ಶಂಕಿತ ಡೆಂಗ್ಯೂಗೆ ಯುವಕ ಸೇರಿ ಇಬ್ಬರು ಬಲಿ; ರಾಜ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ಕೇಸ್​ ದಾಖಲು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಡೆಂಗ್ಯೂ ಜ್ವರದಿಂದ ತಮಿಳುನಾಡು ಮೂಲದ ವೃದ್ಧೆ ಸೇರಿ ಇಬ್ಬರು ಬಲಿಯಾಗಿದ್ದಾರೆ. ಈ ಎರಡೂ ಪ್ರಕರಣಗಳು ಬಿಬಿಎಂಪಿಯ ಪೂರ್ವ ವಲಯದಲ್ಲಿ ದಾಖಲಾಗಿವೆ.

ಜ್ವರದಿಂದ ಬಳಲುತ್ತಿದ್ದ ಸಿ.ವಿ. ರಾಮನ್ ನಗರದ ನಿವಾಸಿ, 27 ವರ್ಷದ ಅಭಿಲಾಷ್ ಜೂ.25 ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಡೆಂಗ್ಯೂ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜೂ.27 ರಂದು ಮೃತಪಟ್ಟಿದ್ದಾರೆ. ಮತ್ತೊಂದು ಪ್ರಕರಣದಲ್ಲಿ 80 ವರ್ಷದ ವೃದ್ಧೆ ನೀರಜಾದೇವಿ ಮೃತಪಟ್ಟಿದ್ದಾರೆ. ತಮಿಳುನಾಡಿನ ಮೂಲದ ಇವರು, ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಜೂ.20ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೃದ್ಧೆಗೆ ಡೆಂಗ್ಯೂ ಇರುವುದು ತಿಳಿದು ಬಂದಿದೆ. ಚಿಕಿತ್ಸೆ ಫಲಕಾರಿಯಾಗದೇ ಜೂ.23ರಂದು ಮೃತಪಟ್ಟಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಡೆಂಗ್ಯೂ ಸಂಬಂಧಿತ ಇಬ್ಬರ ಸಾವು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 9 ಜನರ ಸಾವಿನ ಪ್ರಕರಣಗಳು ದಾಖಲಾಗಿದ್ದವು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗಾಲದಲ್ಲಿ ಶೀತ, ಕೆಮ್ಮು, ಜ್ವರ ಸಾಮಾನ್ಯ. ಆದರೆ, ಇದೆಲ್ಲದರ ನಡುವೆ ಡೆಂಗ್ಯೂ ಹೆಚ್ಚು ಜನಕ್ಕೆ ಕಾಡುವ ಕಾಯಿಲೆಯಾಗಿದೆ. ಈ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವುದು ಕಂಟಕವಾಗಿದೆ. ಒಟ್ಟಾರೆ ರಾಜ್ಯಾದ್ಯಂತ 4,364 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಗುರುವಾರ ಒಂದೇ ದಿನದಲ್ಲಿ 51 ಜನರಲ್ಲಿ ಡೆಂಗ್ಯೂ ಪತ್ತೆಯಾಗಿವೆ.

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಈವರೆಗೆ 1,520ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಸಹಜವಾಗಿ ಡೆಂಗ್ಯೂ ಜ್ವರ ಬಂದಾಗ ಅತಿಯಾದ ತಲೆ ನೋವು ಕಾಡುತ್ತದೆ. ಎರಡನೇ ದಿನಕ್ಕೆ ಅತಿಯಾದ ಜ್ವರ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಅಲ್ಲದೇ, ಡೆಂಗ್ಯೂ ಪ್ರಕರಣಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಡ್ರೆೃ ಡೇ ಟಾಸ್ಕ್ ನೀಡಿದ್ದು, ಇದರ ಜತೆ ಮನೆಮನೆ ಸಮೀಕ್ಷೆ ನಡೆಸಲು ಮುಂದಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಎರಡು ಅನುಮಾನಾಸ್ಪದ ಡೆಂಗ್ಯೂ ಸಾವಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ನಿಖರವಾದ ಕಾರಣ ತಿಳಿಯುವ ಸಲುವಾಗಿ ಡೆತ್ ಆಡಿಟ್ ಮಾಡಲಾಗುವುದು. ಬಳಿಕ ವರದಿಯನ್ನು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *