ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸೈಡ್‌ ಬಿ ಬಿಡುಗಡೆ

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸೈಡ್‌ ಬಿ ಇಂದು ಬಿಡುಗಡೆಯಾಗಿದೆ. ಸೈಡ್‌ ಎ ನೋಡಿ ಫಿದ್ದ ಆಗಿದ್ದ ಪ್ರೇಕ್ಷಕರು ಇದೀಗ ಸೈಡ್‌ ಬಿ ನೋಡಿ ಸಂಭ್ರಮಿಸಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಒಂದು ವಿಶಿಷ್ಟವಾದ ಚಿತ್ರ. ಮುಗ್ದ ಪ್ರೇಮಿಗಳ ಸರಳ ಪ್ರೇಮಕಥೆಯನ್ನು ತನ್ನದೇಯಾದ ಶೈಲಿಯಲ್ಲಿ ನಿರ್ದೇಶಕ ಹೇಮಂತ್‌ ರಾವ್‌ ಪ್ರೇಕಕ್ಷಕರ ಕಣ್ಣಮುಂದೆ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಈಗ ಸಿನಿಮಾಗಳನ್ನು ಎರಡು ಪಾರ್ಟ್ಗಳಲ್ಲಿ ಚಿತ್ರಿಸುವುದು ಟ್ರೆಂಡ್‌ ಆಗಿದೆ. ಅದೇ ರೀತಿಯಲ್ಲಿ ಸಪ್ತ ಸಾಗರಾಚೆ ಎಲ್ಲೋ ಸಿನಿಮಾವನ್ನು ಸಹ ಎರಡು ಪಾರ್ಟ್‌ ಗಳಲ್ಲಿ ಚಿತ್ರಿಸಲಾಗಿದೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಸೆಪ್ಟೆಂಬರ್‌ ೧ ರಂದು ರಿಲೀಸ್‌ ಆಗಿತ್ತು. ಬದುಕಿನಲ್ಲಿ ಬಹುಬೇಗನೇ ಸೆಟ್ಲ್ ಆಗಬೇಕು, ತನ್ನ ಹುಡುಗಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ತನ್ನದಲ್ಲದ ತಪ್ಪಿಗೆ ತಲೆ ಕೊಟ್ಟು ಮನು ಜೈಲಿಗೆ ಹೋಗಿರುತ್ತಾನೆ. ನಂತರ ತಾನು ಇಟ್ಟಿದ್ದು ಎಂತಹ ದೊಡ್ಡ ತಪ್ಪು ಹೆಜ್ಜೆ ಎಂದು ಯೋಚಿಸುವ ವೇಳೆಗೆ ಮನುವಿನ ಬದುಕು ಸಮುದ್ರದಲ್ಲಿ ಮುಳುಗಿದ ಹಡಗಿನಂತಾಗಿರುತ್ತದೆ. ಮನುಗೆ 10 ವರ್ಷ ಜೈಲು ಶಿಕ್ಷೆ ಖಚಿತವಾದರೆ, ಇತ್ತ ಪ್ರೀತಿಸಿದ ಹುಡುಗಿ ಪ್ರಿಯಾ ಮತ್ತೊಬ್ಬನ ಮಡದಿಯಾಗಿರುತ್ತಾಳೆ.. ಇಲ್ಲಿಗೆ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ’ ಕಥೆ ಬಂದು ನಿಂತಿತ್ತು.

ಇದೀಗ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ’ ತೆರೆಕಂಡಿದೆ. ಮೊದಲ ಭಾಗದಲ್ಲಿ ಕಂಡ ಮನು ಇಲ್ಲಿ ಕಾಣಸಿಗುವುದಿಲ್ಲ. ಅವನೀಗ ಸಂಪೂರ್ಣ ಬದಲಾಗಿದ್ದಾನೆ. ಅವರ ದೇಹತೂಕ ಜೊತೆಗೆ ನೋವಿನ ತೂಕ ಕೂಡ ಹೆಚ್ಚಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪತಿಯೊಡನೆ ಸಂಸಾರ ಸಾಗಿಸುತ್ತ ಪ್ರಿಯಾ, ತನ್ನದೇ ತಾಪತ್ರಯಗಳೊಂದಿಗೆ ಜೀವನ ನಡೆಸುತ್ತಿದ್ದಾಳೆ. ಇವರಿಬ್ಬರ ಕಥೆ ಮುಂದೇನಾಗಬಹುದು, ತನಗೆ ಅನ್ಯಾಯ ಮಾಡಿದವರಿಗೆ ಮನು ಸೇಡು ತೀರಿಸಿಕೊಳ್ಳುತ್ತಾನಾ? ಪ್ರಿಯಾ ಬದುಕಿಗೆ ಮತ್ತೆ ಎಂಟ್ರಿ ನೀಡುತ್ತಾನಾ.. ಅಥವಾ ಮನುಗೆ ಹೊಸ ಸಂಗಾತಿ ಸಿಗುತ್ತಾಳಾ.. ಅನ್ನೋ ಪ್ರಶ್ನೆಗಳೊಂದಿಗೆ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ’ ಸಾಗುತ್ತದೆ.

ನಿರ್ದೇಶಕ ಹೇಮಂತ್ ರಾವ್ ಅವರು ಮೊದಲ ಭಾಗದಲ್ಲಿ ಕಾಯ್ದುಕೊಂಡಿದ್ದ ಅದೇ ಸಿನಿಮ್ಯಾಟಿಕ್ ಕ್ವಾಲಿಟಿಯನ್ನು ಇಲ್ಲಿಗೂ ತಂದಿದ್ದಾರೆ. ಯಾವುದೇ ಅವಸರವಿಲ್ಲದೆ, ನಿಧಾನವಾಗಿ, ತೀವ್ರವಾಗಿ ಕಥೆಯನ್ನು ಹೇಳುತ್ತ ಸಾಗುತ್ತಾರೆ ಹೇಮಂತ್. ಪಾರ್ಟ್ 1ರಲ್ಲಿ ಇದ್ದ ಪ್ರೀತಿಯ ಉತ್ಕಟತೆ, ಪಾರ್ಟ್ 2ರಲ್ಲೂ ಇದೆ. ಆದರೆ ರೂಪ ಬದಲಾಗಿದೆ. ಅಲ್ಲಿದ್ದ ನೀಲಿ ಬಣ್ಣದ ಬದಲು, ಇಲ್ಲಿ ಕೆಂಪು ಬಂದಿದೆ ಅಷ್ಟೇ. ಹೇಮಂತ್ ಪ್ರತಿ ಪಾತ್ರಗಳನ್ನು ಕಟ್ಟಿಕೊಟ್ಟಿರುವ ರೀತಿ ಇಷ್ಟವಾಗುತ್ತದೆ. ಚರಣ್ ರಾಜ್‌ ಹಿನ್ನೆಲೆ ಸಂಗೀತದ ನಾದಕ್ಕೆ ಕಾಡುವ ಶಕ್ತಿ ಹಾಗೇ ಉಳಿದುಕೊಂಡಿದೆ. ಅದ್ವೈತ ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಪ್ರತಿ ಫ್ರೇಮ್‌ಗಳಿಗೂ ಜೀವಂತಿಕೆ ಇದೆ.

ಖಳ ನಗು ಬೀರುತ್ತಾ ಪಾರ್ಟ್ 2ರಲ್ಲಿಯೂ ರಮೇಶ್ ಇಂದಿರ ತಮ್ಮ ಹವಾ ತೋರಿಸಿದ್ದಾರೆ. ಗೋಪಾಲ್ ದೇಶಪಾಂಡೆ ಅವರ ನಟನೆ ಮತ್ತು ಪಂಚಿಂಗ್ ಸಂಭಾಷಣೆ, ವಿನೋದ್ ಪಾತ್ರ ಮಾಡಿರುವ ಭರತ್ ನಟನೆ ಇಷ್ಟವಾಗುತ್ತದೆ. ಪ್ರಿಯಾಳ ಮಗ ಮತ್ತು ಪತಿ ಪಾತ್ರ ಮಾಡಿರುವ ಕಲಾವಿದರ ನಟನೆ ಗಮನಸೆಳೆಯುತ್ತದೆ.

ಒಟ್ಟಾರೆಯಾಗಿ ಸಿನಿಮಾದ ಎರಡು ಭಾಗಗಳು ಉತ್ತಮವಾಗಿ ಮೂಡಿಬಂದಿದ್ದು, ಕನ್ನಡದಲ್ಲಿ ಈ ದಶಕದ ಉತ್ತಮ ಪ್ರೇಮಚಿತ್ರ ಎಂದು ಹೇಳಬಹುದು.

Donate Janashakthi Media

Leave a Reply

Your email address will not be published. Required fields are marked *