ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೈಗಾರಿಕೆಗಳನ್ನು ಪ್ರಾರಂಭಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನಾ ಧರಣಿ ನಡೆಸಿದರು.
ಸರಕಾರಗಳ ಯುವಜನ ವಿರೋಧಿ ನೀತಿಗಳ ವೈಫಲ್ಯಗಳಿಂದಾಗಿ ನಿರುದ್ಯೋಗದ ಪ್ರಮಾಣ ಸ್ವಾತಂತ್ರ ಭಾರತದಲ್ಲಿ ಎಂದೂ ಕಂಡರಿಯದ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಇದರಿಂದ ತಮ್ಮ ಅರ್ಹತೆಗೆ ಯೋಗ್ಯವಾದ ಉದ್ಯೋಗ, ಬದುಕಿನ ಭದ್ರತೆಗೆ ಬೇಕಾದ ಆದಾಯ ಇಲ್ಲದೆ ಯುವಜನತೆ ಹತಾಶರಾಗುತ್ತಿದ್ದಾರೆ ಈ ಹಿನ್ನಲೆಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಸಂಘಟನೆ ನೇತೃತ್ವದಲ್ಲಿ ʻಉದ್ಯೋಗ ಸೃಷ್ಟಿಸಿ-ಸ್ಥಳೀಯರಿಗೆ ಆದ್ಯತೆ ಒದಗಿಸಿʼ ಎಂಬ ಘೋಷಣೆಯ ಅಡಿಯಲ್ಲಿ ಉದ್ಯೋಗ ಸೃಷ್ಟಿ ಹಾಗೂ ಸರೋಜಿನಿ ಮಹಿಷಿ ವರದಿಯ ಜಾರಿಗೊಳಿಸಲು ಒತ್ತಾಯಿಸಿದರು ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು.
ಕರ್ನಾಟಕ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು ಎರಡು ಲಕ್ಷದ ಎಪ್ಪತ್ತು ಸಾವಿರ ಉದ್ಯೋಗಗಳು ಭರ್ತಿಯಾಗದೆ ಖಾಲಿ ಬಿದ್ದಿವೆ. ಖಾಸಗಿ ಉದ್ಯಮಗಳು ಕಾರ್ಮಿಕರನ್ನು ಬಳಸಿ ಬಿಸಾಕುವ ನೀತಿಗಳು ಅನುಸರಿಸುತ್ತಿವೆ. ಗುತ್ತಿಗೆ ಪದ್ದತಿಗಳು ಜೀತಪದ್ದತಿಯ ಹೊಸ ರೂಪದಂತೆ ಮಾರ್ಪಾಡಾಗಿದ್ದು ಜೀವನ ನಿರ್ವಹಣೆಗೆ ಬೇಕಾದ ವೇತನ, ಉದ್ಯೋಗ ಭದ್ರತೆ ಇಲ್ಲದೆ ಅಮಾನವೀಯ ದುಡಿಮೆಗೆ ಸಾಕ್ಷಿಯಾಗಿದೆ. ಸಣ್ಣ ಉದ್ಯಮಗಳು ಸರಕಾರದ ನೀತಿಗಳಿಂದ ಮುಚ್ಚಲ್ಪಡುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸಬಲ್ಲ ಉದ್ಯಮ, ಕೈಗಾರಿಕೆಗಳ ಸ್ಥಾಪನೆಯ ಕಣ್ಣೋಟ ಸರಕಾರಗಳಲ್ಲಿ ಇಲ್ಲವಾಗಿವೆ ಎಂದರು.
ರಾಜ್ಯದ ಕೈಗಾರಿಕಾ ಕೇಂದ್ರಗಳಲ್ಲಿ ನೇಮಕಾತಿಯ ಸಂದರ್ಭ ಸ್ಥಳೀಯರನ್ನು ಪೂರ್ಣವಾಗಿ ಕಡೆಗಣಿಸಿ ಹೊರಗಿನವರಿಗೆ ಮಣಿಹಾಕಲಾಗುತ್ತಿದೆ. ಕೈಗಾರಿಕೆಗಳಲ್ಲಿನ ಉದ್ಯೋಗಗಳಲ್ಲಿ ಹೊರಗಿನವರೇ ಹೆಚ್ಚಾಗಿರುವುದು ಕಾಣಬಹುದು.
ಇದೆಲ್ಲದರಿಂದ ಯುವಜನರು ಕಂಗಾಲಾಗುತ್ತಿದ್ದು, ತಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗ, ಜೀವನ ಭದ್ರತೆಗೆ ಜೀವಮಾನ ಪೂರ್ತಿ ಕಾಯುವ, ಬೀದಿಗೆ ಬೀಳುವ ಸ್ಥಿತಿ ನಿರ್ಮಾಣಗೊಂಡಿದೆ. ಶಿಕ್ಷಣ ಸಂಸ್ಥೆಗಳಿಂದ ಪದವಿಗಳನ್ನು ಹಿಡಿದು ಹೊರ ಬರುವ ಪರಿಣಿತ ಯುವ ಜನರು ತಮ್ಮ ಪದವಿಗೆ ಯೋಗ್ಯವಾದ ಉದ್ಯೋಗ ಇಲ್ಲದೆ ನರಳುತ್ತಿದ್ದಾರೆ. ಆದ್ದರಿಂದ ಉದ್ಯೋಗದ ಸೃಷ್ಟಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ, ಕೋಲಾರ, ಬಳ್ಳಾರಿ, ಹಾಸನ, ಕೊಪ್ಪಳ, ಹಾವೇರಿ, ತುಮಕೂರು, ಮಂಡ್ಯ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನಾ ಧರಣಿ ನಡೆದಿವೆ.