ಎರಡು ಭಾರತಗಳು : ಉತ್ತರ ಮತ್ತು ದಕ್ಷಿಣ

ಪ್ರೊ. ಟಿ. ಆರ್. ಚಂದ್ರಶೇಖರ
ನಾವು ಬಯಸಲಿಬಯಸದಿರಲಿ, ದಕ್ಷಿಣ ಭಾರತ ಮತ್ತು ಉತ್ತರ ಭಾರತ ನಡುವಿನ ಕಂದರವುಅಂತರವು ಬೇರೆ ಬೇರೆ ಆಯಾಮಗಳಲ್ಲಿ ಬೆಳೆಯುತ್ತಿದೆ. ಬೆಳವಣಿಗೆಯ ಯಾವುದೇ ಸೂಚಿಯನ್ನು ತೆಗೆದುಕೊಂಡರೂ ದಕ್ಷಿಣದ ರಾಜ್ಯಗಳು ಉತ್ತರದ ರಾಜ್ಯಗಳಿಗಿಂತ ಉತ್ತಮ ಸ್ಥಿತಿಯಲ್ಲಿರುವುದು ಅನೇಕ ವರದಿಅಧ್ಯಯನಗಳಿಂದ ಸ್ಪಷ್ಟವಾಗುತ್ತದೆ. ಉತ್ತರ ಭಾರತದ ಹಿಂದಿ ರಾಜ್ಯಗಳ ಮತ್ತು ದಕ್ಷಿಣ ಭಾರತದ ಆರು ರಾಜ್ಯಗಳ ಸಾಮಾಜಿಕ, ಆರ್ಥಿಕ ಮತ್ತು ಮಾನವ ಅಭಿವೃದ್ಧಿಯ ಒಂಬತ್ತು ಸೂಚಿಗಳನ್ನು ಹೋಲಿಸಿ ವಿವರವಾಗಿ ಪರಿಶೀಲಿಸಿದರೆ ನಮಗೆ ಇವೆರಡರ ನಡುವಿನ ಅಂತರಕಂದರದ ಅಂದಾಜು ದೊರೆಯುತ್ತದೆ. ಭಿನ್ನತೆಗಳುಬಿರುಕುಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಿಯಂತ್ರಣದಲ್ಲಿದ್ದವು. ನಿಯಂತ್ರಣದಲ್ಲಿದ್ದವು ಎನ್ನುವುದಕ್ಕಿಂತ ಸದರಿ ಬಿರುಕಿಗೆ ಎಣ್ಣ್ಣೆ ಸುರಿಯವ ಕೆಲಸವನ್ನು ಅಂದು ಸರ್ಕಾರಗಳು ಮಾಡುತ್ತಿರಲಿಲ್ಲ. ಆದರೆ ಕಳೆದ ಒಂದು ದಶಕದಿಂದ ಒಕ್ಕೂಟ ಸರ್ಕಾರದ ಏಕೀಕೃತಕೇಂದ್ರೀಕರಣ ನೀತಿಗಳಿಂದಾಗಿ ಇವೆರಡರ ನಡುವಿನ ಕಂದಕವು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಕಂದರಬಿರುಕನ್ನು ಗುರುತಿಸಿ ಪ್ರಜ್ಞಾಪೂರ್ವಕವಾಗಿ ಅದನ್ನು ತಡೆಯುವ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳದಿದ್ದರೆ ಇವೆರಡರ ನಡುವಿನ ವಿಷಮತೆಯು ಸ್ಪೋಟಗೊಳ್ಳುವ ಸಾಧ್ಯತೆಯಿದೆ

ನಾವು ಬಯಸಲಿ-ಬಯಸದಿರಲಿ, ದಕ್ಷಿಣ ಭಾರತ ಮತ್ತು ಉತ್ತರ ಭಾರತ ನಡುವಿನ ಕಂದರವು-ಅAತರವು ಬೇರೆ ಬೇರೆ ಆಯಾಮಗಳಲ್ಲಿ ಬೆಳೆಯುತ್ತಿದೆ. ಪ್ರಾಚೀನ ಕಾಲದಿಂದಲೂ ‘ಭಾವಿಸಿದ’ ಭಾರತವು ಒಂದೇ ಎಂಬುದು ನಿಜವಾದರೂ ಇಲ್ಲಿ ಇಂದು ದೊಡ್ಡ ಬಿರುಕು ಉಂಟಾಗುತ್ತಿದೆ. ಈ ಬಿರುಕು ದಕ್ಷಿಣ ಮತ್ತು ಉತ್ತರ ಭಾರತದ ರಾಜ್ಯಗಳ ನಡುವೆ ಉಲ್ಬಣಗೊಳ್ಳುತ್ತಾ ನಡೆದಿದೆ. ಇದು ಕೇವಲ ಆರ್ಯ-ದ್ರಾವಿಡ ಜನಾಂಗ ಭಿನ್ನತೆಗೆ ಅಥವಾ ಇಂಡೋ-ಆರ್ಯನ್-ದ್ರಾವಿಡಿಯನ್ ಭಾಷೆಗಳ ವ್ಯತ್ಯಾಸಕ್ಕೆ ಸೀಮಿತಗೊಂಡಿಲ್ಲ ಅಥವಾ ಇಂಡಿಯಾ-ಭಾರತ ಎಂಬ ರಾಜಕೀಯ ಕೆಸರೆರಚಾಟಕ್ಕೂ ಸಂಬAಧಿಸಿಲ್ಲ. ಆರ್ಥಿಕ, ಸಾಮಾಜಿಕ, ರಾಜಕೀಯ ಆಯಾಮಗಳಲ್ಲಿ ಬಿರುಕು ಬೃಹದಾಕಾರವಾಗಿ ಬೆಳೆಯುತ್ತಿದೆ. ಈ ಭಿನ್ನತೆಗಳು-ಬಿರುಕುಗಳು ಸ್ವಾತಂತ್ತರ ಭಾರತದಲ್ಲಿ ನಿಯಂತ್ರಣದಲ್ಲಿದ್ದವು. ನಿಯಂತ್ರಣದಲ್ಲಿದ್ದವು ಎನ್ನುವುದಕ್ಕಿಂತ ಸದರಿ ಬಿರುಕಿಗೆ ಎಣ್ಣ್ಣೆ ಸುರಿಯವ ಕೆಲಸವನ್ನು ಅಂದು ಸರ್ಕಾರಗಳು ಮಾಡುತ್ತಿರಲಿಲ್ಲ. ಆದರೆ ಕಳೆದ ಒಂದು ದಶಕದಿಂದ ಒಕ್ಕೂಟ ಸರ್ಕಾರದ ಏಕೀಕೃತ-ಕೇಂದ್ರೀಕರಣ ನೀತಿಗಳಿಂದಾಗಿ ಇವೆರಡರ ನಡುವಿನ ಕಂದಕವು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಈ ಬಗೆಯ ಚರ್ಚೆಯನ್ನು ‘ಉತ್ತರ-ದಕ್ಷಿಣ ಭಾರತಗಳ ನಡುವೆ ವಿಷಮತೆಯನ್ನು ಬಿತ್ತುವ ಕೆಲಸ’ ಎಂದು ಭಾವಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಬಿರುಕು-ಕಂದರ ಕಣ್ಣಿಗೆ ಗೋಚರವಾಗುವಷ್ಟು ಬೃಹದಾಕಾರವಾಗಿ ಬೆಳೆಯುತ್ತಿದೆ. ಈ ಕಂದರ-ಬಿರುಕನ್ನು ಗುರುತಿಸಿ ಪ್ರಜ್ಞಾಪೂರ್ವಕವಾಗಿ ಅದನ್ನು ತಡೆಯುವ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳದಿದ್ದರೆ ಇವೆರಡರ ನಡುವಿನ ವಿಷಮತೆಯು ಸ್ಪೋಟಗೊಳ್ಳುವ ಸಾಧ್ಯತೆಯಿದೆ.

ಉತ್ತರ-ದಕ್ಷಿಣ ನಡುವಿನ ಕಂದರ ಎಷ್ಟು ದೊಡ್ಡದಿದೆ?

ನಮ್ಮದು ಮೂಲತಃ ಒಕ್ಕೂಟ ರಾಜಕೀಯ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರಗಳ ಮತ್ತು ಒಕ್ಕೂಟ ಸರ್ಕಾರ ನಡುವೆ ಸಮಾನ ಹಕ್ಕುಗಳು ಮತ್ತು ಕರ್ತವ್ಯಗಳಿರುತ್ತವೆ. ಈ ಸಮತೋಲನದಲ್ಲಿ ವ್ಯತ್ಯಾಸವುಂಟಾದರೆ ರಾಜ್ಯ-ಒಕ್ಕೂಟ ನಡುವಿನ ಸಂಬಂಧದಲ್ಲಿ ಸಮಸ್ಯೆಯುಂಟಾಗುತ್ತದೆ.
ಇಂದು ನಮ್ಮ ದೇಶದಲ್ಲಿ ಉತ್ತರ ಮತ್ತು ದಕ್ಷಿಣ ಭಾರತ ರಾಜ್ಯಗಳ ನಡುವೆ ಬಿರುಕು ಹೆಚ್ಚಾಗುತ್ತಿದೆ. ಉತ್ತರ-ದಕ್ಷಿಣಗಳ ನಡುವಿನ ಸಂಬಂಧವು ‘ಶ್ರೀಮಂತ ದಕ್ಷಿಣ – ಬಡತನದ ಉತ್ತರ’ ಎಂಬಂತಾಗಿದೆ. ಆರ್ಥಿಕ ಬೆಳವಣಿಗೆಯ ಯಾವುದೇ ಸೂಚಿಯನ್ನು ತೆಗೆದುಕೊಂಡರೂ ದಕ್ಷಿಣದ ರಾಜ್ಯಗಳು ಉತ್ತರದ ರಾಜ್ಯಗಳಿಗಿಂತ ಉತ್ತಮಸ್ಥಿತಿಯಲ್ಲಿರುವುದು ಅನೇಕ ವರದಿ-ಅಧ್ಯಯನಗಳಿಂದ ಸ್ಪಷ್ಟವಾಗುತ್ತದೆ. ನಿದರ್ಶನಕ್ಕಾಗಿ ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಛತ್ತಿಸ್‌ಗಡ ರಾಜ್ಯಗಳನ್ನು(ಹಿಂದಿ ಬೆಲ್ಟ್) ಮತ್ತು ದಕ್ಷಿಣ ಭಾರತದ ಆರು ರಾಜ್ಯಗಳನ್ನು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹೋಲಿಸಿದರೆ ನಮಗೆ ಇವೆರಡರ ನಡುವಿನ ಅಂತರ-ಕಂದರದ ಅಂದಾಜು ದೊರೆಯುತ್ತದೆ.

ಈ ಎರಡು ಭಾರತಗಳ ನಡುವಿನ ಬಿರುಕನ್ನು ಗುರುತಿಸಲು ಜೀವನಾಯುಷ್ಯ (2019), ಶಿಶುಗಳ ಮರಣ ಪ್ರಮಾಣ(2019), ತಾಯಂದಿರ ಮರಣ ಪ್ರಮಾಣ (2019) (ಮೂಲ: ಮಿನಿಸ್ಟ್ರಿ ಆಫ್ ಹೆಲ್ಥ್ ಆಂಡ್ ಫ್ಯಾಮಿಲಿ ವೆಲ್‌ಪೇರ್. 2019), ಒಟ್ಟು ಫಲೋತ್ಪತ್ತಿ ಪ್ರಮಾಣ (ಟಿಎಪ್‌ಆರ್) (ಮೂಲ: ಆರ್ಥಿಕ ಸಮಕ್ಷೆ 2020), ಬಹುಮುಖಿ ಬಡತನ ಪ್ರಮಾಣ (2019-2020) (ನೀತಿ ಆಯೋಗ 2021), ಮಾನವ ಅಭಿವೃದ್ಧಿ ಸೂಚ್ಯಂಕ (2022) (ಮೂಲ: ನೀತಿ ಆಯೋಗ), ವಯಸ್ಕ ಮಹಿಳೆಯರ ಸಾಕ್ಷರತಾ ಪ್ರಮಾಣ (2019-2020), ವಯಸ್ಕ ಮಹಿಳೆಯರಲ್ಲಿ 10 ವರ್ಷ ಶಾಲೆ ಕಲಿತವರ ಪ್ರಮಾಣ (2019-2020)(ಎನ್‌ಎಪ್‌ಎಚ್‌ಎಸ್ 52019-20) ಮತ್ತು ತಲಾ ವರಮಾನ (ಮೂಲ: ಪೋರ್‌ಬೆಸ್ ಇಂಡಿಯಾ 2023) ಎಂಬ ಒಂಬತ್ತು ಸೂಚಿಗಳನ್ನು ಬಳಸಲಾಗಿದೆ. ಈ ಎಲ್ಲ ಒಂಬತ್ತು ಸೂಚಿಗಳನ್ನು ವಿವರವಾಗಿ ಪರಿಶೀಲಿಸಿದರೆ ಅವುಗಳಲ್ಲಿ ದಕ್ಷಿಣದ ರಾಜ್ಯಗಳು ಉತ್ತರದ ರಾಜ್ಯಗಳಿಗಿಂತ ಉತ್ತಮವಾಗಿರುವುದು ಕಂಡುಬರುತ್ತದೆ.

