ಬ್ರಿಟನ್ ಚುನಾವಣೆ; ಲೇಬರ್ ಪಾರ್ಟಿಗೆ ಗೆಲುವು, ಕೈರ್‌ ಸ್ಟಾರ್ಮರ್ ನೂತನ ಪ್ರಧಾನಿ

ಲಂಡನ್‌: ಬ್ರಿಟನ್‌ ಸಂಸತ್ತಿಗೆ (ಹೌಸ್‌ ಆಫ್‌ ಕಾಮನ್ಸ್‌) ನಡೆದ ಚುನಾವಣೆಯಲ್ಲಿ ಲೇಬರ್‌ ಪಕ್ಷವು ಭಾರಿ ಬಹುಮತ ಗಳಿಸಿದ್ದು, ಕೀರ್‌ ಸ್ಟಾರ್ಮರ್‌ ಅವರು ನೂತನ ಪ್ರಧಾನಿಯಾಗಿ ಶುಕ್ರವಾರ ಆಯ್ಕೆಯಾದರು. ರಿಷಿ ಸುನಕ್‌ ನೇತೃತ್ವದ ಕನ್ಸರ್ವೇಟಿವ್ ಪಾರ್ಟಿಗೆ ತನ್ನ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಎದುರಾಗಿದೆ.

ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಸಂಸತ್ತಿನ ಒಟ್ಟು 650 ಸ್ಥಾನಗಳಲ್ಲಿ 326 ಸ್ಥಾನಗಳನ್ನು ಗೆಲ್ಲುವ ಮೂಲಕ ಲೇಬರ್ ಪಾರ್ಟಿಯು ಬಹುಮತದ ಗಡಿಯನ್ನು ದಾಟುತ್ತಿದ್ದಂತೆಯೇ ರಿಷಿ ಸುನಕ್ ಸೋಲು ಒಪ್ಪಿಕೊಂಡಿರುವುದಾಗಿ ಘೋಷಿಸಿದರು.

ಪ್ರಧಾನಿ ರಿಷಿ ಸುನಕ್ ಅವರು ಶುಕ್ರವಾರ ಬೆಳಿಗ್ಗೆ ತಮ್ಮ ರಿಚ್ಮಂಡ್ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ಹೊಣೆಗಾರಿಕೆ ತಮ್ಮದು ಎಂದು ಹೇಳಿದ ರಿಷಿ ಸುನಕ್, ಜನಾದೇಶ ಬಹಳ ಗಂಭೀರವಾಗಿದೆ ಎಂದರು.

ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ತಮ್ಮ ಮೊದಲ ಭಾಷಣ ಮಾಡಿದ ಸ್ಟಾರ್ಮರ್‌, ದೇಶವನ್ನು ‘ಮರುನಿರ್ಮಾಣ’ ಮಾಡುವ ಪ್ರತಿಜ್ಞೆ ಕೈಗೊಂಡರು. ‌‘ನೀವು ನಮಗೆ ಸ್ಪಷ್ಟ ಬಹುಮತ ನೀಡಿದ್ದೀರಿ. ನಮ್ಮ ದೇಶವನ್ನು ಒಗ್ಗೂಡಿಸಲು ಮತ್ತು ಬದಲಾವಣೆಯನ್ನು ತರಲು ಈ ಅವಕಾಶವನ್ನು ಬಳಸಿಕೊಳ್ಳುತ್ತೇವೆ’ ಎಂದು ಹೇಳಿದರು. ಸ್ಟಾರ್ಮರ್‌ ಅವರು ಲಂಡನ್‌ನ ಹೋಬನ್‌ ಆ್ಯಂಡ್ ಸೇಂಟ್ ಪ್ಯಾಂಕ್ರಸ್‌ ಕ್ಷೇತ್ರದಿಂದ 18,884 ಮತಗಳಿಂದ ಗೆದ್ದರು.

14 ವರ್ಷಗಳ ಬಳಿಕ ಗೆಲುವು ದಾಖಲಿಸಿದ ಲೇಬರ್ ಪಾರ್ಟಿ

ಕೈರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿಯು ಕನಿಷ್ಠ 326 ಸ್ಥಾನಗಳನ್ನು ಗಳಿಸಿದೆ. ಸಂಸತ್ತಿನಲ್ಲಿ ಸ್ಪಷ್ಟ ಬಹುಮತಪಡೆದಿರುವ ಕಾರಣ ಸರ್ಕಾರ ರಚನೆಯ ಹಾದಿ ಸುಲಭವಾಗಿದೆ. ಈ ಗೆಲುವಿನೊಂದಿಗೆ ಪಕ್ಷವು 14 ವರ್ಷಗಳ ನಂತರ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದೆ. ಕನ್ಸರ್ವೇಟಿವ್ ಪಕ್ಷ ಇನ್ನು ವಿಪಕ್ಷ ಸ್ಥಾನದಲ್ಲಿ ಕೂರಬೇಕಿದೆ.

ಕೈರ್ ಸ್ಟಾರ್ಮರ್ ಬಹುಮತದ ಸರ್ಕಾರವನ್ನು ರಚಿಸುವ ಮೂಲಕ ಬ್ರಿಟನ್‌ನ ಮುಂದಿನ ಪ್ರಧಾನಿಯಾಗಲು ಸಜ್ಜಾಗಿದ್ದಾರೆ. ಲಂಡನ್‌ನಲ್ಲಿ ವಿಜಯೋತ್ಸವ ಭಾಷಣ ಮಾಡುವಾಗ, ಸ್ಟಾರ್ಮರ್, “ನಾವು ವಿಜಯ ಸಾಧಿಸಿದೆವು. ಬದಲಾವಣೆ ಈಗ ಪ್ರಾರಂಭವಾಗುತ್ತದೆ” ಎಂದು ಘೋ‍ಷಿಸಿದರು.

Donate Janashakthi Media

Leave a Reply

Your email address will not be published. Required fields are marked *