ಖ್ಯಾತನಾಮರ ಖಾತೆಗಳ ‘ಬ್ಲೂಟಿಕ್‌’ ತೆಗೆಯಲು ಮುಂದಾದ ಟ್ವಿಟರ್

ಲಾಸ್‌ ಏಂಜಲೀಸ್‌: ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರ ಅಧಿಕೃತ ಟ್ವಿಟರ್ ಖಾತೆಗಳಿಂದ ‘ಬ್ಲೂ ಟಿಕ್‌’ ಗುರುತನ್ನು ತೆಗೆದುಹಾಕುವ ಕಾರ್ಯವನ್ನು ಟ್ವಿಟರ್ ಗುರುವಾರದಿಂದ ಆರಂಭಿಸಿದೆ.

ಹಲವು ಮಾನದಂಡಗಳನ್ನು ಅನುಸರಿಸಿ, ಅಧಿಕೃತವಾದ ಮತ್ತು ಪರಿಶೀಲನೆಗೆ (ವೆರಿಫೈಡ್‌) ಒಳಪಟ್ಟ ಟ್ವಿಟರ್‌ ಖಾತೆಗಳಿಗೆ ಮಾತ್ರ ಈ ಹಿಂದೆ ಬ್ಲೂಟಿಕ್‌ ನೀಡಲಾಗುತ್ತಿತ್ತು.

ರಾಜಕಾರಣಿಗಳು, ಸಿನಿಮಾ ನಟರು, ಸಾಮಾಜಿಕ ರಂಗದಲ್ಲಿರುವವರು, ಪ್ರತಿಷ್ಠಿತ ಸಂಸ್ಥೆಗಳು.. ಒಟ್ಟಾರೆಯಾಗಿ ಖ್ಯಾತನಾಮರು ಈ ವ್ಯವಸ್ಥೆಯಲ್ಲಿ ಹಲವು ವರ್ಷಗಳಿಂದ ಉಚಿತವಾಗಿ ‘ಬ್ಲೂ ಟಿಕ್’ ಹೊಂದಿದ್ದರು.

ಈ ಮಧ್ಯೆ, ಟೆಸ್ಲಾದ ಸಿಇಒ, ವಿಶ್ವದ ಶ್ರೀಮಂತ ಉದ್ಯಮಿ ಇಲಾನ್‌ ಮಸ್ಕ್‌ 2022ರ ಅಕ್ಟೋಬರ್‌ನಲ್ಲಿ ಟ್ವಿಟರ್ ಅನ್ನು 44 ಶತಕೋಟಿ ಡಾಲರ್‌ಗೆ (₹3.61 ಲಕ್ಷ ಕೋಟಿ) ಖರೀದಿಸಿದ್ದರು.

ಬ್ಲೂಟಿಕ್‌ ಹೊಂದಿರುವ ಖಾತೆದಾರರು ತಮ್ಮ ‘ವೆರಿಫೈಡ್‌’ ಸ್ಥಾನಮಾನ ಉಳಿಸಿಕೊಳ್ಳಬೇಕಿದ್ದರೆ ತಿಂಗಳಿಗೆ 8 ಡಾಲರ್‌ (₹657.24) ನೀಡಬೇಕಾಗುತ್ತದೆ ಎಂದು ಮಸ್ಕ್‌ ಹೇಳಿದ್ದರು. ಇಲ್ಲವಾದರೆ ಬ್ಲೂಟಿಕ್‌ ಗುರುತುಗಳನ್ನು ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದ್ದರು.

ಖಾತೆದಾರರು ಬ್ಲೂ ಟಿಕ್‌ ಉಳಿಸಿಕೊಳ್ಳಬೇಕಾದರೆ ಮಾಸಿಕ 20 ಡಾಲರ್‌ ಶುಲ್ಕ ಪಾವತಿಸಬೇಕು ಎಂದು ಮಸ್ಕ್‌ ಆರಂಭದಲ್ಲಿ ಹೇಳಿದ್ದರಾದರೂ, ತೀವ್ರ ವಿರೋಧಗಳ ಹಿನ್ನೆಲೆಯಲ್ಲಿ ಶುಲ್ಕ ತಗ್ಗಿಸಿದ್ದರು. ಪಾವತಿ ಮಾಡದವರ ‘ಬ್ಲೂ ಟಿಕ್‌’ಗಳನ್ನು ಏಪ್ರಿಲ್ ಆರಂಭದಿಂದಲೇ ತೆಗೆಯಲಾಗುವುದು ಎಂದು ಮಸ್ಕ್‌ ಹೇಳಿದ್ದರು. ಅದರಂತೆ ಕೆಲವರ ‘ಬ್ಲೂ ಟಿಕ್‌’ಗಳು ಕಣ್ಮರೆಗೊಂಡಿದ್ದವು. ಆದರೆ, ಗುರುವಾರ ಈ ಪ್ರಕ್ರಿಯೆ ಸಾಮೂಹಿಕವಾಗಿ ನಡೆದಿದೆ.

‘ನಾವು ‘ಬ್ಲೂ ಟಿಕ್‌’ ವೆರಿಪೈಡ್‌ ಗುರುತುಗಳನ್ನು ತೆಗೆದುಹಾಕುತ್ತಿದ್ದೇವೆ. ಟ್ವಿಟರ್‌ನಲ್ಲಿ ವೆರಿಫೈಡ್‌ ಖಾತೆಗಳನ್ನು ಉಳಿಸಿಕೊಳ್ಳಲು ‘ಟ್ವಿಟರ್‌ ಬ್ಲೂ’ಗೆ ಸೈನ್‌ಅಪ್‌ ಆಗಿ’ ಎಂದು ಟ್ವಿಟರ್‌ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : “ಹಕ್ಕಿ ನುಂಗಿದ ನಾಯಿ” ಟ್ವಿಟ್ವರ್ ಲೊಗೊ ಬದಲಾವಣೆ

ಟ್ವಿಟರ್‌ನ ಈ ನಿರ್ಧಾರದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾತೆಗಳನ್ನು ಇನ್ನು ಮುಂದೆ ದೃಢೀಕರಿಸಲು ಕಷ್ಟವಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ನಕಲಿ ಖಾತೆಗಳು ಹಣ ಪಾವತಿಸಿ ಬ್ಲೂಟಿಕ್‌ ಪಡೆದುಕೊಂಡು ವಂಚಿಸುವ ಸಾಧ್ಯತೆಗಳು ಹೆಚ್ಚಾಗಲಿವೆ ಎಂದು ಆರೋಪಿಸಿದ್ದಾರೆ.

ಟ್ವಿಟರ್ ಅನ್ನು ಸಂಪೂರ್ಣವಾಗಿ ತ್ಯಜಿಸುವುದಾಗಿ ಕೆಲ ಸೆಲೆಬ್ರಿಟಿಗಳು ಹೇಳಿದ್ದರೆ, ಕೆಲ ಮಂದಿ ಈ ಬದಲಾವಣೆಯನ್ನು ಒಪ್ಪಲು ನಿರಾಕರಿಸಿದ್ದಾರೆ. ಹಣ ಪಾವತಿಸುವುದಿಲ್ಲ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *