ಟ್ರಂಪ್-ಮಚಾದೊ ಗ್ಯಾಂಗಿನ ‘ಶಾಂತಿ ಕೆಲಸ”ಗಳು ಮತ್ತು ‘ನೊಬೆಲ್ ಶಾಂತಿ ಪ್ರಶಸ್ತಿ’ ಎಂಬ ಜೋಕ್

ವಸಂತರಾಜ ಎನ್.ಕೆ

ಕಳೆದ ಕೆಲವು ತಿಂಗಳುಗಳಿಂದ “ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶ್ತಸ್ತಿ” ಜೋಕ್ ಗಳಿಗೆ, ಮೀಮ್ ಗಳಿಗೆ, ಕಾಮೆಡಿ ಶೋ ಗಳಿಗೆ ಭರ್ಜರಿ ಆಹಾರವಾಗಿತ್ತು. ಹಾಗಾಗಿ  ಅಧ್ಯಕ್ಷ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದಿಲ್ಲ ಎಂಬುದು ಈ ವಾರದ ದೊಡ್ಡ ‘ಬ್ರೇಕಿಂಗ್ ನ್ಯೂಸ್’ ಆಗಿತ್ತು. ಅದು ಸಿಗದಿದ್ದರೆ ನಾರ್ವೇ ಮೇಲೆ ಟ್ರಂಪ್ 500% ಸುಂಕ ಹೇರ್ತಾರೆ ಅಥವಾ ಯುದ್ಧಕ್ಕೆ ಹೋಗ್ತಾರೆಂಬ ಜೋಕ್ ಸಾಮಾನ್ಯವಾಗಿತ್ತು. ಆದರೆ  ಈಗ ಪ್ರಶಸ್ತಿ ಪಡೆದ ವೆನೆಜುವೇಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಆಯ್ಕೆ ಸಹ ‘ಟ್ರಂಪ್  ಜೋಕ್’ ಗಿಂತ ಕಡಿಮೆಯಿಲ್ಲಎಂದು ಅವರ ‘ಶಾಂತಿ ಕೆಲಸ’ಗಳ ವಿವರ ಗೊತ್ತಾಗುತ್ತಿದ್ದಂತೆ ತಿಳಿದಿದೆ. ಟ್ರಂಪ್, ನೇತನ್ಯಾಹು ಗಳ ‘ವಿಧೇಶೀ ಮಿಲಿಟರಿ ಮಧ್ಯಪ್ರವೇಶ ಮತ್ತು  ಜನತೆಯ ವಿರುದ್ಧ ಮೌನಯುದ್ಧ ಹೂಡುವ  ಆರ್ಥಿಕ ದಿಗ್ಬಂಧನಗಳ ಮೂಲಕ ಪ್ರಜಾಪ್ರಭುತ್ವ ಮತ್ತು ಶಾಂತಿ ಸ್ಥಾಪನೆಯ’ ಮಹಾನ್ ಯೋಜನೆಯ ಕಟ್ಟಾ ಬೆಂಬಲಿಗಳಾದ ಮಚಾದೊ ಅವರ “ಶಾಂತಿ ಕೆಲಸ”ಗಳ ವಿವರಗಳಿಗೆ ಮುಂದೆ ಓದಿ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಲವು ಭೀಕರ ಯುದ್ಧಕೋರರಿಗೆ ಕೊಡಲಾಗಿದ್ದು, ಹಿಂದೆನೂ ಹಲವು ಬಾರಿ ದೊಡ್ಡ  ಜೋಕ್ ಆಗಿತ್ತು ಎಂಬುದನ್ನು ಸಹ ಇಲ್ಲಿ ತಿಳಿಯಬಹುದು.

ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಕಳೆದ ಕೆಲವು ತಿಂಗಳುಗಳಿಂದ ಜೋಕ್ ನ ವಿಷಯವಾಗಿತ್ತು. ಯು.ಎಸ್ ಅಧ್ಯಕ್ಷ ಟ್ರಂಪ್ ‘ನಾನು ಐದು (ಭಾರತ-ಪಾಕಿಸ್ತಾನ ಸೇರಿದಂತೆ) ಯುದ್ಧಗಳನ್ನು ನಿಲ್ಲಿಸಿದೆ. ಹಾಗಾಗಿ ನನಗೆ ಶಾಂತಿ ಪ್ರಶಸ್ತಿ ಸಿಗಬೇಕು’ ಅಂತ ಹೇಳಲು ಶುರು ಮಾಡಿದ ಮೇಲಂತೂ ಅದು ಹಲವು ಕಾರ್ಟೂನುಗಳ, ಸಾಮಾಜಿಕ ಮಾಧ್ಯಮ ಮೀಮ್, ಸ್ಟಾಂಡ್ ಅಪ್ ಕಾಮೆಡಿಗಳಿಗೆ, ಅವರ ಸೃಷ್ಟಿಯಾದ ‘ಸುಂಕಾಸ್ತ್ರ’ ದ ಜತೆ ಇನ್ನೊಂದು ಮೆಚ್ಚಿನ ವಿಷಯವಾಗಿ ಬಿಟ್ಟಿತು. ಟ್ರಂಪ್ ಗೆ ಸಿಗದಿದ್ದರೆ ನಾರ್ವೇ ಮೇಲೆ ಟ್ರಂಪ್ 500% ಸುಂಕ ಹೇರ್ತಾರೆ ಅಥವಾ ಯುದ್ಧಕ್ಕೆ ಹೋಗ್ತಾರೆಂಬ ಜೋಕ್ ಸಾಮಾನ್ಯವಾಗಿತ್ತು. ಪಾಕಿಸ್ತಾನ ಮತ್ತು ಇಸ್ರೇಲ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಸೂಚಿಸಿದ ಮತ್ತು ಟ್ರಂಪ್  ಎಲ್ಲ ಸಂದರ್ಭಗಳಲ್ಲೂ ವೇದಿಕೆಗಳಲ್ಲೂ ಪದೇ ಪದೇ (ಪ್ರತಿ ಬಾರಿ ನಿಲ್ಲಿಸಿದ ಯುದ್ಧಗಳ ಸಂಖ್ಯೆ ಹೆಚ್ಚಾಗುತ್ತಿತ್ತು ಬೇರೆ!) ಇದನ್ನು ಹೇಳಲು ಶುರು ಮಾಡಿದ ಮೇಲಂತೂ ಈ ಜೋಕ್ ಚರಮ ಸೀಮೆ ಮುಟ್ಟಿತ್ತು.

