ಯುಕ್ರೇನ್: ಈ ಅತಿಕ್ರಮಣ ನಿಲ್ಲಬೇಕು, ಶಾಂತಿ ಮರುಸ್ಥಾಪನೆಯಾಗಬೇಕು

ಸೀತಾರಾಂ ಯೆಚೂರಿ

ಈ ಯುದ್ಧವು ಖಂಡಿತವಾಗಿಯೂ ರಷ್ಯಾ ಮತ್ತು ಅಮೆರಿಕಾ/ನ್ಯಾಟೋ ನಡುವಿನ ಯುದ್ಧವಾಗಿದೆ. ಯುಕ್ರೇನ್ ಈ ಯುದ್ಧ ನಡೆಯುವ ರಂಗಸ್ಥಳವಾಗಿ ಪರಿಣಮಿಸಿದೆ. ಜತೆಗೆ ಝಾರ್‌ಶಾಹೀ ಕಾಲದ ‘ಮಹಾರಷ್ಯಾ’ ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಬೇಕೆನ್ನುವ ಪುಟಿನ್ ಧೋರಣೆಯೂ ಸೇರಿಕೊಂಡಿದೆ. ವಿಶ್ವ ಶಾಂತಿಗೆ ಭೀಕರ ಪರಿಣಾಮಗಳನ್ನು ಉಂಟುಮಾಡುವ ಈ ಯುದ್ಧ ಇನ್ನಷ್ಟು ವಿಸ್ತರಿಸುವುದನ್ನು ಈ ಕೂಡಲೇ ನಿಲ್ಲಿಸಬೇಕಾಗಿದೆ. ತಿಕ್ಕಾಟಗಳನ್ನು ಸೃಷ್ಟಿಸುವ ಶಕ್ತಿಗಳನ್ನು ಛೂಬಿಡುವುದು ಜಾಗತಿಕ ಪ್ರಮಾಣದ ಸಂಘರ್ಷಗಳಿಗೆ ಕಾರಣವಾಗುತ್ತದೆ. ಏನಾದರೂ ಮಾಡಿ ಇದನ್ನು ತಡೆದು ನಿಲ್ಲಿಸಲೇಬೇಕು. ತಕ್ಷಣವೇ ಕದನ ವಿರಾಮ ಮತ್ತು ರಷ್ಯಾ ಹಿಂದೆ ಸರಿಯುವುದು ತೀರಾ ಅಗತ್ಯವಾಗಿದೆ. ನ್ಯಾಟೋ ತನ್ನ ಪೂರ್ವದಿಕ್ಕಿನತ್ತ ವಿಸ್ತರಣೆಯನ್ನು ನಿಲ್ಲಿಸುವುದೂ ಕೂಡ ಅಷ್ಟೇ ಮುಖ್ಯ. ಶಾಂತಿ ಮತ್ತು ಸುರಕ್ಷತೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಡೆಯುವ ಮಾತುಕತೆಗಳು ಫಲದಾಯಕ ಪ್ರಗತಿ ಸಾಧಿಸುವುದನ್ನು ಖಾತ್ರಿಪಡಿಸಲು ಅಮೆರಿಕಾ ಹಾಗೂ ನ್ಯಾಟೋ ಈ ಮಾತುಕತೆಯಲ್ಲಿ ಒಳಗೊಳ್ಳಬೇಕಾಗಿರುವುದು ತೀರಾ ಅವಶ್ಯವಿದೆ.

ರಷ್ಯಾ ನಡೆಸಿರುವ ಯುಕ್ರೇನಿನ ಅತಿಕ್ರಮಣವು ಯೂರೋಪು ಹಾಗೂ ಜಗತ್ತಿನ ಎಲ್ಲಾ ಬೆಳವಣಿಗೆಗಳ ಮೇಲೆ ದೀರ್ಘಕಾಲೀನ ಪ್ರಭಾವ ಬೀರಲಿದೆ. ಪ್ರಚೋದನೆಗಳು ಮತ್ತು ಭದ್ರತೆಯ ಬೆದರಿಕೆಯ ಗ್ರಹಿಕೆಗಳು ಏನೇ ಇರಲಿ, ಸಮಸ್ಯೆಗಳ ಪರಿಹಾರಕ್ಕೆ ರಷ್ಯಾವು ಅಷ್ಟು ದೊಡ್ಡ ಮಟ್ಟದಲ್ಲಿ ಪೂರ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ನಡೆಸಿದ ರೀತಿ ಸರಿಯಾದುದಲ್ಲ. ಈ ಕೂಡಲೇ ಕದನವಿರಾಮ ಮತ್ತು ರಾಜತಾಂತ್ರಿಕ ಮಾತುಕತೆ ಹಾಗೂ ಸಂಧಾನಗಳಿಗೆ ರಷ್ಯಾ ಮುಂದಾಗಬೇಕು.

