ತುಂಗಭದ್ರಾ ಜಲಾಶಯ: 33 ಗೇಟ್‌ನಿಂದ ನದಿಗೆ 1.58 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ಗಂಗಾವತಿ: ತುಂಗಭದ್ರಾ ಜಲಾಶಯದಿಂದ ನದಿಗೆ 1.58 ಸಾವಿರ ಕ್ಯೂಸೆಕ್​​ಗೂ ಅಧಿಕ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ ಮತ್ತೆ ಪ್ರವಾಹ ಎದುರಾಗುವ ಸಂಭವವಿದೆ. ತಾಲೂಕಿನ ಆನೆಗೊಂದಿ ಭಾಗದಲ್ಲಿನ ಐತಿಹಾಸಿಕ ಸ್ಮಾರಕಗಳು ಸಂಪೂರ್ಣ ಜಲಾವೃತವಾಗಿದ್ದು, ಸಣಾಪುರದ ಕಲ್ಲಿನ ಸೇತುವೆ ಸುತ್ತ ನೀರು ಹರಿಯುತ್ತಿದೆ.

ಆನೆಗೊಂದಿ ಸಮೀಪದ ಶ್ರೀ ಕೃಷ್ಣದೇವರಾಯ ಸಮಾಧಿ ಹಾಗೂ ನವ ವೃಂದಾವನ ಗಡ್ಡೆಗೆ ತೆರಳಲು ಇದ್ದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಇಂದು(ಆಗಸ್ಟ್‌ 09) ಬೆಳಗ್ಗೆ 9 ಗಂಟೆಗೆ ಜಲಾಶಯದ ಮಟ್ಟ 1632.06 ಅಡಿಯಿದ್ದು, 1632 ಟಿಎಂಸಿ ನೀರಿನ ಸಂಗ್ರಹಣ ಸಾಮರ್ಥ್ಯವಿದೆ.

ಪ್ರತಿ ಗಂಟೆಗೆ 1.36 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಹಾಗಾಗಿ ಜಲಾಶಯದ 33 ಗೇಟ್‌ಗಳನ್ನು ತೆರೆಯಲಾಗಿದ್ದು,  1.58 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. 10,465 ಕ್ಯುಸೆಕ್‌ ನೀರು ಕಾಲುವೆಗಳಿಗೆ ಬಿಡಲಾಗುತ್ತಿದೆ. 25 ಕ್ರಸ್ಟ್‌ಗೇಟ್‌ಗಳನ್ನು 3.5 ಅಡಿ, ಎಂಟು ಗೇಟ್‌ಗಳನ್ನು 1.5 ಅಡಿ ಮೇಲಕ್ಕೆತ್ತಿ ನೀರು ಹರಿಸಲಾಗುತ್ತಿದೆ.

ವಿಜಯನಗರ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು-ಗರ್ಭಗುಡಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿದೆ. ಎರಡೂ ಗ್ರಾಮಸ್ಥರು ಕಣವಿ ಗ್ರಾಮದ ಮೂಲಕ ಸುತ್ತು ಬಳಸಿಕೊಂಡು ಸಂಚರಿಸುತ್ತಿದ್ದಾರೆ. ಸೇತುವೆ ಮೂಲಕ ಜನ ಓಡಾಡದಂತೆ ತಡೆಯಲು ಹಲುವಾಗಲು ಗ್ರಾಮದಲ್ಲಿ ಬ್ಯಾರಿಕೇಡ್‌ ಹಾಕಿ, ನಿರ್ಬಂಧ ವಿಧಿಸಲಾಗಿದೆ.

ಹೊಸಪೇಟೆ ಸಮೀಪದ ಕಂಪ್ಲಿ–ಗಂಗಾವತಿ ಸೇತುವೆ ಮಂಗಳವಾರ ಸಂಪೂರ್ಣ ಮುಳುಗಿದೆ. ನೆನ್ನೆ(ಆಗಸ್ಟ್‌ 08) ಸೇತುವೆಗೆ ಸಮನಾಗಿ ನೀರು ಹರಿಯುತ್ತಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಈಗ ಎಲ್ಲ ವಾಹನಗಳು ಬುಕ್ಕಸಾಗರ–ಕಡೇಬಾಗಿಲು ಸೇತುವೆ ಮೂಲಕ ಸಂಚರಿಸುತ್ತಿವೆ. ಕಂಪ್ಲಿಯ ಬಾಳೆ, ಕಬ್ಬು, ಭತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು, ಮೀನುಗಾರರ ಕಾಲೊನಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ಸಮಸ್ಯೆಗಳು ಎದುರಾಗಿದೆ.

ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಟ್ಟಿರುವುದರಿಂದ ಹಂಪಿ ಸ್ನಾನಘಟ್ಟ, ಕರ್ಮಮಂಟಪ, ಪುರಂದರದಾಸರ ಮಂಟಪ, ಚಕ್ರತೀರ್ಥ, ರಾಮ–ಲಕ್ಷ್ಮಣ ದೇವಸ್ಥಾನ, ವಿಜಯನಗರ ಕಾಲದ ಕಾಲು ಸೇತುವೆ ಸಂಪೂರ್ಣ ಮುಳುಗಡೆಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹಂಪಿ ಪರಿಸರದಿಂದ ಹರಿಯುವ ತುಂಗಭದ್ರಾ ನದಿ ತಟದಲ್ಲಿ ಪೊಲೀಸರು, ಗೃಹರಕ್ಷಕರನ್ನು ಭದ್ರತೆಗೆ ನಿಯೋಜಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *