ಮೈಸೂರು: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಮೈಸೂರು ಕೇಂದ್ರ ರೈಲು ನಿಲ್ದಾಣದಲ್ಲಿ ರೈಲ್ವೆ ಉದ್ಯೋಗಿ ಪ್ರಭು (45) ಆತ್ಮಹತ್ಯೆ ಮಾಡಿದ್ದಾರೆ.
ಈ ರೈಲು ನಿಲ್ದಾಣದ ಮೆಕಾನಿಕಲ್ ವಿಭಾಗದ ಹಿರಿಯ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬುಧವಾರ ಮಧ್ಯಾಹ್ನ 1.30ಕ್ಕೆ ಮೈಸೂರು ಜಂಕ್ಷನ್ನಿಂದ ಬಾಗಲಕೋಟೆಗೆ ‘ಬಸವ ಎಕ್ಸ್ಪ್ರೆಸ್’ ಪ್ಲಾಟ್ ಫಾರಂ ಸಂಖ್ಯೆ 6ರಿಂದ ಹೊರಟಿತ್ತು.
ಟ್ರಾಕ್ ಮೇಲೆ ತಲೆ ಇಟ್ಟಿದ್ದ ಕಾರಣ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೆ.ಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ರೈಲ್ವೇ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಿಸಲಾಗಿದೆ.
ಚಿತ್ರದುರ್ಗ ಮೂಲದ ಪ್ರಭು ಅವಿವಾಹಿತರಾಗಿದ್ದು, ನಗರದ ಗೋಕುಲಂ ನಲ್ಲಿ ತಾಯಿಯೊಂದಿಗೆ ವಾಸವಿದ್ದರು. ತನಿಖೆ ನಡೆಯುತ್ತಿದ್ದು ಆತ್ಮಹತ್ಯೆಗೆ ಕಾರಣ ಇನ್ನು ತಿಳಿದು ಬಂದಿಲ್ಲ ಎಂದು ರೈಲ್ವೇ ಪೋಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ಕುಂಸಿ ಬಳಿಕ ರೈಲಿಗೆ ಸಿಲುಕಿ ರೈಲ್ವೆ ಸ್ಟೇಷನ್ ಮಾಸ್ಟರ್ ಅರುಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವ್ಯಕ್ತಿ ಬಿಹಾರ ಮೂಲದ ಕುಂಸಿಯ ನಿವಾಸಿ. ಮುಂಜಾನೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೇಲಾಧಿಕಾರಿಗಳು ನೀಡುವ ಒತ್ತಡದಿಂದ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರಬಹುದ ಎಂಬ ಶಂಕೆಗಳು ಸಹ ಕೆಲವೆಡೆ ಮೂಡಿಬಂದಿವೆ. ಈ ಹಿಂದೆಯೂ ಮೇಲಾಧಿಕಾರಿಗಳಿಂದ ರೈಲ್ವೇ ಅಧಿಕಾರಿಗಳ ಮೇಲೆ ಒತ್ತಾಡ ಹಾಕುತ್ತಿರುವಂತಹ ಸುದ್ದಿಗಳು ಕೇಳಿಬಂದಿದ್ದು, ಇಂದು ನಡೆದಿರುವ ಆತ್ಮಹತ್ಯೆ ಪಪ್ರಕರಣಗಳಿಗೂ ಇದೆ ಕಾರಣ ಇರಬಹುದೇ ಎಂಬ ಅನುಮಾನಗಳು ಮೂಡುತ್ತದೆ.
ಒಂದೇ ದಿನ ಇಬ್ಬರು ಅಧಿಕಾರಿಗಳು ರೈಲಿಗೆ ತಲೆ ಕೊಟ್ಟಿದ್ದು ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಪೊಲೀಸರು ಸರಿಯಾದ ಆಯಾಮದಲ್ಲಿ ತನಿಖೆ ನಡೆಸಬೇಕಿದೆ.