ಸಾಮ್ರಾಜ್ಯಶಾಹಿಯ ಮರು ಪ್ರಾಬಲ್ಯಹೇರಿಕೆಗೆ ಟ್ರಂಪ್ ರಣತಂತ್ರ

ಬೇರೆ ದೇಶಗಳ ಮೇಲೆ ಬಲಾತ್ಕಾರದ ವಿಧಾನಗಳಿಗೇ ಹೆಸರಾಗಿರುವ ಟ್ರಂಪ್ ಅಧ್ಯಕ್ಷತೆಯ ಯುಎಸ್, ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನ ನಡೆಸಿರುವುದು ಮೇಲ್ನೋಟಕ್ಕೆ ಆಶ್ವರ್ಯವುಂಟು ಮಾಡಬಹುದು. ಆದರೆ ಇದು ಅವರ ‘ಆಮಿಷ ಮತ್ತು ದಂಡಪ್ರಯೋಗ’ದಸಂಯೋಜಿತ ರಣತಂತ್ರದಲ್ಲಿನ ಮನವೊಲಿಕೆಯ ಭಾಗ ಮಾತ್ರವಾಗಿದೆ. ಇದು ಯುಎಸ್ ನೇತೃತ್ವದ ಸಾಮ್ರಾಜ್ಯಶಾಹಿಯ ಪ್ರಾಬಲ್ಯವನ್ನು ಉಳಿಸಿಕೊಳ್ಳುವ, ಯುಎಸ್ ವಿರುದ್ಧವಾಗಿ ಮತ್ತು ಒಟ್ಟಾರೆಯಾಗಿ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯ ವಿರುದ್ಧವಾಗಿ ಒಂದು ಪರ್ಯಾಯ ಶಕ್ತಿ ಬಣ ರೂಪುಗೊಳ್ಳದಂತೆ ತಡೆಯುವ ರಣತಂತ್ರವಾಗಿದೆ. ಆದರೆ ಯುಎಸ್ ಉಂಡೂ ಹೋಗಬೇಕು, ಕೊಂಡೂ ಹೋಗಬೇಕು ಎನ್ನುವ ರೀತಿಯ ಈ ರಣತಂತ್ರ ನವ-ಉದಾರವಾದಿ ವ್ಯವಸ್ಥೆಯಲ್ಲಿ ಮೂಲಭೂತವಾಗಿ ಸಾಮ್ರಾಜ್ಯಶಾಹಿ ಪ್ರಾಬಲ್ಯವನ್ನು ಮರುಸ್ಥಾಪಿಸುವ ಯೋಜನೆಗೆ ಪ್ರತಿಕೂಲವಾಗಿದೆ. ಹಿಂದಿನ ಅಧ್ಯಕ್ಷ ಬೈಡೆನ್ ಇಂತಹ ಪ್ರಯತ್ನದಲ್ಲಿ ಸಾಮ್ರಾಜ್ಯಶಾಹಿಯನ್ನು ಒಂದು ಮೂಲೆಗೆ ತಳ್ಳಿದ್ದರೆ, ಆ ಮೂಲೆಯಿಂದ ಅದನ್ನು ಹೊರತೆಗೆಯುವ ಟ್ರಂಪ್ ಪ್ರಯತ್ನ ಸಾಮ್ರಾಜ್ಯಶಾಹಿಯನ್ನು ಇನ್ನೊಂದು ಮೂಲೆಗೆ ತಳ್ಳುತ್ತದೆ. ಮರು

-ಪ್ರೊ. ಪ್ರಭಾತ್ ಪಟ್ನಾಯಕ್

-ಅನು: ಕೆ.ಎಂ.ನಾಗರಾಜ್

ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಯು ವ್ಯಾಖ್ಯಾನಕಾರರನ್ನು ನಿಜಕ್ಕೂ ಗಲಿಬಿಲಿಗೊಳ್ಳುವಂತೆ ಮಾಡಿದೆ. ಉಕ್ರೇನ್ ಮತ್ತು ಗಾಜಾಗೆ ಸಂಬಂಧಿಸಿದಂತೆ ಅವರ ನಿಲುವುಗಳು ಗಮನಾರ್ಹವಾಗಿ ವಿಭಿನ್ನವಾಗಿವೆ. ಉಕ್ರೇನ್ ವಿಷಯದಲ್ಲಿ ಅವರು ಶಾಂತಿಯ ಪರವಾಗಿರುವಂತೆ ಕಾಣುವ ನಿಲುವನ್ನು ತಳೆಯುತ್ತಾರೆ ಮತ್ತು ಗಾಜಾದ ವಿಷಯದಲ್ಲಿ ಜನಾಂಗೀಯ ಆಧಾರದ ಮೇಲೆ ಇಡೀ ಜನಸಮುದಾಯದ ‘ಶುದ್ಧಿ’ಯನಿಲುವನ್ನು ತಳೆಯುತ್ತಾರೆ. ಹಾಗಾಗಿ, ವಿಶ್ವ ವ್ಯವಹಾರಗಳ ಮೇಲೆ ಟ್ರಂಪ್ ಅವರ ಪ್ರಭಾವವು “ಸಕಾರಾತ್ಮಕ”ವಾಗಿದೆಯೇ ಅಥವಾ ಇಲ್ಲವೇ ಎಂಬುದಾಗಿ ವ್ಯಾಖ್ಯಾನಕಾರರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಮರು

ಹಾಗೆ ನೋಡಿದರೆ, ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಗಲಿಬಿಲಿಗೊಳ್ಳುವ ಅವಶ್ಯಕತೆಯೇ ಇಲ್ಲ. ಸಾಮ್ರಾಜ್ಯಶಾಹಿಯ ವಿದ್ಯಮಾನವನ್ನು ಅರಿತುಕೊಳ್ಳದಿದ್ದಾಗ ಮಾತ್ರ ಟ್ರಂಪ್ ಅವರ ಹೇಳಿಕೆಗಳು ತಬ್ಬಿಬ್ಬುಗೊಳಿಸಬಹುದಷ್ಟೇ. ಉಕ್ರೇನ್ ಯುದ್ಧವು ಒಂದು ವಿನಾಶಕಾರಿ ಪರಮಾಣು ಮುಖಾಮುಖಿಯ ಹಂತಕ್ಕೆ ಉಲ್ಬಣಗೊಳ್ಳಲಿರುವ ಪರಿಸ್ಥಿತಿ ಅಥವಾ ಸಾಮ್ರಾಜ್ಯಶಾಹಿಯ ಪ್ರಾಬಲ್ಯವು ಕ್ರಮೇಣ ಇಳಿಕೆಯಾಗುವ ಪರಿಸ್ಥಿತಿ ಇವುಗಳ ನಡುವೆ ಆಯ್ಕೆ ಮಾಡಿಕೊಳ್ಳುವ ಹಂತಕ್ಕೆ ಯುಎಸ್ ನೇತೃತ್ವದ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯು ತನ್ನನ್ನು ತಾನೇ ತಳ್ಳಿಕೊಂಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಸಾಮ್ರಾಜ್ಯಶಾಹಿಯನ್ನು ಅಂತಹ ಒಂದು ಕಠಿಣ ಪರಿಸ್ಥಿತಿಯಿಂದ ಹೊರತರಲು ಡೊನಾಲ್ಡ್ ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ಅವರು “ಶಾಂತಿಪರ”ರೊ ಅಥವಾ “ಯುದ್ಧಕೋರ”ರೊ ಅಥವಾ ಅವರು ಯುರೋಪಿಯನ್ ಹಿತಾಸಕ್ತಿಗಳ ಬಗ್ಗೆ ಗಮನ ಹರಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ವಿಷಯವಲ್ಲ. ಮುಖ್ಯವಾದ ವಿಷಯವೆಂದರೆ, ಅವರು ಸಾಮ್ರಾಜ್ಯಶಾಹಿಯು ಮುಂದೆದಾರಿಗಾಣದ ಸ್ಥಿತಿಯನ್ನು ತಲುಪಿದ್ದು,  ಈ ಪರಿಸ್ಥಿತಿಯಿಂದ ಅದನ್ನು ರಕ್ಷಿಸುವ ಪರ್ಯಾಯ ಸಾಮ್ರಾಜ್ಯಶಾಹಿ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ ಎಂಬುದು. ಅವರು ಇದನ್ನು ಮಾಡಲಿದ್ದಾರೆ ಏಕೆಂದರೆ, ಈ ಅವ್ಯವಸ್ಥೆಯನ್ನು ಉಂಟುಮಾಡಿದ ನೀತಿಯನ್ನು ರೂಪಿಸಿದ ಕಳಂಕ ಅವರಿಗೆ ಅಂಟಿಲ್ಲ. ಮರು

ಕ್ರಮೇಣ ಶಿಥಿಲಗೊಳ್ಳುತ್ತಿರುವ ಸಾಮ್ರಾಜ್ಯಶಾಹಿ ಪ್ರಾಬಲ್ಯವನ್ನು ಪುನರ್‌ಪ್ರತಿಷ್ಟಾಪಿಸಲು ಟ್ರಂಪ್ ಬಳಸುವ ವಿಧಾನವು ಮನವೊಲಿಕೆ ಮತ್ತು ಬಲಾತ್ಕಾರ ಇವುಗಳ ಸಂಯೋಜನೆಯಾಗಿದೆ. ತಾವು ಹಾಕುವ ತಾಳಕ್ಕೆ ರಷ್ಯಾವನ್ನು ಕುಣಿಸಬಹುದು ಎಂಬ ಒಂದು ಅಂದಾಜಿನ ಮೇಲೆ ಉಕ್ರೇನ್ ಯುದ್ಧವನ್ನು ಮೂಲದಲ್ಲಿ ಪಾಶ್ಚ್ಯಾತ್ಯ ದೇಶಗಳು ಪ್ರಚೋದಿಸಿದ್ದವು. ಇದೊಂದು ತಪ್ಪಂದಾಜು ಎಂಬುದು ಈಗ ಸಾಬೀತಾಗಿದೆ. ಯುದ್ಧದಲ್ಲಿ ಉಕ್ರೇನಿಗೆ ಸತತವಾಗಿ ಹಿನ್ನೆಡೆಯಾಗಿದೆ ಮಾತ್ರವಲ್ಲ, ರಷ್ಯಾದ ಕರೆನ್ಸಿ “ರೂಬಲ್ ಅನ್ನು ಚೂರು ಚೂರು ಮಾಡುವ” ಉದ್ದೇಶದಿಂದ ರಷ್ಯಾದ ಮೇಲೆ ಹೇರಿದ ಆರ್ಥಿಕ ನಿರ್ಬಂಧಗಳುಅವರಿಗೇ ಒಂದು ತಿರುಗುಬಾಣವಾಗಿ ಪರಿಣಮಿಸಿವೆ. ಕೆಲವು ದಿನಗಳ ತಾತ್ಕಾಲಿಕ ಕುಸಿತದ ನಂತರ, ಡಾಲರ್‌ಗೆ ಹೋಲಿಸಿದರೆ, ರೂಬಲ್ ಚೇತರಿಸಿಕೊಂಡಿತು ಮಾತ್ರವಲ್ಲ, ನಿರ್ಬಂಧ-ಪೂರ್ವದಲ್ಲಿ ಅದು ಹೊಂದಿದ್ದ ಮೌಲ್ಯಕ್ಕಿಂತಲೂ ಹೆಚ್ಚು ಮೌಲ್ಯವನ್ನು ಪಡೆಯಿತು. ಅದಕ್ಕಿಂತಲೂ ಮಿಗಿಲಾಗಿ, ಡಾಲರ್ ಮೇಲೆ ಹೇರಿದ ಈ ನಿರ್ಬಂಧಗಳು ಡಾಲರ್‌ನ ಪ್ರಾಬಲ್ಯಕ್ಕೇ ಸವಾಲು ಒಡ್ಡುವ ಪ್ರತಿಕ್ರಿಯೆಯನ್ನು ಉಂಟುಮಾಡಿದವು. ಮರು

ಬ್ರಿಕ್ಸ್ ದೇಶಗಳ ಕಝಾನ್ ಶೃಂಗಸಭೆಯು “ಅಪ-ಡಾಲರೀಕರಣ”ದ ವಿಷಯವನ್ನು ಒಂದು ಗಂಭೀರ ಸಾಧ್ಯತೆಯಾಗಿ ಮಂಡಿಸಿತು. ಏಕಪಕ್ಷೀಯ ಸಾಮ್ರಾಜ್ಯಶಾಹಿ ನಿರ್ಬಂಧಗಳನ್ನು ಕೆಲವು ಸಣ್ಣ ಸಣ್ಣ ದೇಶಗಳ ಮೇಲೆ ಗುರಿ ಮಾಡಿ ಹೇರಿದಾಗ ಮಾತ್ರ ಪರಿಣಾಮಕಾರಿಯಾಗಬಲ್ಲವು. ಆದರೆ, ಅನೇಕ ದೇಶಗಳನ್ನು, ಅದರಲ್ಲೂ ರಷ್ಯಾದಂತಹ ದೊಡ್ಡ, ಅಭಿವೃದ್ಧಿ ಹೊಂದಿದ ಮತ್ತು ಸಂಪನ್ಮೂಲ-ಸಮೃದ್ಧ ದೇಶಗಳನ್ನು ಗುರಿಯಾಗಿಸಿಕೊಂಡಾಗ, ಅವು ಪರಿಣಾಮಕಾರಿ ನಿರ್ಬಂಧಗಳಾಗಿ ಉಳಿಯುವುದಿಲ್ಲ ಮಾತ್ರವಲ್ಲ, ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆ ಎಂದು ಹೇಳಲಾಗುವ ಪ್ರಬಲ ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧವೇ ಸಜ್ಜಾಗಿ ನಿಲ್ಲುವ ದೇಶಗಳ ಒಂದು ಸಮೂಹವನ್ನು ರಚಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತವೆ ಮತ್ತು ಈ ಪರ್ಯಾಯವು ನಿರ್ಬಂಧಗಳಿಗೆ ಒಳಗಾಗದ ದೇಶಗಳನ್ನೂ ಸಹ ತನ್ನ ಮಡಿಲಿಗೆ ಸೆಳೆದುಕೊಳ್ಳುತ್ತದೆ. ಮರು

 

 

 

ಚಿತ್ರಕೃಪೆ: ನ್ಯೂಸ್‍ಕ್ಲಿಕ್

 

 

  ದಯೆದಾಕ್ಷಿಣ್ಯವಿಲ್ಲದ ಸಾಮ್ರಾಜ್ಯಶಾಹಿಯಾಗಿ..

