ಉತ್ತರಾಖಂಡ : ಹಿಂದೂ ಮತ್ತು ಮುಸ್ಲಿಂ ಸಮುದಾಯದವರ ನಡುವೆ ಸಂಘರ್ಷ ಹೆಚ್ಚುತ್ತಿರುವ ನಡುವೆಯೇ ಕೆಲವೆಡೆ ಭಾವೈಕ್ಯ ಮೆರೆಯುತ್ತಿರುವ ಸುದ್ದಿಗಳೂ ಕೇಳುವುದುಂಟು. ಅಂಥ ಒಂದು ವರದಿ ಉತ್ತರಾಖಂಡ್ನ ಕಾಶೀಪುರದಲ್ಲಿ ನಡೆದಿದೆ.
ಈದ್ಗಾ ಸಮಿತಿಯ ಪದಾಧಿಕಾರಿಗಳೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ಹಿಂದೂ ವ್ಯಕ್ತಿಯೊಬ್ಬರ ಇಚ್ಛೆಯಂತೆ ಅವರ ಮರಣದ ನಂತರ ಪುತ್ರಿಯರು ತಮ್ಮ ಜಮೀನನ್ನು ಈದ್ಗಾಗೆ ದಾನ ಮಾಡಿದ್ದಾರೆ. 20,424 ಚದರ ಅಡಿ ಭೂಮಿಯನ್ನು (ಸರಿ ಸುಮಾರು ಎರಡೂವರೆ ಎಕರೆ) ದಾನ ಮಾಡುವ ಮೂಲಕ ಮೃತ ತಂದೆಯ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ.
ಲಾಲಾ ಬ್ರಿಜಾನಂದನ್ ಪ್ರಸಾದ್ ರಸ್ತೋಗಿ ಎನ್ನುವವರ ಮಕ್ಕಳನ್ನು ಇಂಥದ್ದೊಂದು ಕಾರ್ಯವನ್ನು ಮಾಡಿದ್ದಾರೆ. ಕಾಶಿಪುರದ ಈದ್ಗಾ ಮೈದಾನದ ಬಳಿ ಇವರ ಕೃಷಿ ಭೂಮಿ ಇದೆ. ಬೃಜಾನಂದನ್ ರಸ್ತೋಗಿ ಅವರು ಈ ಭೂಮಿಯನ್ನು ಈದ್ಗಾಕ್ಕಾಗಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಇವರು ಬದುಕಿದ್ದಾಗ ಪ್ರತಿ ವರ್ಷವೂ ಈದ್ಗಾಕ್ಕೆ ದೇಣಿಗೆ ನೀಡುತ್ತಿದ್ದರು. ತಮ್ಮ ಮರಣದ ನಂತರ ಈ ಭೂಮಿಯನ್ನು ನೀಡುವಂತೆ ಹೇಳಿದ್ದರು. ಈ ಜಮೀನು ಅವರ ಪುತ್ರಿಯರಾದ ಸರೋಜ್ ರಸ್ತೋಗಿ ಮತ್ತು ಅನಿತಾ ರಸ್ತೋಗಿ ಅವರ ಹೆಸರಿನಲ್ಲಿ ಇತ್ತು.
ಸರೋಜ್ ಮೀರತ್‌ನಲ್ಲಿ ಮತ್ತು ಅನಿತಾ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ತಮ್ಮ ತಂದೆಯ ಆಸೆಯಂತೆ ಇವರು ಜಮೀನು ದಾನ ಮಾಡಿದ್ದಾರೆ. ಇವರಿಬ್ಬರ ಕುಟುಂಬ ಕಾಶಿಪುರಕ್ಕೆ ಬಂದು ಗಣ್ಯರ ಸಮ್ಮುಖದಲ್ಲಿ ಜಮೀನನ್ನು ಸಮಿತಿಗೆ ದಾನ ಮಾಡಿದರು. ಸಮಿತಿಯು ಜಮೀನಿನಲ್ಲಿ ಗಡಿ ನಿರ್ಮಾಣ ಕಾರ್ಯವನ್ನೂ ಆರಂಭಿಸಿದೆ.
ಅನಿತಾ ಮತ್ತು ಸರೋಜ ಅವರ ಸಹೋದರ ರಾಕೇಶ್ ಮಾತನಾಡಿ, ‘ನನ್ನ ತಂದೆ ಕೋಮು ಸೌಹಾರ್ದದಲ್ಲಿ ನಂಬಿಕೆ ಇಟ್ಟವರು. ತಂದೆಯವರು ಈದ್ಗಾಕ್ಕೆ ಭೂಮಿ ನೀಡಿದರೆ ಹೆಚ್ಚಿನ ಮುಸ್ಲಿಂ ಬಾಂಧವರು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಹಾರೈಸಿದರು. ಅವರ ಕೊನೆಯ ಆಸೆಯನ್ನು ಈಡೇರಿಸಿದ ನೆಮ್ಮದಿ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾಶಿಪುರದ ಇಡೀ ಮುಸ್ಲಿಂ ಸಮುದಾಯವು ರಸ್ತೋಗಿಯನ್ನು ಗೌರವಿಸುತ್ತದೆ ಎಂದು ಹಸಿನ್ ಖಾನ್ ಹೇಳಿದರು. ಈದ್‌ನಲ್ಲಿ ಎಲ್ಲರೂ ಅವರಿಗಾಗಿ ಪ್ರಾರ್ಥಿಸುತ್ತಾರೆ. ನಗರದೆಲ್ಲೆಡೆ ಕೋಮು ಸೌಹಾರ್ದತೆಯ ವಾತಾವರಣವಿದೆ. ಈ ಭ್ರಾತೃತ್ವ ಭಾವವೇ ಎರಡು ಸಮುದಾಯಗಳ ಜನರ ನಡುವಿನ ಬಾಂಧವ್ಯಕ್ಕೆ ನಾಂದಿ ಹಾಡುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸ್ಥಳೀಯ ಪುರಸಭಾ ಸದಸ್ಯ ನೌಷಾದ್ ಹುಸೇನ್ ಮಾತನಾಡಿ, ಲಾಲಾ ಬ್ರಜನಂದನ್ ರಸ್ತೋಗಿ ಸೇರಿದಂತೆ ಅವರ ಕುಟುಂಬದ ಈ ಮಹತ್ಕಾರ್ಯ ಎಲ್ಲ ಸಮಾಜಕ್ಕೆ ಮಾದರಿಯಾಗಲಿದೆ ಎಂದರು. ರಸ್ತೋಗಿ ಕುಟುಂಬದ ಉದಾರತೆ ಮತ್ತು ನಿಜವಾದ ಧಾರ್ಮಿಕ ತಟಸ್ಥತೆಯನ್ನು ನಾವು ವಂದಿಸುತ್ತೇವೆ. ಇಂತಹವರು ಇಂದು ದೇಶಕ್ಕೆ ಬೇಕಾಗಿದ್ದಾರೆ ಎಂದು ಹೇಳಿದರು.