ಸಮರ್ಪಕ ನೀರಿಗಾಗಿ ಆಗ್ರಹಿಸಿ ಲೋಟ ತಟ್ಟೆ ಹಿಡಿದು ಪಂಚಾಯಿತಿ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

ದೊಡ್ಡಬಳ್ಳಾಪುರ: ಶಾಲೆಯಲ್ಲಿ ಸಮರ್ಪಕ ನೀರಿನ ಸರಬರಾಜು ಆಗದ ಹಿನ್ನೆಲೆ ವಿದ್ಯಾರ್ಥಿಗಳು ಕೈಯಲ್ಲಿ ಲೋಟ ತಟ್ಟೆ ಹಿಡಿದು ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಘಟನೆ ಮೆಳೇಕೋಟೆ ಗ್ರಾಮದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ನೀರಿನ ಸಮಸ್ಯೆಯುಂಟಾಗಿದೆ. ಶಾಲೆಯ ಅವರಣದಲ್ಲಿದ್ದ ಬೋರ್​ವೆಲ್​ಗೆ ಕಲ್ಲು ಹಾಕಿದ ಕಿಡಿಗೇಡಿಗಳು ಬೋರ್​ವೆಲ್​ ಹಾಳು ಮಾಡಿದ್ದಾರೆ. ಇದರಿಂದ ಪಂಚಾಯತ್ ವತಿಯಿಂದ ಬಿಡುವ ನೀರನ್ನ ಶಾಲೆ ಅವಲಂಬಿಸಿತ್ತು. ಪಂಚಾಯಿತಿ ಬಿಡುವ ನೀರಿನಲ್ಲಿ ಶೌಚಾಲಯ, ಬಿಸಿಯೂಟ ಸೇರಿದಂತೆ ನಿತ್ಯ ಬಳಕೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಸಮರ್ಪಕವಾಗಿ ಪಂಚಾಯತ್ ನೀರು ಬಿಡದಿದ್ದರಿಂದ ವಿದ್ಯಾರ್ಥಿಗಳು ನೀರಿಲ್ಲದೇ ಕಷ್ಟಪಡುತ್ತಿದ್ದರು. ಮೆಳೇಕೋಟೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಇಂದು ಪಂಚಾಯತ್ ಕಚೇರಿ ಮುಂದೆ ಲೋಟ ತಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಈ ಲಿಂಕ್ ಬಳಸಿ

ವಾಟರ್ ಮ್ಯಾನ್ ಸೀನಪ್ಪ ಬೇಜವಾಬ್ದಾರಿ ವರ್ತನೆಯಿಂದ ಶಾಲೆಗೆ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿರಲಿಲ್ಲ. ಇನ್ನೂ ಪಂಚಾಯತ್ ಪಿಡಿಓ ಅವರನ್ನ ಕೇಳಿದ್ರೆ ವಿದ್ಯುತ್ ಸಮಸ್ಯೆಯ ನೆಪ ಹೇಳುತ್ತಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳು ಲೋಟ ತಟ್ಟೆ ಹಿಡಿದು ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದ್ದರಿಂದ ಎಚ್ಚೆತ್ತ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸಿದ್ದಾರೆ ಮತ್ತು ಮೊದಲ ಆದ್ಯತೆಯಲ್ಲಿ ಶಾಲೆಗೆ ನೀರು ಬಿಡಲಾಗುವುದೆಂಬ ಭರವಸೆ ಸಹ ನೀಡಿದ್ದಾರೆ. ಜೊತೆಗೆ ಬೋರ್ ವೇಲ್ ರಿಪೇರಿ ಮಾಡಿಸಿ ಕೊಡುವುದಾಗಿ ಹೇಳಿದ್ದಾರೆ. ಸದ್ಯ ಶಾಲಾ ಮಕ್ಕಳ ನೀರಿನ ಸಮಸ್ಯೆ ಬಗೆಹರಿದಿದೆ.

Donate Janashakthi Media

Leave a Reply

Your email address will not be published. Required fields are marked *