ಎರಡು ಪರ್ಯಾಯ ಬೆಳವಣಿಗೆಯ ನಮೂನೆಗಳನ್ನು ನಾವು ನೋಡಿದ್ದೇವೆ. ಒಂದು, ನಿಯಂತ್ರಣ ನೀತಿಗಳಡಿಯ ಬೆಳವಣಿಗೆ ಮತ್ತು ಎರಡು, ನವ-ಉದಾರವಾದಿ ನೀತಿಗಳಡಿಯದ್ದು. ಅಭಿವೃದ್ಧಿಯನ್ನು ಅಳೆಯಲು ಬಳಸುವ ತಲಾ ಜಿಡಿಪಿಯ ಬೆಳವಣಿಗೆಯ ಮಾನದಂಡಕ್ಕೆ ಪರ್ಯಾಯವಾಗಿ ದುಡಿಯುವ ಜನರ ಅಗತ್ಯ ಸರಕು-ಸೇವೆಗಳ ತಲಾ ಬಳಕೆಯ ಬೆಳವಣಿಗೆಯ ಮಾನದಂಡದಿಂದ ಅಳೆದಾಗ, ನವ ಉದಾರವಾದಿ ಅವಧಿಯು ನಿಯಂತ್ರಣ ನೀತಿಗಳ ಅವಧಿಗಿಂತ ಕೆಟ್ಟದಾಗಿದೆ ಎಂಬುದು ತಿಳಿದುಬರುತ್ತದೆ. ಅದಕ್ಕಿಂತಲೂ ಮಿಗಿಲಾಗಿ, “ಮಿಗುತೆ” ಆಹಾರ ಧಾನ್ಯಗಳ ದಾಸ್ತಾನು ವ್ಯರ್ಥವಾಗಿ ಬಿದ್ದಿದ್ದರೂ, ಉದ್ಯೋಗಗಳನ್ನು ಹೆಚ್ಚಿಸುವಲ್ಲಿ ನವ ಉದಾರವಾದಿ ಆಳ್ವಿಕೆಯೇ ಅಡ್ಡಿಯಾಗುತ್ತದೆ. ಪ್ರಗತಿಯನ್ನು ಸಾಧಿಸುವಲ್ಲಿ ನವ ಉದಾರವಾದಿ ವ್ಯವಸ್ಥೆಯು ಕಳಪೆಯಾಗಿದೆ ಮಾತ್ರವಲ್ಲ, ಅದು ವಿಚಾರಹೀನವೂ ಆಗಿದೆ. ಇದರರ್ಥ ಈ ಮೊದಲಿನ ನಿಯಂತ್ರಣ ನೀತಿಗಳ ವ್ಯವಸ್ಥೆಗೆ ನಾವು ಹಿಂತಿರುಗಬೇಕಾಗಿಲ್ಲ, ಬದಲಿಗೆ, ರಫ್ತು-ಪ್ರಧಾನ ಬೆಳವಣಿಗೆಗೆ ಪರ್ಯಾಯವಾಗಿ ಪ್ರಭುತ್ವದ ಆಶ್ರಯದಲ್ಲಿ ಕೃಷಿ-ಪ್ರಧಾನ ಬೆಳವಣಿಗೆ ಬರಬೇಕಾಗಿದೆ. ಎರಡು
-ಪ್ರೊ.ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಇಂದಿನ ನವ ಉದಾರವಾದೀ ನೀತಿಗಳ ಅವಧಿಯಲ್ಲಿ ಕೃಷಿ ಉತ್ಪಾದನೆಯ ಬೆಳವಣಿಗೆಯ ದರ, ಅದರಲ್ಲೂ ವಿಶೇಷವಾಗಿ ಆಹಾರ ಧಾನ್ಯಗಳ ಉತ್ಪಾದನೆಯ ಬೆಳವಣಿಗೆಯ ದರ, ಅದರ ಹಿಂದಿನ ನಿಯಂತ್ರಣ ನೀತಿಗಳ ಅವಧಿಗಿಂತಲೂ ಉನ್ನತವಾಗಿದೆ ಎಂದು ಯಾರೂ ಹೇಳಲಾಗದು. ತುಸು ಕಡಿಮೆ ಇರಬಹುದೇಹೊರತು ಖಂಡಿತವಾಗಿಯೂ ಹೆಚ್ಚಿಲ್ಲ ಎಂಬುದನ್ನು ಒಪ್ಪಬೇಕಾಗುತ್ತದೆ. ಮತ್ತೊಂದೆಡೆ, ಜಿಡಿಪಿಯ ಬೆಳವಣಿಗೆ ದರವು ಗಮನಾರ್ಹವಾಗಿ ಉನ್ನತವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಬೆಳವಣಿಗೆಯ ದರವನ್ನು ಹಿಗ್ಗಿಸಿ ಬಿಂಬಿಸಲಾಗಿದೆ ಎಂದು ಅನೇಕ ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಇರಲಿ, ಉದಾರವಾದೀ ಅವಧಿಯಲ್ಲಿ ಬೆಳವಣಿಗೆ ದರವು ಗಮನಾರ್ಹವಾಗಿ ಉನ್ನತವಾಗಿದೆ ಎಂಬುದನ್ನೂ ಒಪ್ಪೋಣ. ಆದರೆ, ನಿಯಂತ್ರಣ ನೀತಿಗಳ ಅವಧಿಯಲ್ಲಿ ಆಹಾರ ಧಾನ್ಯಗಳ ಬೆಲೆಗಳ ಮೇಲೆ ಸತತ ಒತ್ತಡವಿತ್ತು. ಎರಡು
ಇದು, ಧಾನ್ಯಗಳಿಗೆ ಬೇಡಿಕೆ ಆಗ ಅಧಿಕವಾಗಿತ್ತು ಎಂಬುದನ್ನು ಮತ್ತು ಇದನ್ನು ಹಲವು ವಿಷಮ ಪರಿಸ್ಥಿತಿಗಳಲ್ಲಿ, ಸಾರ್ವಜನಿಕ ವೆಚ್ಚಗಳ ಕಡಿತ ಮತ್ತು ಬೆಲೆ-ನಿಯಂತ್ರಣದ ಕ್ರಮಗಳ ಮೂಲಕ ನಿಭಾಯಿಸಲಾಗುತ್ತಿತ್ತು ಎಂಬುದನ್ನು ಸೂಚಿಸುತ್ತದೆ. ಆದರೆ, ನವ ಉದಾರವಾದಿ ಯುಗದಲ್ಲಿ ಸರ್ಕಾರದ ಮೇಲೆ ಸರಾಸರಿಯಾಗಿ “ಮಿಗುತಾಯ” ಆಹಾರ ಧಾನ್ಯಗಳ ದಾಸ್ತಾನುಗಳ ಭಾರ ಬಿದ್ದಿದೆ. ಆಹಾರ ಧಾನ್ಯಗಳ ಸಂಗ್ರಹಣೆಯ ಪ್ರಮಾಣವು ಸಾಮಾನ್ಯವಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ವಿತರಿಸಲ್ಪಡುವ ಪ್ರಮಾಣಕ್ಕಿಂತಲೂ ದೊಡ್ಡದಿದೆ. ಮತ್ತು, ಭಾರತವು ಆಹಾರ ಧಾನ್ಯಗಳನ್ನು ರಫ್ತು ಕೂಡ ಮಾಡುತ್ತಿದೆ: 2023-24ರಲ್ಲಿ $10.4 ಬಿಲಿಯನ್ ಮೊತ್ತದ ಅಕ್ಕಿಯನ್ನು ರಫ್ತುಮಾಡಿದೆ. ಎರಡು
ಇದನ್ನೂ ಓದಿ: ಅಯೋಧ್ಯೆ| ನೀರಿನ ಟ್ಯಾಂಕ್ ಕುಸಿತ; ಓರ್ವ ಕಾರ್ಮಿಕ ಮೃತ
ದೇಶದಲ್ಲಿ ತಲಾ ವರಮಾನದ ಬೆಳವಣಿಗೆ ದರ ಏರುತ್ತಿರುವಾಗ ಆಹಾರ ಧಾನ್ಯ ಬಳಕೆಯ ಬೆಳವಣಿಗೆಯ ದರ ಇಳಿಯುತ್ತಿದೆ ಎಂಬುದನ್ನು ವಿವರಿಸುವುದಾದರೂ ಹೇಗೆ? ನವ ಉದಾರವಾದದವಕ್ತಾರರಿಗೆ ಈ ಸಮಸ್ಯೆಯು ಆಶ್ಚರ್ಯಕರವಾಗಿ ಕಾಣುವುದಿಲ್ಲ. ಜನರ ಸ್ಥಿತಿ-ಗತಿಗಳು ಉತ್ತಮವಾಗುತ್ತಿದ್ದಂತೆಯೇ, ಅವರ ವರಮಾನದ ಏರಿಕೆಗೆ ಅನುಗುಣವಾಗಿ ಅವರ ಆಹಾರ ಧಾನ್ಯದ ಬಳಕೆಯು ಇಳಿಕೆಯಾಗಿರುತ್ತದೆ. ಆದ್ದರಿಂದ, ಧಾನ್ಯ ಮಾರುಕಟ್ಟೆಯಲ್ಲಿ ಕಂಡುಬರುವ “ಮಿಗುತಾಯ” ದಾಸ್ತಾನುಗಳು ನವ ಉದಾರವಾದಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಸ್ಥಿತಿ-ಗತಿಯೂ ಸುಧಾರಿಸುತ್ತಿರುವುದರ ಸೂಚನೆ ಎಂದು ಅವರು ವಾದಿಸುತ್ತಾರೆ. ಎರಡು
ಆದರೆ, ಪುರಾವೆಗಳು ಈ ವಾದವನ್ನು ನೇರವಾಗಿ ಅಲ್ಲಗಳೆಯುತ್ತವೆ. ತಮ್ಮ ವರಮಾನದ ಏರಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಜನರು ಸೇವಿಸುವ ಆಹಾರ ಧಾನ್ಯಗಳ ಪ್ರಮಾಣವು ಇಳಿಕೆಯಾಗಿರಬಹುದು. ಆದರೆ ನಾವು ಜನರ ನೇರ ಮತ್ತು ಪರೋಕ್ಷ (ಸಂಸ್ಕರಿಸಿದ ಆಹಾರಗಳ ಮೂಲಕ ಮತ್ತು ಪಶು-ಪ್ರಾಣಿ ಉತ್ಪನ್ನಗಳಿಗೆ ಆಹಾರವಾಗಿ ಬಳಕೆಯಾಗುವ ಧಾನ್ಯಗಳ ಮೂಲಕ) ಆಹಾರ ಧಾನ್ಯಗಳ ಒಟ್ಟು ಬಳಕೆಯನ್ನು ಗಣನೆಗೆ ತೆಗೆದುಕೊಂಡಾಗ ಬಳಕೆಯ ಒಟ್ಟು ಪ್ರಮಾಣವು ಕಡಿಮೆಯಾಗುವುದಿಲ್ಲ. ಗ್ರಾಮೀಣ ಭಾರತದಲ್ಲಿ ಮತ್ತು ನಗರ ಭಾರತದಲ್ಲಿಯೂ ಒಂದು ಕನಿಷ್ಠ ಮಟ್ಟದ ಕ್ಯಾಲೋರಿ ಸೇವನೆಯನ್ನು ದಿನಾ ಪಡೆಯಲು ಸಾಧ್ಯವಾಗದ ಜನರ ಶೇಕಡಾವಾರು ಪ್ರಮಾಣವು ಕಾಲಕ್ರಮೇಣ ಇಳಿಕೆಯಾಗಿರುವ ಬಗ್ಗೆ ಸ್ಪಷ್ಟ ಪುರಾವೆಗಳಿವೆ. ಉದಾಹರಣೆಗೆ, ಗ್ರಾಮೀಣ ಭಾರತದಲ್ಲಿ, ತಲಾ 2200 ಕ್ಯಾಲೋರಿಗಳನ್ನು ದಿನಾ ಪಡೆಯಲಾಗದ ವ್ಯಕ್ತಿಗಳ ಶೇಕಡಾವಾರು ಸಂಖ್ಯೆಯು 1993-94 ರಲ್ಲಿ 58, 2011-12ರಲ್ಲಿ 68 ಮತ್ತು 2017-18ರಲ್ಲಿ 80ಕ್ಕಿಂತಲೂ ಮೇಲಿತ್ತು.
ಆದ್ದರಿಂದ, ನವ ಉದಾರವಾದಿ ಯುಗದಲ್ಲಿರುವ ಧಾನ್ಯಗಳ ಈ “ಮಿಗುತಾಯ”ವು ಬೃಹತ್ ದುಡಿಯುವ ಜನಸಮೂಹದ ಮೇಲೆ ಒತ್ತಾಯವಾಗಿ ಹೇರಿದ ವರಮಾನದ ಸಂಕುಚನದಿಂದ ಉಂಟಾದ ಹಾನಿಯ ಪರಿಣಾಮವಾಗಿದೆ. ಮತ್ತು ಜಾಗತಿಕ ಹಸಿವು ಸೂಚ್ಯಂಕದಿಂದ ಹಿಡಿದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಇದು ಮಹಿಳೆಯರಲ್ಲಿ ರಕ್ತಹೀನತೆಯ ಪ್ರಕರಣಗಳ ಆತಂಕಕಾರಿ ಹೆಚ್ಚಳವನ್ನು ತೋರಿಸುತ್ತದೆ) ಯವರೆಗಿನ ಹಲವಾರು ಸೂಚಿಗಳು ಆಹಾರ ಸೇವನೆಯಲ್ಲಿ ಇಳಿಕೆಯಾಗಿದೆ ಎಂಬುದನ್ನು ದೃಢಪಡಿಸುತ್ತವೆ. ಎರಡು
ಬೆಳವಣಿಗೆಯ ದರವನ್ನು ನಿರ್ಬಂಧಿಸುವ ಅಂಶಗಳು
ಈ ರೀತಿಯ ಎರಡು ಪರ್ಯಾಯ ಬೆಳವಣಿಗೆಯ ನಮೂನೆಗಳನ್ನು ನಾವು ಈಗ ನೋಡಿದ್ದೇವೆ. ಮೊದಲನೆಯದರಲ್ಲಿ, ಅಂದರೆ, ನಿಯಂತ್ರಣ ನೀತಿಗಳಡಿಯ ಬೆಳವಣಿಗೆಯ ವಿಧಾನದಲ್ಲಿ, ಅರ್ಥವ್ಯವಸ್ಥೆಯ ಒಟ್ಟಾರೆ ಬೆಳವಣಿಗೆ ದರವು ಮೂಲತಃ ಆಹಾರ ಧಾನ್ಯ-ನಿರ್ಬಂಧಿತವಾಗಿತ್ತು: ಏಕೆಂದರೆ, ಆಹಾರ ಧಾನ್ಯಗಳ ಉತ್ಪಾದನೆಯ ಬೆಳವಣಿಗೆಯ ದರವು, ಧಾನ್ಯಗಳ ಮೇಲಿನ ಹೆಚ್ಚುವರಿ ಬೇಡಿಕೆಯಿಂದ ಉಂಟಾಗುವ ಗಮನಾರ್ಹ ಆಹಾರ ಬೆಲೆ ಹಣದುಬ್ಬರವನ್ನು ತಪ್ಪಿಸದೆ, ಒಟ್ಟಾರೆಯಾಗಿ ಉನ್ನತ ದರದ ಬೆಳವಣಿಗೆಗೆ ಅವಕಾಶ ನೀಡುವುದಿಲ್ಲ. ಅಭಿವೃದ್ಧಿಯಾಗದ ಒಂದು ಮಿಶ್ರ ಅರ್ಥವ್ಯವಸ್ಥೆಯಲ್ಲಿ, ಅಂದರೆ “ಉದಾರೀಕರಣ”ಕ್ಕಿಂತ ಹಿಂದಿನ ಭಾರತದಲ್ಲಿ ಇದ್ದ ರೀತಿಯ ಅರ್ಥವ್ಯವಸ್ಥೆಯಲ್ಲಿ, ಸಂಪನ್ಮೂಲ ಕ್ರೋಢೀಕರಣದ ಆರ್ಥಿಕ ಸಮಸ್ಯೆ ಎಂದರೆ, ಕೃಷಿ ಬೆಳವಣಿಗೆಯ ದರವನ್ನು ಹೆಚ್ಚಿಸುವ ಒಂದು ವಾಸ್ತವಿಕ ಸಮಸ್ಯೆಯಲ್ಲದೆ ಬೇರೇನೂ ಅಲ್ಲ ಎಂದು ಮೈಕೆಲ್ ಕಲೆಕ್ಕಿ ಈ ಹಿಂದೆಯೇ ಸೂಚಿಸಿದ್ದರು. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಣಕಾಸಿನ ಸಂಪನ್ಮೂಲಗಳ ಕೊರತೆಯಿಂದ ಒಟ್ಟಾರೆ ಆರ್ಥಿಕ ಬೆಳವಣಿಗೆಯು ನಿರ್ಬಂಧಿತವಾಗಿಲ್ಲ, ಬದಲಿಗೆ, ಆಹಾರ ಧಾನ್ಯಗಳ ಬೆಳವಣಿಗೆಯ ದರ ವಿಧಿಸಿದ ಮಿತಿಯಿಂದ ನಿರ್ಬಂಧಿತವಾಗಿದೆ (ಆಮೂಲಾಗ್ರ ಭೂ ಸುಧಾರಣೆಗಳನ್ನು ಕೈಗೊಳ್ಳದ ಕಾರಣದಿಂದಾಗಿ ಒಟ್ಟಾರೆ ಬೆಳವಣಿಗೆಯು ನಿರ್ಬಂಧಿಸಲ್ಪಟ್ಟಿದೆ ಎಂದು ಕಲೆಕ್ಕಿ ವಾದಿಸಿದ್ದರು). ಎರಡು
ಎರಡನೆಯ ವಿಧಾನವೆಂದರೆ, ಆಹಾರ ಧಾನ್ಯಗಳ “ಮಿಗುತಾಯ” ಕಂಡುಬರುವ ನವ ಉದಾರವಾದಿ ನಮೂನೆ. ಇದರಲ್ಲಿ ಒಟ್ಟಾರೆ ಬೆಳವಣಿಗೆಯ ದರವನ್ನು ನಿರ್ಬಂಧಿಸುವ ಒಂದು ಅಂಶವೆಂದರೆ, ಅದು ರಫ್ತುಗಳ ಬೆಳವಣಿಗೆಯೇ. ಒಂದು ಉನ್ನತ ದರದಲ್ಲಿ ವಿಸ್ತಾರಗೊಳ್ಳುತ್ತಿರುವ ವಿಶ್ವ ಮಾರುಕಟ್ಟೆಯಲ್ಲಿ ಒಂದು ದೇಶವು ತಾನು ಹೊಂದಿರುವ ಪಾಲನ್ನು ಕಾಪಾಡಿಕೊಳ್ಳುವುದು ಸಾಧ್ಯವಾದರೆ ಅಥವಾ ಇತರ ದೇಶಗಳಿಗೆ ನಷ್ಟವನ್ನುಂಟುಮಾಡಿ ವಿಶ್ವ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಾದರೆ ವೇಗವಾಗಿ ಬೆಳೆಯಬಹುದು. ವಿಶ್ವ ಮಾರುಕಟ್ಟೆಯಲ್ಲಿರುವ ಪೈಪೋಟಿಯಿಂದಾಗಿ ತಂತ್ರಜ್ಞಾನದ ಮತ್ತು ಸಂರಚನಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ಎರಡು
ಅವು ಸ್ವತಃ ಶ್ರಮದ ಉತ್ಪಾದಕತೆಯ ಬೆಳವಣಿಗೆಯ ಮೂಲಕ ಪ್ರಕಟಗೊಳ್ಳುತ್ತವೆ. ಅರ್ಥವ್ಯವಸ್ಥೆಯು ವೃದ್ಧಿಸುತ್ತಿರುವಾಗ ಉದ್ಯೋಗಗಳು ಒಂದು ನಿರ್ದಿಷ್ಟ ದರದಲ್ಲಿ ಹೆಚ್ಚಬಹುದು. ಆದರೆ, ಈ ದರವು ಉದ್ಯೋಗಾಕಾಂಕ್ಷಿಗಳ ಸಂಖ್ಯೆಯ ಬೆಳವಣಿಗೆಯ ದರಕ್ಕಿಂತ ಸಾಮಾನ್ಯವಾಗಿ ಕಡಿಮೆಯಿರುತ್ತದೆ. ಈ ಪರಿಸ್ಥಿತಿಯಲ್ಲಿ ಹೊಸಬರು ಮತ್ತು ಸರ್ಕಾರದಿಂದ ಹಿಂದೆ ಪಡೆಯುತ್ತಿದ್ದ ಬೆಂಬಲ ಮತ್ತು ರಕ್ಷಣೆಯನ್ನು ಕಳೆದುಕೊಂಡು ಬಡತನಕ್ಕೆ ತಳ್ಳಲ್ಪಟ್ಟ ಸ್ಥಳಾಂತರಗೊಂಡ ರೈತರು ಮತ್ತು ಕುಶಲಕರ್ಮಿಗಳು ಕಾರ್ಮಿಕ-ಬಲಕ್ಕೆ ಸೇರ್ಪಡೆಯಾಗುತ್ತಾರೆ ಮತ್ತು ಕಾರ್ಮಿಕ-ಬಲದ ಗಾತ್ರಕ್ಕೆ ಹೋಲಿಸಿದರೆ ಮೀಸಲು ಕಾರ್ಮಿಕ ಪಡೆಯ ಗಾತ್ರವು ದೊಡ್ಡದಾಗುತ್ತದೆ. ಇದರಿಂದಾಗಿ ಒಟ್ಟಾರೆಯಾಗಿ ದುಡಿಯುವ ಜನರ ನಿಜ ತಲಾ ವರಮಾನದಲ್ಲಿ ಇಳಿಕೆ ಸಂಭವಿಸುತ್ತದೆ ಅಥವಾ ನಾವು ಈ ಹಿಂದೆ ಹೇಳಿದ ರೀತಿಯ ವರಮಾನ ಸಂಕೋಚನಕ್ಕೆ ಕಾರಣವಾಗುತ್ತದೆ. ಈ ವಿದ್ಯಮಾನದಿಂದಾಗಿ ಆಹಾರ ಧಾನ್ಯಗಳ ದಾಸ್ತಾನಿನಲ್ಲಿ “ಮಿಗುತಾಯ” ಕಾಣುತ್ತದೆ. ಎರಡು
ತಲಾ ಜಿಡಿಪಿ ಬದಲು ತಲಾ ಅಗತ್ಯ ಬಳಕೆ
ಇದರಿಂದ ಎರಡು ತೀರ್ಮಾನಗಳಿಗೆ ಬರಬಹುದು: ಮೊದಲನೆಯದು, ಅಭಿವೃದ್ಧಿಯನ್ನು ಜನ ಕಲ್ಯಾಣದ ದೃಷ್ಟಿಯಲ್ಲಿ ಅಳೆಯ ಬೇಕೆಂದಾದರೆ, ಒಂದು ದೇಶದ ಪ್ರಗತಿಯನ್ನು ಅಳೆಯಲು ಒಂದು ಪ್ರಮುಖ ಚರ ಅಂಶವಾಗಿ ಸಾಮಾನ್ಯವಾಗಿ ಬಳಸಲಾಗುತ್ತಿರುವ ತಲಾ ಜಿಡಿಪಿಯ ಬೆಳವಣಿಗೆಯ ಬದಲಾಗಿ, ದುಡಿಯುವ ಜನರು ಬಳಸಲು ಸಾಧ್ಯವಾಗುವ ಸರಕು ಮತ್ತು ಸೇವೆಗಳ “ನಿಜ” ಪ್ರಮಾಣದ ತಲಾ ಬೆಳವಣಿಗೆಯನ್ನು ಪರಿಗಣಿಸಬೇಕು, ಅಂದರೆ, ನಾವು “ಅಗತ್ಯಗಳು” ಎಂದು ಕರೆಯುವ ಅನುಭೋಗದಲ್ಲಿ ತಲಾ ಬೆಳವಣಿಗೆಯನ್ನು ಪರಿಗಣನೆಗೆ ತಗೊಳ್ಳಬೇಕು. ಅದರಲ್ಲಿ ಆಹಾರ ಧಾನ್ಯಗಳ ನೇರ ಮತ್ತು ಪರೋಕ್ಷ ಬಳಕೆಯು ಒಂದು ಗಮನಾರ್ಹ ಭಾಗವಾಗಿರುತ್ತದೆ. ಇದು ನಿಯಂತ್ರಣ ನೀತಿಗಳ ವ್ಯವಸ್ಥೆ ಮತ್ತು ನವ ಉದಾರವಾದಿ ವ್ಯವಸ್ಥೆ ಎರಡಕ್ಕೂ ಒಂದೇ ರೀತಿಯಲ್ಲಿ ಅನ್ವಯಿಸಬಹುದಾದ ಅಳತೆಯಾಗಿದೆ. ಎರಡು
