– ವಸಂತರಾಜ ಎನ್.ಕೆ
ಉಕ್ರೇನಿನಲ್ಲಿ ರಷ್ಯಾದ ಅನಿರೀಕ್ಷಿತ ಮಿಲಿಟರಿ ದಾಳಿಯ ನಂತರ ಹಲವು ಪ್ರಶ್ನೆಗಳು ಎದ್ದಿವೆ. ದಾಳಿಯ ನಂತರ ಉಕ್ರೇನಿನಲ್ಲಿ ಸ್ಥಿತಿ ಏನಿದೆ? ಉಕ್ರೇನ್ ಬಿಕ್ಕಟ್ಟಿನ ಚಾರಿತ್ರಿಕ, ರಾಜಕೀಯ ಹಿನ್ನೆಲೆ ಏನು? ಈ ಬಿಕ್ಕಟ್ಟು ಯುದ್ಧಕ್ಕೆ ಎಡೆ ಮಾಡಿಕೊಟ್ಟ ತಕ್ಷಣದ ಕಾರಣಗಳೇನು? ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರಗಳು ಇರಲಿಲ್ಲವೇ? ? ನಾಟೋ ಕೂಟದ ಸದಸ್ಯತ್ವದ ಪ್ರಶ್ನೆ ಯಾಕೆ ಇಷ್ಟು ವಿವಾದಾಸ್ಪದವಾಗಿದೆ ? ಈ ಯುದ್ಧದ ಕುರಿತು ಭಾರತ ಸರಕಾರದ ನಿಲುವು ಸರಿಯೆ? ಯುದ್ಧಕ್ಕೆ ಎಂತಹ ಅಂತರ್ರಾಷ್ಟ್ರೀಯ ಪ್ರತಿಕ್ರಿಯೆ ಬಂದಿದೆ ? ಯುದ್ಧದ ತಕ್ಷಣದ ಪರಿಣಾಮಗಳೇನು ? ಯುದ್ಧ ನಿಲ್ಲಿಸಲು ನಡೆದಿರುವ ಅಂತರ್ರಾಷ್ಟ್ರೀಯ ಪ್ರಯತ್ನಗಳೇನು ? ಯುದ್ಧ ಇನ್ನೂ ಮುಂದುವರೆದರೆ ಭಾರತದ ಮತ್ತು ಅಂತರ್ರಾಷ್ಟ್ರೀಯ ಪರಿಸ್ಥಿತಿ ಮೇಲೆ ಯಾವ ದೂರಗಾಮಿ ಪರಿಣಾಮ ಬೀರಬಹುದು ? – ಈ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಈ ಸರಣಿಯಲ್ಲಿ ಕೊಡಲಾಗುವುದು
- ಉಕ್ರೇನಿನಲ್ಲಿ ರಷ್ಯಾ ಮಿಲಿಟರಿ ದಾಳಿಯ ನಂತರ ಸ್ಥಿತಿ ಏನಿದೆ?
ಫೆ.25 ರಂದು ರಾತ್ರಿ 9ರ ಹೊತ್ತಿನ ವರದಿ ಪ್ರಕಾರ ರಶ್ಯಾ ಮಿಲಿಟರಿ ಪಡೆಗಳು ಬಂಡುಕೋರರ ನಿಯಂತ್ರದಲ್ಲಿದ್ದ ಡೊನ್ ಬಾಸ್ ಪ್ರದೇಶದ ಪೂರ್ವದ ಪ್ರಾಂತಗಳ ಒಳಗೆ ಪ್ರವೇಶಿಸಿದೆ. ಅಲ್ಲಿ ಆಗಲೇ ಉಕ್ರೇನಿನ ಮಿಲಿಟರಿ ದಾಳಿಗೆ ಒಳಗಾಗಿದ್ದ ಬಂಡುಕೋರರಿಗೆ ಬೆಂಬಲಕ್ಕೆ ನಿಂತಿದೆ. ದಕ್ಷಿಣದ ಒಡೆಸ್ಸಾ ನಗರ ಸೇರಿದಂತೆ ಹಲವು ಕಡೆ ಮಿಲಿಟರಿ ಪಡೆಗಳನ್ನು ಇಳಿಸಲಾಗಿದೆ. ಇದಲ್ಲದೆ ರಾಜಧಾನಿ ಕಿಯಾವ್, ಖಾರ್ಕಿವ್ ಸೇರಿದಂತೆ ಉಕ್ರೇನಿನ ವಿವಿಧ ಪ್ರದೇಶಗಳಲ್ಲಿರುವ 100ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ, ಶೆಲ್ ದಾಳಿಗಳನ್ನು ನಡೆಸಲಾಗಿದೆ. 