‘ನಾನು ನಿಮ್ಮನ್ನು ಶಾಂತಿ ಪ್ರಶಸ್ತಿಗೆ ನಾಮಕರಣ ಮಾಡುತ್ತಿದ್ದೇನೆ’  ಕಾರ್ಟೂನ್ ಕೃಪೆ: ಸತೀಶ ಆಚಾರ್ಯ

ನಿರೀಕ್ಷಿಸಿದಂತೆ ಟ್ರಂಪ್ ಗೆ ಅದು ಸಿಗದಿದ್ದಾಗಲೂ ಅದು ಮೆಚ್ಚಿನ ವಿಷಯವಾಗಿ ಮುಂದುವರೆಯಿತು. ನೊಬೆಲ್ ಪ್ರಶಸ್ತಿಯನ್ನು ಟ್ರಂಪ್ ಬದಲಿಗೆ ವೆನೆಜುವೇಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊಗೆ ಕೊಟ್ಟಾಗ ಹಲವರು ಸದ್ಯ ಇನ್ನೊಂದು ‘ಜಾಗತಿಕ ಐಕಾನ್’ ಜೋಕ್ ಆಗುವುದು ತಪ್ಪಿತು ಎಂದು ಸಮಾಧಾನದ ಉಸಿರು ಬಿಟ್ಟರು. ಆದರೆ ಯುದ್ಧಕೋರರಿಗೆ ಶಾಂತಿ ಪ್ರಶಸ್ತಿ ಕೊಡುವುದು ಜೋಕ್ ಆದರೆ, ಈ ಆಯ್ಕೆ ಸಹ ‘ಟ್ರಂಪ್  ಜೋಕ್’ ಗಿಂತ ಕಡಿಮೆಯಿಲ್ಲಎಂದು ಮಾರಿಯಾ ಕೊರಿನಾ ಅವರ ‘ಶಾಂತಿ ಕೆಲಸ’ಗಳ ವಿವರ ಗೊತ್ತಾಗುತ್ತಿದ್ದಂತೆ ತಿಳಿದು ಬಂದಿದೆ.  ಪ್ರಶ್ತಸ್ತಿ ಘೋಷಿಸಿದ ನಂತರ “ನಾವು ವಿಜಯದ ಹೊಸ್ತಿಲಲ್ಲಿದ್ದೇವೆ. ಇದಕ್ಕಾಗಿ ಹಿಂದೆಂದಿಗಿಂತಲೂ ಅಧ್ಯಕ್ಷ ಟ್ರಂಪ್ ಮೇಲೆ ಅವಲಂಬಿಸಿದ್ದೇವೆ.” ಎಂದು ಮಚಾದೊ ಸಹ ಎಕ್ಸ್ (ಹಿಂದಿನ ಟ್ವೀಟ್) ಪೋಸ್ಟ್ ನಲ್ಲಿ ಹೇಳಿದ್ದಾರೆ.  ಹಾಗಾಗಿ ಟ್ರಂಪ್ ಆಗಲಿ ಅವರ ಬೆಂಬಲಿಗರಾಗಲಿ ನಿರಾಶರಾಗುವುದು ಅಗತ್ಯವಿಲ್ಲ. ಟ್ರಂಪ್ ಗ್ಯಾಂಗಿಗೆ ಪ್ರಶಸ್ತಿ ಸಂದಿದೆ.  ನೊಬೆಲ್ ಶಾಂತಿ ಪ್ರಶಸ್ತಿ ಯಾವಾಗಲೂ ಜೋಕ್ ಮತ್ತು ಹೆಚ್ಚಾಗಿ ಯುದ್ಧಕೋರರಿಗೆ ಕೊಡುವಂಥದ್ದು ಎಂಬುದು ಬೇರೆ ಮಾತು. ಅದನ್ನು ಆ ಮೇಲೆ ನೋಡೋಣ.

ಯಾರಿದು ಮಾರಿಯಾ ಕೊರಿನಾ ಮಚಾದೊ ?

ಮಾರಿಯಾ ಕೊರಿನಾ ಮಚಾದೊ ವೆನೆಜುವೇಲಾದ ವಿರೋಧ ಪಕ್ಷದ ನಾಯಕಿ. ಯು.ಎಸ್ ನ ಕುಖ್ಯಾತ ಎನ್.ಇ..ಡಿ ಅನುದಾನ ಪಡೆಯುವ ‘ಸುಮೇಟ್’ ಎಂಬ ಎನ್.ಜಿ.ಒ  ದಿಂದ ಆರಂಭಿಸಿ, ಚುನಾವಣಾ ರಾಜಕೀಯ ಪ್ರವೇಶಿಸಿ ಪಾರ್ಲಿಮೆಂಟ್ ಸದಸ್ಯರಾಗಿದ್ದು ಅಧ್ಯಕ್ಷೀಯ ಅಭ್ಯರ್ಥಿಯಾಗ ಬಯಸಿದ್ದವರು.