ಟ್ರಂಪ್ ಅಧಿಕಾರಕ್ಕೆ ಬರುವಾಗ ಜರುಗುತ್ತಿದ್ದುದು ಇದುವೇ ಮತ್ತು ಅಧಿಕಾರಕ್ಕೆ ಬಂದನಂತರ ಅವರು ಎದುರಿಸುತ್ತಿರುವುದು ಇದನ್ನೇ. ಅವರು ಅನುಸರಿಸುವ ‘ಮನವೊಲಿಕೆ ಮತ್ತು ಬಲಾತ್ಕಾರ’ ವಿಧಾನಗಳ ಪೈಕಿ ಬಲಾತ್ಕಾರ ಭಾಗವು ಪ್ರಸಿದ್ಧಿ ಪಡೆದಿದೆ. ಅಪ-ಡಾಲರೀಕರಣದತ್ತ ಹೊರಳುವ ದೇಶಗಳ ವಿರುದ್ಧ ಭಾರೀ ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕುತ್ತಾರೆ. ಇದೊಂದು ಸಾಮ್ರಾಜ್ಯಶಾಹಿಯ ನಿರ್ಲಜ್ಜ ಕ್ರಮ. ಇದು ಬಂಡವಾಳಶಾಹಿ ಕಾರ್ಯಾಚರಣೆಯ ನಿಯಮಗಳಿಗೆ ವಿರುದ್ಧವಾಗಿದೆ. ಈ ನಿಯಮಗಳ ಪ್ರಕಾರ, ಯಾವುದೇ ಒಂದು ದೇಶವು ತನ್ನ ವ್ಯಾಪಾರ ಪಾಲುದಾರರ ಸಮ್ಮತಿಯೊಂದಿಗೆ ಅದು ಇಷ್ಟಪಡುವ ಯಾವುದೇ ಕರೆನ್ಸಿಯಲ್ಲಿ ತನ್ನ ಸಂಪತ್ತನ್ನು ಹಿಡಿದಿಟ್ಟುಕೊಳ್ಳುವ ಸ್ವಾತಂತ್ರ‍್ಯವನ್ನು ಹೊಂದಿರುತ್ತದೆ. ಅಂತಹ ಒಂದು ದೇಶದ ವಿರುದ್ಧ ಹೆಚ್ಚಿನ ಸುಂಕಗಳನ್ನು ವಿಧಿಸುವ ಮೂಲಕ ಆ ದೇಶವು ಹೊಂದಿರುವ ಸ್ವಾತಂತ್ರ‍್ಯವನ್ನು ಮೊಟಕುಗೊಳಿಸುವುದು ಆ ದೇಶದ ಕೈ-ತಿರುಚುವ ಕ್ರಮವಾಗುತ್ತದೆ ಮತ್ತು ಅದನ್ನು ಯಾವ ಅಂತಾರಾಷ್ಟ್ರೀಯ ವ್ಯವಸ್ಥೆಯೂ ಅನುಮೋದಿಸುವುದು ಸಾಧ್ಯವಿಲ್ಲ. ಆದರೆ, ಒಬ್ಬ ಲಂಗುಲಗಾಮಿಲ್ಲದಮತ್ತು ದಯೆದಾಕ್ಷಿಣ್ಯವಿಲ್ಲದ ಸಾಮ್ರಾಜ್ಯಶಾಹಿಯಾಗಿ ಟ್ರಂಪ್, ದೇಶ ದೇಶಗಳನ್ನು ಅಂತಹ ಆರ್ಥಿಕ ಬಲಾತ್ಕಾರದ ಕ್ರಮಗಳಿಗೆ ಒಳಪಡಿಸಲು ಹಿಂಜರಿಯರು. ಮರು

ಇದನ್ನೂ ಓದಿ: ನಟಿ ರನ್ಯಾ ರಾವ್ ವಿರುದ್ಧದ CID ತನಿಖಾ ಆದೇಶ ಹಿಂಪಡೆದ ಕರ್ನಾಟಕ ಸರ್ಕಾರ

ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಅವರ ಪ್ರಯತ್ನವು ಅವರ ಈ ಮನವೊಲಿಕೆ ಮತ್ತು ಬಲಾತ್ಕಾರ ವಿಧಾನಗಳಲ್ಲಿ ಮನವೊಲಿಕೆಯ ಭಾಗವಾಗಿದೆ. ಯುಎಸ್ ವಿರುದ್ಧ ಮತ್ತು ಸಾಮಾನ್ಯವಾಗಿ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯ ವಿರುದ್ಧವಾಗಿ ಒಂದು ಪರ್ಯಾಯ ಶಕ್ತಿ ಬಣವಾಗಿ ರೂಪುಗೊಳ್ಳುವುದರ ಬದಲು, ರಷ್ಯಾಕ್ಕೆ ಪ್ರತಿಕೂಲವಲ್ಲದ ಷರತ್ತುಗಳ ಮೇಲೆ ಈ ಯುದ್ಧವನ್ನು ಕೊನೆಗೊಳಿಸುವುದು ರಷ್ಯಾವನ್ನು ಅಂತಹ ಯಾವುದೇ ಪರ್ಯಾಯ ಬಣದಿಂದ ದೂರವಿಡುತ್ತದೆ. ಈ ಮೂಲಕ ಸಾಮ್ರಾಜ್ಯಶಾಹಿ ಪ್ರಾಬಲ್ಯವನ್ನು ತಡೆಯಲು ನಡೆಯುತ್ತಿರುವ ಪ್ರಯತ್ನಗಳನ್ನು ದುರ್ಬಲಗೊಳಿಸಲಾಗುವುದು. ಮರು

