ಸುಂಕ-ದಾಳಿ: ಬರಿದೇ ಟ್ರಂಪ್ ‘ಹುಚ್ಚುತನ’ ವಲ್ಲ!

ಟ್ರಂಪ್ ಸುಂಕ ಯುದ್ಧವನ್ನು ಹರಿಯ ಬಿಡಲು ಅವರ “ಹುಚ್ಚುತನ” ಅಥವಾ ಪ್ರಪಂಚದ ಉಳಿದ ದೇಶಗಳ ಬಗ್ಗೆ ಅವರು ಹೊಂದಿರುವ “ತಿರಸ್ಕಾರ” ಮುಂತಾದ ಕಾರಣಗಳನ್ನು ಕೊಡಲಾಗುತ್ತದೆ. ಆದರೆ, ಅದಕ್ಕೂ ಮಿಗಿಲಾಗಿ ಇದು ಬಂಡವಾಳಶಾಹಿಯ ಬೆಳವಣಿಗೆಯಲ್ಲೇ ಆಳವಾಗಿ ಬೇರೂರಿರುವ ವೈರುಧ್ಯಗಳಿಂದಲೇ ಹೊಮ್ಮಿರುವಂತದ್ದು. ಈ ಸುಂಕ-ದಾಳಿ ಒಂದು ಮಹತ್ವದ ಅಂಶವನ್ನು, ಆರ್ಥಿಕ ಚಟುವಟಿಕೆಗಳನ್ನು ಅಮೆರಿಕದಿಂದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಪಸರಿಸುವ ಯುಗ ಅಂತ್ಯವಾಗಿದೆ ಎಂಬುದನ್ನು ಸೂಚಿಸುತ್ತದೆ. ಆ ಮೂಲಕ ನವ ಉದಾರವಾದಿ ನೀತಿಯನ್ನು ಅನುಸರಿಸುವುದಕ್ಕೆ ಈಗ ತಾರ್ಕಿಕ ಆಧಾರವೂ ಕೊನೆಗೊಂಡಿದೆ. ಭಾರತದಂತಹ ದೇಶಗಳು ತಮ್ಮ ಮುನ್ನಡೆಯ ದಿಕ್ಪಥವನ್ನು ಬದಲಾಯಿಸಬೇಕಾದ ಸಮಯ ಈಗ ಬಂದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಸ್ತುತ ಕಾಲಘಟ್ಟದಲ್ಲಿ ಭಾರತದಂತಹ ದೇಶಗಳಿಗೆ ಸಮತೆಯ, ಜನ ಕಲ್ಯಾಣದ, ಆಂತರಿಕ ಮಾರುಕಟ್ಟೆ-ಆಧಾರಿತ ಮತ್ತು ಪ್ರಭುತ್ವ-ಪೋಷಿತ ಅಭಿವೃದ್ಧಿಯ ಕಾರ್ಯತಂತ್ರವನ್ನು ಅನುಸರಿಸುವುದಲ್ಲದೆ ಬೇರೆ ಪರ್ಯಾಯವಿಲ್ಲ ಎಂಬ ಅಂಶದತ್ತ ಟ್ರಂಪ್ ಸುಂಕಗಳು ಜನರ ಕಣ್ಣು ತೆರೆಸಬೇಕು.

-ಪ್ರೊ. ಪ್ರಭಾತ್ ಪಟ್ನಾಯಕ್

-ಅನು:ಕೆ.ಎಂ.ನಾಗರಾಜ್

ಒಂದು ಬೌದ್ಧಿಕ ನಿಲುವು ಸರಿಯಾಗಿರಬೇಕು. ಅಷ್ಟೇ ಅಲ್ಲ, ಅದು ಸರಿಯಾದ ಕಾರಣಗಳಿಗಾಗಿ ಸರಿಯಾಗಿರುವುದು ಕೂಡ ಮುಖ್ಯವಾಗುತ್ತದೆ. ಸುಂಕಗಳ ಹೇರಿಕೆಯ ಡೊನಾಲ್ಡ್ ಟ್ರಂಪ್‌ರ ಆಕ್ರಮಣಕಾರಿ ನಿಲುವಿಗೆ ಸಾರ್ವತ್ರಿಕವಾಗಿ ಖಂಡನೆ ವ್ಯಕ್ತವಾಗಿದೆ. ಈ ಖಂಡನೆಯು ಸರಿಯಾಗಿಯೇ ಇದ್ದರೂ, ಅದಕ್ಕೆ ಕೊಡುತ್ತಿರುವ ಕಾರಣಗಳು ಮಾತ್ರ ತಪ್ಪಾಗಿವೆ. ಈ ಖಂಡನೆಗಳಲ್ಲಿ, ನಿರ್ಬಂಧಗಳಿಲ್ಲದ ವ್ಯಾಪಾರವು ಸಂಬಂಧಪಟ್ಟ ಎಲ್ಲರಿಗೂ ಒಳ್ಳೆಯದು, ಮತ್ತು ಟ್ರಂಪ್ ಈ ಸೂಕ್ತಿಯನ್ನು ಧಿಕ್ಕರಿಸಿರುವ ಒಬ್ಬ ದುಷ್ಟ ಹಾಗೂ ಪೆದ್ದ ಕೂಡ ಎಂಬ ಭಾವನೆ ವ್ಯಾಪಕವಾಗಿ ಕಾಣುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಟ್ರಂಪ್ ಅವರ ಕಾರ್ಯತಂತ್ರದ ಬಗೆಗಿನ ಬಹುತೇಕ ಟೀಕೆಯು ಡೇವಿಡ್ ರಿಕಾರ್ಡೊ ಅವರ ಕಾಲದಿಂದಲೂ ಒಪ್ಪಿಕೊಂಡು ಬಂದಿರುವ ಮುಕ್ತ ವ್ಯಾಪಾರದ ತರ್ಕದ ಮೇಲೆ ನಿಂತಿದೆ. ಆದರೆ, ಈ ತರ್ಕ ಸಂಪೂರ್ಣವಾಗಿ ತಪ್ಪು.