ನಿಯಂತ್ರಣ ನೀತಿಗಳ ವ್ಯವಸ್ಥೆಯಲ್ಲಿ “ಅಗತ್ಯ ವಸ್ತುಗಳ” ನಿಜ ಬಳಕೆಯ ತಲಾ ಬೆಳವಣಿಗೆಯ ದರವು ಆಂತರಿಕವಾಗಿ ಉತ್ಪಾದನೆಯಾಗುವ ಅಗತ್ಯ ವಸ್ತುಗಳ ತಲಾ ಬೆಳವಣಿಗೆಯ ದರಕ್ಕೆ ಸಮನಾಗಿರುತ್ತದೆ (ಇಂತಹ ವ್ಯವಸ್ಥೆಯಲ್ಲಿ ಹಣಕಾಸಿನ ಹರಿವಿನ ಮೇಲಿದ್ದ ಸರ್ವವ್ಯಾಪಿ ನಿಯಂತ್ರಣಗಳಿಂದಾಗಿ ವಿದೇಶಿ ವಿನಿಮಯವು ಹೇರಳವಾಗಿ ಲಭಿಸುತ್ತಿರಲಿಲವಾದ್ದರಿಂದ ಆಹಾರ ಧಾನ್ಯಗಳನ್ನು ಮತ್ತು ಇತರ ಅಗತ್ಯವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಬಹಳ ತ್ರಾಸದಾಯಕವಾಗಿತ್ತು). ಆದರೆ, ನವ ಉದಾರವಾದಿ ಆಳ್ವಿಕೆಯಲ್ಲಿ ದುಡಿಯುವ ಜನರ ಕೈಯಲ್ಲಿ ಸಾಕಷ್ಟು ಕೊಳ್ಳುವ ಶಕ್ತಿ ಇಲ್ಲದಿರುವುದರಿಂದ ಈ ತಲಾ ಬೆಳವಣಿಗೆ-ದರವನ್ನು “ಅಗತ್ಯ ವಸ್ತುಗಳ” ಬೇಡಿಕೆಯ ಬೆಳವಣಿಗೆಯ ದರವು ಸೀಮಿತಗೊಳಿಸುತ್ತದೆ.
ಎರಡನೆಯದು, ಅರ್ಥವ್ಯವಸ್ಥೆಯಲ್ಲಿ ಅಂತಹ ಸರಕುಗಳ “ಮಿಗುತಾಯ” ಲಭ್ಯವಿರುವ ಪರಿಸ್ಥಿತಿಯಲ್ಲಿ ಉದ್ಯೋಗಗಳನ್ನು ಹೆಚ್ಚಿಸುವ ಮೂಲಕ ಅಗತ್ಯವಸ್ತುಗಳ ಬಳಕೆಯ ಬೆಳವಣಿಗೆಯ ದರವನ್ನು ಹೆಚ್ಚಿಸಬಹುದು. ಹಾಗೆ ಮಾಡದಿರುವುದು ಒಂದು ಅವಿವೇಕದ ಪರಿಸ್ಥಿತಿಯಾಗುವುದರಿಂದ ಅದನ್ನು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಸರಿಪಡಿಸಬೇಕು. ಇದನ್ನು ಪ್ರಭುತ್ವವು ತನ್ನ ವೆಚ್ಚಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಮಾಡಬಹುದು. ಉದ್ಯೋಗ ಸೃಷ್ಟಿಸುವ ವೆಚ್ಚಗಳಿಗಾಗಿ ಪ್ರಭುತ್ವವು ವಿತ್ತೀಯ ಕೊರತೆಯ ಮೂಲಕ ಅಥವಾ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಮೂಲಕ ಮಾತ್ರ ಹಣ ಒದಗಿಸಿಕೊಳ್ಳಬೇಕು. ದುಡಿಯುವ ಜನರ ಮೇಲೆ ವಿಧಿಸಿದ ತೆರಿಗೆಯ ಮೂಲಕ ಪಡೆದ ಆದಾಯವನ್ನು ಖರ್ಚು ಮಾಡುವುದರಿಂದ ಉದ್ಯೋಗಗಳು ಹೆಚ್ಚುವುದಿಲ್ಲ; ಒಂದು ರೀತಿಯ ಬೇಡಿಕೆಯ ಬದಲು ಇನ್ನೊಂದು ರೀತಿಯ ಬೇಡಿಕೆಯನ್ನು ಪೂರೈಸಿದಂತಾಗುತ್ತದೆಯಷ್ಟೇ. ಎರಡು