ಮಾತುಕತೆಗಳ ಆಧಾರದ ಮೇಲೆ ಉಕ್ರೇನ್ ಯುದ್ಧದ ಯಾವುದೇ ರೀತಿಯ ಅಂತ್ಯವೂ ಸ್ವಾಗತಾರ್ಹವೇ. ಆದರೆ ಈ ಅಂತ್ಯವನ್ನು ಶಾಂತಿಯ ಹಂಬಲದ ಫಲಿತಾಂಶವೆವೆಂದೋ ಆಥವಾ ಯುರೋಪಿನ “ಭದ್ರತಾ ಕಾಳಜಿಗಳನ್ನು” ಬಲಿಕೊಟ್ಟು ಯುಎಸ್ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಕ್ರಮವೆಂದೋ ನೋಡುವುದು ತಪ್ಪಾಗುತ್ತದೆ. ಟ್ರಂಪ್ ಅವರೇನೂ ಶಾಂತಿ ಯಾತ್ರೆ ಕೈಗೊಂಡಿಲ್ಲ. ಅದೇನಾದರೂ ಇದ್ದಿದ್ದರೆ, ಅವರು ಗಾಜಾ ಬಗ್ಗೆ ಯುದ್ಧಕೋರ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಹಾಗೆ ನೋಡಿದರೆ ಬಂಡವಾಳಶಾಹಿಯು ಸ್ವಭಾವತಃ ಶಾಂತಿಗೆ ವಿರುದ್ಧವಾಗಿಯೇ ಇದೆ: ಫ್ರೆಂಚ್ ಸಮಾಜವಾದಿ ಜೀನ್ ಜೌರೆಸ್ ಅವರ ಪ್ರಸಿದ್ಧ ಹೇಳಿಕೆಯಂತೆ, “ಮೋಡಗಳು ಮಳೆಯನ್ನು ಹೊತ್ತೊಯ್ಯುವಂತೆ ಬಂಡವಾಳಶಾಹಿಯು ತನ್ನೊಳಗೆ ಯುದ್ಧವನ್ನು ಹೊತ್ತಿದೆ”. ಟ್ರಂಪ್ ಅವರ ಬಯಕೆ ಶಾಂತಿಯಲ್ಲ. ಸಾಮ್ರಾಜ್ಯಶಾಹಿಯ ಪ್ರಾಬಲ್ಯವನ್ನು ಒಂದು ಉತ್ತಮ ನೆಲೆಯಲ್ಲಿ ಇರಿಸುವ ಬಯಕೆಯದು. ಅದೇ ರೀತಿಯಲ್ಲಿ ಯುರೋಪಿಯನ್ ಭದ್ರತೆಯ ಪ್ರಶ್ನೆಯೂ ಸಹ ಜನರನ್ನು ದಾರಿತಪ್ಪಿಸುವ ಒಂದು ಸೂಚನೆಯೇ: ಯುರೋಪಿನ ಭದ್ರತೆಗೆ ರಷ್ಯಾ ಎಂದೂ ಬೆದರಿಕೆ ಹಾಕಲಿಲ್ಲ. ಯುರೋಪನ್ನು ಆಕ್ರಮಿಸಿಕೊಳ್ಳುವ “ರಷ್ಯಾದ ಸಾಮ್ರಾಜ್ಯಶಾಹಿ” ಬೆದರಿಕೆಯ ಎಲ್ಲ ಮಾತುಗಳೂ ನ್ಯಾಟೋದ ವಿಸ್ತರಣಾವಾದವನ್ನು ಸಮರ್ಥಿಸುವ ಒಂದು ನೆಪವಷ್ಟೇ. ಹಾಗಾಗಿ, ಟ್ರಂಪ್ ಅವರ ಶಾಂತಿಪರ ನಡೆಯು ಯುರೋಪಿನ ಭದ್ರತೆಯನ್ನು ದುರ್ಬಲಗೊಳಿಸುವ ಪ್ರಶ್ನೆಯಾಗುವುದಿಲ್ಲ. ಮರು

ಪರ್ಯಾಯ ಟ್ರಂಪ್ ರಣತಂತ್ರ

ಉಕ್ರೇನ್ ಯದ್ಧದ ವಿಷಯವಾಗಿ ಯುರೋಪಿನ ಆಡಳಿತ ಬಣಗಳೊಂದಿಗೆ ಟ್ರಂಪ್ ಅವರು ಹೊಂದಿರುವ ಭಿನ್ನಾಭಿಪ್ರಾಯವು ಸಾಮ್ರಾಜ್ಯಶಾಹಿಯು ಪ್ರಸ್ತುತದಲ್ಲಿ ಅನುಸರಿಸಬಹುದಾದ ಎರಡು ವಿಭಿನ್ನ ಪರ್ಯಾಯ ರಣತಂತ್ರಗಳ ಕಾರಣದಿಂದಾಗಿ ಉದ್ಭವಿಸುತ್ತದೆ. ಒಂದು, ಮುಂದೆಹೋಗಲಾರದ ಸ್ಥಿತಿಗೆ ಬಂದು ತಲುಪಿರುವ ಉಕ್ರೇನ್ ಯುದ್ಧದ ಕಾರಣೀಭೂತ ಬೈಡೆನ್ ಅನುಸರಿಸಿದ ರಷ್ಯಾ ವಿರುದ್ಧದ ಅವರ ಹಳೆಯ ಆಕ್ರಮಣಕಾರಿ ರಣತಂತ್ರ ಮತ್ತು ಇನ್ನೊಂದು, ಈ ಯುದ್ಧವನ್ನು ಕೊನೆಗೊಳಿಸುವ ಮತ್ತು ಆ ಮೂಲಕ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ಪ್ರಾಬಲ್ಯದ ವಿರುದ್ಧ ಸೆಟೆದು ನಿಂತಿರುವ ವಿರೋಧೀ ಬಣದಿಂದ ರಷ್ಯಾವನ್ನು ದೂರವಿಡುವ ಪರ್ಯಾಯ ರಣತಂತ್ರ. ಯುರೋಪಿನ ಆಡಳಿತಗಾರರು ಮೊದಲನೆಯದಕ್ಕೆ ಕಟ್ಟುಬಿದ್ದಿದ್ದಾರೆ ಮತ್ತು ಟ್ರಂಪ್ ಎರಡನೆಯದನ್ನು ಅನುಸರಿಸುತ್ತಿದ್ದಾರೆ. ಮರು