ಮೊಬೆಲ್ ಸಮಿತಿ ಮಚಾದೊ ಅವರ “ವೆನೆಜುವೇಲಾದ ಜನತೆಯ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಮತ್ತು ಸರ್ವಾಧಿಕಾದಿಂದ ಪ್ರಜಾಪ್ರಭುತ್ವದತ್ತ ಬದಲಾವಣೆ ಸಾಧಿಸಲು ದಣಿವರಿಯದ ಕೆಲಸ” ಕ್ಕಾಗಿ ಅವರಿಗೆ ಪ್ರಶಸ್ತಿ ಕೊಡಲಾಗಿದೆ ಎಂದಿದೆ. ಇದು ಎಷ್ಟರ ಮಟ್ಟಿಗೆ ನಿಜವೆಂದು ಪರಿಶೀಲಿಸೋಣ.

ವೆನೇಜುವೇಲಾದಲ್ಲಿ ಚುನಾಯಿತ ಸರಕಾರವನ್ನು ಮಿಲಿಟರಿ ಕಾರ್ಯಾಚರಣೆಯ ಮೂಲಕ ಹಿಂಸಾತ್ಮಕವಾಗಿ ಉರುಳಿಸಲು ಹೊರಟ ಟ್ರಂಪ್ ರಂತೆ ಈ ಮಚಾದೊ ಸಹ ದೀರ್ಘ ಕಾಲದಿಂದ ಅದನ್ನೇ ಮಾಡಲು ಪ್ರಯತ್ನಿಸುತ್ತಿದ್ದಕ್ಕೆ ಈ ಪ್ರಶಸ್ತಿ., ಅದೂ ಅಧ್ಯಕ್ಷ ಬುಶ್ ಕಾಲದಿಂದಲೂ ಯು.ಎಸ್ ಸರಕಾರದ ಲಂಚ ಮತ್ತು ಕುಮ್ಮಕ್ಕು ಪಡೆದು ಈ ‘ಭಗೀರಥ ಪ್ರಯತ್ನ’ ನಡೆಸಿದ್ದಕ್ಕೆ ಈ ಪ್ರಶಸ್ತಿ. ಕೆಲವೇ ಉದಾಹರಣೆಗಳು ಸಾಕು ಆಕೆಯ ಈ ಪ್ರಶಸ್ತಿಯ ಅರ್ಹತೆ ತಿಳಿಯಲು. ಯು.ಎಸ್ ಸರಕಾರದ ತನಗೆ ಅನುಕೂಲವಲ್ಲದ  ದೇಶದ ಸರಕಾರವನ್ನು “ಬದಲಾವಣೆ  ಮಾಡುವ ಯಂತ್ರದ”, ಆರ್ಥಿಕ ದಿಗ್ಬಂಧನಗಳು ಖಾಸಗೀಕರಣ ಮತ್ತು ವಿದೇಶಿ ಮಿಲಿಟರಿ ಹಸ್ತಕ್ಷೇಪದ ಕ್ರೂರ ನೀತಿಗಳಿಗೆ, ‘ಸುಂದರ ಮುಖವಾಡ’ ನೀಡುವ ‘ಪ್ರಜಾಪ್ರಭುತ್ವದ ವೇಷ ಧರಿಸಿದ ಪ್ರತಿನಿಧಿಯ ಕೆಲಸ ಮಚಾಡೊದ್ದು.  ಹಾಗಾಗಿಯೇ ಲ್ಯಾಟಿನ್ ಅಮೆರಿಕದಲ್ಲಿ ಈ ಪ್ರಶಸ್ತಿ ಖಂಡನೆ ಅಥವಾ ನಿರ್ಲಕ್ಷಕ್ಕೆ ಒಳಗಾಗಿದೆ.

ಅರ್ಧ ಪಶ್ಚಿಮ ಏಶ್ಯಾದ ಮೇಲೆ ಬಾಂಬ್ ದಾಳಿ ಮಾಡಿದರೂ ನನಗಿಲ್ಲ ಪ್ರಶಸ್ತಿ. ಬರಿಯ ಬಾಂಬ್ ದಾಳಿ ಕೇಳಿದ್ದಕ್ಕೆ ಮಚಾದೊಗೆ ಶಾಂತಿ ಪ್ರಶಸ್ತಿಯಾ? ಏನಿದು ಅನ್ಯಾಯ?!

ಅವರ ರಾಜಕೀಯ ಖಂಡಿತ ಶಾಂತಿಯುತವಾದ್ದಲ್ಲ. ಅವರು ಜನವರಿ 2019ರಲ್ಲಿ ಎಕ್ಸ್ (ಮಾಜಿ ಟ್ವಿಟರ್) ಪೋಸ್ಟ್ ಒಂದರಲ್ಲಿ ಗಾಜಾ ನರಮೇಧದ ರೂವಾರಿ ಮತ್ತು ಯುದ್ಧಕೋರ ಇಸ್ರೇಲಿ ಪ್ರಧಾನಿ ನೇತನ್ಯಾಹು ಅವರನ್ನು ವೆನೆಜುವೆಲಾವನ್ನು ಬಾಂಬುಗಳಿಂದ ವಿಮೋಚನೆಗೊಳಿಸಬೇಕೇಂದು ಸಾರ್ವಜನಿಕವಾಗಿ ಕೋರಿಕೊಂಡಿದ್ದರು ಅಂದರೆ ಮದುರಾ ಸರಕಾರವನ್ನು ವಿದೇಶಿ ಮಿಲಿಟರಿ ಆಕ್ರಮಣದ ಮೂಲಕ ಉರುಳಿಸಬೇಕೆಂದು ಕೇಳಿಕೊಂಡಿದ್ದರು.

