UGC ಕರಡು ನಿಯಮ ಪ್ರಕಟ ; ಕುಲಪತಿ ಹುದ್ದೆಗೆ ನೇರ ನೇಮಕ!

ನವದೆಹಲಿ :ಮಹತ್ವದ ಬೆಳವಣಿಗೆಯೊಂದರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಕರಡು ನಿಯಮಾವಳಿಗಳನ್ನು ಸಿದ್ದಪಡಿಸಿದೆ.

“ಈ ಕರಡು ಸುಧಾರಣೆಗಳು ಮತ್ತು ಮಾರ್ಗಸೂಚಿಗಳು ಉನ್ನತ ಶಿಕ್ಷಣದ ಪ್ರತಿಯೊಂದು ಅಂಶಗಳಲ್ಲಿ ನಾವೀನ್ಯತೆ, ಒಳಗೊಳ್ಳುವಿಕೆ, ನಮ್ಯತೆ ಮತ್ತು ಕ್ರಿಯಾಶೀಲತೆಯನ್ನು ತುಂಬುತ್ತವೆ. ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿಯನ್ನು ಸಬಲೀಕರಣಗೊಳಿಸುತ್ತವೆ, ಶೈಕ್ಷಣಿಕ ಗುಣಮಟ್ಟವನ್ನು ಬಲಪಡಿಸುತ್ತವೆ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಲು ದಾರಿ ಮಾಡಿಕೊಡುತ್ತವೆ” ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ , ಕರಡು ಬಿಡುಗಡೆಯ ಸಂದರ್ಭದಲ್ಲಿ ಹೇಳಿದರು.

ಯುಜಿಸಿ ಪ್ರಸ್ತಾವದ ಪ್ರಕಾರ ಕುಲಪತಿ ಹುದ್ದೆಗೆ ನೇರ ನೇಮಕ ನಡೆಯಲಿದೆ. ಉದ್ಯಮ ರಂಗದ ಪರಿಣತರು, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆಯಲ್ಲಿ ಕೆಲಸ ಮಾಡಿದವರು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ವಿಶ್ವವಿದ್ಯಾಲಯಗಳ ಕುಲಪತಿಗಳಾಗುವ ಅರ್ಹತೆ ಶೀಘ್ರದಲ್ಲಿ ದೊರಕಲಿದೆ. ಇದಕ್ಕಾಗಿ, ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಹೊಸ ನಿಯಮಗಳ ಕರಡನ್ನು ರೂಪಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕುಲಪತಿ ಜೊತೆಯಲ್ಲಿ, ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಗಾಗಿ ಅರ್ಹತಾ ಮಾನದಂಡಗಳನ್ನು ಪರಿಷ್ಕರಿಸಲು ಮುಂದಾಗಿದೆ. ಹೊಸ ನಿಯಮಗಳ ಪ್ರಕಾರ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮತ್ತು ಬಡ್ತಿ ಪಡೆಯಲು ಇನ್ನು ಮುಂದೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಯನ್ನು ಉತ್ತೀರ್ಣಗಾರಬೇಕಾದ್ದು ಕಡ್ಡಾಯವಲ್ಲ. ಪ್ರಾಧ್ಯಾಪಕರ ನೇಮಕಾತಿ ಮತ್ತು ಬಡ್ತಿಗಳಿಗೆ ಸಂಬಂಧಿಸಿ ನಿಯಮದಲ್ಲಿ ನಮ್ಯತೆ ಮತ್ತು ಒಳಗೊಳ್ಳುವಿಕೆಯನ್ನು ತರುವ ಉದ್ದೇಶದಿಂದ ಈ ಕರಡು ನಿಯಮಾವಳಿಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಸ್ಪರ್ಧೆ: ಭಾರತದ ಐದು ಸಿನಿಮಾಗಳು ಆಯ್ಕೆ

ಪ್ರಾಧ್ಯಾಪಕರು ಅತ್ಯುನ್ನತ ಶಿಕ್ಷಣ ಪಡೆದ ವಿಷಯದಲ್ಲಿ ಮಾತ್ರ ಬೋಧನೆ ಮಾಡಲು ಅವಕಾಶ ಕಲ್ಪಿಸುವುದಕ್ಕಾಗಿಯೂ ನಿಯಮಗಳಲ್ಲಿ ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ. ಉದಾಹರಣೆಗೆ ಒಬ್ಬ ಪ್ರಾಧ್ಯಾಪಕರು ರಾಸಾಯನಿಕ ವಿಜ್ಞಾನದಲ್ಲಿ ಪಿಎಚ್‌ಡಿ, ಗಣಿತಶಾಸ್ತ್ರದಲ್ಲಿ ಪದವಿ ಮತ್ತು ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ, ರಾಸಾಯನಿಕ ವಿಜ್ಞಾನ ವಿಷಯವನ್ನು ಬೋಧಿಸಲು ಮಾತ್ರ ಅವರಿಗೆ ಅವಕಾಶ ಇರುತ್ತದೆ.

ಹಾಗೆಯೇ, ತಮ್ಮ ಸ್ನಾತಕೋತ್ತರ ಪದವಿ ಅಲ್ಲದೆ ಬೇರೊಂದು ವಿಷಯದಲ್ಲಿ ಎನ್‌ಇಟಿ ಅರ್ಹತೆ ಪಡೆದವರು ಆ ವಿಷಯವನ್ನು ಬೋಧನೆ ಮಾಡಬಹುದು ಎಂಬ ನಿಯಮವನ್ನೂ ರೂಪಿಸಲಾಗಿದೆ.

ಬಹುಶಿಸ್ತೀಯ ಹಿನ್ನೆಲೆಯನ್ನು ಹೊಂದಿರುವವರನ್ನು ಬೋಧನಾ ಸಿಬ್ಬಂದಿಯಾಗಿ ನೇಮಕ ಮಾಡುವುದಕ್ಕೆ ಕೂಡ ಹೊಸ ಕರಡು ಅವಕಾಶ ಮಾಡಿಕೊಡುತ್ತದೆ. ಶಿಕ್ಷಣದ ವ್ಯಾಪ್ತಿ ಮತ್ತು ಸ್ವಾತಂತ್ರ್ಯವನ್ನು ವಿಸ್ತರಿಸುವುದು ಹಾಗೂ ಬೋಧನೆಯ ಕುರಿತು ಅಮಿತವಾದ ಉತ್ಸಾಹ ಹೊಂದಿರುವವರನ್ನು ಬೋಧನಾ ಸಿಬ್ಬಂದಿಯಾಗಿ ನೇಮಿಸಲು ಅವಕಾಶ ಕಲ್ಪಿಸುವುದು ಈ ಬದಲಾವಣೆಗಳ ಪ್ರಾಥಮಿಕ ಉದ್ದೇಶ ಎಂದು ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌ ಹೇಳಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *