ಯುಸಿಸಿ: ಆದಿವಾಸಿಗಳಿಗೆ ವಿನಾಯಿತಿ ನೀಡುವಂತೆ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಸಲಹೆ

ನವದೆಹಲಿ: ಉದ್ದೇಶಿತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯಿಂದ ಈಶಾನ್ಯ ಭಾರತದ ಮತ್ತು ದೇಶದ ಇತರ ಭಾಗಗಳಲ್ಲಿನ ಬುಡಕಟ್ಟು ಸಮುದಾಯವನ್ನು ದೂರ ಇಡಬೇಕು ಎಂದು ಬಿಜೆಪಿ ಸಂಸದ ಮತ್ತು ಕಾನೂನು – ನ್ಯಾಯ ಸಂಸದೀಯ ಸಮಿತಿಯ ಅಧ್ಯಕ್ಷ ಸುಶೀಲ್ ಕುಮಾರ್ ಮೋದಿ ಸೋಮವಾರ ಆಗ್ರಹಿಸಿದ್ದಾರೆ. ಯುಸಿಸಿ ವಿರುದ್ಧ ಪ್ರತಿಪಕ್ಷದ ನಾಯಕರು ಮತ್ತು ಕೆಲವು ಬಿಜೆಪಿ ರಾಜಕಾರಣಿಗಳು ಈಗಾಗಲೆ ಟೀಕೆ ವ್ಯಕ್ತಪಡಿಸಿದ್ದಾರೆ.

371 ನೇ ವಿಧಿಯ ನಿಬಂಧನೆಗಳ ಅಡಿಯಲ್ಲಿ ಆಡಳಿತಕ್ಕೊಳಪಡುವ ಈಶಾನ್ಯ ಭಾರತ ಬುಡಕಟ್ಟು ಪ್ರದೇಶಗಳಿಗೆ ಮತ್ತು ಪರಿಶಿಷ್ಟ ಪಂಗಡದಡಿ ಬರುವ ಬುಡಕಟ್ಟುಗಳಿಗೆ ಕಾನೂನಿನಿಂದ ವಿನಾಯಿತಿ ನೀಡಬೇಕು ಎಂದು ಯುಸಿಸಿ ಸಮಿತಿ ಸಭೆಯಲ್ಲಿ ಸುಶಿಲ್ ಮೋದಿ ಪ್ರಸ್ತಾಪಿಸಿದ್ದಾರೆ.

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಯುಸಿಸಿ ಅನುಷ್ಠಾನದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಇದಾಗಿ ಒಂದು ವಾರದಲ್ಲಿ ಸುಶಿಲ್ ಮೋದಿ ಹೇಳಿಕೆ ಹೊರಬಿದ್ದಿದೆ. “ರಾಜ್ಯದ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ವಜಾಗೊಳಿಸಿ ಹೊಸ ನಿಯಮವನ್ನು ಅನುಸರಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ” ಎಂದು ಸಂಗ್ಮಾ ಹೇಳಿದ್ದರು.

ಇದನ್ನೂ ಓದಿ: ಲವ್‍-ಜಿಹಾದ್ ಫರ್ಮಾನಿನಿಂದ ಭಜರಂಗ್ ಬಲಿ-ರೋಡ್‍ ಶೋ ವರೆಗೆ

ಯುಸಿಸಿ ಕುರಿತು ಕಾನೂನು ವ್ಯವಹಾರಗಳ ಇಲಾಖೆ, ಶಾಸಕಾಂಗ ಇಲಾಖೆ ಮತ್ತು ಭಾರತದ ಕಾನೂನು ಆಯೋಗದ ಅಭಿಪ್ರಾಯಗಳನ್ನು ಕೇಳಲು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಸ್ಥಾಯಿ ಸಮಿತಿಯ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ ವಿರೋಧ ಪಕ್ಷದ ಸಂಸದರು ರಾಜ್ಯಗಳ ಶಾಸಕಾಂಗ ಅಧಿಕಾರದ ಬಗ್ಗೆ ಕಾಳಜಿಯನ್ನು ಒತ್ತಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಡಿಎಂಕೆ ಸಂಸದ ಪಿ. ವಿಲ್ಸನ್, ಯುಸಿಸಿಯನ್ನು ಜಾರಿಗೆ ತರುವುದರಿಂದ ರಾಷ್ಟ್ರದ ವೈವಿಧ್ಯತೆಯನ್ನು ನಾಶಪಡಿಸುತ್ತದೆ ಎಂದು ವಾದಿಸಿದ್ದಾರೆ. “ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಆಸ್ತಿ ಹಕ್ಕುಗಳಂತಹ ವಿಷಯಗಳು ಸಂವಿಧಾನದ ಸಮಕಾಲೀನ ಪಟ್ಟಿಯ ಅಡಿಯಲ್ಲಿ ಬರುತ್ತವೆ. ಇದು ಈ ವಿಷಯಗಳ ಮೇಲೆ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಶಾಸನ ಮಾಡಲು ಅವಕಾಶ ನೀಡುತ್ತದೆ. ಸಂವಿಧಾನದ 44 ನೇ ವಿಧಿಯು ಭಾರತದಾದ್ಯಂತ ಎಲ್ಲಾ ನಾಗರಿಕರಿಗೆ ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆಯನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಹೊಂದಿರುವುದಿಲ್ಲ ಎಂದು ಸೂಚಿಸುತ್ತದೆ” ಎಂದು ಹೇಳಿದ್ದಾರೆ.

ಸಭೆಯಲ್ಲಿ, ಕಾನೂನು ವ್ಯವಹಾರಗಳ ಇಲಾಖೆ, ಶಾಸಕಾಂಗ ಇಲಾಖೆ ಮತ್ತು ಭಾರತೀಯ ಕಾನೂನು ಆಯೋಗದ ಅಧಿಕಾರಿಗಳು ಯುಸಿಸಿಗೆ ಸಂಬಂಧಿಸಿದಂತೆ ಇದುವರೆಗೆ 19 ಲಕ್ಷ ಸಲಹೆಗಳನ್ನು ಸ್ವೀಕರಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಶಿವಸೇನೆ ಮತ್ತು ಡಿಎಂಕೆಯಂತಹ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಇದ್ದರು.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಪರವಾಗಿ ಬ್ಯಾಟ್ ಬೀಸಿ, ಚರ್ಚೆಗೆ ನಾಂದಿ ಹಾಡಿದ ಪ್ರಧಾನಿ!

BSP ಯುಸಿಸಿಯ ಕಲ್ಪನೆಯನ್ನು ಬೆಂಬಲಿಸುತ್ತಿದೆಯಾದರೂ, ಮುಸ್ಲಿಮರು ಮತ್ತು ಆದಿವಾಸಿಗಳು ಸೇರಿದಂತೆ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಮತ್ತು ಅವಸರದಲ್ಲಿ ಅನುಷ್ಠಾನ ಮಾಡದಂತೆ ಸರ್ಕಾರಕ್ಕೆ ಅದು ಒತ್ತಿಹೇಳಿದೆ. ಶಿವಸೇನೆ ಕೂಡಾ ಯುಸಿಸಿಯನ್ನು ಬೆಂಬಲಿಸುತ್ತದೆ, ಆದರೆ ಉದ್ಧವ್ ಠಾಕ್ರೆ ನೇತೃತ್ವದ ಬಣವು ಚುನಾವಣೆ ಹಿನ್ನಲೆಯಲ್ಲಿ ಯುಸಿಸಿ ಜಾರಿ ಮಾಡದಂತೆ ಎಚ್ಚರಿಕೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *