ಧಾರವಾಡ: ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ, ಉಗಾಂಡ ದೇಶದ ವಿದ್ಯಾರ್ಥಿಯೊಬ್ಬ ಹೇಳದೇ ಕೇಳದೇ ಎಲ್ಲೋ ಹೋಗಿ ಬಿಟ್ಟಿದ್ದಾನೆ. ಈಗ ಆತನಿಗಾಗಿ ಕರ್ನಾಟಕ ವಿವಿ ಆಡಳಿತ ಮಂಡಳಿ ಶೋಧ ನಡೆಸುತ್ತಿದೆ.
ವಿಶ್ವವಿದ್ಯಾಲಯದ ಭೀಮಾ ವಸತಿ ನಿಲಯದಲ್ಲಿದ್ದ ಉಗಾಂಡಾದ ಜೋಯೆಲ್ ಕನ್ಯನಾ ಎಂಬ ವಿದ್ಯಾರ್ಥಿ ಸಂಶೋಧನಾ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸ ಮಾಡುತ್ತಿದ್ದ. ತತ್ವಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಮಾಡುತ್ತಿದ್ದ ಈತ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಾಪತ್ತೆಯಾಗಿದ್ದು, ಆತನ ಶೋಧ ಕಾರ್ಯಕ್ಕೆ ಕರ್ನಾಟಕ ವಿವಿ ಆಡಳಿತ ಮಂಡಳಿ ಉಗಾಂಡ ಸರ್ಕಾರಕ್ಕೂ ಪತ್ರ ಬರೆದಿದೆ. ಅಲ್ಲದೇ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿದೆ.
ಕವಿವಿಯ ಭೀಮಾ ವಸತಿ ನಿಲಯದಲ್ಲಿದ್ದ ಈ ಜೋಯೆಲ್, ಲಾಕ್‍ಡೌನ್ ಅವಧಿಯಲ್ಲೂ ವಸತಿ ನಿಲಯದಲ್ಲಿದ್ದುಕೊಂಡೇ ಓದುತ್ತಿದ್ದ. ಆದರೆ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ತನ್ನ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿರುವ ಈತ ಮರಳಿ ಬಂದೇ ಇಲ್ಲ. ಪಿಎಚ್.ಡಿ ಕುರಿತು ಮಾರ್ಗದರ್ಶನ ನೀಡುತ್ತಿದ್ದ ಶಿಕ್ಷಕರಿಗೂ ಈತ ಭೇಟಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೇನಲ್ಲಿ ತನಿಖೆ ನಡೆಸಿದಾಗ ಅವರು ನಾಪತ್ತೆ ಆಗಿರುವುದು ತಿಳಿಸಿದೆ. ಹೀಗಾಗಿ ಜುಲೈನಲ್ಲಿ ಆತನ ಪತ್ತೆಗಾಗಿ ಉಗಾಂಡ ಸರ್ಕಾರ ಹಾಗೂ ಹುಬ್ಬಳ್ಳಿ, ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ. ಇದೀಗ ಉಂಗಾಂಡ ಹೈಕಮಿಷನರ್‌ಗೂ ದೂರು ನೀಡಲಾಗಿದೆ.
ತತ್ವಶಾಸ್ತ್ರ ವಿಷಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಜೋಯೆಲ್, ಭೀಮಾ ವಸತಿ ನಿಲಯದ 6ನೇ ನಂಬರ್ ಕೊಠಡಿಯಲ್ಲಿ ಉಳಿದುಕೊಂಡಿದ್ದ. ತಾನು ಹಾಸ್ಟೆಲ್ ಬಿಟ್ಟು ಹೋಗುವಾಗ ತನ್ನ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿದ್ದು, ಬೀಗ ಕೈಯನ್ನೂ ತನ್ನ ಜೊತೆಗೆ ತೆಗೆದುಕೊಂಡು ಹೋಗಿದ್ದಾನೆ. ಆತ ಹೋದಾಗಿನಿಂದ ಯಾರೂ ಕೂಡ ಆ ಕೊಠಡಿಯ ಬೀಗ ತೆಗೆದು ನೋಡಿಲ್ಲ. ಇನ್ನು ಇಲ್ಲಿ ಇದ್ದಾಗ ಈ ವಿದ್ಯಾರ್ಥಿಯ ಪಾಸ್‍ಪೋರ್ಟ್ ವೀಸಾ ಕೂಡಾ ಮುಗಿದಿತ್ತು. ಹೀಗಾಗಿ ಅವನಿಗೆ ವೀಸಾ ಅವಧಿ ವಿಸ್ತರಣೆ ಮಾಡಿಕೊಳ್ಳಲು ಮಾಹಿತಿ ನೀಡಲಾಗಿತ್ತು. ಅಷ್ಟರಲ್ಲೇ ಈತ ವೀಸಾ ವಿಸ್ತರಣೆ ಮಾಡದೇ ಹೇಳದೇ ಕೇಳದೇ ಹೋಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.