ಮುಕ್ತ ವ್ಯಾಪಾರ ತರ್ಕವು ಜೀನ್ ಬ್ಯಾಪ್ಟಿಸ್ಟ್ ಸೇ ಎಂಬವರು ಪ್ರತಿಪಾದಿಸಿರುವ ನಿಯಮವನ್ನು ಆಧರಿಸಿದೆ. ಈ ನಿಯಮದ ಪ್ರಕಾರ, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಗೆ ಎಂದಿಗೂ ಬೇಡಿಕೆಯ ಇತಿಮಿತಿಯ ಸಮಸ್ಯೆಗಳು ಇದಿರಾಗುವುದಿಲ್ಲ. ಇದು ಒಂದು ಅಸಂಬದ್ಧ ಪ್ರತಿಪಾದನೆ. ಈ ನಿಯಮದಿಂದ ನಾವು ಒಮ್ಮೆ ದೂರ ಸರಿದು ನೋಡಿದರೆ, ಆಗ ವ್ಯಾಪಾರ ನೀತಿ, ಅಂದರೆ ಮುಕ್ತ ವ್ಯಾಪಾರವನ್ನು ಅನುಸರಿಸಬೇಕೋ ಅಥವ ಸುಂಕಗಳನ್ನು ಹೇರಬೇಕೋ ಎಂಬುದು ಒಂದು ದೇಶದ ಉತ್ಪಾದಕರಿಗಾಗಿ ಒಂದು ದೊಡ್ಡ ಮಾರುಕಟ್ಟೆಯನ್ನು ಹಿಡಿಯಲು ಇತರ ದೇಶಗಳಿಗೆ ನಷ್ಟವನ್ನುಂಟು ಮಾಡಿಯಾದರೂ ಹೇಗೆ ರೂಪಿಸುವುದು ಎಂಬುದನ್ನು ಅವಲಂಬಿಸಿರುತ್ತದೆ ಎಂಬುದು ತಿಳಿಯುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಮುಕ್ತ ವ್ಯಾಪಾರವು ಎಲ್ಲರಿಗೂ ಪ್ರಯೋಜನವಾಗುವಂತದ್ದೇನೂ ಅಲ್ಲ್ಲ ಮತ್ತು, ಇಂತಹ ಮುಕ್ತ ವ್ಯಾಪಾರದಿಂದ ದೂರ ಸರಿದಿದ್ದಾರೆ ಎಂದು ಟ್ರಂಪ್ರನ್ನು ದೂಷಿಸುವುದು, ಅವರನ್ನು ತಪ್ಪು ಕಾರಣಗಳಿಗಾಗಿ ದೂಷಿಸಿದಂತಾಗುತ್ತದೆ.

ಸಾಮ್ರಾಜ್ಯಶಾಹಿ ಮತ್ತು ವ್ಯಾಪಾರನೀತಿ

ಪ್ರಗತಿಶೀಲ ವಲಯಗಳಲ್ಲಿ ಟ್ರಂಪ್ ವ್ಯಾಪಾರ ನೀತಿಯ ವಿರುದ್ಧ ಒಂದು ಸಂಪೂರ್ಣವಾಗಿ ವಿಭಿನ್ನವಾದ ವಾದವನ್ನು ಮಂಡಿಸಲಾಗಿದೆ: ಒಂದು ಪ್ರಮುಖ ಮಹಾನಗರೀಯ (ಮೆಟ್ರೋಪಾಲಿಟನ್-ಅಂದರೆ, ಮುಂದುವರೆದ ಬಂಡವಾಳಶಾಹಿ ವ್ಯವಸ್ಥೆ-ಅನು) ಅರ್ಥವ್ಯವಸ್ಥೆಯಾದ ಅಮೆರಿಕವು, ಒಂದೆಡೆಯಲ್ಲಿ ಜಾಗತಿಕ ದಕ್ಷಿಣವನ್ನು(ಅಭಿವೃದ್ಧಿ ಹೊಂದುತ್ತಿರುವ-ಅನು) ಮುಕ್ತ ವ್ಯಾಪಾರಕ್ಕೆ ಒಳಪಡಿಸುತ್ತಲೇ, ತಾನು ಮಾತ್ರ ಸುಂಕಗಳನ್ನು ವಿಧಿಸುತ್ತಿರುವುದು ಒಂದು ಸಾಮ್ರಾಜ್ಯಶಾಹೀ ಕೃತ್ಯವೇ. ಏಕೆಂದರೆ, ಜಾಗತಿಕ ದಕ್ಷಿಣದಿಂದ ಬರುವ ಆಮದುಗಳಿಗೆ ಅದು ಬಾಗಿಲು ಮುಚ್ಚುವ ಮೂಲಕ ಜಾಗತಿಕ ದಕ್ಷಿಣಕ್ಕೆ ತನ್ನ ನಿರುದ್ಯೋಗವನ್ನು ರಫ್ತು ಮಾಡುತ್ತದೆ ಎಂದು ಈ ವಾದ ಹೇಳುತ್ತದೆ.

ತಕ್ಷಣದ ಸಂದರ್ಭದಲ್ಲಿ, ಈ ವಾದವು ಸಮಂಜಸವಾಗಿ ಕಂಡರೂ ಸಹ, ಇದು ಸಾಮ್ರಾಜ್ಯಶಾಹಿಯ ಒಂದು ನಿರ್ಣಾಯಕ ಲಕ್ಷಣವೇನೂ ಅಲ್ಲ. ಉದಾಹರಣೆಗೆ, ವಸಾಹತುಶಾಹಿ ಅವಧಿಯ ಉತ್ತರಾರ್ಧದಲ್ಲಿ, ಆಗಿನ ಪ್ರಧಾನ ಮಹಾನಗರೀಯ (ಮೆಟ್ರೋಪಾಲಿಟನ್)) ಅರ್ಥವ್ಯವಸ್ಥೆಯಾದ ಬ್ರಿಟನ್ ಜಾಗತಿಕ ದಕ್ಷಿಣದ ಮೇಲೆ ಮುಕ್ತ ವ್ಯಾಪಾರವನ್ನು ಹೇರಿದ ಜೊತೆಯಲ್ಲೇ, ತಾನೂ ಮುಕ್ತ ವ್ಯಾಪಾರವನ್ನು ಅನುಸರಿಸುತ್ತಿತ್ತು. ಆ ಮುಕ್ತ ವ್ಯಾಪಾರ ನೀತಿಯ ಹೇರಿಕೆಯು ಭಾರತ ಮತ್ತು ಚೀನಾದಂತಹ ಅರ್ಥವ್ಯವಸ್ಥೆಗಳನ್ನು ಕೈಗಾರಿಕಾ ಕ್ರಾಂತಿಯ ತರುವಾಯ ಬ್ರಿಟನ್‌ನಿಂದ ರಫ್ತು ಮಾಡಲಾದ ಅಗ್ಗದ ತಯಾರಿಕಾ ಸರಕುಗಳಿಗೆ ಮುಕ್ತಗೊಳಿಸಿತು ಮತ್ತು ಬಂಡವಾಳಶಾಹಿಗಿಂತ ಮೊದಲಿದ್ದ ಉತ್ಪಾದಕರನ್ನು ಸ್ಥಳಾಂತರಿಸುವ ಮೂಲಕ ಈ ಅರ್ಥವ್ಯವಸ್ಥೆಗಳಲ್ಲಿ ಇದ್ದ ಕೈಗಾರಿಕೆಗಳುನಶಿಸಲು(ಡಿ-ಇಂಡಸ್ಟ್ರಿಯಲೈಷನ್=ಅಪ-ಕೈಗಾರಿಕೀಕರಣ) ಉಂಟಾಗಲು ಕಾರಣವಾಯಿತು.

ಇದನ್ನೂ ಓದಿ: ಡ್ಯಾಮ್ ನಿರ್ಮಾಣ ಕಾಮಗಾರಿ ಅವೈಜ್ಞಾನಿಕ: ರೈತರ ಸಂಘ ಆಕ್ರೋಶ

ಜಾಗತಿಕ ದಕ್ಷಿಣದ ಮೇಲೆ ಮುಕ್ತ ವ್ಯಾಪಾರವನ್ನು ಹೇರುವ ಈ ಪರಿಸ್ಥಿತಿಯು ಎರಡು ಮಹಾಯುದ್ಧಗಳ ನಡುವಿನ ಅವಧಿಯವರೆಗೂ ಮುಂದುವರೆಯಿತು. ಆರ್ಥಿಕ ಮಹಾ ಕುಸಿತದ ಸನ್ನಿವೇಶದಲ್ಲಿ ಲ್ಯಾಟಿನ್ ಅಮೆರಿಕಾದಾದ್ಯಂತ ಬೀಸಿದ ರಾಜಕೀಯ ಅಲೆಯ ಪರಿಣಾಮವಾಗಿ ಹೊಸ ರೀತಿಯ ಆಳ್ವಿಕೆಯ ಒಂದು ಇಡೀ ಸಮೂಹವೇ ಹೊರಹೊಮ್ಮಿತು. ಈ ದೇಶಗಳು ರಕ್ಷಣಾತ್ಮಕ ವ್ಯಾಪಾರ ಕ್ರಮಗಳನ್ನು ಜಾರಿಗೆ ತಂದವು. ಸುಂಕದ ಗೋಡೆಗಳನ್ನು ನಿರ್ಮಿಸಿಕೊಂಡವು. ಸುಂಕದ ರಕ್ಷಣೆಯೊಂದಿಗೆ ಕೈಗಾರಿಕೀಕರಣವನ್ನು ಪ್ರಾರಂಭಿಸಿದವು. ಭಾರತದಲ್ಲಿಯೂ ಸಹ ವಸಾಹತುಶಾಹಿ ಆಳ್ವಿಕೆಯು ಇದೇ ಅವಧಿಯಲ್ಲಿ ಒಲ್ಲದ ಮನಸ್ಸಿನಿಂದ (ಇಲ್ಲಿ ಆಗಿನ್ನೂ ಕೈಗಾರಿಕೆಗಳು ‘ಶೈಶವಾವಸ್ಥೆ’ಯಲ್ಲಿದ್ದವು ಎಂಬ ತರ್ಕವೊಡ್ಡಿ) ಸಣ್ಣ ಶ್ರೇಣಿಯ ಕೈಗಾರಿಕೆಗಳಿಗೆ ಮತ್ತು ದೇಶೀಯ ಬೂರ್ಜ್ವಾಗಳಿಗೂ ಅಭಿವೃದ್ಧಿ ಹೊಂದುವ ಸ್ವಲ್ಪ ಅವಕಾಶ ನೀಡುವ ಒಂದು “ತಾರತಮ್ಯದ ರಕ್ಷಣೆ”ಯ ನೀತಿಯನ್ನು ಪರಿಚಯಿಸಬೇಕಾಯಿತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾಮ್ರಾಜ್ಯಶಾಹಿ ವ್ಯಾಪಾರ ನೀತಿಯು ಮೂರ್ತ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.

