– ವಸಂತರಾಜ ಎನ್.ಕೆ
ಉಕ್ರೇನಿನಲ್ಲಿ ರಷ್ಯಾದ ಅನಿರೀಕ್ಷಿತ ಮಿಲಿಟರಿ ದಾಳಿಯ ನಂತರ ಹಲವು ಪ್ರಶ್ನೆಗಳು ಎದ್ದಿವೆ. ದಾಳಿಯ ನಂತರ ಉಕ್ರೇನಿನಲ್ಲಿ ಸ್ಥಿತಿ ಏನಿದೆ? ಉಕ್ರೇನ್ ಬಿಕ್ಕಟ್ಟಿನ ಚಾರಿತ್ರಿಕ, ರಾಜಕೀಯ ಹಿನ್ನೆಲೆ ಏನು? ಈ ಬಿಕ್ಕಟ್ಟು ಯುದ್ಧಕ್ಕೆ ಎಡೆ ಮಾಡಿಕೊಟ್ಟ ತಕ್ಷಣದ ಕಾರಣಗಳೇನು? ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರಗಳು ಇರಲಿಲ್ಲವೇ? ? ನಾಟೋ ಕೂಟದ ಸದಸ್ಯತ್ವದ ಪ್ರಶ್ನೆ ಯಾಕೆ ಇಷ್ಟು ವಿವಾದಾಸ್ಪದವಾಗಿದೆ ? ಈ ಯುದ್ಧದ ಕುರಿತು ಭಾರತ ಸರಕಾರದ ನಿಲುವು ಸರಿಯೆ? ಯುದ್ಧಕ್ಕೆ ಎಂತಹ ಅಂತರ್ರಾಷ್ಟ್ರೀಯ ಪ್ರತಿಕ್ರಿಯೆ ಬಂದಿದೆ ? ಯುದ್ಧದ ತಕ್ಷಣದ ಪರಿಣಾಮಗಳೇನು ? ಯುದ್ಧ ನಿಲ್ಲಿಸಲು ನಡೆದಿರುವ ಅಂತರ್ರಾಷ್ಟ್ರೀಯ ಪ್ರಯತ್ನಗಳೇನು ? ಯುದ್ಧ ಇನ್ನೂ ಮುಂದುವರೆದರೆ ಭಾರತದ ಮತ್ತು ಅಂತರ್ರಾಷ್ಟ್ರೀಯ ಪರಿಸ್ಥಿತಿ ಮೇಲೆ ಯಾವ ದೂರಗಾಮಿ ಪರಿಣಾಮ ಬೀರಬಹುದು ? – ಈ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಈ ಸರಣಿಯಲ್ಲಿ ಕೊಡಲಾಗುವುದು.
2. ಉಕ್ರೇನ್ ಬಿಕ್ಕಟ್ಟಿನ ಚಾರಿತ್ರಿಕ, ರಾಜಕೀಯ ಹಿನ್ನೆಲೆ ಏನು?
ಉಕ್ರೇನ್ ಚಾರಿತ್ರಿಕವಾಗಿ ಕೆಲವು ಅವಧಿಗಳನ್ನು ಬಿಟ್ಟರೆ ಒಂದು ದೇಶವಾಗಿ ಅಥವಾ ರಾಜಕೀಯ ಘಟಕವಾಗಿರಲಿಲ್ಲ. ಅದರ ವಿವಿಧ ಪ್ರದೇಶಗಳು ವಿವಿಧ ಕಾಲ ಘಟ್ಟಗಳಲ್ಲಿ ಆಸ್ಟ್ರೋ-ಹಂಗೇರಿಯನ್, ರಶ್ಯನ್ ಸಾಮ್ರಾಜ್ಯದ ಭಾಗಗಳಾಗಿದ್ದವು. ಇತರ ಹಲವು ಪೂರ್ವ ಯುರೋಪಿನ ದೇಶಗಳಂತೆ ಉಕ್ರೇನ್ ಸಹ ಹಲವು ಬುಡಕಟ್ಟು, ಭಾಷೆ, ಮತಗಳ ಜನರಿರುವ ಬಹುತ್ವ ಪ್ರಧಾನವಾಗಿರುವ ದೇಶವಾಗಿತ್ತು. ಉಕ್ರೇನಿಯನ್ ಅಲ್ಲದೆ ರಶ್ಯನ್, ಪೋಲಿಷ್, ರೊಮೇನಿಯನ್, ಮೊಲ್ಡೊವಿಯನ್ ಮುಂತಾದ ಭಾಷಿಕ ಜನರ ದೊಡ್ಡ ಅಲ್ಪಸಂಖ್ಯಾತ ಅಕ್ಟೋಬರ್ ಕ್ರಾಂತಿಯ ನಂತರವೇ ಉಕ್ರೇನ್ ಸೋವಿಯೆಟ್ ಒಕ್ಕೂಟದ ಭಾಗವಾಗಿದ್ದ ಸ್ವತಂತ್ರ ಗಣರಾಜ್ಯವಾಗಿತ್ತು. ಅದೇ ಸಮಯದಲ್ಲಿ ಅತ್ಯಂತ ಹೆಚ್ಚಿನ ಬೆಳವಣಿಗೆ ಕಂಡಿದ್ದು, ಸೋವಿಯೆಟ್ ಒಕ್ಕೂಟದ ಎರಡನೆಯ ಅತಿ ದೊಡ್ಡ ಮತ್ತು ಅತಿ ಪ್ರಬಲ ಗಣರಾಜ್ಯವಾಗಿತ್ತು.
ಮೊದಲು ಯುರೋಪಿಯನ್ ಮತ್ತು ಆ ಮೇಲೆ ಯುರೋಪಿಯನ್-ಅಮೆರಿಕನ್ ಸಾಮ್ರಾಜ್ಯಶಾಹಿಯ ಕೂಟವು, ಸೋವಿಯೆಟ್ ಯೂನಿಯನಿನ ಜನ್ಮದಿಂದ ಆರಂಭಿಸಿ ಅದರ ವಿಘಟನೆಗೆ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದವು. ಇದು ಉಕ್ರೇನ್ ಕುರಿತೂ ನಿಜವಾಗಿತ್ತು. ಉಕ್ರೇನಿಯನ್-ರಶ್ಯನ್ ಭಾಷಿಕರ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುವುದು, ನಾಜಿ-ಬೆಂಬಲಿಗರು ಸೇರಿದಂತೆ ಸೋವಿಯೆಟ್-ವಿರೋಧಿ ರಾಜಕೀಯ ವಿರೋಧಿಗಳ ಮೇಲೆ ಸೋವಿಯೆಟ್ ಸರಕಾರದ ಕ್ರಮಗಳನ್ನು ಉಕ್ರೇನಿಯನ್ ರಾಷ್ಟ್ರೀಯತೆಯನ್ನು ರಶ್ಯನರು ದಮನಿಸುತ್ತಿದ್ದಾರೆಂದು ಬಿಂಬಿಸುವುದು, ಇಂತಹ ಕೆಲವು ರಾಜಕೀಯ ವಿರೋಧಿಗಳನ್ನು ಬಳಸಿ ಬುಡಮೇಲು ಕೃತ್ಯಗಳನ್ನು ನಡೆಸುವುದು – ಇತ್ಯಾದಿ ಅದರ ತಂತ್ರವಾಗಿತ್ತು. 1980ರ ದಶಕದ ಕೊನೆಯಲ್ಲಿ ಸೋವಿಯೆಟ್ ಒಕ್ಕೂಟದೊಳಗೆ ಎದ್ದ ತುಮುಲವನ್ನು ಪೂರ್ಣವಾಗಿ ಬಳಸಿಕೊಂಡು ಈ ಬುಡಮೇಲು ಕೃತ್ಯಗಳು ಮುಂದುವರೆದವು. ಸೋವಿಯೆಟ್ ವಿಘಟನೆಯ ನಂತರವೂ ಈ ಚಟುವಟಿಕೆಗಳೂ ಇನ್ನಷ್ಟು ರಭಸದಿಂದ ನಡೆದವು.
