಸ್ಸಾಗಿತ್ತು. ಇಂದು ಬೆಳಗಿನ ಜಾವ ಸುಮಾರು 4 ಗಂಟೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉಮನ್ ಚಾಂಡಿ ಅವರ ನಿಧನವನ್ನು ಅವರು ಪುತ್ರ ಚಾಂಡಿ ಉಮ್ಮನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಕಟಿಸಿದ್ದಾರೆ. ‘ಅಪ್ಪ ನಿಧನರಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಚಾಂಡಿ ನ್ಯುಮೋನಿಯಾ ಸೋಂಕಿಗೆ ಒಳಗಾದ ಬಳಿಕ ಅವರನ್ನು ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿತ್ತು.
2019ರಿಂದಲೂ ಉಮನ್ ಚಾಂಡಿ ಅನಾರೋಗ್ಯದಿಂದ ಬಳಲುತ್ತಿದ್ದರು. ಗಂಟಲಿನ ಸಮಸ್ಯೆ ಉಲ್ಬಣಗೊಂಡಿದ್ದರಿಂದ ಕೆಲಕಾಲ ಜರ್ಮನಿಯಲ್ಲಿ ಚಿಕಿತ್ಸೆ ಪಡೆದಿದ್ದರು. ಕೇರಳದ ಪುತುಪಲ್ಲಿ ವಿಧಾನಸಭಾ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ ಚಾಂಡಿ ಎರಡು ಬಾರಿ ಕೇರಳ ಸಿಎಂ ಆಗಿ ಅಧಿಕಾರ ನಿರ್ವಹಿಸಿದ್ದರು.