ಬೆಂಗಳೂರು : ಬಿಜೆಪಿ ಮಾಜಿ ಶಾಸಕ ಯು.ಬಿ. ಬಣಕಾರ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಸಚಿವ ಬಿ.ಸಿ.ಪಾಟೀಲ್ ಕಿರುಕುಳಕ್ಕೆ ಬೇಸಿತ್ತು ರಾಜೀನಾಮೆ ನೀಡಿದ್ದ ಬಣಕಾರ್ ಕಾಂಗ್ರೆಸ್ ಸೇರುವ ಮೂಲಕ ಹಿರೇಕೆರೂರು ವಿಧಾನಸಭಾ ಕ್ಷೇತ್ರ ಈಗ ವಿಶೇಷ ರಂಗನ್ನು ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿರುವ ಹಾವೇರಿ ರಾಜಕೀಯವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ಚುನಾವಣೆಗೆ ಸಿದ್ಧವಾಗುತ್ತಿರುವ ಬಿಜೆಪಿಗೆ ಪ್ರಮುಖ ನಾಯಕರು ಪಕ್ಷ ಬಿಡುತ್ತಿರುವುದು ಬಿಸಿತುಪ್ಪವಾಗಿದೆ.
ಹಿರೇಕೆರೂರು ಕ್ಷೇತ್ರದಲ್ಲಿ ಪಕ್ಷ, ಚಿಹ್ನೆಗಿಂತ ಬಿ.ಸಿ.ಪಾಟೀಲ ಮತ್ತು ಯು.ಬಿ.ಬಣಕಾರರ ವೈಯಕ್ತಿಕ ವರ್ಚಿಸ್ಸಿನ ಮೇಲೆಯೇ ಚುನಾವಣೆ ನಡೆದುಕೊಂಡು ಬಂದಿದೆ. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದರು. ಉಪ ಚುನಾವಣೆಯಲ್ಲಿ ಪಾಟೀಲರಿಗೆ ಬೆಂಬಲವಾಗಿ ನಿಂತಿದ್ದ ಬಣಕಾರ ಈಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. 2004, 2008, 2018, 2019ರಲ್ಲಿ ಹೀಗೆ 4 ಬಾರಿ ಗೆದ್ದಿರುವ ಬಿ.ಸಿ.ಪಾಟೀಲ 5ನೇ ಬಾರಿ ಗೆಲುವಿನತ್ತ ಕಣ್ಣಿಟ್ಟಿದ್ದಾರೆ. 1994ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಬಣಕಾರ, 2013ರಲ್ಲಿ ಕೆಜೆಪಿಯಿಂದ ಆಯ್ಕೆಯಾಗಿದ್ದರು. ಬಣಕಾರ, ಪಾಟೀಲ ಇಬ್ಬರೂ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ 70 ಸಾವಿರ ಮತಗಳಿವೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಸೇರಿ 60 ಸಾವಿರ ಮತಗಳಿವೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಎಸ್ಸಿ, ಎಸ್ಟಿ, ಕುರುಬ ಮತಗಳು ನಿರ್ಣಾಯಕವಾಗಿವೆ.
2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಣಕಾರ ಅವರಿಗೆ ಸಿಕ್ಕಿದರೆ, ಬಿ.ಸಿ.ಪಾಟೀಲ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ. ಯ.ಬಿ. ಬಣಕಾರ ಹಾಗೂ ಬಿ.ಸಿ.ಪಾಟೀಲ ಅವರು ಹಿರೇಕೆರೂರು ಕ್ಷೇತ್ರದಲ್ಲಿ ಮತ್ತೆ ರಾಜಕೀಯ ಎದುರಾಳಿಗಳಾಗಲಿರುವುದು ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.