ಗೋರ್ಬಚೆವ್ 1980ರ ದಶಕದ ಕೊನೆಯಲ್ಲಿ ತಮ್ಮ “ಶಾಂತಿ ಅಭಿಯಾನ”ದ ಏಕಪಕ್ಷೀಯ ಕ್ರಮಗಳ ಭರದಲ್ಲೋ, ಸಾಮ್ರಾಜ್ಯಶಾಹಿಯ ಒತ್ತಡದಲ್ಲೋ ಘೋಷಿಸಿದ ಒಂದು ಕ್ರಮ ಉಕ್ರೇನಿನ ಇಂದಿನ ಸಮಸ್ಯೆಗಳ ಮೂಲ. ಪೂರ್ವ ಯುರೋಪಿನ ಮತ್ತು ಸೋವಿಯೆಟ್ ಒಕ್ಕೂಟದ ಸಮಾಜವಾದಿ ದೇಶಗಳ ಜಂಟಿ ಶಾಂತಿ- ಭದ್ರತೆಗಳಿಗೆ ಬದ್ಧವಾಗಿದ್ದ “ವಾರ್ಸಾ ಒಪ್ಪಂದ” ಮಿಲಿಟರಿ ಕೂಟವನ್ನು ಏಕಪಕ್ಷೀಯವಾಗಿ ಬರ್ಖಾಸ್ತು ಮಾಡಿದ್ದು, ಆ ಕ್ರಮ. ಅಮೆರಿಕನ್ ವಿದೇಶಾಂಗ ಸಚಿವ ಬೇಕರ್ ನಾಟೋ ಕೂಟ ಮತ್ತು ಅದರ ಪಡೆಗಳು ಈಗಿನ ‘ಗಡಿ ದಾಟಿ ಒಂದು ಇಂಚು’ ಸಹ ಮುಂದೆ ಬರುವುದಿಲ್ಲವೆಂದು ಭರವಸೆ ಮತ್ತು ಪಶ್ಚಿಮ ಯುರೋಪಿನ ಜನರ ಒತ್ತಡದ ಫಲವಾಗಿ ನಾಟೋ ಮಿಲಿಟರಿ ಕೂಟ ಸಹ ಬರ್ಖಾಸ್ತಾಗುತ್ತದೆ ಎಂಬುದು ಗೋರ್ಬಚೆವ್ ನಿರೀಕ್ಷೆಯಾಗಿತ್ತು.
ಈ ಭರವಸೆಗಳಿಗೆ ವಿರುದ್ಧವಾಗಿ ಯು.ಎಸ್ ಮತ್ತು ನಾಟೋ ಸೋವಿಯೆಟ್ ಒಕ್ಕೂಟದ ವಿಘಟನೆಯ ನಂತರ, ಕಳೆದ ಮೂರು ದಶಕಗಳಲ್ಲಿ 14 ದೇಶಗಳನ್ನು (ಸರ್ಬಿಯಾ ಬಿಟ್ಟು ಎಲ್ಲ ಪೂರ್ವ ಯುರೋಪಿನ ಮಾಜಿ ಸಮಾಜವಾದಿ ಬಣದ ದೇಶಗಳು ಮತ್ತು ಮೂರು ಮಾಜಿ ಸೋವಿಯೆಟ್ ದೇಶಗಳು) ನಾಟೋ ಗೆ ಸೇರಿಸಿಕೊಳ್ಳಲಾಗಿದೆ. ಈ ದೇಶಗಳಲ್ಲಿ ನಾಟೋ ಪಡೆಗಳು ಅಣ್ವಸ್ತ್ರ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸ್ಥಾಪಿಸಲಾಗಿದೆ. ಇವೆಲ್ಲವೂ ರಶ್ಯಾದ ಪಶ್ಚಿಮ ಗಡಿಯಲ್ಲಿದ್ದು ರಶ್ಯಾವನ್ನು ಸುತ್ತುವರೆಯುವ ಯು,ಎಸ್ ಯೋಜನೆಯ ಭಾಗವಾಗಿದೆ ಎಂಬುದು ರಶ್ಯಾದ ವಾಸ್ತವಿಕ ಆತಂಕ.