- ಈಗಾಗಲೇ ಈ ಕಾಯ್ದೆಯಿಂದ ಪ್ರಯೋಜನ ಪಡೆದವರಿಗೆ ಯಾವುದೇ ತೊಂದರೆ ಇಲ್ಲ
ನವದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠಿಗರಿಗೆ ಮೀಸಲಾತಿ ನೀಡುವ ಸಂಬಂಧ ಮಹಾರಾಷ್ಟ್ರ ಸರ್ಕಾರ ರೂಪಿಸಿದ್ದ ಕಾಯ್ದೆಗೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ. ಆದರೆ, ಈಗಾಗಲೇ ಈ ಕಾಯ್ದೆಯಿಂದ ಪ್ರಯೋಜನ ಪಡೆದವರಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
2018ರ ಕಾಯ್ದೆ ಪ್ರಶ್ನಿಸಿ ಹಲವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಲ್.ಎನ್ ರಾವ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ವಿಚಾರಣೆ ನಡೆಸಿತು.
ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕಾಯ್ದೆ 2018ರ ಮೂಲಕ ಮರಾಠ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಮೀಸಲಾತಿ ಪ್ರಮಾಣವನ್ನು ಶಿಕ್ಷಣದಲ್ಲಿ ಶೇ 13 ಮತ್ತು ಉದ್ಯೋಗದಲ್ಲಿ ಶೇ 12ಕ್ಕೆ ಇಳಿಸಲು ಹೈಕೋರ್ಟ್ ಸೂಚಿಸಿತ್ತು.
ಮಹಾರಾಷ್ಟ್ರದ ಕಾಯ್ದೆಯು ಮರಾಠಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರಮವಾಗಿ ಶೇ 12 ಮತ್ತು 13ರಷ್ಟು ಮೀಸಲಾತಿ ಕಲ್ಪಿಸಲಿದೆ. ಇದು, ಮೀಸಲಾತಿಯ ಒಟ್ಟು ಪ್ರಮಾಣ ಶೇ 50 ಮೀರಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.