ನವ-ಉದಾರವಾದ’ದ ಸೇಲ್!

ಇತ್ತೀಚಿನ ಅವಧಿಯಲ್ಲಿ, ಮಹಾನಗರೀಯ ಬಂಡವಾಳವು ಜಾಗತಿಕ ದಕ್ಷಿಣದಲ್ಲಿನ ಕಡಿಮೆ ಸಂಬಳದ ಪ್ರಯೋಜನ ಪಡೆದು ಅಲ್ಲಿ ಕಾರ್ಖಾನೆಗಳನ್ನು ನೆಲೆಗೊಳಿಸಬೇಕೆಂದು ಬಯಸುವಾಗ, ಇದರಿಂದಾಗಿ, ಅನಿರ್ಬಂಧಿತ ವ್ಯಾಪಾರದ ಪರಿಸ್ಥಿತಿಗಳಲ್ಲಿ, ಜಾಗತಿಕ ದಕ್ಷಿಣಕ್ಕೆ ನಿರುದ್ಯೋಗದ ರಫ್ತಲ್ಲ, ಉದ್ಯೋಗವನ್ನು ರಫ್ತು ಮಾಡಿದಂತಾಗಿದೆ. ನಿಜವಾಗಿ ಹೇಳುವುದಾದರೆ, ಬಂಡವಾಳದ ಹರಿದಾಟಕ್ಕೆ ಇರುವ ಎಲ್ಲಾ ಅಡೆತಡೆಗಳನ್ನೂ ತೆಗೆದುಹಾಕಿದರೆ ಉತ್ಪಾದನಾ ಚಟುವಟಿಕೆಗಳು ಜಾಗತಿಕ ಉತ್ತರದಿಂದ ಸ್ಥಳಾಂತರಗೊಳ್ಳುವ ಮೂಲಕ ಜಾಗತಿಕ ದಕ್ಷಿಣದ ಅರ್ಥವ್ಯಸ್ಥೆಗಳಲ್ಲಿ ಉದ್ಯೋಗಗಳು ಹೆಚ್ಚುತ್ತವೆೆ ಎಂಬ ತರ್ಕದ ಮೇಲೆ ನವ ಉದಾರವಾದಿ ನೀತಿಗಳನ್ನು ಭಾರತದಂತಹ ದೇಶಗಳಿಗೆ ಮಾರಾಟ ಮಾಡಲಾಯಿತು. ಟ್ರಂಪ್ ಈಗ ಈ ವಿದ್ಯಮಾನವನ್ನು ಕೊನೆಗೊಳಿಸ ಬೇಕೆಂದಿದ್ದಾರೆ.

ಟ್ರAಪ್ ಅವರ ರಕ್ಷಣಾತ್ಮಕ ವ್ಯಾಪಾರ ನೀತಿಗೆ ಜಾಗತಿಕ ದಕ್ಷಿಣದಿಂದ, ವಿಶೇಷವಾಗಿ ಚೀನಾದಿಂದ, ಉದ್ಯೋಗವನ್ನು ಕಸಿದುಕೊಳ್ಳುವ ಬಯಕೆ ಮಾತ್ರವೇ ಪ್ರೇರಣೆಯಲ್ಲ. ವ್ಯಾಪಾರದ ಬಾಕಿ( ಬ್ಯಾಲನ್ಸ್ ಆಫ್ ಪೇಮೆಂಟ್ಸ್) ಇತ್ಯರ್ಥಕ್ಕೆ ಸಂಬಂಧಿಸಿದಂತೆ ಅಮೆರಿಕದ ಚಾಲ್ತಿ ಖಾತೆಯ ಕೊರತೆಯು( ಕರೆಂಟ್ ಅಕೌಂಟ್ ಡೆಫಿಸಿಟ್) ಮುಂದುವರಿಯುತ್ತಿರುವುದು ಒಂದು ಬಲವಾದ ಹೆಚ್ಚುವರಿ ಕಾರಣವಾಗಿದ್ದು, ಅದು ಅಮೆರಿಕವನ್ನು ವಿಶ್ವದ ಅತಿದೊಡ್ಡ ಸಾಲಗಾರ ದೇಶವನ್ನಾಗಿ ಮಾಡಿದೆ. ಈ ಹದಗೆಟ್ಟ ಪರಿಸ್ಥಿತಿಯನ್ನು ರಕ್ಷಣಾತ್ಮಕ ವ್ಯಾಪಾರ ನೀತಿಯು ಸರಿಪಡಿಸುತ್ತದೆ ಎಂದು ಟ್ರಂಪ್ ಆಶಿಸುತ್ತಾರೆ.