ಎರಡು ಪ್ರಮುಖ ಅಂಶಗಳು

ಇಂತಹ ಸನ್ನಿವೇಶ ಉದ್ಭವವಾಗಲು ಕಾರಣವಾದ ಎರಡು ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ಮೊದಲನೆಯದು ಸೋವಿಯೆತ್ ಒಕ್ಕೂಟ ವಿಘಟನೆಯಾದಾಗ ಸಂಭವಿಸಿದ ಬೆಳವಣಿಗೆಗಳು.

ಅಮೆರಿಕಾ ನೇತೃತ್ವದ ಸಾಮ್ರಾಜ್ಯಶಾಹಿಯು ಉತ್ತರ ಅಟ್ಲಾಂಟಿಕ್ ಸಂಧಿ ಸಂಘಟನೆ(ನ್ಯಾಟೋ – ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್)ಯನ್ನು ಎರಡನೇ ವಿಶ್ವ ಮಹಾಯುದ್ಧದ ನಂತರ ಶೀತಲ ಸಮರವನ್ನು ತೀವ್ರಗೊಳಿಸಲು ಹಾಗೂ ಸೋವಿಯೆತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ(ಯುಎಸ್‌ಎಸ್‌ಆರ್) ತನ್ನ ಪೂರ್ವ ಯೂರೋಪಿನ ಸಮಾಜವಾದಿ ಮಿತ್ರ ದೇಶಗಳೊಂದಿಗೆ ರಚಿಸಿಕೊಂಡಿದ್ದ ವಾರ್ಸಾ ಒಪ್ಪಂದ ಮೈತ್ರಿಕೂಟವನ್ನು ಮಿಲಿಟರಿ ಮೂಲಕ ಎದುರಿಸಲು ಸ್ಥಾಪಿಸಿತು ಎಂಬ ಸಂಗತಿಯನ್ನು ಸಿಪಿಐ(ಎಂ) ಯಾವಾಗಲೂ ಹೇಳುತ್ತಲೇ ಬಂದಿದೆ. ಶೀತಲ ಸಮರದ ಸಮಯದಲ್ಲಿ ನ್ಯಾಟೋವು ಸಮಾಜವಾದದೊಂದಿಗೆ ಸೈದ್ಧಾಂತಿಕ ಸಮರದ ಮಿಲಿಟರಿ ಅಂಗವಾಗಿತ್ತು. ಸೋವಿಯೆತ್ ಒಕ್ಕೂಟ ವಿಘಟನೆಯಾದ ನಂತರ ವಾರ್ಸಾ ಒಪ್ಪಂದ ತನ್ನ ಅಸ್ತಿತ್ವ ಕಳೆದುಕೊಂಡಿತು. ಆದಕಾರಣ ನ್ಯಾಟೋವನ್ನು ಮುಂದುವರಿಸಲು ಕಾರಣಗಳೇ ಇಲ್ಲ. ಅದರ ಅಸ್ತಿತ್ವಕ್ಕೆ ಕಾರಣವಾದ ಸಂಗತಿಯೇ ಕೊನೆಯಾದ ನಂತರ ಅದನ್ನು ವಿಸರ್ಜಿಸಬೇಕಿತ್ತು. ನಿಜ ಹೇಳಬೇಕೆಂದರೆ, 1992ರ ಹೊತ್ತಿಗೆ, ಸಿಪಿಐ(ಎಂ) ನ 14ನೇ ಮಹಾಧಿವೇಶನದಲ್ಲಿ ಅಂಗೀಕರಿಸಿದ ನಿರ್ಣಯ ಹೀಗೆ ಹೇಳಿತ್ತು: “ವಾರ್ಸಾ ಒಪ್ಪಂದ ವಿಸರ್ಜನೆಯಾಗಿರುವಾಗ ನ್ಯಾಟೋ ಹಾಗೆಯೇ ಉಳಿದಿದೆ ಮತ್ತು ಕೊಲ್ಲಿ(ಗಲ್ಫ್) ಯುದ್ಧದಲ್ಲಿ ಒಗ್ಗೂಡಿ ಕೆಲಸಮಾಡಿದೆ. ತಮ್ಮ ಕಾರ್ಯತಂತ್ರವನ್ನು ಮಾರ್ಪಾಟು ಮಾಡಿ ತ್ವರಿತ ಮಧ್ಯಪ್ರವೇಶಕ್ಕಾಗಿ ಎಲ್ಲಾ ಸದಸ್ಯ ರಾಷ್ಟ್ರಗಳ ಪಡೆಗಳನ್ನು ಒಳಗೊಂಡ ಕ್ಷಿಪ್ರ ದಾಳಿ ಪಡೆಯೊಂದನ್ನು ನಿರ್ಮಿಸಬೇಕು ಎಂದು ನ್ಯಾಟೋ ಶಕ್ತಿಗಳು ನಿರ್ಧರಿಸಿವೆ.”

