ಚೇಳೂರು | ಗಿಡಗಂಟಿಗಳು ರಸ್ತೆ ಆವರಿಸಿಕೊಂಡಿವೆ : ಜೀವ ಭಯದಲ್ಲಿ ಸವಾರರ ಸಂಚಾರ

ಚೇಳೂರು: ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸ್ಥಿತಿ ಪ್ರಯಾಣಿಕರ ಪಾಲಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ ತಾಲ್ಲೂಕಿನಾದ್ಯಂತ ಮುಖ್ಯ ರಸ್ತೆಗಳನ್ನು ಗಿಡ ಗಂಟೆಗಳು ಹಾಗೂ ಬಳ್ಳಿಗಳು ಆವರಿಸಿದೆ.

ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳು, ಪೊದೆಗಳು ಮತ್ತು ಮರಗಳ ಕೊಂಬೆಗಳು ನೇರವಾಗಿ ರಸ್ತೆಗೆ ಬಾಗಿ ನಿಂತಿರುವುದರಿಂದ ವಾಹನ ಸವಾರರು ರಸ್ತೆ ಕಾಣದೆ ಪ್ರತಿದಿನ ಜೀವ ಭಯದಲ್ಲಿ ಪ್ರಯಾಣಿಸುವಂತಾಗಿದೆ.ಅದರಲ್ಲೂ ಮುಖ್ಯವಾಗಿ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದೇ ಇರುವುದರಿಂದ ಯಾವುದೇ ಕ್ಷಣದಲ್ಲಿಯೂ ದೊಡ್ಡ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ.

ಇದನ್ನೂ ಓದಿ : ಮಹಾರಾಷ್ಟ್ರ| ಮತದಾನವಿಲ್ಲದೆ ಚುನಾವಣೆಗಳು ನಡೆಯುವ ಏಕೈಕ ಪ್ರಜಾಪ್ರಭುತ್ವ – ನಟ ಕಿಶೋರ್

ಇಲ್ಲಿ ಮುಳ್ಳಿನ ಗಿಡಗಳು ಬೆಳೆದು ರಸ್ತೆಯ ಅರ್ಧ ಭಾಗವನ್ನು ಆವರಿಸಿಕೊಂಡಿವೆ. ಚಾಕವೇಲು ಮತ್ತು ಚೇಳೂರು ಮಾರ್ಗದಲ್ಲಿ ಪುಲಗಲ್ ಗ್ರಾಮದ ಬಳಿ ಬರುವ ಕೆರೆಕಟ್ಟೆಯ ಮೇಲಿನ ತಿರುವುಗಳು ಹೆಚ್ಚು ಅಪಾಯಕಾರಿಯಾಗಿವೆ. ಕಟ್ಟೆಯ ರಸ್ತೆ ಕಿರಿದಾಗಿರುವುದರಿಂದ ಈ ರಸ್ತೆಯಲ್ಲಿ ಪ್ರಯಾಣಿಕರಿಗೆ ಸಂಚರಿಸುವುದು ಬಹುದೊಡ್ಡ ಸವಾಲಾಗಿದೆ.

ಕೆರೆಯ ಅಂಚಿನಲ್ಲಿರುವ ತಿರುವು ಭಾರಿ ಅಪಾಯಕಾರಿಯಾಗಿದೆ. ಪಾತಪಾಳ್ಯ ಕಡೆಯಿಂದ ಚೇಳೂರು ಪಟ್ಟಣ ಮಾರ್ಗ ಮಧ್ಯದ ಮೂಗಿರೆಡ್ಡಿಪಲ್ಲಿ ಕ್ರಾಸ್ ಬಳಿ ಇರುವ ಕೆರೆಯ ರಸ್ತೆಯಲ್ಲಿ ಹಾಕಿರುವ ತಡೆಗೋಡೆಗಳು ಹಾಗೂ ಸೂಚನಾ ಫಲಕಗಳು ಕಾಣದ ರೀತಿಯಲ್ಲಿ ಮುಳ್ಳಿನ ಗಿಡಗಳು ಮತ್ತು ಬಳ್ಳಿಯ ಪೊದೆಗಳು ಬೆಳೆದು ನಿಂತಿದೆ.  ಇದೇ ತಿರುವಿನಲ್ಲಿ ಅದೆಷ್ಟೋ ಅಪಘಾತಗಳು ಸಂಭವಿಸಿವೆ.

ಇದರಿಂದಾಗಿ ಹಲವು ಬಾರಿ ಬಸ್‌ ಹಾಗೂ ಗೂಡ್ಸ್ ಸಾಗಿಸುವ ವಾಹನಗಳು ಕೆರೆಗೆ ಉರುಳಿದ ಸಂದರ್ಭಗಳೂ ಇವೆ. ಚೇಳೂರು ಪಟ್ಟಣಕ್ಕೆ ಹೊಂದಿಕೊಂಡಿರುವ ಶೇರ್‌ಖಾನ್ ಕೋಟೆ ಗ್ರಾಮದ ಕೆರೆಕಟ್ಟೆಯ ರಸ್ತೆಯ ಪರಿಸ್ಥಿತಿ ಕೂಡಾ ಪೂರ್ತಿ ಹದಗೆಟ್ಟಿದೆ.

ಈ ಕುರಿತು ರಸ್ತೆಯ ಅಂಚಿನಲ್ಲಿ ಬೆಳೆಯುವ ಗಿಡಗಳನ್ನು ಕಾಲಕಾಲಕ್ಕೆ ತೆರವುಗೊಳಿಸದ ಲೊಕೋಪಯೋಗಿ ಇಲಾಖೆ ಅಧಿಕಾರಿಗಳ ನಡೆ ಸಂಪೂರ್ಣ ನಿರ್ಲಕ್ಷ್ಯದ ಪರಾಕಾಷ್ಠೆಯಾಗಿದೆ ಎಂದು ಸವಾರರು ಆರೋಪಿಸಿದರು.

ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತಗಳ ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಎಲ್ಲ ಮುಳ್ಳಿನ ಗಿಡ ಮರಗಳನ್ನು ತುರ್ತಾಗಿ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಸುಗಮ ಮತ್ತು ಸುರಕ್ಷಿತ ವಾತಾವರಣ ನಿರ್ಮಿಸಬೇಕು. ಜನರ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ : ಸಂಕ್ರಾಂತಿ ಕವಿಗೋಷ್ಠಿ | ಕಾವ್ಯಗಳ ಹುಗ್ಗಿಯ ಸಂಭ್ರಮ Janashakthi Media

Donate Janashakthi Media

Leave a Reply

Your email address will not be published. Required fields are marked *