ಆದರೆ, ಇಲ್ಲೊಂದು ವೈರುಧ್ಯವಿದೆ. ಸಾಮಾನ್ಯವಾಗಿ ಅದನ್ನು ಗಮನಿಸುವುದಿಲ್ಲ. ಬಂಡವಾಳಶಾಹಿ ಜಗತ್ತಿನ ತನ್ನ ಪ್ರತಿಸ್ಪರ್ಧಿ ದೇಶಗಳ ಹೆಬ್ಬಯಕೆಗಳಿಗೆ ಎಡೆ ಮಾಡಿಕೊಡುವಂತಾಗಲು ಮತ್ತು ತನ್ನ ನಾಯಕತ್ವದ ಪಾತ್ರವನ್ನು ಉಳಿಸಿಕೊಳ್ಳಲು, ಪ್ರತಿಸ್ಪರ್ಧಿ ದೇಶಗಳಿಗೆ ಎದುರಾಗಿ ತನ್ನ ಚಾಲ್ತಿ ಖಾತೆಯಲ್ಲಿ ಕೊರತೆಯನ್ನು ಸಹಿಸಿಕೊಳ್ಳುವುದು ಬಂಡವಾಳಶಾಹಿ ಜಗತ್ತಿನ ಒಬ್ಬ ನಾಯಕನ ಲಕ್ಷಣವಾಗುತ್ತದೆ. ಮೊದಲ ಮಹಾಯುದ್ಧದ ಮೊದಲು ಬಂಡವಾಳಶಾಹಿ ಜಗತ್ತಿನ ನಾಯಕನಾಗಿದ್ದ ಬ್ರಿಟನ್, ಪ್ರತಿಸ್ಪರ್ಧಿಗಳಾಗಿ ಆಗ ತಾನೇ ಹೊಸದಾಗಿ ಹೊಮ್ಮುತ್ತಿದ್ದ ಯುರೋಪಿನ ಇತರ ದೇಶಗಳ ಮತ್ತು ಅಮೆರಿಕದ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಮತ್ತು ಬಂಡವಾಳಶಾಹಿ ಜಗತ್ತಿನ ತನ್ನ ನಾಯಕತ್ವದ ವಿರುದ್ಧ ಈ ದೇಶಗಳು ಬಂಡಾಯಕ್ಕಿಳಿಯದಂತೆ ತಡೆಯಲು, ಈ ಪ್ರತಿಸ್ಪರ್ಧಿ ದೇಶಗಳಿಗೆ ಎದುರಾಗಿ ತನ್ನ ಚಾಲ್ತಿ ಖಾತೆಯಲ್ಲಿ ಕೊರತೆಯನ್ನು ನಿರಂತರವಾಗಿ ಬ್ರಿಟನ್ ಸಹಿಸಿಕೊಂಡಿತ್ತು.

ಇದನ್ನೂ ನೋಡಿ: ಕೇಂದ್ರದ ತಪ್ಪು ನೀತಿಗಳೇ ಬೆಲೆ ಏರಿಕೆಗೆ ಕಾರಣ – ಸಿಎಂ ಸಿದ್ದರಾಮಯ್ಯ Janashakthi Media

ಬ್ರಿಟನ್ ಸಾಲಗಾರ ದೇಶವಾಗಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಯಾವ ದೇಶಗಳಿಗೆ ಎದುರಾಗಿ ತನ್ನ ಚಾಲ್ತಿ ಖಾತೆಯಲ್ಲಿ ಕೊರತೆಯನ್ನು ಹೊಂದಿ ಅದನ್ನು ಸಹಿಸಿಕೊಂಡಿತ್ತೋ ಆ ದೇಶಗಳಿಗೇ ಬಂಡವಾಳವನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುವ ಪ್ರಮುಖ ಸಾಲದಾತ ದೇಶವಾಗಿ ಬ್ರಿಟನ್ ಹೊರಹೊಮ್ಮಿತು. ಏಕೆಂದರೆ, ಅದನ್ನು ಸಾಧ್ಯವಾಗಿಸುವ ಸನ್ನಿವೇಶವೂ ಇತ್ತು. ಅಂದರೆ, ಉಷ್ಣವಲಯದ ಮತ್ತು ಉಪೋಷ್ಣವಲಯದ ತನ್ನ ವಸಾಹತುಗಳ ಎಲ್ಲ ನಿವ್ವಳ ರಫ್ತು ಗಳಿಕೆಗಳನ್ನೂ (ಮಿಗುತಾಯವನ್ನು ‘ಬಸಿಯುವ’ ಮೂಲಕ) ಪುಕ್ಕಟೆಯಾಗಿ ಸ್ವಾಹಾ ಮಾಡಿಕೊಳ್ಳಬಹುದಾದಮತ್ತು ಅವುಗಳಿಗೆ, ಅವುಗಳ ಕೈಗಾರಿಕೆಗಳನ್ನು ಮುಚ್ಚುವಂತೆ ಮಾಡುವ (“ಅಪ-ಕೈಗಾರಿಕೀಕರಣ’ಗೊಳಿಸುವ) ರಫ್ತುಗಳನ್ನು ಮಾಡಬಹುದಾದ ಅನುಕೂಲತೆ ಅದಕ್ಕೆ ಲಭ್ಯವಿತ್ತು.

ಈ ವಸಾಹತುಗಳು ಅದಕ್ಕೆ ನಿಜಕ್ಕೂ “ಬೇಕಾದಾಗ ಬಳಸಿಕೊಳ್ಳಬಹುದಾದ ಮಾರುಕಟ್ಟೆ”ಗಳಾಗಿದ್ದವು (ಆರ್ಥಿಕ ಇತಿಹಾಸಕಾರ ಎಸ್ ಬಿ ಸೌಲ್ ವರ್ಣಿಸಿರುವಂತೆ). ಅಂದಿನ ಬ್ರಿಟನ್ ಹೊಂದಿದ್ದ ಮತ್ತು ಇಂದಿನ ಅಮೆರಿಕ ಹೊಂದಿರುವ ಅನುಕೂಲಗಳ ನಡುವೆ ಇರುವ ಒಂದು ಮೂಲಭೂತ ವ್ಯತ್ಯಾಸವೆಂದರೆ, ಜಾಗತಿಕ ದಕ್ಷಿಣದಿಂದ ನಿವ್ವಳ ರಫ್ತು ಗಳಿಕೆಯನ್ನು ‘ಬಸಿಯುವ’( ಡ್ರೈನ್) ಅನುಕೂಲತೆ ಇಂದಿನ ಅಮೆರಿಕಕ್ಕೆ ಲಭ್ಯವಿಲ್ಲ, ಮತ್ತು, ಅದರ ಮೇಲೆ “ಅಪ-ಕೈಗಾರಿಕೀಕರಣ”ವನ್ನು ಹೇರುವ ಸಾಧ್ಯತೆಗಳೂ ಇಂದಿನ ಅಮೆರಿಕಕ್ಕೆ ಲಭ್ಯವಿಲ್ಲ.