ಮುಂದುವರಿದು, ಆ ನಿರ್ಣಯವು ವಿಶ್ವದ ಶಾಂತಿ ಶಕ್ತಿಗಳಿಗೆ ಈ ರೀತಿ ಕರೆ ನೀಡಿತು: “ಅಮೆರಿಕಾ ನೇತೃತ್ವದ ಸಾಮ್ರಾಜ್ಯಶಾಹಿ ಹಾಗೂ ಅದರ ಮಿತ್ರರು ತಮ್ಮ ವಿಶ್ವ-ವ್ಯಾಪಿ ಮಿಲಿಟರಿ ನೆಲೆಗಳನ್ನು ಮುಚ್ಚಲು, ಅಣ್ವಸ್ತ್ರಗಳ ಉತ್ಪಾದನೆ ನಿಲ್ಲಿಸಲು, ಪಾರಂಪರಿಕ ಸೇನೆಯನ್ನು ತೀಕ್ಷ್ಣವಾಗಿ ಕಡಿತಗೊಳಿಸಲು ಪ್ರಮುಖ ಹಾಗೂ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು, ಅದೇ ಸಮಯದಲ್ಲಿ ಅಣ್ವಸ್ತ್ರಗಳನ್ನು ಇನ್ನೂ ಕಡಿಮೆಮಾಡಬೇಕು ಹಾಗೂ ತೆಗೆದುಹಾಕಬೇಕೆಂಬ ಸಂಧಾನ ನಡೆಸಬೇಕು ಎಂದು ಒತ್ತಾಯಿಸಬೇಕು. ಈ ಗುರಿಗಳನ್ನು ಸಾಧಿಸಲು ವಿಶ್ವ ಶಾಂತಿ ಚಳುವಳಿಯನ್ನು ಬಲಪಡಿಸಬೇಕು.”

ಅಮೆರಿಕಾ ಸಾಮ್ರಾಜ್ಯಶಾಹಿಯು ತನ್ನ ಜಾಗತಿಕ ಅಧಿಪತ್ಯವನ್ನು ಬಲಪಡಿಸುವ ಮತ್ತು ಶೀತಲ ಸಮರದ ನಂತರದಲ್ಲಿನ ಮುಖಾಮುಖಿಯನ್ನು ಹೆಚ್ಚಿಸುವ ಬಯಕೆಯೊಂದಿಗೆ ನ್ಯಾಟೋವನ್ನು ಉಳಿಸಿಕೊಳ್ಳಲು ಉದ್ದೇಶಿಸಿತು ಮಾತ್ರವಲ್ಲ ಅದನ್ನು ಇನ್ನೂ ಸದೃಢಗೊಳಿಸಲು ತೀರ್ಮಾನಿಸಿತು; ಆ ಮೂಲಕ ಜಗತ್ತಿನ ಎಲ್ಲೆಡೆ, ಬಹು ಮುಖ್ಯವಾಗಿ ಯೂರೋಪ್ ಹಾಗೂ ಮಧ್ಯ ಏಶಿಯಾದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಬಳಸಿಕೊಳ್ಳಲು ಕೂಡ ನಿರ್ಧರಿಸಿತು.