ಜೀವನಾಯುಷ್ಯದಲ್ಲಿ ದ.ಭಾ. ರಾಜ್ಯಗಳಲ್ಲಿ ಇದು 70 ವರ್ಷಗಳಿಗಿಂತ ಅಧಿಕವಾಗಿದ್ದರೆ ಉ.ಭಾ. ರಾಜ್ಯಗಳಲ್ಲಿ ಇದು 70 ವರ್ಷಗಳಿಗಿಂತ ಕಡಿಮೆಯಿದೆ. ಶಿಶು ಮರಣ ಪ್ರಮಾಣ ದ.ಭಾ. ದ ರಾಜ್ಯಗಳಲ್ಲಿ ಪ್ರತಿ ಸಾವಿರ ಜನನಗಳಿಗೆ 30ಕ್ಕಿಂತ ಕಡಿಮೆಯಿದ್ದರೆ ಉ.ಭಾ. ರಾಜ್ಯಗಳಲ್ಲಿ ಇದು 35ಕ್ಕಿಂತ ಅಧಿಕವಾಗಿದೆ. ತಾಯಂದಿರ ಮರಣ ಅನುಪಾತ ಪ್ರತಿ ಲಕ್ಷ ಜನನಗಳಿಗೆ ದ.ಭಾ. ದಲ್ಲಿ 65ಕ್ಕಿಂತ ಕಡಿಮೆಯಿದ್ದರೆ ಉ.ಭಾ. ರಾಜ್ಯಗಳಲ್ಲಿ ಇದು 100ಕ್ಕಿಂತ ಅಧಿಕವಾಗಿದೆ. ಒಟ್ಟು 15 ರಿಂದ 45 ವರ್ಷ ವಯೋಮಾನದ ಒಬ್ಬ ಮಹಿಳೆ ತನ್ನ ಸಂತಾನೊತ್ಪತ್ತಿ ಅವಧಿಯಲ್ಲಿ ಹಡೆಯುವ ಮಕ್ಕಳ ಸಂಖ್ಯೆ) ದ.ಭಾ. ರಾಜ್ಯಗಳಲ್ಲಿ ಇದು 1.5 ಕ್ಕಿಂತ ಕಡಿಮೆಯಿದ್ದರೆ (ಕೇರಳದಲ್ಲಿ ಇದು ಶೇ.1.4) ಉ.ಭಾ. ರಾಜ್ಯಗಳಲ್ಲಿ ಇದು ಶೇ.2.೦ ಕ್ಕಿಂತ ಅಧಿಕವಾಗಿದೆ (ಬಿಹಾರದಲ್ಲಿ ಇದು ಶೇ.3.೦). ಬಹುಮುಖಿ ಬಡತನದ ಪ್ರಮಾಣದಲ್ಲಿ ದ. ಭಾ ರಾಜ್ಯಗಳಲ್ಲಿ ಇದು ಶೇ. ಶೇ. 14ಕ್ಕಿಂತ ಕೆಳಮಟ್ಟದಲ್ಲಿದ್ದರೆ (ಕೇರಳ: ಶೇ.೦.71), ಉ.ಭಾ. ರಾಜ್ಯಗಳಲ್ಲಿ ಇದು ಶೇ. 25 ಕ್ಕಿಂತ ಅಧಿಕವಾಗಿದೆ (ಬಿಹಾರ: ಶೇ. 51.91). ಮಾನವ ಅಭಿವೃದ್ಧಿ ಸೂಚ್ಯಂಕ ದ.ಭಾ. ರಾಜ್ಯಗಳಲ್ಲಿ ಇದು ದೇಶದ ಸರಾಸರಿ (೦.637)ಗಿಂತ ಅಧಿಕವಾಗಿದ್ದರೆ ಉ.ಭಾ. ರಾಜ್ಯಗಳಲ್ಲಿ ಇದು ಕೆಳಮಟ್ಟದಲ್ಲಿದೆ.

ವಯಸ್ಕ (15-49 ವರ್ಷ ವಯೋಮಾನ) ಒಟ್ಟು ಮಹಿಳೆಯರಲ್ಲಿ 10ಕ್ಕಿಂತ ಹೆಚ್ಚು ವರ್ಷಗಳು ಶಾಲೆ ಕಲಿತ ಮಹಿಳೆಯರ ಪ್ರಮಾಣ 2019-20ರಲ್ಲಿ ದಕ್ಷಿಣ ಭಾರತದಲ್ಲಿ ಶೇ.60ಕ್ಕಿಂತ ಅಧಿಕವಾಗಿದ್ದರೆ ಉ.ಭಾ. ರಾಜ್ಯಗಳಲ್ಲಿ ಇದು ಶೇ. 50 ಕ್ಕಿಂತ ಕೆಳಮಟ್ಟದಲ್ಲಿದೆ. ಲಿಂಗ ಸಮಾನತೆಯ ಮಹತ್ವದ ಸೂಚಿಯಾದ ಮಹಿಳೆಯರ ಸಾಕ್ಷರತೆ ಪ್ರಮಾಣ. ಇದು ದ.ಭಾ. ರಾಜ್ಯಗಳಲ್ಲಿ 2019-20ರಲ್ಲಿ ಶೇ. 80ಕ್ಕಿಂತ ಅಧಿಕವಾಗಿದ್ದರೆ(ಕೇರಳ ಶೇ.99) ಉ.ಭಾ. ರಾಜ್ಯಗಳಲ್ಲಿ ಇದು ಶೇ. 80ಕ್ಕಿಂತ ಕೆಳಮಟ್ಟದಲ್ಲಿದೆ(ಬಿಹಾರ: 74.9).. ಕೊನೆಯ ಒಂಬತ್ತನೆಯ ಒಟ್ಟು ತಲಾ ಆಂತರಿಕ ಉತ್ಪನ್ನ ದ.ಭಾ. ರಾಜ್ಯಗಳಲ್ಲಿ ಇದು2021-22ರಲ್ಲಿ ರೂ. 2.25 ಲಕ್ಷ ಕೋಟಿ ಅಧಿಕವಾಗಿದ್ದರೆ (ಕರ್ನಾಟಕ ರೂ. 3.೦1 ಲಕ್ಷ ಕೋಟಿ, ತಮಿಳುನಾಡು ರೂ. 2.73 ಲಕ್ಷ ಕೋಟಿ). ಉ.ಭಾ. ರಾಜ್ಯಗಳಲ್ಲಿ ಇದು ರೂ. 1.5 ಲಕ್ಷಕ್ಕಿಂತ ಕಡಿಮೆಯಿದೆ(ಉ. ಪ್ರ. ರೂ. 83೦೦೦, ಬಿಹಾರ ರೂ. 54೦೦೦). ದ.ಭಾ. ರಾಜ್ಯಗಳು 201-22ರಲ್ಲಿ ದೇಶದ ಜಿಡಿಪಿಗೆ ಶೇ. 33.13 ಕಾಣಿಕೆ ನೀಡಿದ್ದರೆ ಉ.ಭಾ. ಆರು ರಾಜ್ಯಗಳ ಪಾಲು ಕೇವಲ ಶೇ.23.27. ದ.ಭಾ. ರಾಜ್ಯಗಳ ಬಗ್ಗೆ ಒಕ್ಕೂಟವು ಹಣಕಾಸು ವರ್ಗಾವಣೆ ಮತ್ತು ರಾಜಕೀಯ ಅಧಿಕಾರಗಳಿಗೆ ಸಂಬಂಧಿಸಿದಂತೆ ಮಲತಾಯಿ ಧೋರಣೆ ತಳೆದರೆ ಮತ್ತು ತಾರತಮ್ಯವೆನಿಸಿದರೆ ಅದು ಭಾರತದ ಆರ್ಥಿಕ ಬೆಳವಣಿಗೆಗೆ ಮಾರಕವಾಗುತ್ತದೆ ಎಂಬುದನ್ನು ನಾವು ಮರೆಯಬಾರದು.