ಇವೆರಡಕ್ಕೂ ಕಾರಣ, ಇಂದು ನಾವು ಕಾಣುತ್ತಿರುವ ಸಾಮ್ರಾಜ್ಯಶಾಹಿಗೆ ವಸಾಹತುಗಳಿಲ್ಲದಿರುವುದು. ಒಂದು ವೇಳೆ ವಸಾಹತುಗಳು ಇದ್ದಿದ್ದರೂ ಸಹ, ಅವುಗಳಿಂದ ಒಂದು ವ್ಯವಸ್ಥೆಯನ್ನು ಎಷ್ಟರ ಮಟ್ಟಿಗೆ ನಡೆಸಿಕೊಂಡು ಹೋಗಬಹುದು ಎಂಬುದಕ್ಕೂ ಒಂದು ಮಿತಿಯಿರುತ್ತಿತ್ತು. ಏಕೆಂದರೆ ಹೆಚ್ಚೆಚ್ಚು ಬಂಡವಾಳಶಾಹಿ-ಪೂರ್ವದ ಉತ್ಪಾದಕರನ್ನು ಹೊರದಬ್ಬಿದಂತೆ, “ಅಪ-ಕೈಗಾರಿಕೀಕರಣ”ದ ಅವಕಾಶ ಕುಗ್ಗುತ್ತ ಹೋಗುತ್ತದೆ ಮತ್ತು ಸ್ಥಗಿತಗೊಂಡ ವಸಾಹತುಶಾಹೀ ಅರ್ಥವ್ಯವಸ್ಥೆಗಳಿಂದ ಮಿಗುತಾಯವನ್ನು ಹೆಚ್ಚೆಚ್ಚಾಗಿ ಹಿಂಡುತ್ತ ಹೋದಂತೆ “ಬಸಿಯುವ’, ಪ್ರಮಾಣವೂ ಕುಗ್ಗುತ್ತ ಹೋಗುತ್ತದೆ. ಇವುಗಳಲ್ಲಿ ಅಪ-ಕೈಗಾರೀಕರಣದ ಅವಕಾಶ ಕುಗ್ಗುತ್ತ ಹೋಗುವ ಬಗ್ಗೆ ರೋಸಾ ಲಕ್ಸೆಂಬರ್ಗ್ ಗಮ£ ಸೆಳೆದಿದ್ದರು. ಸಾಮ್ರಾಜ್ಯಶಾಹಿಗೆ ಕಾರಣವಾಗುವ ಅಂಶಗಳ ಬಗ್ಗೆ ಅವರ ತರ್ಕಗಳು ಅದರದ್ದೇ ಆದ ಮಿತಿಗಳನ್ನು ಹೊಂದಿದ್ದರೂ ಸಹ, ಮಹಾನಗರೀಯ ಬಂಡವಾಳಶಾಹಿಯು ತಾನು ಅಭಿವೃದ್ಧಿ ಹೊಂದುತ್ತಿದ್ದAತೆಯೇ ಹೆಚ್ಚು ಹೆಚ್ಚು ತೊಂದರೆಗಳನ್ನು ಎದುರಿಸಬೇಕಾಗಿ ಬಂದಿದೆ ಎಂಬುದನ್ನು ಅವರು ಗುರುತಿಸಿದ್ದರು ಎಂಬ ಹೆಗ್ಗಳಿಕೆಯೂ ಇದೆ.

ಪೊಳ್ಳು ವಿವರಣೆ

ಟ್ರಂಪ್ ಸುಂಕ ಯುದ್ಧವನ್ನು ಹರಿಯ ಬಿಡಲು ಅವರ “ಹುಚ್ಚುತನ” ಅಥವಾ ಪ್ರಪಂಚದ ಉಳಿದ ದೇಶಗಳ ಬಗ್ಗೆ ಅವರು ಹೊಂದಿರುವ “ತಿರಸ್ಕಾರ” ಮುಂತಾದ ಕಾರಣಗಳನ್ನು ಕೊಡಲಾಗುತ್ತದೆ.. ಆದರೆ, ವಾಸ್ತವವಾಗಿ ಇದು ಬಂಡವಾಳಶಾಹಿಯು ಫ್ರೌಡಾವಸ್ಥೆಗೆ ಬರುತ್ತಿರುವಂತೆಯೇ, ಆ ಬೆಳವಣಿಗೆಯಲ್ಲೇ ಆಳವಾಗಿ ಬೇರೂರಿರುವ ವೈರುಧ್ಯಗಳಿಂದಲೇ ಹೊಮ್ಮಿರುವಂತದ್ದು. ಟ್ರಂಪ್ ಅವರ “ಹುಚ್ಚುತನ” ಅದನ್ನು ಹರಿಯಬಿಟ್ಟಿದೆ ಎಂದು ಹೇಳುವುದು ಒಂದು ಅತ್ಯಂತ ಪೊಳ್ಳು ವಿವರಣೆಯಾಗುತ್ತದೆ. ವಿಪರ್ಯಾಸವೆಂದರೆ, ಟ್ರಂಪ್ ಆಡಳಿತವು ಸುಂಕಗಳನ್ನು ವಿಧಿಸುವುದರಿಂದ, ಉದ್ಯೋಗವನ್ನು ಹೆಚ್ಚಿಸುವ ಮತ್ತು ಅದರ ಚಾಲ್ತಿ ಖಾತೆಯ ಕೊರತೆಯನ್ನು ಇಳಿಕೆ ಮಾಡುವ ಈ ಎರಡೂ ವಿಧಾನಗಳ ಮೂಲಕ ಅಮೆರಿಕ ಪ್ರಯೋಜನ ಪಡೆಯಬಹುದು. ಆದರೆ ಇದು ಇತರ ದೇಶಗಳು ತಮ್ಮ ಸುಂಕಗಳನ್ನು ಏರಿಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳದಿದ್ದರೆ ಮಾತ್ರ ಸಾಧ್ಯ. ಬೇರೆ ದೇಶಗಳು ಪ್ರತೀಕಾರಕ್ಕೆ ಇಳಿದರೆ, ಈ ಸುಂಕಗಳಿಂದ ಅಮೆರಿಕಕ್ಕೆ ಯಾವ ಪ್ರಯೋಜನವೂ ಲಭಿಸುವುದಿಲ್ಲ, ಮಾತ್ರವಲ್ಲ, ಇಂತಹ ಪ್ರತೀಕಾರದ ಸನ್ನಿವೇಶದಲ್ಲಿ ಇಡೀ ಬಂಡವಾಳಶಾಹಿ ಜಗತ್ತಿನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ಎಲ್ಲೆಡೆಯೂ ಏರಿಕೆಯಾದ ಸುಂಕಗಳು, ಹಣ ವೇತನಗಳಿಗೆ ಹೋಲಿಸಿದರೆ, ಸರಕು ಸಾಮಗ್ರಿಗಳ ಬೆಲೆಗಳನ್ನು ಏರಿಸುತ್ತವೆ. ಹಾಗಾಗಿ ಲಾಭದ ಗಾತ್ರ ಹೆಚ್ಚುತ್ತದೆ. ಆದ್ದರಿಂದ ವೇತನದಿಂದ ಲಾಭದತ್ತ ಪಲ್ಲಟ ಉಂಟಾಗುತ್ತದೆ. ಈ ಪಲ್ಲಟವು ಒಟ್ಟು ಬೇಡಿಕೆಯ ಪ್ರಮಾಣವನ್ನು ಇಳಿಸುತ್ತದೆ. ಏಕೆಂದರೆ ಲಾಭದ ಬಹು ದೊಡ್ಡ ಭಾಗವು ಬಳಕೆಯಾಗುವುದಿಲ್ಲ ;ಆದರೆ, ವೇತನದ ಭಾಗವು ಬಹುತೇಕ ಇಡಿಯಾಗಿ ಬಳಕೆಯಾಗುತ್ತದೆ. ಈ ಅಂಶವು, ಉತ್ಪಾದನೆಯು ಯಾವುದೇ ನಿರ್ದಿಷ್ಟ ಮಟ್ಟದಲ್ಲಿರಲಿ, ಬಳಕೆಯ ಮಟ್ಟವನ್ನು ಇಳಿಕೆ ಮಾಡುತ್ತದೆ.

ಹಾಗಾಗಿ, ಇದು ವಿಶ್ವ ಅರ್ಥವ್ಯವಸ್ಥೆಯಲ್ಲಿ ಉತ್ಪಾದನೆಯ ಮತ್ತು ಉದ್ಯೋಗಗಳ ಇಳಿಕೆಗೆ ಕಾರಣವಾಗುತ್ತದೆ. ಇದನ್ನು ನಿಜಕ್ಕೂ ತಡೆಯಬಹುದು, ಶ್ರೀಮಂತರ ಮೇಲಿನ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಒದಗಿಸಿಕೊಂಡ ಹಣವನ್ನು ಅಥವಾ ಒಂದು ಬೃಹತ್ ವಿತ್ತೀಯ ಕೊರತೆಯ ಮೂಲಕ ಒದಗಿಸಿಕೊಂಡ ಹಣವನ್ನು ಪ್ರಭುತ್ವವು ತನ್ನ ವೆಚ್ಚಗಳ ಮೂಲಕ ಬಳಕೆಮಾಡಿದಾಗ ಮಾತ್ರ ಇದು ಸಾಧ್ಯ. ಆದರೆ, ಪ್ರಭುತ್ವವು ತನ್ನ ವೆಚ್ಚಗಳಿಗೆ ಹಣ ಒದಗಿಸಿಕೊಳ್ಳುವ ಈ ಎರಡೂ ವಿಧಾನಗಳನ್ನೂ ಜಾಗತೀಕರಣಗೊಂಡ ಹಣಕಾಸು ವ್ಯವಸ್ಥೆಯು ಸಹಿಸುವುದಿಲ್ಲ. ಹಾಗಾಗಿ, ವಿಶ್ವಾದ್ಯಂತ ಸುಂಕ ಏರಿಕೆ ಅಲೆಯು ವಿಶ್ವ ಬಂಡವಾಳಶಾಹಿಯ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಆದರೆ ಅಂತಹ ಒಂದು ಬೆಳವಣಿಗೆ ಸಂಭವಿಸಿದರೂ, ಅದು ಡೊನಾಲ್ಡ್ ಟ್ರಂಪ್‌ನ “ಹುಚ್ಚುತನ”ದಿಂದ ಉಂಟಾಗುವ ಫಲಿತಾಂಶಕ್ಕಿAತ ಹೆಚ್ಚಾಗಿ ವಿಶ್ವ ಬಂಡವಾಳಶಾಹಿಯಲ್ಲಿನ ಮೂಲಭೂತ ವೈರುಧ್ಯಗಳ ಅಭಿವ್ಯಕ್ತಿಯೇ.