ಅಮೆರಿಕಾ ಸಾಮ್ರಾಜ್ಯಶಾಹಿಯು ಸೋವಿಯೆತ್ ಒಕ್ಕೂಟದ ವಿಘಟನೆಯ ನಂತರ ಗೋರ್ಬಚೇವ್‌ಗೆ ನೀಡಿದ ಭರವಸೆಯನ್ನು ಇಲ್ಲಗಳೆದು ನ್ಯಾಟೋವನ್ನು ವಿಸರ್ಜಿಸುವ ಬದಲು ಪೂರ್ವದಕಡೆ ವಿಸ್ತರಿಸಲು ತರಾತುರಿ ನಡೆಸಿತು. 1990ರಲ್ಲಿ, ನ್ಯಾಟೋದಲ್ಲಿ 16 ಸದಸ್ಯರಿದ್ದರು. 1999ರಲ್ಲಿ, ಪೋಲೆಂಡ್, ಹಂಗರಿ ಹಾಗೂ ಜೆಕ್ ರಿಪಬ್ಲಿಕ್ ಸೇರಿಕೊಂಡವು. 2004ರಲ್ಲಿ, ಬಲ್ಗೇರಿಯಾ, ಎಸ್ಟೋನಿಯಾ, ಲಾತ್ವಿಯಾ, ಲಿತ್ವೇನಿಯಾ, ರೊಮೇನಿಯಾ, ಸ್ಲೊವೇಕಿಯಾ, ಮತ್ತು ಸ್ಲೊವೇನಿಯಾ ಸೇರಿಕೊಂಡವು. 2009ರಲ್ಲಿ, ಅಲ್ಬೇನಿಯಾ ಮತ್ತು ಕ್ರೋಶಿಯಾ, 2017ರಲ್ಲಿ ಮೊಂಟೆನೆಗ್ರೋ ಮತ್ತು ಉತ್ತರ ಮಸೆಡೋನಿಯಾ ಹಾಗೂ 2021ರಲ್ಲಿ ಬೋಸ್ನಿಯಾ ಮತ್ತು ಹರ್ಜೆಗೋವಿನಾ ಸೇರಿಕೊಂಡವು. ಒಟ್ಟಿನಲ್ಲಿ, ಯುಕ್ರೇನ್ ಮತ್ತು ಜಾರ್ಜಿಯಾ ಬಿಟ್ಟು ಉಳಿದೆಲ್ಲಾ ಪೂರ್ವ ಯೂರೋಪಿನ ದೇಶಗಳು ನ್ಯಾಟೋಗೆ ಸೇರಿಕೊಂಡವು ಮತ್ತು ರಷ್ಯಾದ ಗಡಿಗಳಲ್ಲಿ 1,75,000 ನ್ಯಾಟೋ ಪಡೆಗಳನ್ನು ಇರಿಸಲಾಯಿತು.

2008ರಲ್ಲಿ, ಯಾವ ದೇಶವೂ ಮತ್ತೊಂದು ದೇಶಕ್ಕೆ ತೊಂದರೆಯಾಗುವಂತೆ ತನ್ನ ಭದ್ರತಾ ಪಡೆಯನ್ನು ಬಲಗೊಳಿಸಬಾರದು ಎಂಬ ತಾತ್ವಿಕ ನೆಲೆಯಲ್ಲಿ ಯೂರೋಪಿಯನ್ ಭದ್ರತಾ ಒಪ್ಪಂದ ಮಾಡಿಕೊಳ್ಳೋಣವೆಂಬ ಪ್ರಸ್ತಾಪವನ್ನು ರಷ್ಯಾ ಮುಂದಿಟ್ಟಿತು. ಆದರೆ ಇದು ತಿರಸ್ಕರಿಸಲ್ಪಟ್ಟಿತು. ನ್ಯಾಟೋಗೆ ಯುಕ್ರೇನಿನ ಪ್ರವೇಶವನ್ನು ರಷ್ಯಾದ ಸುರಕ್ಷತೆಗೆ ಅಪಾಯವೊಡ್ಡುವ ಆಕ್ರಮಣಕಾರಿ ನಡೆ ಎಂದು ಸಹಜವಾಗಿಯೇ ರಷ್ಯಾ ಭಾವಿಸಿತು.