ಆದರೆ, ಹೆಚ್ಚಿನ ವೆಚ್ಚಗಳಿಗಾಗಿ ಪ್ರಭುತ್ವವು ಹಣ ಒದಗಿಸಿಕೊಳ್ಳುವ ಈ ಎರಡೂ ವಿಧಾನಗಳನ್ನೂ ಜಾಗತೀಕರಣಗೊಂಡ ಹಣಕಾಸು ಬಂಡವಾಳವು ತೀವ್ರವಾಗಿ ವಿರೋಧಿಸುತ್ತದೆ. ಅಂದರೆ, ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಪ್ರಾಬಲ್ಯವೇ ಉದ್ಯೋಗಗಳನ್ನು ವಿಸ್ತರಿಸುವಲ್ಲಿರುವ ನಿಜವಾದ ನಿರ್ಬಂಧ. ತೀವ್ರ ನಿರುದ್ಯೋಗ ಮತ್ತು ಧಾನ್ಯಗಳ “ಮಿಗುತೆ” ದಾಸ್ತಾನು ಜೊತೆಜೊತೆಯಾಗಿಯೇ ಇರುವ ಒಂದು ಸಂಪೂರ್ಣ ವ್ಯರ್ಥದ ಮತ್ತು ಅವಿವೇಕದ ಪರಿಸ್ಥಿತಿಯನ್ನು ನಿವಾರಿಸಬೇಕು ಎಂದಾದರೆ, ಬಂಡವಾಳದ ಹರಿದಾಟದ ಮೇಲೆ ನಿಯಂತ್ರಣಗಳನ್ನು ಹೇರುವ ಮೂಲಕ ಹಣಕಾಸು ಬಂಡವಾಳದ ಈ ಪ್ರಾಬಲ್ಯವನ್ನು ನಿವಾರಿಸಬೇಕಾಗುತ್ತದೆ. ಬಂಡವಾಳದ ಹರಿದಾಟದ ಮೇಲೆ ನಿಯಂತ್ರಣಗಳನ್ನು ಹೇರುವುದು ಎಂದರೆ, ದೇಶ ದೇಶಗಳ ಗಡಿಗಳಾಚೆ ಹರಿದಾಡುವ ಬಂಡವಾಳದ, ವಿಶೇಷವಾಗಿ ಹಣಕಾಸು ಬಂಡವಾಳದ ಅನಿಯಂತ್ರಿತ ಹರಿವನ್ನೇ ಜೀವ ನಾಡಿಯಾಗಿ ಹೊಂದಿರುವ ನವ ಉದಾರವಾದಿ ಆಳ್ವಿಕೆಗೆ ಅಂತ್ಯ ಹಾಡುವುದು ಎಂದೇ ಅರ್ಥ.
ಕಳಪೆ ಮತ್ತು ವಿಚಾರಹೀನ
ಅಭಿವೃದ್ಧಿಯನ್ನು ಅಳೆಯಲು ಬಳಸುವ ತಲಾ ಜಿಡಿಪಿಯ ಬೆಳವಣಿಗೆಯ ಮಾನದಂಡಕ್ಕೆ ಪರ್ಯಾಯವಾಗಿ ನಾವು ಮೇಲೆ ಸೂಚಿಸಿದ ದುಡಿಯುವ ಜನರ ಸರಕು ಸೇವೆಗಳ ತಲಾ “ನಿಜ” ಬಳಕೆಯ ಬೆಳವಣಿಗೆಯ ಮಾನದಂಡದಿಂದಅಳೆದಾಗ, ನವ ಉದಾರವಾದಿ ಅವಧಿಯು ನಿಯಂತ್ರಣ ನೀತಿಗಳ ಅವಧಿಗಿಂತ ಕೆಟ್ಟದಾಗಿದೆ ಎಂಬುದು ತಿಳಿದುಬರುತ್ತದೆ. ಅದಕ್ಕಿಂತಲೂ ಮಿಗಿಲಾಗಿ, “ಮಿಗುತೆ” ಆಹಾರ ಧಾನ್ಯಗಳ ದಾಸ್ತಾನು ವ್ಯರ್ಥವಾಗಿ ಬಿದ್ದಿದ್ದರೂ, ನವ ಉದಾರವಾದಿ ಆಳ್ವಿಕೆಯು ಉದ್ಯೋಗಗಳನ್ನು ಹೆಚ್ಚಿಸುವಲ್ಲಿ ಅಡ್ಡಿಯಾಗಿದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಗತಿಯನ್ನು ಸಾಧಿಸುವಲ್ಲಿ ನವ ಉದಾರವಾದವು ಕಳಪೆಯಾಗಿದೆ ಮಾತ್ರವಲ್ಲ, ಅದು ವಿಚಾರಹೀನವೂ ಹೌದು. ಎರಡು