ಈ ಸಂದರ್ಭದಲ್ಲಿ ಜರ್ಮನಿಯ ನವ-ನಾಜಿ ಎಎಫ್‌ಡಿ ಪಕ್ಷವು ತಳೆದ ನಿಲುವು ಟ್ರಂಪ್ ಅವರ ನಿಲುವಿನೊಂದಿಗೆ ಸಾಮ್ಯತೆ ಹೊಂದಿರುವುದು ಗಮನಾರ್ಹವಾಗಿದೆ: ಉಕ್ರೇನ್ ಯುದ್ಧವು ಕೊನೆಗೊಳ್ಳುವುದನ್ನು ಎಎಫ್‌ಡಿ ಬಯಸುತ್ತದೆ ಮತ್ತು ಈ ನಿಲುವಿಗೆ ವ್ಯತಿರಿಕ್ತವಾಗಿ ಪ್ಯಾಲೆಸ್ಟೈನ್ ವಿಷಯದಲ್ಲಿ ಆಕ್ರಮಣಕೋರತೆಯನ್ನು ಬಯಸುತ್ತದೆ. ಹಾಗಾಗಿ, ಇದು ಶಾಂತಿಯ ಬಯಕೆಯೂ ಅಲ್ಲ ಅಥವಾ “ಯುರೋಪಿಯನ್ ಭದ್ರತೆ” ಬಗ್ಗೆ ಕಾಳಜಿ ಹೊಂದಿಲ್ಲದಿರುವುದರ ಲಕ್ಷಣವೂ ಅಲ್ಲ. ಇದು, ಒಂದು ನಿರ್ದಿಷ್ಟ ಕಾರ್ಯತಂತ್ರದ ನಿಲುವಿನ ಒಂದು ಲಕ್ಷಣವೇ ಸರಿ. ಮರು

ಸಾಮ್ರಾಜ್ಯಶಾಹಿ ತನಗೆ ತಾನೇ ತಂದುಕೊಂಡಿರುವ ಕಠಿಣ ಪರಿಸ್ಥಿತಿಯಿಂದ ಅದನ್ನು ಹೊರತರುವ ಟ್ರಂಪ್ ಯೋಜನೆಯು ಅದೇ ಸಮಯದಲ್ಲಿ ಇಡೀ ಸಾಮ್ರಾಜ್ಯಶಾಹಿ ಬಣದ ಮೇಲೆ ಯುಎಸ್ ಪ್ರಾಬಲ್ಯವನ್ನು ಪ್ರತಿಪಾದಿಸುವ ಯೋಜನೆಯಾಗಿದೆ. ಅವರ “ಅಮೆರಿಕವನ್ನು ಮತ್ತೊಮ್ಮೆ ಮಹಾನ್ ಆಗಿಸಿ” (ಮಗ) ಎಂಬ ಘೋಷಣೆಯು ಅಮೆರಿಕದ ಪ್ರಶ್ನಾತೀತ ನಾಯಕತ್ವದಡಿಯಲ್ಲಿ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯು ಪ್ರಶ್ನಾತೀತ ಪ್ರಾಬಲ್ಯ ಹೊಂದಿರುವ ಜಗತ್ತನ್ನು ಪುನರ್ನಿರ್ಮಿಸುವ ಯೋಜನೆಯಾಗಿದೆ. ಯುರೋಪನ್ನು ಅಮೆರಿಕದ ಇಂಧನದ ಮೇಲೆ ಅವಲಂಬಿಸುವಂತೆ ಮಾಡುವ ಅರ್ಥದಲ್ಲಿ, ಅನಿಲವನ್ನು ರಷ್ಯಾದಿಂದ ಯುರೋಪಿಗೆ ಸಾಗಿಸುವ ನಾರ್ಡ್ ಸ್ಟ್ರೀಮ್-2 ಅನಿಲ ಕೊಳವೆ ಮಾರ್ಗದ ಸ್ಫೋಟವು ಈ ಕಾರ್ಯತಂತ್ರದ ಮುಂದುವರಿಕೆಯಾಗಿದೆ ಮತ್ತು ಈ ಕೃತ್ಯದ ಹಿಂದೆ ಅಮೆರಿಕದ ‘ಗುಪ್ತ ಪ್ರಭುತ್ವ’ದ(ಡೀಪ್ ಸ್ಟೇಟ್ ನ)ಕೈವಾಡವಿದೆ ಎಂಬ ಆರೋಪವಿದೆ. ಮರು

ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ

ಅದೇನೇ ಇರಲಿ, ಟ್ರಂಪ್ ಅವರ ರಣತಂತ್ರದಲ್ಲಿ ಒಂದು ಪ್ರಧಾನ ವೈರುಧ್ಯವಿದೆ. ಬಂಡವಾಳಶಾಹಿ ಜಗತ್ತಿನ “ನಾಯಕತ್ವ” ವಹಿಸಲು ಒಂದು ರೀತಿಯ ಬೆಲೆ ತೆರಬೇಕಾಗುತ್ತದೆ. ಈ ಬೆಲೆಯನ್ನು ತೆರದೇ ಅಮೆರಿಕವೇ “ನಾಯಕತ್ವ” ವಹಿಸುವ ಪಾತ್ರವನ್ನು ಟ್ರಂಪ್ ಬಯಸುತ್ತಾರೆ. ಆದರೆ, ಬಂಡವಾಳಶಾಹಿ ಜಗತ್ತಿನ ಒಬ್ಬ ನಾಯಕನು ತೆರಬೇಕಾದ ಬೆಲೆ ಹೀಗಿದೆ: “ನಾಯಕ” ದೇಶವು ಇತರ ಪ್ರಮುಖ ಬಂಡವಾಳಶಾಹಿ ದೇಶಗಳ ಮಹತ್ವಾಕಾಂಕ್ಷೆಗಳು ಈಡೇರುವಂತಾಗಲು ಮತ್ತು ಇಡೀ ಬಂಡವಾಳಶಾಹಿ ಜಗತ್ತು ಬಿಕ್ಕಟ್ಟಿನಲ್ಲಿ ಮುಳುಗುವುದನ್ನು ತಡೆಯುವ ಸಲುವಾಗಿ ಅವುಗಳ ಜೊತೆಗೆ ವ್ಯಾಪಾರ ಕೊರತೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ತನ್ನ “ನಾಯಕತ್ವ”ದ ವರ್ಷಗಳಲ್ಲಿ ಬ್ರಿಟನ್ ಮಾಡಿದ್ದು ಇದನ್ನೇ ಮತ್ತು ಆನಂತರದ ಅವಧಿಯಲ್ಲಿ ಅಮೆರಿಕ ಮಾಡಿದ್ದೂ ಇದನ್ನೇ. ಬ್ರಿಟನ್ ಹಾಗೆ ಮಾಡುತ್ತಿದ್ದಾಗ ಅದು ಯುಎಸ್ ಮತ್ತು ಯುರೋಪಿನ ಪ್ರಮುಖ ದೇಶಗಳಿಗೆ ಹೋಲಿಸಿದರೆ ವ್ಯಾಪಾರ ಕೊರತೆಯನ್ನು ಎದುರಿಸುತ್ತಿತ್ತು. ಈ ಕೊರತೆಯಿಂದ ಬ್ರಿಟನ್‌ಗೆ ಹಾನಿಯಾಗಲಿಲ್ಲ ಏಕೆಂದರೆ ಅದು ತನ್ನ ವಸಾಹತುಗಳಿಂದ ಅದೃಶ್ಯ ಗಳಿಕೆಯಲ್ಲಿನ ಮಿಗುತಾಯ ತನ್ನ ಬಳಿಯಿದೆ ಎಂದು ಹೇಳಿಕೊಂಡು ಈ ಕೊರತೆಯನ್ನು ಸಮತೋಲನಗೊಳಿಸಿಕೊಂಡಿತು. ಈ ಮಿಗುತಾಯದಲ್ಲಿನ ಬಹುಪಾಲು ಕೃತಕ ಸೃಷ್ಟಿಯಾಗಿತ್ತು. ತಾನು ಗೆದ್ದ ವಸಾಹತುಗಳಿಂದ “ಕಿತ್ತುಕೊಂಡ”ದ್ದಾಗಿತ್ತು, ಇದನ್ನು ಬಳಸಿಕೊಂಡು ಅದು ಪ್ರಮುಖ ಬಂಡವಾಳಶಾಹಿ ದೇಶಗಳೊಂದಿಗಿನ ತನ್ನ ಕೊರತೆಯನ್ನು ಇತ್ಯರ್ಥಪಡಿಸಿಕೊಂಡಿತು. ಮರು