ಕಳೆದ ಡಿಸೆಂಬರಿನಲ್ಲಿ, ರಷ್ಯಾ ಮತ್ತು ನ್ಯಾಟೋ ಸದಸ್ಯರ ನಡುವೆ ಈ ಕೆಳಗಿನ ಭದ್ರತಾ ಖಾತರಿಗಳನ್ನು ರಷ್ಯಾ ಪ್ರಸ್ತಾಪಿಸಿತು: (1) ಮುಂದೆ ನ್ಯಾಟೋ ವಿಸ್ತರಣೆ ಇರಬಾರದು (2) ರಷ್ಯಾದ ಗಡಿಗಳಲ್ಲಿ ಆಕ್ರಮಣಕಾರಿ ಶಸ್ತ್ರಾಸ್ತ್ರಗಳು ಇರಬಾರದು ಮತ್ತು (3) 1997ರ ರಷ್ಯಾ-ನ್ಯಾಟೋ ಸ್ಥಾಪನಾ ಕಾಯಿದೆಗೆ ಹಿಂದಿರುಗುವುದು. ಇವುಗಳನ್ನು ತಿರಸ್ಕರಿಸಿದ ಅಮೆರಿಕಾವು, ಯುಕ್ರೇನಿನಲ್ಲಿ ರಷ್ಯಾ ವಿರೋಧಿ ಶಕ್ತಿಗಳ ಒಗ್ಗೂಡುವಿಕೆಗೆ ಪ್ರೋತ್ಸಾಹ ನೀಡಿತು ಮತ್ತು 2014ರಲ್ಲಿ ಕ್ಷಿಪ್ರಕ್ರಾಂತಿ ಉಂಟುಮಾಡಿತು. ತದನಂತರದಲ್ಲಿ, ಯುಕ್ರೇನ್ ಔಪಚಾರಿಕವಾಗಿ ನ್ಯಾಟೋವನ್ನು ಸೇರದೇ ಇದ್ದಾಗಲೂ ನ್ಯಾಟೋ ಮೂಲಸೌಕರ್ಯಗಳು ಯುಕ್ರೇನಿನಲ್ಲಿ ಬೆಳೆಯಲು ಆರಂಭವಾಯಿತು.

ಈ ಹಗೆತನದ ಬೆಳವಣಿಗೆಗಳನ್ನು ತನ್ನ ಸುರಕ್ಷತೆಗೆ ಅಪಾಯವೆಂದು ರಷ್ಯಾ ಮತ್ತು ಪುಟಿನ್ ಬಗೆದರು ಮತ್ತು ಅದು ಈಗಿನ ಮಿಲಿಟರಿ ಕಾರ್ಯಾಚರಣೆಗೆ ಹಾಗೂ ಆಕ್ರಮಣಕ್ಕೆ ಕಾರಣವಾಯಿತು.

ಆದ್ದರಿಂದ, ಈ ಯುದ್ಧವು ಖಂಡಿತವಾಗಿಯೂ ರಷ್ಯಾ ಮತ್ತು ಅಮೆರಿಕಾ/ನ್ಯಾಟೋ ನಡುವಿನ ಯುದ್ಧವಾಗಿದೆ. ಯುಕ್ರೇನ್ ಈ ಯುದ್ಧ ನಡೆಯುವ ರಂಗಸ್ಥಳವಾಗಿ ಪರಿಣಮಿಸಿದೆ.

ಮಹಾರಷ್ಯಾ’ದ ಮರುವಶ ಧೋರಣೆ

ಎರಡನೆಯ ಅಂಶವೇನೆಂದರೆ ‘ಮಹಾರಷ್ಯಾ’ವನ್ನು ಮರು ಸ್ಥಾಪಿಸಬೇಕೆಂಬ ಪುಟಿನ್ ಅವರ ಯೋಜನೆಯು ಯುಕ್ರೇನನ್ನು ತನ್ನ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತದೆ. ಬಹು ಮಟ್ಟಿಗೆ, ರಷ್ಯಾದ ಇತಿಹಾಸ, ಮತಧರ್ಮ, ಇತ್ಯಾದಿ ಎಲ್ಲವೂ ಯುಕ್ರೇನಿನ ಇವತ್ತಿನ ಭಾಗವಾಗಿರುವ ಪ್ರದೇಶಗಳಿಂದ ಹಬ್ಬಿವೆ. ರಷ್ಯಾ ಮತ್ತು ಯುಕ್ರೇನ್ ಎರಡೂ ಶತಶತಮಾನಗಳಿಂದ ಬೆಸೆದುಕೊಂಡ ಇತಿಹಾಸವನ್ನು ಹೊಂದಿವೆ. ಯುಕ್ರೇನಿನ ಪಶ್ಚಿಮ ಭಾಗವು ಬಹುಪಾಲು ಕ್ರೈಸ್ತಮತದ ಕ್ಯಾಥೊಲಿಕ್ ಪಂಥಕ್ಕೆ ಸೇರಿದ್ದಾಗಿದ್ದರೆ, ಪೂರ್ವದ ಭಾಗವು ಬಹುಪಾಲು ರಷ್ಯನ್ ಆರ್ಥೋಡೊಕ್ಸ್ ಪಂಥಕ್ಕೆ ಸೇರಿದ್ದಾಗಿದೆ. ಪಶ್ಚಿಮದಲ್ಲಿ ಯುಕ್ರೇನಿ ಭಾಷೆ ಮಾತನಾಡುತ್ತಿದ್ದರೆ, ಪೂರ್ವದಲ್ಲಿ ರಷ್ಯನ್ ಭಾಷೆ ಮಾತನಾಡುತ್ತಾರೆ.

ಕಳೆದುಕೊಂಡದ್ದನ್ನು ಮರುವಶ ಮಾಡಿಕೊಳ್ಳುವ ಭರದಲ್ಲಿ ಪುಟಿನ್ ಫೆಬ್ರವರಿ 21, 2022 ರಂದು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಪ್ರತ್ಯೇಕ ಯುಕ್ರೇನನ್ನು ಸೃಷ್ಟಿಸಿದ ಹೊಣೆಯನ್ನು ಇವತ್ತಿನ ಯುಕ್ರೇನನ್ನು “ವ್ಲಾಡಿಮಿರ್ ಲೆನಿನ್‌ನ ಯುಕ್ರೇನ್” ಎಂದು ಬೋಲ್ಶೆವಿಕರು ಕರೆದಿದ್ದೇ ಕಾರಣ ಎಂದು ಹೇಳಿದರು. ಲೆನಿನ್‌ವಾದಿ ಸಿದ್ಧಾಂತದ ವೈಜ್ಞಾನಿಕ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ಪುಟಿನ್ ನೇರ ಆರೋಪ ಹೊರಿಸಿದರು, ಅಕ್ಟೋಬರ್ ಕ್ರಾಂತಿಗೆ ಕಾರಣವಾದ ಆ ಸಿದ್ಧಾಂತದ ಪ್ರಕಾರ ಸ್ವಯಮಾಧಿಕಾರದ ಹಕ್ಕುಗಳು ಎಲ್ಲಾ ದೇಶಗಳಿಗೂ ಪ್ರತ್ಯೇಕವಾಗುವ ತನಕವೂ ಇದೆ ಎಂದು 1922ರಲ್ಲಿ ಘೋಷಿತವಾಗಿತ್ತು ಮತ್ತು 1924ರಲ್ಲಿ ಸೋವಿಯೆತ್ ಒಕ್ಕೂಟದ ಸಂವಿಧಾನದಲ್ಲಿ ಸೇರಿಸಲಾಗಿತ್ತು. ಹಿಂದಿನ ಸೋವಿಯತ್ ಗಣತಂತ್ರಗಳಲ್ಲಿ ರಾಷ್ಡ್ರೀಯವಾದಿ ಶಕ್ತಿಗಳು ಎದ್ದುಬರಲು ಈ “ಮೂಲ ಅಪರಾಧ”ವೇ ಕಾರಣ ಎಂದು ಪುಟಿನ್ ತನ್ನ ಆರೋಪವನ್ನು ಮುಂದುವರಿಸಿದ್ದಾರೆ. ಸ್ಪಷ್ಟವಾಗಿ, ಲೆನಿನ್ ಮತ್ತು ಬೋಲ್ಶೆವಿಕರ ವಿರುದ್ಧ ತನ್ನ ಈ ತೀವ್ರ ಟೀಕೆಯ ಮೂಲಕ ಪುಟಿನ್, 1917ರ ಸಮಾಜವಾದಿ ಕ್ರಾಂತಿಯ ವಿಜಯದೊಂದಿಗೆ ‘ಮಹಾರಷ್ಯಾ’ದ ಸಾಮ್ರಾಜ್ಯ ಕಟ್ಟುವ ಝಾರ್‌ಶಾಹೀ ಕನಸನ್ನು ಬೊಲ್ಶೆವಿಕರು ಸೋಲಿಸಿದರು ಎಂದು ವ್ಯಥೆಪಡುತ್ತಿದ್ದಾರೆ. ಇವತ್ತಿನ ಜಗತ್ತಿನಲ್ಲಿ ಇದನ್ನು ಮರುಸ್ಥಾಪಿಸಲು ಬಯಸುವುದೆಂದರೆ ಅದು ಸಾಧಿಸಲಾಗದ ಗುರಿಯೇ ಸರಿ.

ಕದನ ವಿರಾಮ ಘೋಷಿಸಿ ಮತ್ತು ಶಾಂತಿ ಸ್ಥಾಪಿಸಿ

ವಿಶ್ವ ಶಾಂತಿಗೆ ಭೀಕರ ಪರಿಣಾಮಗಳನ್ನು ಉಂಟುಮಾಡುವ ಈ ಯುದ್ಧ ಇನ್ನಷ್ಟು ವಿಸ್ತರಿಸುವುದನ್ನು ಈ ಕೂಡಲೇ ನಿಲ್ಲಿಸಬೇಕಾದ ಅಗತ್ಯವಿದೆ. ತಿಕ್ಕಾಟಗಳನ್ನು ಸೃಷ್ಟಿಸುವ ಶಕ್ತಿಗಳನ್ನು ಛೂಬಿಡುವುದು ಜಾಗತಿಕ ಪ್ರಮಾಣದ ಸಂಘರ್ಷಗಳಿಗೆ ಕಾರಣವಾಗುತ್ತದೆ. ಏನಾದರೂ ಮಾಡಿ ಇದನ್ನು ತಡೆದು ನಿಲ್ಲಿಸಲೇಬೇಕು. ತಕ್ಷಣವೇ ಕದನ ವಿರಾಮ ಮತ್ತು ರಷ್ಯಾ ಹಿಂದೆ ಸರಿಯುವುದು ತೀರಾ ಅಗತ್ಯವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ, ನ್ಯಾಟೋ ತನ್ನ ಪೂರ್ವದಿಕ್ಕಿನತ್ತ ವಿಸ್ತರಣೆಯನ್ನು ನಿಲ್ಲಿಸುವುದೂ ಕೂಡ ಅಷ್ಟೇ ಮುಖ್ಯ. ರಷ್ಯಾದ ಸುರಕ್ಷತೆಗೆ ಅಪಾಯವೊಡ್ಡುವ ಮಾರಕ ಶಸ್ತ್ರಾಸ್ತ್ರಗಳನ್ನು ಹಾಗೂ ಕ್ಷಿಪಣಿ ವ್ಯವಸ್ಥೆಯನ್ನು ರಷ್ಯಾದ ಗಡಿಗಳಲ್ಲಿ ಸಜ್ಜುಗೊಳಿಸುವ ಕಾರ್ಯವನ್ನು ನ್ಯಾಟೋ ನಿಲ್ಲಿಸಲೇಬೇಕು. ಯುಕ್ರೇನ್ ಒಂದು ತಟಸ್ಥ ಸಾರ್ವಭೌಮ ದೇಶವಾಗಿ ಉಳಿಯಬೇಕು ಮತ್ತು ರಷ್ಯಾಗೆ ಅಪಾಯವೊಡ್ಡುವ ಮಾರಕ ಶಸ್ತ್ರಾಸ್ತ್ರಗಳು ಹಾಗೂ ಕ್ಷಿಪಣಿಗಳನ್ನು ಸ್ಥಾಪಿಸಲು ನ್ಯಾಟೋಗೆ ಅನುಮತಿ ನೀಡಬಾರದು. ಈಗ ಯುಕ್ರೇನಿನಲ್ಲಿರುವ ನ್ಯಾಟೋ ಮೂಲಸೌಕರ್ಯಗಳನ್ನು ಈ ಕೂಡಲೇ ಕಳಚಿಹಾಕಬೇಕು.