12ಕ್ಕೂ ಹೆಚ್ಚು ವಿಮಾನ ನೆಲೆಗಳನ್ನು ನಾಶ ಮಾಡಲಾಗಿದೆ. ಆದರೆ ಯಾವುದೇ ನಾಗರಿಕ ವಾಸಪ್ರದೇಶಗಳ ಮೇಲೆ ದಾಳಿ ನಡೆದಿಲ್ಲ ಎಂದು ರಶ್ಯ ತಿಳಿಸಿದೆ. ರಶ್ಯದ 6 ವಿಮಾನಗಳನ್ನು ಹೊಡೆದುರಳಿಸಲಾಗಿದೆ ಮತ್ತು 40ಕ್ಕೂ ಹೆಚ್ಚು ರಶ್ಯನರು ಸತ್ತಿದ್ದಾರೆ. 130ಕ್ಕೂ ಹೆಚ್ಚು ಉಕ್ರೇನಿಯನ್ನರು ರಶ್ಯನ್ ದಾಳಿಯಲ್ಲಿ ಸತ್ತಿದ್ದಾರೆ. ಸ್ಥಗಿತಗೊಳಿಸಿರುವ ಚೆರ್ನೊಬಿಲ್ ಅಣುಶಕ್ತಿ ಸ್ಥಾವರವನ್ನು ರಶ್ಯನ್ ಪಡೆಗಳು ವಶಪಡಿಸಿಕೊಂಡಿವೆ. ಹಲವು ಕಡೆ ರಶ್ಯನ್ ಮತ್ತು ಉಕ್ರೇನಿ ಸೈನ್ಯಗಳ ನಡುವೆ ಘರ್ಷಣೆ ನಡೆದಿದೆ. ಬೈಲೋರಶ್ಯನ್ ಯುದ್ಧವಿಮಾನಗಳು ಉತ್ತರದಿಂದ ದಾಳಿ ಮಾಡಿವೆ. ಉತ್ತರದಲ್ಲಿ ಬೈಲೋರಶ್ಯದಿಂದ ಬಂದ ರಶ್ಯನ್ ಪಡೆಗಳು ರಾಜಧಾನಿ ಕಿಯಾವ್ ಹತ್ತಿರ ಬಂದಿವೆ ಎಂದು ಉಕ್ರೇನಿ ವರದಿಗಳು ತಿಳಿಸಿವೆ.
ರಾಜಧಾನಿ ಕಿಯಾವ್ ಸೇರಿದಂತೆ ದಾಳಿಗೆ ಒಳಗಾದ ಉಕ್ರೇನಿ ನಗರಗಳಲ್ಲಿ ಆತಂಕ ಮೂಡಿದ್ದು ಹಲವು ಬಾರಿ ವಿಮಾನದಾಳಿಯ ಸೈರನ್ ಬಾರಿಸಲಾಗುತ್ತಿದ್ದು, ಜನ ಮೆಟ್ರೋ ಸ್ಟೇಶನ್ ಮತ್ತಿತರ ಬಾಂಬ್ ಶೆಲ್ಟರ್ ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನ ಸಿಕ್ಕಿದ ವಾಹನಗಳಲ್ಲಿ ಪಶ್ಚಿಮದ ಗಡಿಗಳತ್ತ ಚಲಿಸುತ್ತಿದ್ದು ಪೋಲೆಂಡ್, ರೊಮೇನಿಯಾ, ಮೊಲ್ಡೊವಾ, ಸ್ಲೋವಾಕಿಯ ಮುಂತಾದ ನೆರೆಯ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಉಕ್ರೇನ್ ಪ್ರಧಾನಿ ಪಶ್ಚಿಮದ ದೇಶಗಳಿಗೆ ಮಿಲಿಟರಿ ನೆರವಿಗೆ ಬರಲು ಕೋರಿಕೊಳ್ಳುತ್ತಿದ್ದಾರೆ. ನಾಟೋ ದೇಶಗಳ ಸಭೆ ನಡೆದಿದ್ದು ಯು.