ಬೆಂಗಳೂರು : ವಿಮಾನ ನಿಲ್ದಾಣಕ್ಕೆ ಬಂದ ನಂತರ ಸಚಿವರು ಪೋಸ್ ನೀಡುತ್ತಿದ್ದಾರೆ. ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆ ತರಲು ಕೇಂದ್ರ ಸರಕಾರ ಏನೂ ಮಾಡುತ್ತಿಲ್ಲ ಎಂದು ದೆಹಲಿಗೆ ಆಗಮಿಸಿದ ಕರ್ನಾಟಕದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಂಗೇರಿ ಬಾರ್ಡರ್ ಒಳಗಡೆ ಸಹಾಯ ಬೇಕಿದೆ ಆದರೆ ನಮಗೆ ಸಹಾಯ ಸಿಗುತ್ತಿಲ್ಲ. ಗಡಿಗೆ ಬಂದವರನ್ನು ಮಾತ್ರ ಕರೆತರಲಾಗುತ್ತಿದೆ. ಭಾರತೀಯರು ಇರುವ ಜಾಗದಿಂದ ಹಂಗೇರಿ ಗಡಿ ಸಾಕಷ್ಟು ದೂರ ಇದೆ. ಡಬಲ್ ದುಡ್ಡು ಕೊಟ್ಟು 700 ಕಿಲೋಮೀಟರ್ ಬಂದಿದ್ದೇವೆ. 1.50 ಲಕ್ಷ ಹಣ ಖರ್ಚು ಮಾಡಿ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ.
ಸರಕಾರ ಏನೂ ಮಾಡುತ್ತಿಲ್ಲ : ಒಳಗಡೆ ನಮಗೆ ಭಾರತ ಸರ್ಕಾರ ಹೆಲ್ಪ್ ಮಾಡುತ್ತಿಲ್ಲ. ನಮಗೆ ಬೇಕಾಗಿರೋದು ಬಾರ್ಡರ್ ಒಳಗಡೆ ಸಹಾಯ.ನಮ್ಮ ಎದುರಿಗೆ ಮಿಸೈಲ್ಗಳು ಸ್ಪೋಟವಾಗುತ್ತಿವೆ. ಬಾರ್ಡರ್ ಕ್ರಾಸ್ ಅದ ಮೇಲೆ ಸರ್ಕಾರ ಫ್ಲೈಟ್ ಬುಕ್ ಮಾಡಿದೆ ಅಷ್ಟೇ. ವಿದ್ಯಾರ್ಥಿಗಳಿಗೆ ಬೇಕಾಗಿರೋದು ಉಕ್ರೇನ್ ಒಳಗಡೆ ಸಹಾಯ. ಈ ಕೆಲಸ ಭಾರತ ಸರ್ಕಾರ ಮಾಡಬೇಕಿದೆ. ಕಿವ್ ಮತ್ತು ಖಾರ್ಕಿವ್ ನಗರಗಳಲ್ಲಿ ವಿದ್ಯಾರ್ಥಿಗಳ ಪರಿಸ್ಥಿತಿ ಘೋರವಾಗಿದೆ. ತುರ್ತಾಗಿ ವಿದ್ಯಾರ್ಥಿಗಳನ್ನ ಉಕ್ರೇನ್ ಪೂರ್ವಭಾಗದಿಂದ ಕರೆತರಬೇಕಿದೆ ಎಂದು ಭಾರತಕ್ಕೆ ವಾಪಸ್ಸಾದ ಕರ್ನಾಟಕ ಅನೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಉಕ್ರೇನ್ನಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿ ಸಾವು
ಕೇಂದ್ರ ಸರಕಾರ ಕೇವಲ ವಿಮಾನದ ವ್ಯವಸ್ಥೆ ಮಾಡುತ್ತಿದೆ. ಅದು ಬಾರ್ಡರ್ ಹತ್ತಿರ ಬರುವ ವಿದ್ಯಾರ್ಥಿಗಳನ್ನು ಕರೆ ತರುತ್ತಿದ್ದಾರೆ. ಬಾರ್ಡರ್ ಒಳಗೆ ಇರುವ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗುತ್ತಿಲ್ಲ. ಬಾರತಕ್ಕೆ ಬಂದೆ ಮೇಲೆ ನಮ್ಮ ಜೊತೆ ಫೋಟೊ ತೆಗೆದು ಮಾಧ್ಯಮಗಳಿಗೆ ಪೋಸ್ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿ ಜೀವನ್ ಆರೋಪಿಸಿದ್ದಾರೆ.
ಬಂಕರ್ ನಲ್ಲಿರುವ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಆಹಾರ ನೀರು ಇಲ್ಲದೆ ಪರದಾಡುತ್ತಿದ್ದಾರೆ. ಶೌಚಾಲಯದ ನೀರನ್ನ ಕುಡಿದು ಕಾಲ ಕಳೆದಿದ್ದೇವೆ. ನಮ್ಮನ್ನು ಕರೆ ತರಲು ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ನಾವೇ ರಿಸ್ಕ್ ತೊಗೊಂಡು ಹಂಗೇರಿ ತಲಪುತ್ತಿದ್ದೇವೆ ಎಂದು ವಿದ್ಯಾರ್ಥಿನಿ ಸಿನ್ಯಾ ತಿಳಿಸಿದ್ದಾರೆ.
ಈ ಮಧ್ಯೆ, ಖಾರ್ಕಿವ್ ನಲ್ಲಿ ಸಿಲುಕಿರುವ ಕೆಲ ಕರ್ನಾಟಕ ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ. ಉಕ್ರೇನ್ನಲ್ಲಿ ಸಿಲುಕಿರುವ 694 ಕರ್ನಾಟಕದ ವಿದ್ಯಾರ್ಥಿಗಳ ಪೈಕಿ 86 ಜನ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗಿದೆ.
ಕೇಂದ್ರ ಸರಕಾರ ” ಆಪರೇಷನ್ ಗಂಗಾ” ಹೆಸರಿನಲ್ಲಿ ಕಾರ್ಯಾಚರಣೆ ನಡೆಸುವುದಾಗಿ ಹೇಳುತ್ತಿದೆ. ಭಾರತೀಯರನ್ನು ಉಕ್ರೇನ್ ನಿಂದ ಸುರಕ್ಷಿತವಾಗಿ ಕರೆತರುವುದಾಗಿ ಹೇಳುತ್ತಿದೆ. ಈಗಾಗಲೆ ಇಬ್ಬರು ವಿದ್ಯಾರ್ಥಿಗಳು ಮೃತರಾಗಿದ್ದಾರೆ. ಸರಕಾರ ಕೇವಲ ಘೋಷಣೆ ಮಾಡಿ, ಮಾಧ್ಯಮದಲ್ಲಿ ಪ್ರಚಾರ ತೆಗೆದುಕೊಂಡರೆ ಸಾಲುವುದಿಲ್ಲ. ತುರ್ತಾಗಿ ಅವರನ್ನು ಭಾರತಕ್ಕೆ ಕರೆತರುವ ವ್ಯವಸ್ಥೆಯನ್ನು ಮಾಡಬೇಕಿದೆ.