ತಿರುಪತಿ: ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇವಾಲಯ ಎನಿಸಿಕೊಂಡಿರುವ ತಿರುಪತಿ ವೆಂಕಟೇಶ್ವರ ದೇಗುಲದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತನ್ನ ಆಸ್ತಿಗಳ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಿದ್ದು, ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯ ಸರ್ಕಾರ ಬಜೆಟ್ ಗಾತ್ರದಷ್ಟೇ (2022–23ನೇ ಸಾಲಿನ ಕರ್ನಾಟಕದ ಬಜೆಟ್ ಗಾತ್ರ ₹2.65 ಲಕ್ಷ ಕೋಟಿ) ಆಸ್ತಿಯನ್ನು ದೇವಾಲಯ ಹೊಂದಿದೆ.
ದೇವಾಲಯದ ಒಟ್ಟು ಆಸ್ತಿ ಮೌಲ್ಯ ₹2.26 ಕೋಟಿ ಇದೆ ಎಂದು ಘೋಷಣೆ ಮಾಡಲಾಗಿದ್ದು, ದೇಶಾದ್ಯಂತ ಒಟ್ಟು 960 ಕಡೆ 7123 ಎಕರೆ ಭೂಮಿ ಹೊಂದಿದೆ. ಭೂಮಿಯ ಒಟ್ಟು ಮಾರುಕಟ್ಟೆ ಮೌಲ್ಯ ₹2 ಲಕ್ಷ ಕೋಟಿಗೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ದೇವಾಲಯದ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ₹15,938 ಕೋಟಿ ಠೇವಣಿ ಇದೆ. ತಿರುಪತಿ ತಿರುಮಲದಲ್ಲಿರುವ ಆಸ್ತಿಯ ಮೌಲ್ಯ ₹5 ಸಾವಿರ ಕೋಟಿ, ವೆಂಕಟೇಶ್ವರ ಸ್ವಾಮಿ ಹೊಂದಿರುವ ಚಿನ್ನದ ದಾಸ್ತಾನು 10.25 ಟನ್ ಎಂದು ವರದಿಯಾಗಿದೆ. (ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಂಗಾರವನ್ನು ಠೇವಣಿ ಇಡಲಾಗಿದ್ದು ಇದರ ಒಟ್ಟು ಮೌಲ್ಯ 5,300 ಕೋಟಿ ರೂ.)
ದೇವಾಲಯಕ್ಕೆ ಚಿನ್ನವನ್ನು ಕಾಣಿಕೆಯಾಗಿ ನೀಡುವ ಜನರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಟ್ರಸ್ಟ್ ಹಂಚಿಕೊಂಡ ಬ್ಯಾಂಕ್‌ವಾರು ಹೂಡಿಕೆಯ ಪ್ರಕಾರ, ಟಿಟಿಡಿ 2019 ರಲ್ಲಿ 7339.74 ಟನ್ ಚಿನ್ನದ ಠೇವಣಿ ಹೊಂದಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ 2.9 ಟನ್‌ಗಳನ್ನು ಸೇರಿಸಲಾಗಿದೆ.
ದೇವಸ್ಥಾನದ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 2019ರಲ್ಲಿ ₹13,025 ಕೋಟಿ ಮೊತ್ತದ ನಿಶ್ಚಿತ ಠೇವಣಿ ಇಡಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಬಳಿಕ ಈ ಠೇವಣಿ ಗಾತ್ರ ₹15,938 ಕೋಟಿ ಮೊತ್ತಕ್ಕೆ ಏರಿಕೆಯಾಗಿದೆ. ಕೇವಲ ಮೂರು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ₹2,900 ಕೋಟಿ ಹೆಚ್ಚಳವಾಗಿದೆ ಎನ್ನುವುದು ಗಮನಾರ್ಹ.