ಆದರೆ, ಯುದ್ಧಾನಂತರದ ಯುಎಸ್ ಇದೇ ರೀತಿಯ “ಅದೃಷ್ಟ” ಹೊಂದಿಲ್ಲ. ಇತರ ಪ್ರಮುಖ ದೇಶಗಳೊಂದಿಗೆ ಸತತವಾಗಿ ವ್ಯಾಪಾರ ಕೊರತೆಯನ್ನು ಅನುಭವಿಸಿದ ಪರಿಣಾಮವಾಗಿ ಅದು ಸಾಲದಲ್ಲಿ ಆಳವಾಗಿ ಮುಳುಗಿದೆ. ಇನ್ನೂ ಹೆಚ್ಚು ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸುವ ಪ್ರಯತ್ನವು, ಟ್ರಂಪ್ ಅವರ “ಅಮೆರಿಕವನ್ನು ಮತ್ತೊಮ್ಮೆ ಮಹಾನ್ ಆಗಿಸಿ”(ಮಗ) ಯೋಜನೆಯು ಭಾಗವಾಗಿದೆ. ಅದಕ್ಕಾಗಿ ಅವರು ತಮ್ಮ ಎಲ್ಲಾ ವ್ಯಾಪಾರ ಪಾಲುದಾರರ ಮೇಲೆ ಸುಂಕಗಳನ್ನು ವಿಧಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಆದರೆ, ಸರ್ಕಾರಗಳು ತಮ್ಮ ವೆಚ್ಚಗಳನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ವಿತ್ತೀಯ ಕೊರತೆಗಳನ್ನು ಹೆಚ್ಚಿಸಿಕೊಳ್ಳದಂತೆ ಮತ್ತು ಶ್ರೀಮಂತರ ಮೇಲೆ ತೆರಿಗೆ ವಿಧಿಸುವುದನ್ನು ತಡೆಯುವಂತೆ ಜಾಗತಿಕ ಹಣಕಾಸು ಬಂಡವಾಳವು ಎಲ್ಲೆಡೆಯೂ ಒತ್ತಡ ಹೇರುತ್ತಿರುವ ಸನ್ನಿವೇಶದಲ್ಲಿ ಬಂಡವಾಳಶಾಹಿ ಜಗತ್ತಿನ ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆ ಬೇಡಿಕೆ ವಿಸ್ತರಿಸುತ್ತಿಲ್ಲ. ಇದು ಬಂಡವಾಳಶಾಹಿಯ ಜಾಗತಿಕ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತದೆ. ಈ ಬಿಕ್ಕಟ್ಟಿನ ಭಾರವನ್ನು ಅಮೆರಿಕವನ್ನು ಹೊರತುಪಡಿಸಿ ಉಳಿದ ಬಂಡವಾಳಶಾಹಿ ದೇಶಗಳು ಹೊರಬೇಕಾಗುತ್ತದೆ. ಮರು

ಸಾಮ್ರಾಜ್ಯಶಾಹಿಯ ಪುನಶ್ಚೇತನಕ್ಕಾಗಿ ಟ್ರಂಪ್ ಅನುಸರಿಸುವ ಕಾರ್ಯತಂತ್ರವು ಉಂಡೂ ಹೋಗಬೇಕು, ಕೊಂಡೂ ಹೋಗಬೇಕು ಎನ್ನುವ ರೀತಿಯದ್ದಾಗಿದೆ. ಇತರ ದೇಶಗಳ ಮೇಲೆ ಸುಂಕಗಳನ್ನು ಹೇರುತ್ತಿರುವ ಹೊತ್ತಿನಲ್ಲೇ ಉಳಿದ ದೇಶಗಳನ್ನು ಯುಎಸ್ ನಾಯಕತ್ವದ ಅಡಿಗೆ ತರುವ ಅವರ ಪ್ರಯತ್ನವು “ನಿನ್ನ ನೆರೆಯವ ಹಾಳಾಗಲಿ” ಎನ್ನುವ ನೀತಿಯಾಗುತ್ತದೆ. ಇತರ ದೇಶಗಳ ಮಾರುಕಟ್ಟೆಗಳನ್ನು ಕಸಿದುಕೊಳ್ಳುವ ಮೂಲಕ ತನ್ನ ಸ್ವಂತ ಮಾರುಕಟ್ಟೆಯನ್ನು ಕಾಪಾಡಿಕೊಳ್ಳಲು ಅನುಸರಿಸುವ ಈ ನೀತಿಯು ಮೂಲಭೂತವಾಗಿ ಸಾಮ್ರಾಜ್ಯಶಾಹಿ ಪ್ರಾಬಲ್ಯವನ್ನು ಮರುಸ್ಥಾಪಿಸುವ ಯೋಜನೆಗೆ ಪ್ರತಿಕೂಲವಾಗಿದೆ. ಸಾಮ್ರಾಜ್ಯಶಾಹಿಯನ್ನು ಒಂದು ಮೂಲೆಗೆ ಬಿಡೆನ್ ತಳ್ಳಿದ್ದರೆ, ಆ ಮೂಲೆಯಿಂದ ಅದನ್ನು ಟ್ರಂಪ್ ಹೊರತೆಗೆದರೆ ಅದು ಇನ್ನೊಂದು ಮೂಲೆಗೆ ತಳ್ಳಲ್ಪಡುತ್ತದೆ. ಮರು

ಇದನ್ನೂ ನೋಡಿ: LIVE: ಜನಚಳುವಳಿಗಳ ಬಜೆಟ್‌ ಅಧಿವೇಶನ | ಭೂಮಿ ಪ್ರಶ್ನೆ ಮತ್ತು ಬಜೆಟ್‌ನ ಧೋರಣೆಗಳು |ಗೋಷ್ಟಿ-2

Donate Janashakthi Media

Leave a Reply

Your email address will not be published. Required fields are marked *