ಲ್ಯಾನ್ಸೆಟ್ ಮತ್ತು ಇತರ ಪತ್ರಿಕೆಗಳ ಅಧ್ಯಯನಗಳು ತೋರಿಸಿದಂತೆ, ಔಷಧಿ, ಆಹಾರ ಮತ್ತು ಇಂಧನಗಳಿಂದ ಜನತೆಯನ್ನು ವಂಚಿತರಾಗಿಸುವ, ಯುದ್ಧಕ್ಕಿಂತಲೂ ಹೆಚ್ಚು ಜನರನ್ನು ಕೊಂದ, ‘ಮೌನ ಯುದ್ಧ ರೂಪ’ವಾದ ಆರ್ಥಿಕ ದಿಗ್ಬಂಧನವನ್ನು ತಮ್ಮ ದೇಶದ ಮೇಲೆ ಹೇರಬೇಕೆಂದು ಅವರು ಒತ್ತಾಯಿಸಿದ್ದರು.

ದೇಶಧಲ್ಲಿ ವಿಭಜನೆಯನ್ನು ಉತ್ತೇಜಿಸಿ, ವೆನೆಜುವೆಲಾದ ಸಾರ್ವಭೌಮತ್ವವನ್ನು ನಾಶ ಮಾಡುವ ಮತ್ತು  ಜನತೆಗೆ ಗೌರವದಿಂದ ಬದುಕುವ ಹಕ್ಕನ್ನು ನಿರಾಕರಿಸುವುದರಲ್ಲೇ  ಮಚಾಡೊ ತಮ್ಮ ಸಂಪೂರ್ಣ ರಾಜಕೀಯ ಜೀವನವನ್ನು ಕಳೆದಿದ್ದಾರೆ.

ಕ್ಷಿಪ್ರದಂಗೆ ಮತ್ತು ಹಿಂಸಾತ್ಮಕ ಬೀದಿ ಕಾಳಗದ ರಾಜಕೀಯ

ಅವರು 2002ರಲ್ಲಿ ಆಗಿನ ಜನಪ್ರಿಯ ಜನಪರ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಅಧ್ಯಕ್ಷ ಚವೇಝ್ ಅವರ ಸರಕಾರವನ್ನು ಸ್ವಲ್ಪ ಕಾಲ ಉರುಳಿಸಿದ  ಕ್ಷಿಪ್ರದಂಗೆಯ ನಾಯಕತ್ವದಲ್ಲಿ ಭಾಗವಹಿಸಿದ್ದರು.  ಈ ಕ್ರಿಪ್ರದಂಗೆಯ ನಂತರ ಸಂವಿಧಾನವನ್ನು ಅಳಿಸಿ ಹಾಕುವ ಮತ್ತು ಎಲ್ಲ ಸಾರ್ವಜನಿಕ ಸಂಸ್ಥೆಗಳನ್ನು ರಾತ್ರೋರಾತ್ರಿ ವಿಸರ್ಜಿಸುವ ಕಾರ್ಮೊನಾ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದರು. ಇವರು ಹೇಗೆ ಪ್ರಜಾಪ್ರಭುತ್ವದ ರಕ್ಷಕರಾಗುತ್ತಾರೆ?

ಮಿಲಿಟರಿ ಹಸ್ತಕ್ಷೇಪ ಮತ್ತು ಬಲಪ್ರಯೋಗದ ಮೂಲಕ ವೆನೆಜುವೇಲಾ ವನ್ನು’ವಿಮೋಚನೆ’ಗೊಳಿಸಬೇಕೆಂದು ಯು.ಎಸ್ ಸರಕಾರವನ್ನು ಒತ್ತಾಯಿಸಲು ಬೆಂಭಲಿಸಲು ತಮ್ಮ ಸಂಘಟನೆಯನ್ನು ಬಳಸಿದ್ದರು. ಇದು ಯಾವ ರೀತಿಯ ಪ್ರಜಾಸತ್ತಾತ್ಮಕ ಶಾಂತಿಯುತ ರಾಜಕಾರಣ?

“ಮಾದಕ ದ್ರವ್ಯದ ವಿರುದ್ಧ ಹೋರಾಟ”ದ ನೆಪದಲ್ಲಿ ಯು.ಎಸ್ ಅಧ್ಯಕ್ಷ ಟ್ರಂಪ್  ಕೆರಿಬಿಯನ್ ಸಮುದ್ರ ಪ್ರದೇಶದಲ್ಲಿ ನೌಕಾ ಪಡೆಗಳ ನಿಯೋಜನೆಯನ್ನು ಮಚಾಡೊ ಬಲವಾಗಿ ಬೆಂಭಲಿಸಿದ್ದರು. ಪ್ರಾಧೇಶಿಕ ಯುದ್ಧದ ಬೆಂಕಿ ಹಚ್ಚುವ ಸಾಧ್ಯತೆಯಿರುವ ಈ ಕ್ರಮವನ್ನು ಉತ್ಸಾಹದಿಂದ ಬೆಂಬಲಿಸುವುದು ಯಾವ ರೀತಿಯ ಶಾಂತಿಪ್ರಿಯ ಕೆಲಸ?