ಪರ್ಯಾಯ ದಾರಿ

ನಮ್ಮ ಮುಂದಿರುವ ಪ್ರಶ್ನೆ- ಟ್ರಂಪ್‌ರ ಸುಂಕ- ಏರಿಕೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು. ಟ್ರಂಪ್‌ರ ಈ ದಾಳಿ ಒಂದು ಮಹತ್ವದ ಅಂಶವನ್ನು, ಅಮೆರಿಕದಿಂದ ಜಾಗತಿಕ ದಕ್ಷಿಣಕ್ಕೆ ಚಟುವಟಿಕೆಗ¼ನ್ನು ಪಸರಿಸುವ ಯುಗ ಅಂತ್ಯವಾಗಿದೆ ಎಂಬುದನ್ನು ಸೂಚಿಸುತ್ತದೆ. ಆ ಮೂಲಕ ನವ ಉದಾರವಾದಿ ನೀತಿಯನ್ನು ಅನುಸರಿಸುವುದಕ್ಕೆ ತಾರ್ಕಿಕ ಆಧಾರವೂ ಔಪಚಾರಿಕವಾಗಿ ಅಂತ್ಯಗೊAಡಿದೆ. ಭಾರತದಂತಹ ದೇಶಗಳು ತಮ್ಮ ಮುನ್ನಡೆಯ ದಿಕ್ಪಥವನ್ನು ಬದಲಾಯಿಸಬೇಕಾದ ಸಮಯ ಈಗ ಬಂದಿದೆ. ಈ ಬದಲಾವಣೆಯು ಅರ್ಥವ್ಯವಸ್ಥೆಯನ್ನು ರಕ್ಷಿಸುವ ಮತ್ತು ದೇಶೀಯ ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಪ್ರಾರಂಭವಾಗಬೇಕು. ಅರ್ಥವ್ಯವಸ್ಥೆಯ ರಕ್ಷಣೆಯೊಂದೇ ಸಾಲದು. ಅದರೊಂದಿಗೆ ಜನಕಲ್ಯಾಣ ಕಾರ್ಯಗಳನ್ನು ಹೆಚ್ಚಿಸಲು ಮತ್ತು ಕೃಷಿ ಮತ್ತು ಸಣ್ಣ ಕೈಗಾರಿಕೆಗಳ ಬೆಳವಣಿಗೆಯನ್ನು ಉತ್ತೇಜಿಸಲು ಪ್ರಭುತ್ವವು ಹೆಚ್ಚು ಹೆಚ್ಚು ವೆಚ್ಚಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ಸಂಪತ್ತು ತೆರಿಗೆಯನ್ನು ವಿಧಿಸಬೇಕು. ಆ ಮೂಲಕ ಒದಗಿಸಿಕೊಂಡ ಹಣದಿಂದ ಈ ವೆಚ್ಚಗಳನ್ನು ಕೈಗೊಂಡಾಗ ಮಾತ್ರವೇ ಆಂತರಿಕ ಮಾರುಕಟ್ಟೆಯ ಗಾತ್ರವೂ ಸಹ ಅದೇ ಸಮಯದಲ್ಲಿ ವೃದ್ಧಿಸುತ್ತದೆ.

ಈ ಉದ್ದೇಶದ ಈಡೇರಿಕೆಗಾಗಿ ಸರ್ಕಾರವು ಕಾರ್ಯಪ್ರವೃತ್ತವಾದಾಗ ಅದು ಹಣಕಾಸು ಬಂಡವಾಳದ ಹೊರಹರಿವಿಗೆ ಕಾರಣವಾಗಬಹುದು. ಈ ಹೊರಹರಿವನ್ನು ತಡೆಯಲು, ಬಂಡವಾಳ ನಿಯಂತ್ರಣಗಳನ್ನು ಜಾರಿಗೆ ತರಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಸ್ತುತ ಕಾಲಘಟ್ಟದಲ್ಲಿ ಭಾರತದಂತಹ ದೇಶಗಳಿಗೆ ಸಮತೆಯ, ಜನ ಕಲ್ಯಾಣದ, ಆಂತರಿಕ ಮಾರುಕಟ್ಟೆ-ಆಧಾರಿತ, ಮತ್ತು ಪ್ರಭುತ್ವ-ಪೋಷಿತ ಅಭಿವೃದ್ಧಿಯ ಕಾರ್ಯತಂತ್ರವನ್ನು ಅನುಸರಿಸುವುದಲ್ಲದೆ ಬೇರೆ ಪರ್ಯಾಯವಿಲ್ಲ ಎಂಬ ಅಂಶದತ್ತ ಟ್ರಂಪ್ ಸುಂಕಗಳು ಜನರ ಕಣ್ಣು ತೆರೆಸಲಿ.

 

ಇದೇಟ್ರಂಪ್ಯೋಜನೆ!

ವ್ಯಂಗ್ಯಚಿತ್ರ: ಸತೀಶಆಚಾರ್ಯ

@ಫೇಸ್‍ಬುಕ್

Donate Janashakthi Media

Leave a Reply

Your email address will not be published. Required fields are marked *