ಚಿಕ್ಕಬಳ್ಳಾಪುರ: ಬಾಗೇಪಲ್ಲಿ-ಬೆಂಗಳೂರು ಹೆದ್ದಾರಿಯಲ್ಲಿರುವ ಗಂಗೋತ್ರಿ ಪೆಟ್ರೋಲಿಯಂ ಬಂಕ್‌ಗೆ ಸಾವಿರಾರು ಜನ ಮುತ್ತಿಗೆ ಹಾಕಿ ಉಚಿತ ಪೆಟ್ರೋಲ್ ಕೊಡ್ತೀರಾ ಇಲ್ವಾ ಅಂತ ಗಲಾಟೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಆರೋಗ್ಯ ಸಚಿವ ಡಾ. ಸುಧಾಕರ್ ಕೆ ನೇತೃತ್ವದಲ್ಲಿ ಬಾಗೇಪಲ್ಲಿ ಪಟ್ಟಣದಲ್ಲಿ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಮುಂದಿನ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಸಿ. ಮುನಿರಾಜು ಆಯೋಜನೆ ಮಾಡಿದ್ದರು.
ಕಾರ್ಯಕ್ರಮಕ್ಕೆ ವಿಶಿಷ್ಟ ರೀತಿಯಲ್ಲಿ ಪ್ರಚಾರ ಮಾಡಿ, ತಿರಂಗಾ ಯಾತ್ರೆಗೆ ಬಂದ ದ್ವಿಚಕ್ರ ವಾಹನ ಸವಾರರಿಗೆ ಉಚಿತ ಪೆಟ್ರೋಲ್ ಹಾಗೂ ಹೆಲ್ಮೆಟ್ ಕೊಡ್ತೀವಿ ಅಂತ ಬಿಜೆಪಿ ಮುಖಂಡರು ಬಹಿರಂಗಪಡಿಸಿ, ಕೂಪನ್‌ಗಳನ್ನು ವಿತರಿಸಿದ್ದರು. ಆದರೆ, ದ್ವಿಚಕ್ರ ವಾಹನ ಸವಾರರು ಉಚಿತ ಪೆಟ್ರೋಲ್ ಹಾಕ್ತಿಲ್ಲ ಅಂತ ಪೆಟ್ರೋಲ್ ಬಂಕ್‌ನಲ್ಲಿ ಗಲಾಟೆ ಮಾಡಿದ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ.
ಹಳ್ಳಿ ಹಳ್ಳಿಗಳಿಂದ ತಿರಂಗಾ ಯಾತ್ರೆಗೆ ಬರುವವರಿಗೆ ಮೊದಲೇ ಸುಧಾಕರ್ ಹಾಗೂ ಮುನಿರಾಜು ಭಾವಚಿತ್ರವಿರುವ ಕೂಪನ್ ಸ್ಟಿಕ್ಕರ್‌ಗಳನ್ನು ನೀಡಲಾಗಿತ್ತು. ಅದನ್ನು ತೋರಿಸಿ ಮೊದಲೇ ನಿಗದಿ ಮಾಡಿದ್ದ ಗಂಗೋತ್ರಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಬೇಕಾಗಿತ್ತು. ಜನರೂ ಸಹ ಬೆಳಗ್ಗೆಯಿಂದಲೇ ಬಂಕ್‌ಗೆ ಆಗಮಿಸಿ ಉಚಿತ ಪೆಟ್ರೋಲ್ ಪಡೆದಿದ್ದಾರೆ. ಆದರೆ ತಿರಂಗ ಯಾತ್ರೆಯಲ್ಲಿ ಭಾಗವಹಿಸಲಿಲ್ಲ! ಪೆಟ್ರೋಲ್ ಹಾಕಿಸಿಕೊಂಡು ಮನೆ ಕಡೆ ಹೊರಟಿದ್ದಾರಂತೆ.
ಇದರಿಂದ ವಿಚಲಿತರಾದ ಆಯೋಜಕರು ಮತ್ತು ಪೆಟ್ರೋಲ್ ಬಂಕ್ ಮಾಲೀಕರು, ದಿಢೀರ್ ಎಂದು ಉಚಿತ ಪೆಟ್ರೋಲ್ ಹಾಕುವುದನ್ನು ಸ್ಥಗಿತ ಮಾಡಿದರು. ಇದರಿಂದ ಆಕ್ರೋಶಗೊಂಡ ದ್ವಿಚಕ್ರ ಸವಾರರು ಗಲಾಟೆ ಮಾಡಿದ್ದಾರೆ. ನೂರಾರು ಮಂದಿ ಗಂಟೆಗಟ್ಟಲೆ ಗಲಾಟೆ ಮಾಡಿದರೂ ಉಚಿತ ಪೆಟ್ರೋಲ್ ಹಾಕಿಲ್ಲ. ಕಾರ್ಯಕ್ರಮ ಮುಕ್ತಾಯವಾಗಿದ್ದು ಇನ್ನು ಪೆಟ್ರೋಲ್ ಹಾಕಲು ಆಗುವುದಿಲ್ಲ ಎಂದು ಬಂಕ್ ಮಾಲೀಕರು ಹೇಳಿದ್ದಾರೆ.
ಕಾರ್ಯಕ್ರಮ ಮುಗಿದ ಬಳಿಕ ಸಚಿವ ಸುಧಾಕರ್ ಮೂಲಕ ಕೆಲವರಿಗೆ ಸಾಂಕೇತಿಕವಾಗಿ ಹೆಲ್ಮೆಟ್ ವಿತರಣೆ ಮಾಡಿರುವುದು ವರದಿಯಾಗಿದೆ.