ಟ್ರಂಪ್ ಯುದ್ಧನೌಕೆಗಳನ್ನು ಕಳುಹಿಸಿದಾಗ ಮತ್ತು ವೆನೆಜುವೇಲಾದ  ಆಸ್ತಿಗಳನ್ನು  ಮುಟ್ಟುಗೋಲು ಹಾಕಿಕೊಂಡಾಗ , ಮಚಾಡೊ ತಮ್ಮ ದೇಶದ ಸಾರ್ವಭೌಮತೆಯನ್ನು ಅವರಿಗೆ ಸಮರ್ಪಿಸಿ ಟ್ರಂಪ್ ನ ಸ್ಥಳೀಯ ಪ್ರಾಕ್ಸಿಯಾಗಿ ಸೇವೆ ಸಲ್ಲಿಸಲು ತುದಿಗಾಲಲ್ಲಿ ನಿಂತಿದ್ದರು.  ಇವೆಲ್ಲಾ ಸೇವೆಗಳನ್ನು ಮಚಾದೊ ಪುಕ್ಕಟೆಯಾಗಿ ಮಾಡಿಲ್ಲ. ಅವರ ಸುಮೇಟ್ ಎಂಬ ಎನ್.ಜಿ.ಒ ಯು.ಎಸ್ ಸರಕಾರದ ನೇಶನಲ್ ಎಂಡೋವ್ ಮೆಂಟ್ ಡೆಮೊಕ್ರಸಿ (ಎನ್.ಇ.ಡಿ) ಎಂಬ ಸಂಸ್ಥೆಯ ಅನುದಾನ ಪಡೆದಿದೆ. ಎನ್.ಇ.ಡಿ ಯು.ಎಸ್ ಸರಕಾರಕ್ಕೆ ಅನುಕೂಲಕರವಲ್ಲದ ಸರಕಾರಗಳನ್ನು ಉರುಳಿಸಲು ದೀರ್ಘ ಕಾಲೀನ “ಪ್ರಜಾಸತ್ತಾತ್ಮಕ ಶಾಂತಿಯುತ” (ಅಗತ್ಯವಾದಾಗ ಸಾಧ್ಯವಾದಾಗ ಹಿಂಸಾತ್ಮಕ ಸಹ) ಬುಡಮೇಲು ಕೃತ್ಯಗಳಿಗೆ ಅಂತಹ ದೇಶದ ಎನ್.ಜಿ.ಒ ಗಳಿಗೆ ಅನುದಾನ ಕೊಡುವ ಕುಖ್ಯಾತ ಸಂಸ್ಥೆ. ವೆನೆಜುವೆಲಾದಲ್ಲಿ “ಎಲ್ಲಾ ಚುನಾವಣಾ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು” ಮಚಾದೋ ಅವರ ‘ಸುಮೇಟ್’ ಗೆ ಅನುದಾನ ಕೊಡಲಾಗಿತ್ತು. ಈ ಸಂಬಂಧ ಮಚಾದೋ ಅಫ್ಗಾನ್ ಮತ್ತು ಇರಾಕ್  ಯುದ್ಧಕ್ಕೆ  ಪ್ರಸಿದ್ಧನಾದ  ಮತ್ತುಅತ್ಯಂತ  ಶಾಂತಿಪ್ರಿಯ ಯು.ಎಸ್ ಅಧ್ಯಕ್ಷ ಬುಶ್ ಅವರನ್ನು ಭೇಟಿ ಮಾಡಿದ ಚಿತ್ರ ಈ ಬರಹದ ಜತೆಗೆಇದೆ.

2002 ರಲ್ಲಿ, ಅಮೇರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಅವರು ಮಾರಿಯಾ ಕೊರಿನಾ ಮಚಾಡೊ ಅವರನ್ನು ಭೇಟಿಯಾದರು.
ಆ ಸಮಯದಲ್ಲಿ ಅವರು ‘ಸುಮಾಟೆ’ ಸಂಸ್ಥೆಯ ನಿರ್ದೇಶಕಿಯಾಗಿದ್ದರು  ಚಿತ್ರ ಕೃಪೆ : ವೈಟ್ ಹೌಸ್/ಎರಿಕ್ ಡ್ರೇಪರ್

ದೈತ್ಯ ಕಂಪನಿಗಳಿಗೆ ‘ಶಾಂತಿ’, ಜನತಗೆ ‘ಮಸಣದ ಶಾಂತಿ’ಯ ಹರಿಕಾರ

ವೆನೆಜುವೇಲಾದ ಆರ್ಥಿಕತೆಯನ್ನು ಉಸಿರುಗಟ್ಟಿಸಿ ಕೊಲ್ಲುವ ಆರ್ಥಿಕ ದಿಗ್ಬಂಧನದ ಕ್ರಮಗಳಿಗೆ ಅವರು ಒತ್ತಾಯಿಸಿದರು. ಬಡವರು, ಕಾರ್ಮಿಕರು ಮತ್ತು ರೋಗಿಗಳ ಮೇಲೆ ಅದರ ಅತ್ಯಂತ ಗಂಭೀರ ದುಷ್ಪರಿಣಾಮಗಳು ಆಗುತ್ತವೆ ಮತ್ತು ಅವರ ಮೇಲೆ ಕ್ರೂರ ಯುದ್ಧಕ್ಕೆ ಸಮಾನ ಎಂದು ಗೊತ್ತಿದ್ದೂ ಈ ಧೋರಣೆ ಹೇಗೆ ಶಾಂತಿಯುತವಾಗುತ್ತದೆ?

ಅವರು ಚುನಾವಣೆಯಲ್ಲಿ ಸೋತರೂ “ಸ್ವಯಂ-ಘೋಷಿತ’ ಅಧ್ಯಕ್ಷರೊಬ್ಬರ ಯು.ಎಸ್ ಬೆಂಬಲಿತ “ಮಧ್ಯಂತರ ಸರಕಾರ” ರಚನೆಗೆ ಮಚಾದೊ ಬಲವಾದ ಬೆಂಬಲ ನೀಡಿದರು. ಈ ‘ಸರಕಾರ” ವಿದೇಶದಲ್ಲಿದ್ದ ಸಂಪನ್ಮೂಲಗಳನ್ನು ಲೂಟಿ ಹೊಡೆಯುತ್ತಾ ಸ್ವದೇಶ ಬಡವರನ್ನು ಹಸಿವಿಗೆ ತಳ್ಳುವ ಘನ ಕಾರ್ಯ ಖಂಡಿತ ಯು.ಎಸ್ ದೈತ್ಯ ಕಂಪನಿಗಳಿಗೆ ‘ಶಾಂತಿ” ತಂದು ಕೊಟ್ಟಿದೆ.  ಯು.ಎಸ್ ಆರ್ಥಿಕ ದಿಗ್ಬಂಧನ ಮತ್ತು ಮಿಲಿಟರಿ ಬಲಪ್ರಯೋಗದ ಮೂಲಕ ಚುನಾಯಿತ ಸರಕಾರ ಉರುಳಿಸಿ, ಯು.ಎಸ್ ನ  ಪ್ರಾಕ್ಸಿ ಸರಕಾರ ಸ್ಥಾಪಿಸಿ ದೈತ್ಯ ವಿದೇಶಿ ಕಂಪನಿಗಳಿಗೆ “ಶಾಶ್ವತ ಶಾಂತಿ” ತರಲು ಮಚಾದೊ ಸಹಾಯ ಮಾಡಬೇಕೆಂದು ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಟ್ಟಿರಬಹುದೆ?

ಸ್ವ-ರಕ್ಷಣೆಯ ಹೆಸರಲ್ಲಿ ನರಮೇಧ ನಡೆಸುವ ಇಸ್ರೇಲಿನ ವರ್ಣಬೇಧದ ಯುದ್ಧಕೋರ ನೇತನ್ಯಾಹು ಸರಕಾರದ ಧೋರಣೆಯನ್ನು ಬೆಂಭಲಿಸುತ್ತಾ ವೆನೆಜುವೇಲಾದ ರಾಯಭಾರ ಕಚೇರಿಯನ್ನು ವಿವಾದಿತ ಜೆರೂಸಲೇಂ ನಲ್ಲಿ ತೆರೆಯುವುದಾಗಿ ಪ್ರತಿಜ್ಞೆ ಮಾಡಿದ್ದು ಪ್ಯಾಲೆಸ್ಟಿನ್ನರಿಗೆ “ಶಾಶ್ವತ ಮಸಣದ ಶಾಂತಿ” ಖಚಿತ ಪಡಿಸುವ ಕ್ರಮವಲ್ಲವೇ?

ಫಾಸಿಸಂ, ಜಿಯೋನಿಸಂ ಮತ್ತು ನವ-ಉದಾರವಾದದ ಜಾಗತಿಕ ಗ್ಯಾಂಗಿನ ‘ಶಾಂತಿದೂತೆ’

ಲ್ಯಾಟಿನ್ ಅಮೇರಿಕಾವನ್ನು 1990 ರ ದಶಕದಲ್ಲಿ ಸಂಕಷ್ಟಗಳ ನವಉದಾರವಾದಿ ಪ್ರಯೋಗಶಾಲೆಯಾಗಿ ಮಾಡಿದ ನೀತಿಯಾದ ದೇಶದ ತೈಲ, ನೀರು ಮತ್ತು ಮೂಲಸೌಕರ್ಯಗಳ ಖಾಸಗೀಕರಣವನ್ನು ಮಚಾದೊ ಬಯಸುತ್ತಾರೆ.

“ಲಾ ಸಲಿಡಾ” ಎಂಬ, ವೇಗವಾದ ಪ್ರತಿಭಟನೆಗಳಿಗೆ ಕರೆ ನೀಡಿದ 2014 ರ ರಾಜಕೀಯ ಪ್ರತಿರೋಧ ಚಳುವಳಿಯ ಶಿಲ್ಪಿಗಳಲ್ಲಿ ಮಚಾಡೊ ಒಬ್ಬರು. ವಿದೇಶಿ ಮಾಧ್ಯಮಗಳು ಹೇಳಿದಂತೆ ಅವು “ಶಾಂತಿಯುತ ಪ್ರತಿಭಟನೆಗಳು” ಅಲ್ಲ; ದೇಶದ ಆರ್ಥಿಕತೆಗೆ ಲಕ್ವ ಹೊಡೆಯುವಂತೆ ಮಾಡಿ ಸರ್ಕಾರದ ಪತನವನ್ನು ಬಲಪ್ರಯೋಗದಿಂದ ಮಾಡಲು ಉದ್ದೇಶಿಸಿದ ಸಂಘಟಿತ ಅಡಚಣೆಗಳು ಅವಾಗಿದ್ದವು.

