ಉಕ್ರೇನಿನಲ್ಲಿ ರಷ್ಯಾದ ಅನಿರೀಕ್ಷಿತ ಮಿಲಿಟರಿ ದಾಳಿಯ ನಂತರ ಹಲವು ಪ್ರಶ್ನೆಗಳು ಎದ್ದಿವೆ. ದಾಳಿಯ ನಂತರ ಉಕ್ರೇನಿನಲ್ಲಿ ಸ್ಥಿತಿ ಏನಿದೆ? ಉಕ್ರೇನ್ ಬಿಕ್ಕಟ್ಟಿನ ಚಾರಿತ್ರಿಕ, ರಾಜಕೀಯ ಹಿನ್ನೆಲೆ ಏನು? ಈ ಬಿಕ್ಕಟ್ಟು ಯುದ್ಧಕ್ಕೆ ಎಡೆ ಮಾಡಿಕೊಟ್ಟ ತಕ್ಷಣದ ಕಾರಣಗಳೇನು? ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರಗಳು ಇರಲಿಲ್ಲವೇ? ನಾಟೋ ಕೂಟದ ಸದಸ್ಯತ್ವದ ಪ್ರಶ್ನೆ ಯಾಕೆ ಇಷ್ಟು ವಿವಾದಾಸ್ಪದವಾಗಿದೆ ? ಈ ಯುದ್ಧದ ಕುರಿತು ಭಾರತ ಸರಕಾರದ ನಿಲುವು ಸರಿಯೆ? ಯುದ್ಧಕ್ಕೆ ಎಂತಹ ಅಂತರ್ರಾಷ್ಟ್ರೀಯ ಪ್ರತಿಕ್ರಿಯೆ ಬಂದಿದೆ ? ಯುದ್ಧದ ತಕ್ಷಣದ ಪರಿಣಾಮಗಳೇನು ? ಯುದ್ಧ ನಿಲ್ಲಿಸಲು ನಡೆದಿರುವ ಅಂತರ್ರಾಷ್ಟ್ರೀಯ ಪ್ರಯತ್ನಗಳೇನು ? ಯುದ್ಧ ಇನ್ನೂ ಮುಂದುವರೆದರೆ ಭಾರತದ ಮತ್ತು ಅಂತರ್ರಾಷ್ಟ್ರೀಯ ಪರಿಸ್ಥಿತಿ ಮೇಲೆ ಯಾವ ದೂರಗಾಮಿ ಪರಿಣಾಮ ಬೀರಬಹುದು ? ಈ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಈ ಸರಣಿಯಲ್ಲಿ ಕೊಡಲಾಗುವುದು.
– ವಸಂತರಾಜ ಎನ್.ಕೆ
ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರಗಳು ಇರಲಿಲ್ಲವೇ?
ಖಂಡಿತ ಇತ್ತು. ಉಕ್ರೇನ್ ಸರಕಾರ ಮಿನ್ಸ್ಕ್ ಒಪ್ಪಂದದ ಜಾರಿಗೆ ಬದ್ಧತೆಯ ಕುರಿತು ಪ್ರಾಮಾಣಿಕತೆ ಪ್ರದರ್ಶಿಸಿ ಆ ನಿಟ್ಟಿನಲ್ಲಿ ಭರವಸೆ ಮೂಡಿಸುವುದು, ಮತ್ತು ಆ ನಿಟ್ಟಿನಲ್ಲಿ ಫ್ರಾನ್ಸ್, ಜರ್ಮನಿಗಳು ಒತ್ತಡ ಹಾಕುವುದು ಸಾಧ್ಯವಿತ್ತು. ರಶ್ಯದ ಒತ್ತಾಯದಂತೆ, ಉಕ್ರೇನ್ ಮತ್ತು ಜಾರ್ಜಿಯ ನಾಟೋ ಕೂಟ ಸೇರುವುದಿಲ್ಲ ಮತ್ತು ರಶ್ಯದ ವಿರುದ್ಧ ಅಣ್ವಸ್ತ್ರ ಸಜ್ಜುಗೊಳಿಸುವುದಿಲ್ಲ ಎಂಬ ಲಿಖಿತ ಗ್ಯಾರಂಟಿ ಕೊಡುವುದು ಸಹ ಸಾಧ್ಯವಿತ್ತು. ಫ್ರಾನ್ಸ್ ಮತ್ತು ಜರ್ಮನಿಗಳು ರಶ್ಯಾದ ಭದ್ರತಾ ಆತಂಕ ನಿವಾರಿಸಲು ಮತ್ತು ಇಂತಹ ಖಾತ್ರಿ ಕೊಡಲು ಸಿದ್ಧವಿದ್ದವು. ಆದರೆ ಯು.ಎಸ್ ಇದಕ್ಕೆ ತಯಾರಿರಲಿಲ್ಲ. ನಾಟೋ ಇಂತಹ ಖಾತ್ರಿ ಕೊಡಲು ಸಾಧ‍್ಯವಿಲ್ಲ. ನಾಟೋ ಸೇರುವುದು ಅಥವಾ ಬಿಡುವುದು ಉಕ್ರೇನಿನ ಸಾರ್ವಭೌಮ ನಿರ್ಧಾರ ಎಂದಿತು. ಯು.ಎಸ್, ಯು.ಎಸ್/ಯು.ಕೆ ಗಳ ಒತ್ತಡದಿಂದಾಗಿ ಇತರ ನಾಟೋ ದೇಶಗಳ (ಪ್ರಮುಖವಾಗಿ ಫ್ರಾನ್ಸ್, ಜರ್ಮನಿ) ಮಾತುಕತೆಗಳಿಂದ ಬಗೆಹರಿಸುವ ಪ್ರಯತ್ನಗಳ ವಿಶ್ವಾಸಾರ್ಹತೆ ಮತ್ತು ಒತ್ತಡ ಕುಂದಿತು. ಉಕ್ರೇನಿನ ಉಗ್ರ ರಾಷ್ಟ್ರವಾದಿ ಬಲಪಂಥೀಯ (ನವ ನಾಜಿಗಳ ಬೆಂಬಲ ಸಹ ಇರುವ) ಸರಕಾರ ಸಹ ಇಂತಹ ಖಾತ್ರಿ ಕೊಡಲು ತಯಾರಿರಲಿಲ್ಲ ಮತ್ತು ಮಾತುಕತೆಗಳಿಂದ ಬಿಕ್ಕಟ್ಟು ಪರಿಹರಿಸಲು ಆಸಕ್ತಿ ತೋರಲಿಲ್ಲ.
ರಶ್ಯ, ಉಕ್ರೇನಿನ ಗಡಿಗಳಲ್ಲಿ ಮಿಲಿಟರಿ ಕವಾಯಿತು ನಡೆಸಿದ್ದರ ಒತ್ತಡದಿಂದ, ಕಳೆದ ಮೂರು ತಿಂಗಳುಗಳಲ್ಲಿ ನಡೆದ ಹಲವು ಸುತ್ತಿನ ಮಾತುಕತೆಗಳಲ್ಲಿ ರಶ್ಯ ಭಾಗವಹಿಸಿತು. ಅಧ್ಯಕ್ಷರ ಶೃಂಗಸಭೆ, ವಿದೇಶ ಮಂತ್ರಿಗಳ ಮಾತುಕತೆ, ಫ್ರಾನ್ಸ್, ಜರ್ಮನಿ ಪ್ರಧಾನಿಗಳ ಜತೆ ಮಾತುಕತೆಗಳಲ್ಲಿ ರಶ್ಯ ಭಾಗವಹಿಸಿತು. ಈ ಪ್ರಶ್ನೆಯನ್ನು ಉಭಯ ಮಾತುಕತೆಗಳಿಂದ ಬಗೆಹರಿಸುವುದು ಸಾಧ್ಯವಿಲ್ಲದಿದ್ದರೆ, ವಿಶ್ವಸಂಸ್ಥೆ ಅಥವಾ ಇತರ ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸಿ ರಶ್ಯದ ಭದ್ರತಾ ಆತಂಕಗಳನ್ನು ನಿವಾರಿಸುವುದು ಸಾಧ‍್ಯವಿತ್ತು. ಮಿಲಿಟರಿ ಕವಾಯಿತಿಗಾಗಿ ಉಕ್ರೇನ್ ಗಡಿಗಳಲ್ಲಿ ಪಡೆಗಳನ್ನು ಜಮಾಯಿಸಿದ್ದ ಪುಟಿನ್ ಗೆ ಮುಖಭಂಗವಾಗದಂತೆ ಕೆಲವು ಆಶ್ವಾಸನೆಗಳನ್ನು ಕೊಡಬೇಕು ಎಂಬ ಫ್ರಾನ್ಸ್, ಜರ್ಮನಿಗಳ ಪ್ರಯತ್ನಗಳನ್ನು ಸಫಲವಾಗಲು ಯು.ಎಸ್/ಯು.