ಇದನ್ನು ಹೇಳುವುದು ನವ ಉದಾರವಾದದ ಮುಂಚಿನ ರೀತಿಯ ನಿಯಂತ್ರಣ ನೀತಿಗಳ ವ್ಯವಸ್ಥೆಗೆ ನಾವು ಹಿಂತಿರುಗಬೇಕು ಎಂದು ಸೂಚಿಸುವುದಕ್ಕಲ್ಲ. ನಿಯಂತ್ರಣ ನೀತಿಗಳ ವ್ಯವಸ್ಥೆಯ ಅಡಿಯಲ್ಲಿ ಬೆಳವಣಿಗೆಯ ದರವು ಕೃಷಿಯ ಬೆಳವಣಿಗೆಯ ದರವನ್ನು, ಅದರಲ್ಲೂ ವಿಶೇಷವಾಗಿ ಆಹಾರ ಧಾನ್ಯಗಳ ಬೆಳವಣಿಗೆ ದರವನ್ನು ಅವಲಂಬಿಸಿತ್ತು ಎಂಬುದನ್ನು ನಾವು ನೋಡಿದೆವು. ಉದ್ಯೋಗಗಳನ್ನು ಹೆಚ್ಚಿಸಬೇಕು ಎಂದಾದರೆ ಸಂಭವಿಸಬೇಕಾದ ನಿಯಂತ್ರಣ ನೀತಿಗಳ ಪುನರುಜ್ಜೀವನವು ಆಹಾರ ಧಾನ್ಯ ಬೆಳವಣಿಗೆಯ ದರ ಉನ್ನತ ಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಭೂ ಸುಧಾರಣೆಗಳು ಮಾತ್ರವಲ್ಲದೆ ಭೂ-ಉತ್ಪಾದಕತೆಯನ್ನು ಹೆಚ್ಚಿಸಲು ಸರ್ಕಾರದ ಸಂಘಟಿತ ಪ್ರಯತ್ನವೂ ಇರಬೇಕಾಗುತ್ತದೆ. ಎರಡು
ಭೂಸುಧಾರಣೆಗಳು ಎಂಬ ಪದವನ್ನು ಸಾಮಾನ್ಯವಾಗಿ ಭೂಮಾಲೀಕರ ಕೈಗಳಲ್ಲಿ ಭೂ ಕೇಂದ್ರೀಕರಣವನ್ನು ಮುರಿಯುವುದು ಎಂದು ತಿಳಿಯಲಾಗುತ್ತದೆ. ಆದರೆ ಇದು ಒಂದು ಅಪೂರ್ಣ ತಿಳುವಳಿಕೆಯಾಗಿದೆ. ಅಪಾರ ಪ್ರಮಾಣದ ಭೂಮಿ ಸ್ವಾತಂತ್ರ‍್ಯ ಪೂರ್ವದ ಸರ್ಕಾರಗಳು ನೀಡಿದ ಬಹುತೇಕ ದೀರ್ಘಾವಧಿಯ ತೋಟಗಾರಿಕೆ ಗುತ್ತಿಗೆಗಳಲ್ಲಿ ಬಂಧಿಯಾಗಿದೆ. ಈ ಗುತ್ತಿಗೆ ಭೂಮಿಯ ಬಹುತೇಕ ಭಾಗವನ್ನು ಯಾವುದೇ ಉತ್ಪಾದಕ ಉದ್ದೇಶಗಳಿಗಾಗಿ ಬಳಸುತ್ತಿಲ್ಲ. ಈ ಭೂಮಿಯನ್ನೂ ಸಹ ಭೂಸುಧಾರಣೆಗಳ ವ್ಯಾಪ್ತಿಗೆ ತರಬೇಕು. ನವ ಉದಾರವಾದದ ಅಡಿಯಲ್ಲಿನ ರಫ್ತು-ನೇತೃತ್ವದ ಬೆಳವಣಿಗೆಗೆ ಪರ್ಯಾಯವೆಂದರೆ ಕೇವಲ ಪ್ರಭುತ್ವ-ಆಶ್ರಿತ ಬೆಳವಣಿಗೆಯಲ್ಲ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಅದು ಪ್ರಭುತ್ವದ ಆಶ್ರಯದ ಅಡಿಯಲ್ಲಿ ಕೃಷಿ-ಪ್ರಧಾನ ಬೆಳವಣಿಗೆ. ಎರಡು
ಇದನ್ನೂ ನೋಡಿ: ಸುಗ್ಗಿ ಸಂಭ್ರಮ : ತೊಳಸಾಣಿ ಸುಗ್ಗಿ ತಂಡದ ಕೋಲಾಟ Janashakthi Media