ಉರಿಯುತ್ತಿರುವ  ಕಸ ಮತ್ತು ಮುಳ್ಳುಬೇಲಿಗಳಿಂದ ಬೀದಿಗಳನ್ನು ನಿರ್ಬಂಧಿಸಲಾಗಿತ್ತು, ಕಾರ್ಮಿಕರನ್ನು ಸಾಗಿಸುವ ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿತ್ತು ಮತ್ತು ಚವೇಝ್ ಬೆಂಬಲಿಗರನ್ನು  ಬಡಿಯಲಾಗುತ್ತಿತ್ತು ಅಥವಾ ಕೊಲ್ಲಲಾಗುತ್ತಿತ್ತು.  ಆಂಬ್ಯುಲೆನ್ಸ್ ಮತ್ತು ವೈದ್ಯರುಗಳ ಮೇಲೆ ಸಹ ದಾಳಿ ಮಾಡಲಾಗಿತ್ತು. ಕೆಲವು ಕ್ಯೂಬಾ ವೈದ್ಯಕೀಯ ತಂಡಗಳನ್ನು ಜೀವಂತ ಸುಡಲು ಯತ್ನಿಸಲಾಗಿತ್ತು. ಸಾರ್ವಜನಿಕ ಕಟ್ಟಡಗಳು, ಆಹಾರ ಟ್ರಕ್ಕುಗಳು ಮತ್ತು ಶಾಲೆಗಳನ್ನು ನಾಶಪಡಿಸಲಾಗಿತ್ತು. ಜನನಿವಾಸದ ಪ್ರದೇಶಗಳಲ್ಲಿ ಭಯೋತ್ಪದಕ ಚಟುಟವಟಿಕೆಗಳನ್ನು ಮಚಾಡೊ ನಂತಹ ವಿರೋಧಿ ನಾಯಕರು ಪ್ರಚೋದಿಸಿ, ಅದನ್ನು “ಪ್ರತಿರೋಧ” ಎಂದು ಕರೆದರು. ಈ ಚಳುವಳಿ ಯಾವುದೇ ಮಾನದಂಡದಿಂದ ನೋಡಿದರೂ ಶಾಂತಿಯುತವಾಗಿರಲಿಲ್ಲ. ಅದೂ ಬಡವರು, ರೈತ-ಕಾರ್ಮಿಕರ ಮೇಲೆ ಕ್ರೂರ ಹಿಂಸಾತ್ಮಕ ದಾಳಿಯಾಗಿತ್ತು,

ಮಚಾದೊ ನಾಯಕತ್ವದ ‘ಲಾ ಸಾಲಿದಾ ಶಾಂತಿಯುತ ಪ್ರತಿರೋಧ’ ದ ಬೀದಿ ಹಿಂಸಾಚಾರದ ಒಂದು ದೃಶ್ಯ

ವೆನೆಜುವೆಲಾ ತಾಯಂದಿರು ಯು.ಎಸ್  ವಲಸೆ ನೀತಿಗಳಿಂದ ಕಣ್ಮರೆಯಾದ ತಮ್ಮ ಮಕ್ಕಳನ್ನು ಹುಡುಕುತ್ತಿರುವಾಗ, ಯು.ಎಸ್ ಗೆ ವಲಸೆ ಬಂದ ವೆನೆಜುವೇಲಾದ ಮಕ್ಕಳನ್ನು ಬಂಧಿಸಿ ಮತ್ತು ಕುಟುಂಬಗಳನ್ನು ಛಿದ್ರಗೊಳಿಸುವ ಅಧ್ಯಕ್ಷ ಟ್ರಂಪ್ ಅವರ “ನಿರ್ಣಾಯಕ ಕ್ರಮ”ವನ್ನು ಮಚಾದೊ ಕೊಂಡಾಡಿದರು.  ಯು.ಎಸ್ ನಲ್ಲಿರುವ ವೆನೇಜುವೆಲನ್ನರು “ಕ್ರಿಮಿನಲ್ ಎಂಟರ್ಪ್ರೈಸ್” ನಲ್ಲಿ ತೊಡಗಿದ್ದಾರೆಂಬ ಟ್ರಂಪ್  ಘೋಷಣೆಗೆ ದನಿಗೂಡಿಸಿದ್ದಾರೆ. ಈ ಹಿಂಸಾತ್ಮಕ “ನಿರ್ಣಾಯಕ ಕ್ರಮ” ಯಾರ ಶಾಂತಿಗೆ ?

ಮಚಾಡೊ ಶಾಂತಿ ಅಥವಾ ಪ್ರಗತಿಯ ಪ್ರತೀಕ ಅಲ್ಲ. ಅವರು  ಫಾಸಿಸಂ, ಜಿಯೋನಿಸಂ ಮತ್ತು ನವ-ಉದಾರವಾದದ ಜಾಗತಿಕ ಗ್ಯಾಂಗಿನ ಭಾಗ.  ಈ ಗ್ಯಾಂಗಿಗೆ  ಶಾಂತಿ ತರುವ ಕ್ರೂರ ಕ್ರಮಗಳಿಗೆ ಪ್ರಜಾಪ್ರಭುತ್ವ ಮತ್ತು ಶಾಂತಿಯ ಹೆಸರಿನಲ್ಲಿ  ಭೋಪರಾಕು ಹೇಳುವುದಕ್ಕೆ ಈ ‘ಶಾಂತಿದೂತೆ’ಗೆ ಪ್ರಶಸ್ತಿ.

ವೆನೆಜುವೆಲಾದಲ್ಲಿ, ಈ ಗ್ಯಾಂಗ್ ನ ಭೋಪರಾಕು ಹೇಳುವುದು ಅಂದರೆ  ಅರಾಜಕತೆ, ಆರ್ಥಿಕ ದಿಗ್ಬಂಧನ  ಮತ್ತು ಖಾಸಗೀಕರಣ ಎಂದರ್ಥ.  ಗಾಝಾದಲ್ಲಿ, ಅದು ನರಮೇಧ  ಮತ್ತು ಜನತೆಯ ವಿನಾಶವೆಂದರ್ಥ. ಕೆಲವರ ಜೀವ ಬಹಳ ಅಗ್ಗ. ಅವನ್ನು ಮುಗಿಸಿದರೆ ಅಡ್ಡಿಯಿಲ್ಲ. ಸಾರ್ವಭೌಮತೆ ಮಾರಾಟಕ್ಕಿದೆ ಮತ್ತು ಹಿಂಸೆ ಕಾನೂನುಬದ್ಧ ವ್ಯವಸ್ಥೆ ಎಂದು ಸಾರುವ ಸಿದ್ಧಾಂತ ಮಚಾದೋದ್ದು. ಪ್ರಜಾಪ್ರಭುತ್ವ, ಶಾಂತಿಯಿಂದ ಅದು ಗಾವುದ ದೂರ.

ಭೀಕರ ಯುದ್ಧಕೊರರೆಂದು ಪ್ರಸಿದ್ಧಿ ಪಡೆದ ಯು.ಎಸ್ ವಿದೇಶ ಮಂತ್ರಿ ಹೆನ್ರಿ ಕಿಸ್ಸಿಂಗರ್,  ಇಸ್ರೇಲಿ ಪ್ರಧಾನಿ ಬೆಗಿನ್,  ರಬಿನ್, ಸಿಮೊನ್ ಪೆರೇಸ್, ವರ್ಣಬೇಧದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಡಿ ಕ್ಲರ್ಕ್, ಯು.ಎಸ್ ಅಧ್ಯಕ್ಷ ಒಬಾಮ ರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡುವುದದಾದರೆ.  ಮಾರಿಯಾ ಕೊರಿನಾ ಮಚಾಡೊ ಗೆ ಯಾಕೆ ಕೊಡಬಾರದು? ಮಾರ್ಟಿನ್ ಲೂಥರ್ ಕಿಂಗ್, ಡೆಸ್ ಮಂಡ್ ಟುಟು, ಮಂಡೇಲಾ, ಯಾಸೆರ್ ಅರಾಫತ್  ಹಾಗೂ ಹಲವು ವಿಶ್ವಸಂಸ್ಥೆಯ ಮತ್ತು ಇತರ ಮಾನವ ಹಕ್ಕು, ಶಾಂತಿ, ಸೇವೆಗಳಿಗೆ ಮುಡಿಪಾದ ಕೆಲವು ‘ರಾಜಕೀಯವಾಗಿ ತಟಸ್ಥ’ವಾದ  ಜಾಗತಿಕ ಸಂಸ್ಥೆಗಳಿಗೆ ಶಾಂತಿ ಪ್ರಶಸ್ತಿ ಕೊಡಲಾಗಿದೆ. ಆದರೆ ನೊಬೆಲ್ ಶಾಂತಿ ಪ್ರಶಸ್ತಿ ‘ಪಾಶ್ವಿಮಾತ್ಯ ರಾಜಕಾರಣ’ದ ಒಂದು ಅಸ್ತ್ರವಾಗಿ ಬಳಕೆಯಾಗಿದೆ. ಅವರಿಗೆ ಅನುಕೂಲವಲ್ಲದ ದೇಶಗಳ ಭಿನ್ನಮತೀಯರಿಗೆ ಹೆಚ್ಚಾಗಿ ಕೊಡಲಾಗಿದೆ.  ನಿಜವಾದ ವಿಶ್ವಶಾಂತಿಗೆ ಹೋರಾಟ ಮಾಡಿದ ಜಾಗತಿಕ ಸಂಘಟನೆಗಳಿಗೆ ಈ ಪ್ರಶಸ್ತಿ ದಕ್ಕಿದ್ದು ಅಪರೂಪ.

ಹಾಗಾಗಿ ನೊಬೆಲ್ ಶಾಂತಿ ಪ್ರಶಸ್ತಿ ಜೋಕ್ ಆಗಿದ್ದು ಈ ವರ್ಷ ಮಾತ್ರವಲ್ಲ.  ಬಹುಶಃ ಮುಂದಿನ ವರ್ಷ “ಕಬ್ಜಾ ಅಡಿಯಲ್ಲಿ ಕರುಣೆ”ಗಾಗಿ “ಗಾಝಾ ಹ್ಯೂಮನಿಟೇರಿಯನ್ ಫೌಂಡೇಶನ್” ಅಥವಾ ಟ್ರಂಪ್ ಮತ್ತು ನೇತನ್ಯಾಹು ಗೆ  ಶಾಂತಿ ಪ್ರಶಸ್ತಿ ಕೊಟ್ಟರೆ ಅದನ್ನು ‘ಜೋಕ್’ ಅಂತ ಭಾವಿಸಬೇಕಾಗಿಲ್ಲ.

*********************

Donate Janashakthi Media

Leave a Reply

Your email address will not be published. Required fields are marked *