ಎಸ್, ಯು.ಕೆ, ಜರ್ಮನಿ, ಫ್ರಾನ್ಸ್ ಮುಂತಾದ ದೇಶಗಳು ತೀಕ್ಷ್ಣವಾದ ಆರ್ಥಿಕ ದಿಗ್ಬಂಧನದ ಕ್ರಮಗಳನ್ನು ಘೋಷಿಸಿವೆ. ಹಲವಾರು ರಶ್ಯನ್ ಬ್ಯಾಂಕುಗಳು, ಕಂಪನಿಗಳು, ಉದ್ಯಮಿಗಳು, ಸರಕಾರಿ ಮಿಲಿಟರಿ ಅಧಿಕಾರಿಗಳ ಪಶ್ಚಿಮದಲ್ಲಿರುವ ಆಸ್ತಿಯನ್ನು ದಿಗ್ಬಂಧನಕ್ಕೆ ಒಳಪಡಿಸಲಾಗಿದೆ. ಇವುಗಳ ರಫ್ತು-ಆಮದು, ತಂತ್ರಜ್ಞಾನ ವರ್ಗಾವಣೆ, ಹಣಕಾಸು ವ್ಯವಹಾರಗಳ ಮೇಲೆ ದಿಗ್ಬಂಧನ ಹಾಕಲಾಗಿದೆ. ರಶ್ಯ ಉಕ್ರೇನಿನ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ಯುದ್ಧ ತೊಡಗಿದ್ದರೆ, ನಾಟೋ ದೇಶಗಳು ಪೂರ್ಣ ಪ್ರಮಾಣದ ಆರ್ಥಿಕ ಯುದ್ಧ ಘೋಷಿಸಿವೆ.
ಪೂರ್ವ ಯುರೋಪಿನ ನಾಟೋ ದೇಶಗಳಿಗೆ ಮಿಲಿಟರಿ ನೆರವು ಕಳಿಸುತ್ತಿದ್ದು, ಉಕ್ರೇನಿಗೆ ನಾಟೋ ಪಡೆಗಳು ಕಳಿಸುವುದಿಲ್ಲವೆಂದು ಯು.ಎಸ್ ಅಧ್ಯಕ್ಷ ಬಿಡೆನ್ ಸೇರಿದಂತೆ ಎಲ್ಲ ಪಶ್ಚಿಮದ ನಾಯಕರು ಸ್ಪಷ್ಟಪಡಿಸಿದ್ದಾರೆ. ಉಕ್ರೇನಿನ ಮಿಲಿಟರಿ ಬಲವನ್ನು ಕುಗ್ಗಿಸಲಾಗಿದೆ. ಉಕ್ರೇನನ್ನು ವಶಪಡಿಸಿಕೊಳ್ಳುವುದು ರಶ್ಯದ ಉದ್ದೇಶವಲ್ಲ. ರಶ್ಯನ್ ಮೂಲದ ಜನರ ದಮನ ನಿಲ್ಲಿಸುವುದು, ಅವರ ನಾಗರಿಕ ಹಕ್ಕುಗಳನ್ನು ಮರಳಿ ಕೊಡಿಸುವುದು, ಉಕ್ರೇನನ್ನು ಮಿಲಿಟರಿ-ಮುಕ್ತಗೊಳಿಸುವುದು, ಸರಕಾರವನ್ನು ನಾಜಿ-ಮುಕ್ತಗೊಳಿಸುವುದಷ್ಟೆ ರಶ್ಯದ ಉದ್ದೇಶ. ಸರಕಾರವನ್ನು ಕೆಳಗಿಳಿಸಿ ಉಕ್ರೇನ್ ಮಿಲಿಟರಿ ಶರಣಾದರೆ ಯುದ್ಧ ನಿಲ್ಲಿಸುತ್ತೇವೆ ಎಂದು ರಶ್ಯದ ವಿದೇಶ ಮಂತ್ರಿ ಹೇಳಿದ್ದಾರೆ. ಈ ವರೆಗೆ ಎರಡೂ ಕಡೆಯಿಂದ ಕದನವಿರಾಮ ಅಥವಾ ಮಾತುಕತೆ ನಡೆಸುವ ಯಾವ ಪ್ರಸ್ತಾವವೂ ಬಂದಿಲ್ಲ.