ಕೆ ಗಳು ಬಿಡಲಿಲ್ಲ. ಉಕ್ರೇನಿನ ಮೇಲೆ ಯುದ್ಧಕ್ಕೆ ಹೋಗುವುದು ಅಥವಾ ಮುಖಭಂಗ ಅನುಭವಿಸುವುದು ಇವೆರಡೇ ಆಯ್ಕೆಗಳು ಪುಟಿನ್ ಗೆ ಇರುವಂತೆ ಮಾಡುವುದು ಯು.ಎಸ್/ಯು.ಕೆ ಗಳ ತಂತ್ರವಾಗಿತ್ತು ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು. ತೈಲ ಮತ್ತು ಪ್ರಾಕೃತಿಕ ಗ್ಯಾಸ್ ಗಳ ರಶ್ಯ ಮತ್ತು ಯುರೋಪುಗಳ ನಡುವಿನ ವ್ಯಾಪಾರ/ಆರ್ಥಿಕ ಸಂಬಂಧ ಕಡಿತ ಮಾಡುವುದು, ಆ ಸ್ಥಾನವನ್ನು ತಾವು ತುಂಬಿ ಲಾಭ/ರಾಜಕೀಯ ಅಧಿಪತ್ಯ ಸ್ಥಾಪಿಸುವುದು ಯು.ಎಸ್/ಯು.ಕೆ ಗಳ ವ್ಯೂಹಾತ್ಮಕ ಗುರಿಯಾಗಿತ್ತು. ಹಾಗಾಗಿ, ಒಂದು ಕಡೆ ಮಾತುಕತೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಯು.ಎಸ್/ಯು.ಕೆ ಸರಕಾರ ಮತ್ತು ಮಾಧ್ಯಮಗಳು, ರಶ್ಯ ಮಿಲಿಟರಿ ದಾಳಿ ಈಗ ನಡೆಸಲಿದೆ ಆಗ ನಡೆಸಲಿದೆ ಎಂಬ ಭಾರೀ ಅಪಪ್ರಚಾರವನ್ನೂ ಹಾಗೂ ದಾಳಿ ಮಾಡಿದರೆ ಆ ದಿಗ್ಬಂಧನ ಹಾಕುತ್ತೇವೇ ಈ ಕ್ರಮ ಕೈಗೊಳ್ಳುತ್ತೇವೆ ಎಂಬ ಬೆದರಿಕೆಗಳ ಮಹಾಪೂರವನ್ನೂ ಹರಿಸಿದ್ದವು. ಮಾತುಕತೆಗಳು ವಿಫಲವಾಗುವಂತೆ ಮಾಡಿದ್ದವು. ಇದರ ಒಟ್ಟು ಪರಿಣಾಮವಾಗಿ ಅಧ್ಯಕ್ಷ ಪುಟಿನ್ ಮೊದಲು ಪೂರ್ವ ಉಕ್ರೇನ್ ಪ್ರಾಂತ್ಯಗಳು ಸ್ವತಂತ್ರ ದೇಶಗಳು ಎಂದು ಮನ್ನಣೆ ಕೊಡುವ ಮತ್ತು ಆ ಮೇಲೆ ಉಕ್ರೇನಿನ ಮೇಲೆ ಮಿಲಿಟರಿ ದಾಳಿಯ ಘೋಷಣೆ ಮಾಡಿದ್ದಾರೆ.
ಇವುಗಳನ್ನೂ ಓದಿ : ಉಕ್ರೇನ್ ಯುದ್ಧದ ಕುರಿತ ಪ್ರಶ್ನೆಗಳು -1 ಉಕ್ರೇನಿನಲ್ಲಿ ರಷ್ಯಾ ಮಿಲಿಟರಿ ದಾಳಿಯ ನಂತರ ಸ್ಥಿತಿ ಏನಿದೆ?
ಉಕ್ರೇನ್ ಯುದ್ಧದ ಕುರಿತ ಪ್ರಶ್ನೆ- 2 : ಉಕ್ರೇನ್ ಬಿಕ್ಕಟ್ಟಿನ ಚಾರಿತ್ರಿಕ, ರಾಜಕೀಯ ಹಿನ್ನೆಲೆ ಏನು?
ಉಕ್ರೇನ್ ಯುದ್ಧದ ಕುರಿತ ಪ್ರಶ್ನೆ- 3. ಉಕ್ರೇನ್ ಬಿಕ್ಕಟ್ಟು ಯುದ್ಧಕ್ಕೆ ಎಡೆ ಮಾಡಿಕೊಟ್ಟ ತಕ್ಷಣದ ಕಾರಣಗಳೇನು?