ಶಾಂತಿ ಖಾತ್ರಿಪಡಿಸಲು ಮಾತುಕತೆಗಳು ಮುಂದುವರಿಯಬೇಕು

ರಷ್ಯಾ ಮತ್ತು ಯುಕ್ರೇನ್ ನಡುವೆ ಮಾತುಕತೆ ಶುರುವಾಗಿದೆ. ಆದರೆ ಮೊದಲ ಸುತ್ತಿನ ಮಾತುಕತೆ ಯಾವ ಫಲವನ್ನೂ ನೀಡಿಲ್ಲ. ಮಾತುಕತೆಗಳು ಮುಂದುವರಿಯಬೇಕು ಎಂದು ಎರಡೂ ಕಡೆಯವರು ಒಪ್ಪಿದ್ದಾರೆ. ಮಾರ್ಚ್ 2-3ರಂದು ಮುಂದಿನ ಮಾತುಕತೆ ನಡೆಯಬಹುದೆಂದು ಪ್ರಕಟಿಸಲಾಗಿದೆ. ಈ ಮಧ್ಯೆ ಯುದ್ಧವು ಸಾವಿನ ಸಂಖ್ಯೆಯನ್ನು ಹೆಚ್ಚಿಸುತ್ತಿರುವುದು ವಿಷಾದಕರ ಸಂಗತಿ.

ಶಾಂತಿ ಮತ್ತು ಸುರಕ್ಷತೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಡೆಯುವ ಮಾತುಕತೆಗಳು ಫಲದಾಯಕ ಪ್ರಗತಿ ಸಾಧಿಸುವುದನ್ನು ಖಾತ್ರಿಪಡಿಸಲು ಇದರಲ್ಲಿ ಒಳಗೊಂಡಿರುವ ಎಲ್ಲರೂ, ಬಹಳ ಮುಖ್ಯವಾಗಿ ಅಮೆರಿಕಾ ಹಾಗೂ ನ್ಯಾಟೋ ಈ ಮಾತುಕತೆಯಲ್ಲಿ ಒಳಗೊಳ್ಳಬೇಕಾಗಿರುವುದು ತೀರಾ ಅವಶ್ಯವಿದೆ.

ಭಾರತ ಸರ್ಕಾರ ಎಲ್ಲಾ ಭಾರತೀಯರನ್ನು ತ್ವರಿತವಾಗಿ ತೆರವುಗೊಳಿಸಬೇಕಾಗಿದೆ

21 ವರ್ಷದ ಭಾರತೀಯ ವಿದ್ಯಾರ್ಥಿ, ನವೀನ್ ಶೇಖರಪ್ಪ ಯುಕ್ರೇನಿನ ಖಾರ್ಕಿವ್‌ನಲ್ಲಿ ಬಾಂಬ್ ದಾಳಿಗೆ ತುತ್ತಾಗಿರುವುದು ನಿಜಕ್ಕೂ ದೊಡ್ಡ ದುರಂತವೇ ಸರಿ. ಭಾರತ ಸಾಮೂಹಿಕವಾಗಿ ತನ್ನ ಸಂತಾಪಗಳನ್ನು ಸಲ್ಲಿಸುತ್ತದೆ.

ಈ ಹಿಂದೆ ಇಂತಹದೇ ಪರಿಸ್ಥಿತಿಗಳಲ್ಲಿ ಗಲ್ಫ್ ಯುದ್ಧ, ಲಿಬ್ಯಾದ ಬಿಕ್ಕಟ್ಟು ಅಥವಾ ಇನ್ಯಾವುದೇ ಸಂದರ್ಭದಲ್ಲಿ ಹತ್ತಾರು ಸಾವಿರ ಭಾರತೀಯರನ್ನು ತಾಯ್ನಾಡಿಗೆ ಕರೆತಂದ ಹೆಮ್ಮೆಯ ದಾಖಲೆ ಭಾರತಕ್ಕಿದೆ.

ಭಾರತ ಸರ್ಕಾರವು ಯುದ್ಧೋಪಾದಿಯಲ್ಲಿ ಎಲ್ಲಾ ಭಾರತೀಯರನ್ನು ಕರೆತರಲು ಏಕಮನಸ್ಸಿನಿಂದ ತೊಡಗಬೇಕು.

ಅನು: ಟಿ.ಸುರೇಂದ್ರ ರಾವ್

Donate Janashakthi Media

Leave a Reply

Your email address will not be published. Required fields are marked *