ಇದನ್ನೂ ಓದಿ: ತೆಲಂಗಾಣ | ಕೆಸಿಆರ್, ಓವೈಸಿ ಪ್ರಧಾನಿಯ ಮೋದಿಯ ಕೈಗೊಂಬೆ – ಹೋರ್ಡಿಂಗ್‌ ಸ್ಥಾಪಿಸಿದ ಕಾಂಗ್ರೆಸ್

ಒಕ್ಕೂಟ ತತ್ವದ ಉಲ್ಲಂಘನೆ

ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತಗಳ ರಚನೆ, ರಾಜ್ಯಗಳು ಮತ್ತು ಒಕ್ಕೂಟಗಳ ನಡುವೆ ಕರ್ತವ್ಯಗಳ ಸಂವಿಧಾನಾತ್ಮಕ ಹಂಚಿಕೆ(ರಾಜ್ಯಪಟ್ಟಿ, ಒಕ್ಕೂಟ ಪಟ್ಟಿ, ಸಂಯುಕ್ತ ಪಟ್ಟಿ), ಹಿಂದಿಯ ಜೊತೆಯಲ್ಲಿ ಇಂಗ್ಲೀಷನ್ನು ಅಧಿಕೃತ ಭಾಷೆಯನ್ನಾಗಿ 1963ರಲ್ಲಿ ಕಾಯಿದೆ ಮಾಡಿದ್ದು ಮುಂತಾದ ಕ್ರಮಗಳ ಮೂಲಕ ಒಕ್ಕೂಟ ತತ್ವವನ್ನು ಬಲಪಡಿಸಲಾಗಿತ್ತು. ಆದರೆ ಇಂದು ನೀಟ್ ಪರೀಕ್ಷೆ(ರಾಜ್ಯ ಪಠ್ಯಕ್ರಮದಲ್ಲಿ ಮತ್ತು ರಾಜ್ಯ ಭಾಷೆಯಲ್ಲಿ ಕಲಿತ ಮಕ್ಕಳಿಗೆ ಅನ್ಯಾಯ), ಜಿಎಸ್‌ಟಿ(ರಾಜ್ಯಗಳ ಹಣಕಾಸು ಸ್ವಾಯತ್ತತೆಯ ಹರಣ), ಈಗ ರದ್ದಾಗಿರುವ ಮೂರು ಕೃಷಿ ಕಾಯಿದೆಗಳು, ಹಣಕಾಸು ಆಯೋಗದಿಂದ ಉತ್ತರಕ್ಕೆ ತುಪ್ಪ, ದಕ್ಷಿಣಕ್ಕೆ ಸುಣ್ಣ(ಉತ್ತರಕ್ಕೆ ಓಲೈಕೆ-ದಕ್ಷಿಣಕ್ಕೆ ಶಿಕ್ಷೆ), ಡಿಲಿಮಿಟೇಶನ್ನಿನ ತೂಗುಕತ್ತಿ, ‘ಒಂದು ದೇಶ-ಒಂದು ಚುನಾವಣೆ’ ಎಂಬ ಬೆದರುಗೊಂಬೆ ಮುಂತಾದ ಕ್ರಮಗಳು ನಮ್ಮ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಛಿದ್ರಗೊಳಿಸುತ್ತಿವೆ. ರಾಷ್ಟ್ರೀಯ ಸರ್ಕಾರವು ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳುತ್ತಿರುವುದು ನಿಚ್ಚಳವಾಗಿ ಕಂಡುಬರುತ್ತಿದೆ. ಇವೆಲ್ಲವೂ ಆರೋಗ್ಯಕರ ಒಕ್ಕೂಟ ತತ್ವಕ್ಕೆ ದಕ್ಕೆಯನ್ನುಂಟು ಮಾಡುತ್ತವೆ.

ಪ್ರಾದೇಶಿಕ ಭಿನ್ನತೆಗೆ ಅಗೌರವ

ಅನೇಕ ಐತಿಹಾಸಿಕ, ಭೌಗೋಳಿಕ, ಭಾಷೆ, ಆಹಾರ, ಉಡುಪು, ರೂಢಿ-ಆಚರಣೆಗಳು, ಸಾಮಾಜಿಕ ಸುಧಾರಣೆ ಮುಂತಾದವುಗಳಲ್ಲಿ ದಕ್ಷಿಣವು ತನ್ನದೇ ವಿಶಿಷ್ಟತೆಯನ್ನು ಪಡೆದಿದೆ. ಬಸವಣ್ಣ(ಕರ್ನಾಟಕ), ನಾರಾಯಣಗುರು(ಕೇರಳ), ಪೆರಿಯಾರ್(ತಮಿಳುನಾಡು) ಮುಂತಾದವರ ಸಾಮಾಜಿಕ ನ್ಯಾಯದ ಆಂದೋಳನಗಳಿಂದಾಗಿ ದ.ಭಾ. ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಇಂಡೋ-ಆರ್ಯನ್ ಭಾಷಾ ಕುಟುಂಬದ ಜೊತೆಯಲ್ಲಿ ಯಾವುದೇ ಸಮಾನಾಂಶಗಳನ್ನು ಹೊಂದದ ಧ್ರಾವಿಡ ಭಾಷೆಗಳನ್ನು ದಕ್ಷಿಣ ಬದುಕುತ್ತಿದೆ.

ಈ ಭಾಷೆಗಳಿಗೆ ಸಾವಿರ ವರ್ಷಗಳನ್ನು ಮೀರಿದ ಚರಿತ್ರೆಯಿದೆ. ಆರ್ಥಿಕ ಸ್ಥಿತಿಗತಿಯಲ್ಲಿ ಉತ್ತಮವಾಗಿರುವುದರಿಂದ ಉತ್ತರದಿಂದ ಬಂದ ಲಕ್ಷಾಂತರ ವಲಸಿಗರಿಗೆ ದಕ್ಷಿಣವು ಬದುಕನ್ನು ನೀಡುತ್ತಿದೆ. ದಕ್ಷಿಣವು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕಾಗಿ ಹಾಗೂ ಸಾಹಿತ್ಯಿಕವಾಗಿ ಸಮೃದ್ಧವಾಗಿದೆ. ಆದರೆ ಇಂದಿನ ಒಕ್ಕೂಟ ಸರ್ಕಾರವು ದೇಶಕ್ಕೆ ಮಾದರಿಯಾಗಬಹುದಾದ ಕೇರಳ-ತಮಿಳುನಾಡು-ಕರ್ನಾಟಕ ಅಭಿವೃದ್ಧಿ ಮಾದರಿಗಳ ಬಗ್ಗೆ ಮಾತಾಡುವುದಕ್ಕೆ ಬದಲಾಗಿ ಗುಜರಾತ್-ಉತ್ತರ ಪ್ರದೇಶ ಮಾದರಿಯನ್ನು ಎಲ್ಲ ರಾಜ್ಯಗಳು ಅಳವಡಿಸಿಕೊಳ್ಳಬೇಕು ಎಂದು ಶಿಪಾರಸ್ಸು ಮಾಡುತ್ತಿದೆ. ಈ ರಾಜ್ಯಗಳ ಆರ್ಥಿಕ-ಸಾಮಾಜಿಕ ಸಿದ್ಧಿ-ಸಾಧನೆಗಳ ಬಗ್ಗೆ ಒಮ್ಮೆಯೂ ಒಕ್ಕೂಟ ಸರ್ಕಾರ ಮೆಚ್ಚುಗೆಯ ಮಾತಾಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಾಪ್ ಭಾನು ಮೆಹ್ತ ಹೇಳುವಂತೆ ಇಂದಿನ ರಾಷ್ಟ್ರೀಯ ರಾಜಕೀಯ ವ್ಯವಸ್ಥೆಯು ಸಾಂಸ್ಕೃತಿಕ ಭಿನ್ನತೆಗಳನ್ನು ನಿರ್ವಹಿಸುವುದರಲ್ಲಿ ವಿಫಲವಾಗಿರುವುದರಿಂದ ಮತ್ತು ಇದೇ ಸಮಯದಲ್ಲಿ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ರಚನೆಯು ದುರ್ಬಲವಾಗಿರುವುದರಂದ ಉತ್ತರ-ದಕ್ಷಿಣ ಬಿರುಕು ಮತ್ತಷ್ಟು ಹೆಚ್ಚಾಗುವ ಸಾದ್ಯತೆಯಿದೆ.

ದಸರಾ ಕಾರ್ಯಕ್ರಮವೊಂದರಲ್ಲಿ ಅಕ್ಟೋಬರ್ 24 ರಂದು ಮಾತನಾಡುತ್ತಾ ದೇಶವನ್ನು ವಿಭಜಿಸುವ ಜಾತೀಯತೆ ಮತ್ತು ಪ್ರಾತೀಯತೆಗಳನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದ್ದಾರೆ. ಪ್ರಾದೇಶಿಕತೆಯನ್ನು ವಿಭಜನಕಾರಿ-ವಿನಾಶಕಾರಿ ಸಂಗತಿಯನ್ನಾಗಿ ಪ್ರಧಾನಮಂತ್ರಿ ಅವರು ಗುರುತಿಸುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಈ ರೀತಿಯ ಪ್ರಧಾನಿಗಳ ಆಕ್ರೋಶಕ್ಕೆ ದ.ಭಾ.ದ ರಾಜ್ಯಗಳಲ್ಲಿ ಬಿಜೆಪಿಗೆ ತನ್ನ ಅಸ್ತಿತ್ವವನ್ನು ಸ್ಥಾಪಿಸುವುದು ಸಾಧ್ಯವಾಗದಿರುವುದು ಒಂದು ಕಾರಣವಾಗಿರಲೂಬಹುದು.

ಈ ಬೆಳವಣಿಗೆಗಳು ಭಾರತ/ಇಂಡಿಯಾದ ಏಕತೆ ಮತ್ತು ಸಮಗ್ರತೆಗೆ ಅಪಾಯಕಾರಿಯಾಗುತ್ತವೆ. ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಅಸೂಯಾಪರ ಧೋರಣೆಯನ್ನು ಬಿಟ್ಟು ರಾಷ್ಟ್ರೀಯ ಸರ್ಕಾರ ಘನತೆಯಿಂದ ನಡೆದುಕೊಳ್ಳಬೇಕು ಮತ್ತು ಸಂವಿಧಾನಾತ್ಮ ಒಕ್ಕೂಟ ವ್ಯವಸ್ಥೆಗೆ ಗೌರವ ನೀಡಬೇಕು. ಆ ಮೂಲಕ ಉಲ್ಬಣಗೊಳ್ಳುತ್ತಿರುವ ಬಿರುಕನ್ನು ತಡೆಯಬಹುದು. ಇದಕ್ಕೆ ಅಗತ್ಯವಾಗಿರುವುದು ರಾಜಕೀಯ ಮುತ್ಸದ್ದಿತನವೇ ವಿನಾ ಚುನಾವಣಾ ರಾಜಕೀಯವಲ್ಲ.

ವಿಡಿಯೋ ನೋಡಿ: ಗೂಗಲ್ ಮತ್ತು ಯುಟ್ಯೂಬ್ ಹ್ಯಾಕ್ ಆಗದಂತೆ ಎಚ್ಚರಿಕೆ ವಹಿಸೋದು ಹೇಗೆ? – ಡಾ. ಎನ್. ಬಿ. ಶ್ರೀಧರ್ Janashakthi Media

 

 

Donate Janashakthi Media

Leave a Reply

Your email address will not be published. Required fields are marked *