ಬಾಗಲಕೋಟೆ: ಕೊರೊನಾ 3ನೇ ಅಲೆ ಬರುತ್ತೆ, ಎಲ್ಲರೂ ಉಳಿಯಬೇಕು. ನೀವು ಉಳೀತಿರೋ ಇಲ್ವೋ ಗೊತ್ತಿಲ್ಲ. ನಾನಂತೂ ಉಳಿಯಬೇಕು ಎಂದು ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಚಿವ ಉಮೇಶ್ ಕತ್ತಿಯವರಿಗೆ ಬಾಗಲಕೋಟೆ ಜಿಲ್ಲೆಗೆ ನೂತನ ಉಸ್ತುವಾರಿ ಜವಬ್ದಾರಿ ನೀಡಲಾಗಿದೆ. ಸಭೆಯಲ್ಲಿ ಮಾತನಾಡುತ್ತಾ ನೀವು ಉಳಿತೀರೋ ಗೊತ್ತಿಲ್ಲ ನಾನಂತೂ ಉಳಿಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆ ವೇಳೆ ಅಲ್ಲೇ ಇದ್ದ ಸಂಸದ ಗದ್ದಿಗೌಡರ್ ಅವರು ಸಚಿವ ಕತ್ತಿ ಮಾತಿಗೆ ಹಣೆ ಚಚ್ಚಿಕೊಂಡ ಪ್ರಸಂಗವು ನಡೆಯಿತು.
ಅಕ್ಕಿ ಕೇಳಿದ ರೈತನಿಗೆ ಸಾಯಲಿ ಅಂತ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಮತ್ತೇ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಉಮೇಶ್ ಕತ್ತಿ ಸಚಿವರಾಗಿ ಜನರಿಗೆ ಧೈರ್ಯ ನೀಡಬೇಕು. ಜನರ ಜೊತೆ ನಿಲ್ಲುವ ಭರವಸೆ ನೀಡಬೇಕು. ನನ್ನ ಪ್ರಾಣ ಒತ್ತೆಯಿಟ್ಟಾದರೂ ನಿಮ್ಮನ್ನು ಕಾಪಾಡುತ್ತೇನೆ ಎಂಬ ಕಾಳಜಿಯ ಮಾತುಗಳನ್ನು ಆಡುವ ಬದಲು ನೀವು ಸತ್ತರೂ ನಾನು ಸಾಯಬಾರದು ಎಂದು ಹೇಳಿರುವುದು ಸಚವರ ಜನರ ಕಾಳಜಿ ಹೇಗಿದೆ, ಅವರಲ್ಲಿ ದುರಹಂಕಾರ ಎಷ್ಟಿದೆ ಎಂದು ತೋರಿಸುತ್ತದೆ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.
ನಾನು ತಮಾಷೆಗಾಗಿ ಮಾತಿಡಿದ್ದು, ಅದಕ್ಕೆ ಬೇರೆ ಅರ್ಥ ಕಲ್ಪಿಸಬಾರದು ಎಂದು ಕತ್ತಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.