ಟ್ವಿಟ್ಟರ್‌ನಲ್ಲಿ ಭಾರೀ ಟ್ರೇಂಡ್‌ ಆಗುತ್ತಿದೆ ಮೋದಿಮೋಸ ಅಭಿಯಾನ

ಬೆಂಗಳೂರು: ಸುಮಾರು 3,800 ಕೋಟಿ ಮೊತ್ತದ 8 ಯೋಜನೆಗಳನ್ನು ಉದ್ಘಾಟನೆಗೊಳಿಸಿ ಮಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಆಗಮನದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್‌ ಒಳಗೊಂಡು ಹಲವು ರೀತಿಯಲ್ಲಿ ಅಭಿಯಾನಗಳು ನಡೆಯುತ್ತಿವೆ.

ಈ ಬೆನ್ನಲ್ಲೇ ಜಾಲತಾಣದಲ್ಲಿ ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ಆಡಳಿತದ ವಿರುದ್ಧ ಅಭಿಯಾನ ಭಾರೀ ಪ್ರಮಾಣದಲ್ಲಿ ಜೋರಾಗಿದ್ದು, ಟ್ವಿಟ್ಟರ್‌ನಲ್ಲಿ `ಮೋದಿ ಮೋಸ, ಗೋಬ್ಯಾಕ್ ಮೋದಿ’ ಹೆಸರಿನ ಅಭಿಯಾನ ಭಾರೀ ಟ್ರೇಂಡ್‌ ಆಗಿದೆ.

ಪ್ರತಿಪಕ್ಷದ ನಾಯಕರು ಸರಣಿ ಟ್ವೀಟ್‌ಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಸಹ `ಉತ್ತರ ಕೊಡಿ ಮೋದಿ’ ಅಭಿಯಾನ ಆರಂಭಿಸಿದೆ. ಹಿಂದೆ ನೀಡಿದ ಭರವಸೆ ಹಾಗೂ ಇಡೇರದ ಭರವಸೆಗಳ ದೊಡ್ಡ ಪಟ್ಟಿಯನ್ನೇ ಮಾಡುವ ಮೂಲಕ ಪ್ರಶ್ನೆಗಳನ್ನು ಕೇಳಲಾಗಿದೆ.

2018ರಲ್ಲಿ ಮೈಸೂರನ್ನು ಪ್ಯಾರಿಸ್ ಮಾಡುತ್ತೇವೆ ಅಂದಿದ್ದರು ಆದರೆ 2022ರಲ್ಲಿ ಕನಿಷ್ಠ ಪಕ್ಷ ಮೊನ್ನೆಯ ಮಳೆಗೆ ಮೈಸೂರಿಗೆ ತೆರಳುವ ನಿಮ್ಮ ಹೊಚ್ಚ ಹೊಸ ರಾಷ್ಟ್ರೀಯ ಹೆದ್ದಾರಿ ‘ವೆನಿಸ್’ ಆಗಿ ಬದಲಾಗಿತ್ತು. ಇದು ನಿಮ್ಮ ಗಮನಕ್ಕೆ ಬಂದಿದೆಯೇ? ಎಂದು ಕೇಳಲಾಗಿದೆ. ಸರ್ಕಾರಿ ಉದ್ಯೋಗಗಳು ಮಾರಾಟವಾಗುತ್ತಿವೆ, ಡಬಲ್ ಇಂಜಿನ್ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಅಭಿವೃದ್ಧಿಪಡಿಸುವುದೇ ಹೊಸ ಯುಗದ ಆರಂಭ ಎಂಬ ವಿವಿಧ ರೀತಿಯ ವಿಷಯಗಳನ್ನು ಪ್ರಸ್ತಾಪ ಮಾಡುವ ಮೂಲಕ ಆಕ್ರೋಶ ವ್ಯಕ್ತವಾಗಿದೆ.

ಮೋದಿ ಕಾರ್ಯಕ್ರಮಕ್ಕೆ ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಲವಂತದಿಂದ ಜನರನ್ನು ಸೇರಿಸುವ ದುರ್ಗತಿ ಕರ್ನಾಟಕ ಬಿಜೆಪಿ ಸರ್ಕಾರಕ್ಕೆ ಬಂದಿದೆ. ಈ ಬಲವಂತವೇ ಸರ್ಕಾರದ ದುರಾಡಳಿತಕ್ಕೆ, ಜನವಿರೋಧಕ್ಕೆ ಸಾಕ್ಷಿಯಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ `ಫಲ’ವೇ ಇಲ್ಲದಿರುವಾಗ ಫಲಾನುಭವಿಗಳು ಎಲ್ಲಿ ಸಿಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅನಾಚಾರ ಹಾಗೂ ಮೋದಿ ಮೋಸದಿಂದ ಜನತೆ ಆಕ್ರೋಶಗೊಂಡಿರುವುದು ಕರ್ನಾಟಕ ಬಿಜೆಪಿ ಗಮನಕ್ಕೆ ಬಂದಿದೆ. ಮೋದಿ ಎದುರು ಖಾಲಿ ಕುರ್ಚಿಗಳ ಮೂಲಕ ಜನಾಕ್ರೋಶ ವ್ಯಕ್ತವಾಗುವ ಭಯದಲ್ಲಿ ಜನ ಸೇರಿಸಲು ತಿಪ್ಪರಲಾಗಾ ಹಾಕಿದ್ದಾರೆ. ಜನ ಸೇರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು ಸರ್ಕಾರದ ದಿವಾಳಿತನದ ಸಾಕ್ಷಿ ಎಂದು ಟೀಕಿಸಲಾಗುತ್ತಿದೆ.

ಮಂಡ್ಯದಲ್ಲಿ `ಖಾಲಿ ಕುರ್ಚಿ ಉತ್ಸವ’ದಿಂದ ಕಂಗೆಟ್ಟ ಬಸವರಾಜ್ ಬೊಮ್ಮಾಯಿ ಅವರು, ಪ್ರಧಾನಿ ಎದುರು ಮಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹಾಗಾಗಿಯೇ ಜನ ಸೇರಿಸಲು ನೂಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರಿಗೆ ಕಿರುಕುಳ ನೀಡಿ ಕರೆತರುವ ಈ ಬಲವಂತವು ಸರ್ವಾಧಿಕಾರಿಯನ್ನು ಮೆಚ್ಚಿಸಲು ಮುಖ್ಯಮಂತ್ರಿಗಳ ಸರ್ವಾಧಿಕಾರಿ ನಡೆಯಾಗಿದೆ ಎಂದು ಟೀಕಿಸಲಾಗಿದೆ.

ಬಿಜೆಪಿ ಸರ್ಕಾರದಿಂದ ಜನರಿಗೆ ಫಲವೇ ಸಿಕ್ಕಿಲ್ಲ, ಈ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಲೂಟಿ ಮಾಡಿದವರು, ನೇಮಕಾತಿ ಅಕ್ರಮಗಳನ್ನು ನಡೆಸಿದವರು, ಅರ್ಹತೆ ಇಲ್ಲದೆಯೇ ಅಧಿಕಾರ ಪಡೆದವರೇ ಫಲಾನುಭವಿಗಳಾಗಿದ್ದಾರೆ. ಮೋದಿಯವರೇ ಈ ಫಲಾನುಭವಿಗಳನ್ನು ಭೇಟಿಯಾಗಲು ಮೈದಾನ ಬೇಡ, ಬಿಜೆಪಿ ಕಚೇರಿಯೇ ಸಾಕಿತ್ತು ಎಂದು ಕುಟುಕಿದೆ.

ಅಲ್ಲದೆ, ಪೆಟ್ರೋಲ್, ಡೀಸೆಲ್ ಕೊಳ್ಳಲು ಜನರ ಜೇಬಲ್ಲಿ ದುಡ್ಡಿದೆಯಾ ಎಂದು ನೀವು ಪ್ರಶ್ನಿಸುವಿರೇ?  ನಿಮ್ಮ ಹತ್ತಿರ ಇದ್ಯಾ ಉತ್ತರ ಎಂದು ಕೇಳಿದೆ. ಕೇವಲ ಆಶ್ವಾಸನೆಗಳಲ್ಲಿ ದೇಶ ಕಳೆದುಹೋಗಿದೆ” ಇದು ಮೋದಿ, ಮೋದಿಯವರಿಗಾಗಿಯೇ ಆಡಿದ ಮಾತುಗಳು!. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ನೇಮಕಾತಿಗಳಲ್ಲಿ ಸಾಲು ಸಾಲು ಅಕ್ರಮ ನಡೆಯುತ್ತಿವೆ. ಮೋಸದ ಮಾತುಗಳಿಗೆ ಮೋದಿ ಉತ್ತರಿಸುವ ಸಮಯವಿದು ಎಂದು ಕೇಳಲಾಗಿದೆ.

Donate Janashakthi Media

One thought on “ಟ್ವಿಟ್ಟರ್‌ನಲ್ಲಿ ಭಾರೀ ಟ್ರೇಂಡ್‌ ಆಗುತ್ತಿದೆ ಮೋದಿಮೋಸ ಅಭಿಯಾನ

Leave a Reply

Your email address will not be published. Required fields are marked *